ತೂಕ ಇಳಿಸಿಕೊಳ್ಳಲು ಹೊರಟ ಪ್ರತಿಯೊಬ್ಬರಿಗೂ ಸಿಗುವ ಸಲಹೆಯೆಂದರೆ, ಪ್ರೊಟೀನ್‌ಯುಕ್ತ ಆಹಾರಕ್ರಮವನ್ನು ದಿನನಿತ್ಯ ಪಾಲಿಸಿ ಎಂಬುದು. ಮಾಂಸಾಹಾರಿಗಳಾಗಿದ್ದಲ್ಲಿ, ಮೊಟ್ಟೆ ತಿನ್ನುವವರಾಗಿದ್ದರೆ, ಪ್ರೊಟೀನಿನ ಮೂಲಗಳನ್ನು ಹುಡುಕಲು ಹೆಚ್ಚು ಸಮಸ್ಯೆಯಾಗುವುದಿಲ್ಲ. ಆದರೆ ಸಸ್ಯಾಹಾರಿಗಳಾಗಿದ್ದರೆ, ಸಸ್ಯಜನ್ಯ ಮೂಲಗಳನ್ನೇ ನೈಸರ್ಗಿಕವಾಗಿ ಹುಡುಕುತ್ತಿದ್ದರೆ, ಪನೀರ್, ಟೋಫು, ಮೊಳಕೆ ಕಾಳುಗಳ ಹೊರತಾಗಿ ಸಿಗುವ ಪ್ರೊಟೀನ್ ಆಯ್ಕೆಗಳು ಕಡಿಮೆ.
ಅಷ್ಟಕ್ಕೂ ಈ ಟೋಫು ಅಂದರೆ ಏನು? ಪನೀರಿಗೂ, ಟೋಫುವಿಗೂ ಏನು ವ್ಯತ್ಯಾಸ ಎಂದು ಬಹಳಷ್ಟು ಸಾರಿ ಅನೇಕರು ತಲೆ ಕೆಡಿಸಿಕೊಂಡು ಗೂಗಲ್ ಜಾಲಾಡುತ್ತಾರೆ. ಇದರಲ್ಲಿ ಯಾವುದು ಉತ್ತಮ, ಎಷ್ಟು, ಹೇಗೆ ಮತ್ತು ಯಾವಾಗ ಇವನ್ನು ತಿಂದರೆ ಉತ್ತಮ ಎಂಬ ಬಗ್ಗೆ ಅರೆಬರೆ ಮಾಹಿತಿಗಳನ್ನು ತಿಳಿದುಕೊಂಡು ಸಂದಿಗ್ಧತೆ ಅನುಭವಿಸುತ್ತಾರೆ. ಅಂತಹ ಮಂದಿಗೆ ಟೋಫು ಹಾಗೂ ಪನೀರಿನ ನಡುವಿನ ವ್ಯತ್ಯಾಸ ತಿಳಿಸುವ ಪ್ರಯತ್ನ ಇದು.
ಪನೀರ್ ಹಾಗೂ ಟೋಫು ಎರಡೂ ಪ್ರೊಟೀನ್‌ಯುಕ್ತ ಆಹಾರದ ಆಯ್ಕೆಗಳಾಗಿದ್ದರೂ, ಪೋಷಕಾಂಶವನ್ನೇ ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಪನೀರ್ ಹೆಚ್ಚು ಯೋಗ್ಯ ಸ್ಥಾನದಲ್ಲಿದೆ. ಆದರೂ, ತೂಕ ಕಡಿಮೆಗೊಳಿಸುವುದಷ್ಟೇ ಆದ್ಯತೆಯಾಗಿರುವ ಮಂದಿ ಹೆಚ್ಚು ಟೋಫುವನ್ನೇ ಆಯ್ಕೆ ಮಾಡುತ್ತಾರೆ.
ಪನೀರ್ ಭಾರತೀಯ ಆಹಾರ. ಹಾಲನ್ನು ಒಡೆಯುವಂತೆ ಮಾಡಿ ಪನೀರನ್ನು ತಯಾರಿಸುತ್ತಾರೆ. ಪನೀರು ಟೋಫುವಿಗಿಂತ ಹೆಚ್ಚು ರುಚಿಯಾಗಿಯೂ, ಒಟ್ಟಾರೆಯಾಗಿ ಹೆಚ್ಚು ಲಾಭದಾಯಕವಾಗಿಯೂ ಇರುತ್ತದೆ. ಆದರೆ, ಪನೀರಿನಲ್ಲಿ ಟೋಫುವಿಗಿಂತ ಹೆಚ್ಚು ಕ್ಯಾಲರಿ ಇರುತ್ತದೆ. ಟೋಫು ಸೋಯಾಬೀನ್ ಹಾಲಿನಿಂದ ತಯಾರಿಸಲಾಗುತ್ತದೆ. ಟೋಫು, ಕಾಣಲು ಕಾಟೇಜ್ ಚೀಸ್‌ನಂತೆಯೇ ಇರುತ್ತದೆ. ತನ್ನಲ್ಲಿ ಹೇರಳವಾಗಿ ಪ್ರೋಟೀನ್ ಹೊಂದಿರುವ ಇದು ರುಚಿಯ ವಿಚಾರಕ್ಕೆ ಬಂದರೆ, ಪನೀರಿನ ಮುಂದೆ ಸೋಲುತ್ತದೆ. ಆದರೂ ತೂಕ ಇಳಿಸುವ ಮಂದಿಗೆ ಮಾತ್ರ, ಪನೀರಿನಲ್ಲಿ ಹೆಚ್ಚು ಕ್ಯಾಲರಿ ಇರುವುದರಿಂದ ಹಾಗೂ ಪನೀರ್ ಹಾಲಿನ ಉತ್ಪನ್ನವಾಗಿರುವುದರಿಂದ ಅದು ತೂಕ ಹೆಚ್ಚಿಸಬಹುದೆಂಬ ಭಯ ಇದ್ದೇ ಇರುತ್ತದೆ.
ಇದನ್ನೂ ಓದಿ: ಬ್ಯಾಚುಲರ್ ಕಿಚನ್: ಫಿಟ್ನೆಸ್ ಪ್ರಿಯ ಬ್ಯಾಚುಲರ್‌ಗಳಿಗೆ ದಿಢೀರ್ ಪನೀರ್ ಫ್ರೈ!
೧. ಪನೀರ್‌ನಲ್ಲಿ ಟೋಫುವಿಗಿಂತಲೂ ಹೆಚ್ಚು ಪ್ರೊಟೀನ್ ಇರುತ್ತದೆ. ೧೦೦ ಗ್ರಾಂ ಪನೀರಿನಲ್ಲಿ ೧೪ ಗ್ರಾಂ ಪ್ರೋಟೀನ್ ಇದ್ದರೆ, ೧೦೦ ಗ್ರಾಂ ಟೋಫುವಿನಲ್ಲಿ ೮ ಗ್ರಾಂಗಳಷ್ಟು ಪ್ರೊಟೀನ್ ಇರುತ್ತದೆ.
೨. ಇನ್ನು ಕಾರ್ಬೋಹೈಡ್ರೇಟಿನ ವಿಚಾರಕ್ಕೆ ಬರುವುದಾದಲ್ಲಿ ಟೋಫುವಿನಲ್ಲಿ ೨.೭ರಷ್ಟಿದ್ದರೆ, ಪನೀರಿನಲ್ಲಿ ೩.೫೭ರಷ್ಟು ಕಾರ್ಬೋಹೈಡ್ರೇಟ್ ಇದೆ.
೩. ಪನೀರಿನಲ್ಲಿ ೯೦ ಮಿಲಿ ಗ್ರಾಂಗಳಷ್ಟು ಕೊಲೆಸ್ಟೆರಾಲ್ ಇದ್ದರೆ, ಟೋಫುವಿನಲ್ಲಿ ಇಲ್ಲವೇ ಇಲ್ಲ. ಅಂದರೆ ಸೊನ್ನೆ! ಕೊಬ್ಬಿನ ವಿಚಾರದಲ್ಲೂ ಅಷ್ಟೇ, ಪನೀರಿನಲ್ಲಿ ೨೫ ಗ್ರಾಂ ಕೊಬ್ಬು ಇದ್ದರೆ, ಟೋಫುವಿನಲ್ಲಿ. ೮.೭ ಗ್ರಾಂಗಳಷ್ಟಿದೆ.
೪. ಕ್ಯಾಲೊರಿಯಲ್ಲೂ ಕೂಡಾ ಪನೀರ್‌ನದ್ದೇ ಮೇಲುಗೈ. ೧೦೦ ಗ್ರಾಂ ಪನೀರಿನಲ್ಲಿ ೩೨೧ ಕ್ಯಾಲರಿಗಳಿದ್ದರೆ, ಟೋಫುವಿನಲ್ಲಿ ೧೪೪ ಕ್ಯಾಲರಿ ಇದೆ.
ಆದರೂ, ಪನೀರ್ ಹೆಚ್ಚು ರುಚಿಕರ, ಪನೀರಿನ ಭಾರತೀಯ ವಿವಿಧ ಆಹಾರಗಳು, ನಾನಾ ನಮೂನೆಯ ಸ್ನ್ಯಾಕ್‌ಗಳು ಮಕ್ಕಳಿಗೂ ಹಿರಿಯರಿಗೂ ಇಷ್ಟವಾಗುತ್ತವೆ. ರುಚಿಯೊಂದಿಗೆ ಆರೋಗ್ಯಕರವಾಗಿಯೂ ಇರುವ ಆಹಾರವಾಗಿ ಹೆಚ್ಚಿನವರಿಗೆ ಪನೀರ್ ಪ್ರತಿನಿತ್ಯದ ಆಹಾರ. ಮುಖ್ಯವಾಗಿ ಉತ್ತರ ಭಾರತೀಯರ ಅಡುಗೆಗಳಲ್ಲಿ ಪನೀರಿಗೆ ಅಗ್ರಸ್ಥಾನ. ಆದರೆ, ಟೋಫುವನ್ನು ಕೇವಲ ತೂಕ ಇಳಿಸುವ ಆಹಾರವಾಗಿ ಬಳಸುವಲ್ಲಿ ಪ್ರಾತಿನಿಧ್ಯ ಕಾಣುತ್ತದೆ. ಪನೀರಿನ ಸ್ಥಾನದಲ್ಲಿ ಟೋಫುವನ್ನು ಬಳಸುವ ಮೂಲಕ ಪನೀರ್‌ನದ್ದೇ ಅಡುಗೆಗಳನ್ನು ಮಾಡಿದರೂ, ಇಂದಿಗೂ ಟೋಫು, ಪನೀರಿನ ಸ್ಥಾನವನ್ನು ಆಕ್ರಮಿಸಿಕೊಳ್ಳಲಾಗಿಲ್ಲ. ಜಿಮ್‌ಗಳಲ್ಲಿ ದೇಹ ದಂಡಿಸುವವರು, ವಿಪರೀತ ಫಿಟ್‌ನೆಸ್ ಬಗ್ಗೆ ಚಿಂತೆಯಿರುವವರು ಟೋಫುವನ್ನು ಕಡ್ಡಾಯವಾಗಿ ಬಳಸಿಕೊಂಡರೂ, ಪನೀರ್ ಭಾರತೀಯ ಅಡುಗೆ ಮನೆಯಲ್ಲಿ ತನ್ನದೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ.
ಇದನ್ನೂ ಓದಿ: Modi in Karnataka | ಮೈಸೂರಿನಲ್ಲಿ ಪ್ರಧಾನಿ ಇಷ್ಟಪಟ್ಟ ʼಮೈಸೂರ್ ಪಾಕ್ʼ ಇತಿಹಾಸ ಗೊತ್ತೆ?