Site icon Vistara News

ಅನಾನಸು ಆರೋಗ್ಯ: ಬರೀ ಹೊಟ್ಟೆಗಲ್ಲ, ಚರ್ಮಕ್ಕೂ ಕೂದಲಿಗೂ ಬೆಸ್ಟ್

pineapple

ಹಣ್ಣುಗಳನ್ನು ತಿನ್ನುವ ಮೂಲಕ ಆರೋಗ್ಯಕರ ಜೀವನವನ್ನು ಹೇಗೆ ಸಾಧಿಸಬಹುದೋ, ಅಷ್ಟೇ ಉಪಯೋಗವನ್ನು ಹಚ್ಚುವುದರಿಂದಲೂ ಪಡೆದುಕೊಳ್ಳಬಹುದು ಎಂದು ಮಹಿಳೆ ಕಂಡುಕೊಂಡಿರುವ ಸತ್ಯ ಇಂದು ನಿನ್ನೆಯದಲ್ಲ. ಹಣ್ಣುಗಳನ್ನು ತಿನ್ನುವ ಮೂಲಕ ಅವುಗಳ ಪೌಷ್ಟಿಕತೆಯ ಪರಿಣಾಮವನ್ನು ದೇಹ ಪಡೆಯುವ ಹಾಗೆಯೇ ಹಚ್ಚುವ ಮೂಲಕ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವುದೂ ಮಹಿಳೆಯರಿಗೆ ಜನ್ಮದತ್ತವಾಗಿ ಬಂದಿರುವ ಕಲೆ!

ಹಣ್ಣುಗಳು ಸಾಕಷ್ಟು ವಿಟಮಿನ್‌ ಹಾಗೂ ಆ್ಯಂಟಿ ಆ್ಯಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ತಿನ್ನುವುದರಿಂದ ಚರ್ಮದ ಸೌಂದರ್ಯಕ್ಕೆ ಉಪಯೋಗ ಸಿಕ್ಕಿದಂತೆಯೇ ಹಚ್ಚುವುದರಿಂದಲೂ ಸಿಗುತ್ತದೆ. ಪ್ರತಿ ಬಾರಿಯೂ, ತಿನ್ನುವ ಹಣ್ಣಿನಲ್ಲಿ ಒಂದಿಷ್ಟು ಭಾಗ ಹಚ್ಚುವುದಕ್ಕೂ ಮೀಸಲಿಟ್ಟರೆ, ಎರಡೂ ಬಗೆಯ ಉಪಯೋಗವನ್ನು ನೀವು ಪಡೆದುಕೊಳ್ಳಬಹುದು.

ಚರ್ಮದ ಆರೋಗ್ಯಕ್ಕೆ ಪೂರಕ

ನೀವು ಸುಲಭ, ಸರಳ ಹಾಗೆಯೇ ನೈಸರ್ಗಿಕ ಪರಿಹಾರ ಉಪಾಯಗಳನ್ನು ನಿಮ್ಮ ಚರ್ಮದ ಆರೋಗ್ಯಕ್ಕೆ ಬಯಸುತ್ತೀರೆಂದಾದಲ್ಲಿ ಅನಾನಸು ಒಂದೊಳ್ಳೆ ಆಯ್ಕೆ. ಅನಾನಸು ಹೊರಗಿನಿಂದ ಎಷ್ಟೇ ಕಟುವಾಗಿ ಕಂಡರೂ ಅದು ಮೃದುಹೃದಯಿ. ವಿಟಮಿನ್‌ ಎ, ಸಿ, ಕೆ, ಕ್ಯಾಲ್ಶಿಯಂಗಳಿಂದ ಸಮೃದ್ಧವಾಗಿರುವ ಇದು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ದೂರವಿರಿಸುತ್ತದೆ. ಬೇಸಗೆಯಲ್ಲಿ ಹೇರಳವಾಗಿ ಸಿಗುವ ಅನಾನಸು ಕೂದಲು, ಚರ್ಮ, ಕಣ್ಣು, ಹಲ್ಲು ಹಾಗೂ ಎಲುಬಿನ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶೀತ, ಕೆಮ್ಮಿನಂತ ಸಮಸ್ಯೆಗಳಿಗೂ ಇದು ರಾಮಬಾಣ. ಪಚನಕ್ರಿಯೆಯನ್ನೂ ಇದು ಸರಾಗಗೊಳಿಸುವುದಲ್ಲದೆ, ರಕ್ತದೊತ್ತಡವನ್ನೂ ಹದವಾಗಿಸುತ್ತದೆ. ತೂಕವನ್ನು ಕಡಿಮೆಗೊಳಿಸುವ ಹಣ್ಣುಗಳ ಪೈಕಿ ಅನಾನಸು ಉತ್ತಮ ಆಯ್ಕೆ.

ಮೊಡವೆಯ ಸಮಸ್ಯೆಯ ಮುಕ್ತಿ ಕಾಣದೆ ಇರುವ ಮಂದಿಗೆ ಅನಾನಸು ವರದಾನ. ಮೊಡವೆ ಕಲೆಗಳು, ಚರ್ಮದ ಮೇಲೆ ಉಂಟಾಗುವ ಬೆವರುಸಾಲೆ, ಕಜ್ಜಿ, ಉರಿಯೂತ ಎಲ್ಲದಕ್ಕೂ ಅನಾನಸು ಉತ್ತಮ ಪರಿಹಾರ. ಸಾಕಷ್ಟು ವಿಟಮಿನ್‌ ಸಿ, ಹಾಗೂ ಆಂಟಿ ಆಕ್ಸಿಡೆಂಟ್‌ಗಳಿಂದ ಸಂಪದ್ಭರಿತವಾಗಿರುವ ಈ ಹಣ್ಣು ಚರ್ಮವನ್ನು ಸ್ವಚ್ಛ ಹಾಗೂ ಸುಂದರವಾಗಿರಿಸುತ್ತದೆ. ಒಣ ಹಾಗೂ ಸದಾ ಕಳೆಗುಂದಿದಂತೆ ಕಾಣುವ ಚರ್ಮದ ತೊಂದರೆಗಳನ್ನೂ ಇದು ದೂರ ಸರಿಸಿ ಫ್ರೆಶ್‌ ಲುಕ್‌ ನಿಮಗೆ ನೀಡುತ್ತದೆ.

ವಯಸ್ಸಾದಂತೆಲ್ಲ, ಚರ್ಮ ತನ್ನ ಹೊಳಪನ್ನು ಕಳೆದುಕೊಂಡು ಸುಕ್ಕುಗಟ್ಟಲು ಆರಂಭಿಸುತ್ತದೆ. ಆದರೆ ನಿಯಮಿತವಾಗಿ ಅನಾನಸು ಬಳಸಿದಲ್ಲಿ, ಚರ್ಮಕ್ಕೆ ತನ್ನ ಯೌವನವನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ಚರ್ಮವನ್ನು ನಯವಾಗಿ ಹಾಗೂ ಕಪ್ಪುಕಲೆರಹಿತವಾಗಿರಿಸಲು ಕೂಡಾ ಇದು ಸಹಾಯ ಮಾಡುತ್ತದೆ.

ಅನಾನಸನ್ನು ತಿನ್ನುವಾಗಲೋ, ಜ್ಯೂಸ್‌ ಮಾಡುವಾಗಲೋ ಕೊಂಚ ರಸವನ್ನು ಹಚ್ಚುವುದಕ್ಕಾಗಿಯೂ ತೆಗೆದಿರಿಸಿಕೊಳ್ಳಬಹುದು. ಹತ್ತಿಯಿಂದ ಈ ರಸವನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು. ಹೆಚ್ಚು ಕಾಲ ಈ ರಸವನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ.

ಅನಾನಸಿನ ತುಂಡನ್ನು ಕತ್ತರಿಸಿ ಸ್ಕ್ರಬ್‌ನಂತೆಯೂ ಬಳಸಬಹುದು. ಡೆಡ್‌ ಸ್ಕಿನ್‌ ಸಮಸ್ಯೆಯಿಂದ ಮುಕ್ತಿ ನೀಡಿ ಚರ್ಮವನ್ನು ನಯವಾಗಿಸುತ್ತದೆ. ನಿಮ್ಮ ಚರ್ಮ ಸೂಕ್ಷ್ಮವಾಗಿದ್ದಲ್ಲಿ ಬಳಸುವ ಮೊದಲು ಹೊಂದಿಕೆಯಾಗುತ್ತದೆಯೋ ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: Star Beauty Secret: ನ್ಯಾಚುರಲ್‌ ಆಗಿರಲು ಬಯಸುವ ರಾಧಿಕಾ ಆಪ್ಟೆ

ಮೂರು ಚಮಚ ಅನಾನಸಿನ ರಸವನ್ನು ಮೊಟ್ಟೆಯ ಬಿಳಿ ಲೋಳೆ ಹಾಗೂ ಹಾಲಿನೊಂದಿಗೆ ಬೆರೆಸಿ ಹಚ್ಚುವುದರಿಂದ ಚರ್ಮ ನಯವಾಗಿ ತನ್ನ ಹೊಳಪನ್ನು ಮರಳಿ ಪಡೆಯುತ್ತದೆ.

ರೇಶಿಮೆಯಂಥ ಕೂದಲಿಗಾಗಿ

ಸ್ವಲ್ಪ ಅನಾನಸಿನ ರಸಕ್ಕೆ ಸ್ವಲ್ಪ ಮೊಸರು ಹಾಗೂ ಆಲಿವ್‌ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್‌ ಮಾಡಿ ಹತ್ತು ನಿಮಿಷ ಹಾಗೆಯೇ ಬಿಟ್ಟು ತೊಳೆಯುವುದರಿಂದ ನಯವಾದ ರೇಶಿಮೆಯಂಥಾ ಕೂದಲು ನಿಮ್ಮದಾಗುತ್ತದೆ. ಒಂದಿಷ್ಟು ಅನಾನಸಿನ ರಸಕ್ಕೆ ಕಡಲೇ ಹಿಟ್ಟು ಬೆರೆಸಿ ಫೇಸ್‌ ಪ್ಯಾಕ್‌ ಮಾಡಿ ಹಚ್ಚುವುದರಿಂದ ಮುಖ ಕಾಂತಿಯುಕ್ತವಾಗಿ ಕಂಗೊಳಿಸುತ್ತದೆ. ಅರಿಶಿನದೊಂದಿಗೆ ಬೆರೆಸಿ ನಿಯಮಿತವಾಗಿ ಹಚ್ಚುತ್ತಿದ್ದರೆ ಮೊಡವೆ ಕಪ್ಪು ಕಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: Lipstick plant: 100 ವರ್ಷದ ನಂತರ ಮತ್ತೆ ಕಾಣಸಿಕ್ಕಿದೆ ಲಿಪ್‌ಸ್ಟಿಕ್ ಸಸ್ಯ, ಏನಿದು ವಿಸ್ಮಯ?

Exit mobile version