ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವರ್ಷಕ್ಕೆ ನ್ಯೂ ಲುಕ್ ಬೇಕೆ? ಹಾಗಾದಲ್ಲಿ ಹೊಸ ಹೇರ್‌ಸ್ಟೈಲ್ ಟ್ರೈ ಮಾಡಿ ನೋಡಿ. ಹೊಸ ವರ್ಷದ ಪಾರ್ಟಿಯಲ್ಲಿ ನಿಮ್ಮ ಹೇರ್‌ಸ್ಟೈಲ್‌ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಬೇಕಾದಲ್ಲಿ ಒಂದಿಷ್ಟು ಹೊಸ ವಿನ್ಯಾಸಗಳನ್ನು ಪ್ರಯೋಗಿಸಿ. ಆಗ ನಿಮ್ಮ ಲುಕ್ಕೇ ಬದಲಾಗುವುದು ಎನ್ನುತ್ತಾರೆ ಹೇರ್ ಸ್ಪೆಷಲಿಸ್ಟ್ಸ್. ಪ್ರತಿಯೊಬ್ಬರೂ ಹೊಸ ವರ್ಷದ ಆಗಮನದೊಂದಿಗೆ ಕೊಂಚ ಡಿಫರೆಂಟ್ ಲುಕ್ ಬಯಸುತ್ತಾರೆ. ಇದಕ್ಕಾಗಿ ಹೆಚ್ಚು ಬದಲಾಬೇಕಾಗಿಲ್ಲ. ಹೇರ್‌ಸ್ಟೈಲ್ ಬದಲಿಸಿದರೆ ಸಾಕು. ತಂತಾನೆ ಇಡೀ ಲುಕ್ಕೇ ಬದಲಾಗುತ್ತದೆ ಎನ್ನುತ್ತಾರವರು.
ನಿಮ್ಮ ಕೂದಲು ಉದ್ದವಿರಲಿ, ಗಿಡ್ಡದಾಗಿರಲಿ, ಪಾರ್ಟಿಗೆ ತಕ್ಕಂತೆ ಹೇರ್ ಸ್ಟೈಲ್ ಬದಲಿಸಿಕೊಳ್ಳಬಹುದು. ಇದನ್ನು ಹೇರ್ ಮೇಕೋವರ್ ಎನ್ನಬಹುದು ಎನ್ನುವ ಹೇರ್ ಸ್ಪೆಷಲಿಸ್ಟ್ ರೀಟಾ, ನ್ಯೂ ಇಯರ್ ಪಾರ್ಟಿಗೆ ಸುಲಭವಾಗಿ ಮಾಡಿಕೊಳ್ಳಬಹುದಾದ ಹೇರ್‌ಸ್ಟೈಲ್ ಕುರಿತಂತೆ ಸಿಂಪಲ್ಲಾಗಿ ವಿವರಿಸಿದ್ದಾರೆ.
- ಸೈಡ್ ಪಾರ್ಟಿಷನ್ ಹೇರ್‌ಸ್ಟೈಲ್
ನೀವು ಸದಾ ಸೆಂಟರ್ ಪಾರ್ಟಿಷನ್ ಮಾಡುವುದಾದಲ್ಲಿ, ಈ ಬಾರಿ ಸೈಡ್ ಪಾರ್ಟಿಷನ್ ಮಾಡಿ ನೋಡಿ. ಈ ಶೈಲಿಯಲ್ಲಿ ನಿಮ್ಮ ಕೂದಲು ಕೊಂಚ ಒತ್ತಾಗಿದ್ದರೆ ಉತ್ತಮ. ಇಲ್ಲದಿದ್ದರೆ ನಿಮ್ಮ ಕೂದಲು ಬೌನ್ಸ್ ಆಗಲು ರೋಲರ್‌ಗೆ ಕೂದಲು ಸುತ್ತಿ, ಒಂದರ್ಧ ಗಂಟೆಯ ನಂತರ ಬಿಚ್ಚಿ. ನಿಧಾನವಾಗಿ ಬ್ರಷ್‌ನಿಂದ ಬಾಚಿ. ನಂತರ ನಿಮ್ಮ ಕೂದಲನ್ನು ಅರ್ಧಚಂದ್ರಕಾರವಾಗಿ ಮಡಚಿ, ವಿಭಾಗಿಸಿ. ಮಡಚಿ ಸ್ಟಫಿಂಗ್ ಮಾಡಿ. ಸ್ಟಫಿಂಗ್ ನಂತರ ಪಫ್‌ಗಾಗಿ ಉಳಿದ ಕೂದಲನ್ನು ಟ್ವೀಝಿಂಗ್ ಬಾಚಣಿಕೆಯಿಂದ ಬ್ಯಾಕ್ ಕೋಂಬ್ ಮಾಡಿ. ಮುಂಭಾಗದಲ್ಲಿ ಬಿಡಲಾದ ಕೂದಲನ್ನು ನವಿರಾಗಿ ಹಿಂದಕ್ಕೆ ಬಾಚಿ ಪಿನ್ ಅಪ್ ಮಾಡಿ. ಈ ಹೇರ್‌ಸ್ಟೈಲ್ ಕಣ್ಮನ ಸೆಳೆಯುವುದು.
- ಮನಮೋಹಕ ಪಾರ್ಟಿ ರಿಂಗ್ಲೆಟ್ಸ್
ಸದಾ ಜಡೆ ಹಾಗೂ ಪೋನಿಟೇಲ್ ಹಾಕುವವರು ಈ ಹೇರ್‌ಸ್ಟೈಲ್ ಮಾಡುವುದರಿಂದ ನಯಾ ಲುಕ್ ಪಡೆಯಬಹುದು. ಈ ಹೇರ್ ಸ್ಟೈಲನ್ನು ಎಲೆಕ್ಟ್ರಿಕ್ ರೋಲ್ಸ್ ಉಪಯೋಗಿಸಿ ಮಾಡಬಹುದು. ರೋಲರ್ಸ್‌ಗಳನ್ನು ನೆತ್ತಿಯ ಮೇಲಿನಿಂದ ಹಾಕಿ. ಕೂದಲಿಗೆ ಸುತ್ತಿಸಿ. ಬೈತಲೆ ಮಾದರಿಯಂತೆ ಐದು ರೋಲ್ ಸುತ್ತಿ, ಈ ಕಿವಿಯಿಂದ ಆ ಕಿವಿಯವರೆಗೂ ಬಂದರೆ ಸಾಕು. ಹಿಂದಿನ ಕೂದಲನ್ನು ಬಾಚಿ ಬ್ಯಾಂಡ್ ಹಾಕಿ ಹೆಬ್ಬೆಟ್ಟು ಗಾತ್ರದ ಕೂದಲನ್ನು ವಿಂಗಡಿಸಿ ರೋಲರ್ಸ್‌ಗಳನ್ನು ಸುತ್ತುತ್ತ ಬನ್ನಿ. ಕೂದಲಿಗೆ ಎಷ್ಟು ಅಗತ್ಯ ರೋಲರ್ಸ್ ಬೇಕೋ ಅಷ್ಟು ಸುತ್ತಿ. ಒಂದು ಗಂಟೆಯ ನಂತರ ರೋಲರ್ಸ್‌ಗಳನ್ನು ತೆಗೆಯಿರಿ. ನಿಮ್ಮ ಕೂದಲು ಈಗ ರಿಂಗುರಿಂಗಾಗಿ ಕೆಳಗೆ ಸ್ಪ್ರಿಂಗಿನಂತೆ ಬೀಳುವುದು. ಬಾಚಣಿಕೆಯಿಂದ ಒತ್ತಿ ಬಾಚದೆ, ಹಗುರವಾಗಿ ಹೇರ್‌ಬ್ರಷ್‌ನಿಂದ ಬಾಚಿ, ಬೇಕಾದಲ್ಲಿ ಪಿನ್ ಮಾಡಿ. ಹೇರ್ ಸ್ಪ್ರೇ ಮಾಡಿ, ಬಹಳಷ್ಟು ಸಮಯದ ತನಕ ಹಾಗೆಯೇ ಉಳಿಯುವುದು.
- ಹೇರ್‌ಸ್ಟೈಲಿಂಗ್‌ಗೆ ಪಾರ್ಟಿ ಹೇರ್ ಆಕ್ಸೆಸರೀಸ್
ಮೊದಲು ಕೂದಲನ್ನು ಐರನಿಂಗ್ ಮಾಡಿಕೊಳ್ಳಿ. ಮುಂದಿನ ಕೂದಲನ್ನು ಬಾಚಿ ಪಫ್ ಮಾಡಿ ಪಿನ್ ಮಾಡಿ. ಹಿಂದಿನ ಕೂದಲನ್ನು ಮತ್ತೊಮ್ಮೆ ಬಾಚಿ. ಮಾರುಕಟ್ಟೆಯಲ್ಲಿ ದೊರೆಯುವ ಸಾಕಷ್ಟು ಬಗೆಯ ಹೇರ್ ಆಕ್ಸೆಸರೀಸ್‌ಗಳನ್ನು ಬಳಸಬಹುದು. ಗ್ಲಿಟ್ಟೆರಿಂಗ್ ಹೆಡ್‌ಬ್ಯಾಂಡ್, ಫಂಕಿ ಹೇರ್ ಆಕ್ಸೆಸರೀಸ್, ಹೇರ್ ಬ್ಯಾರೇಟ್ ಸೇರಿದಂತೆ ಶೈನಿಂಗ್ ಕ್ಲಿಪ್‌ಗಳನ್ನು ಈ ಹೇರ್‌ಸ್ಟೈಲ್‌ಗೆ ಬಳಸಬಹುದು. ಸೆಲೆಕ್ಟ್ ಮಾಡಿ, ಸೈಡ್ ಕ್ಲಿಪ್ ಮಾಡಿ. ನೋಡಲು ಆಕರ್ಷಕವಾಗಿ ಕಾಣುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ವಿಂಟರ್ ಫ್ಯಾಷನ್‌ನಲ್ಲಿ ಯುವತಿಯರ ಮನಗೆದ್ದ ಲಾಂಗ್ ಶ್ರಗ್ಸ್