Site icon Vistara News

Mansoon Health Tips : ಮಳೆಗಾಲದಲ್ಲಿ ವೈರಲ್‌ ಸೋಂಕು ತಡೆಯುವುದು ಹೇಗೆ?

rains in city

#image_title

ಮಳೆಗಾಲ ಸುಂದರವಾಗಿರುತ್ತದೆ. ನಿಸರ್ಗ ಹಸಿರಿನಿಂದ ಕಂಗೊಳಿಸುತ್ತದೆ. ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಅದನ್ನು ನೋಡುವುದೇ ಸೊಗಸು. ಜತೆಗೆ ಎಲ್ಲೆಡೆ ತಾಪಮಾನ ಕೂಡ ತಗ್ಗಿ ಮೈಮನ ತಂಪಾಗಿಸುತ್ತದೆ. ಮನಸ್ಸಿಗೆ ಮತ್ತು ಶರೀರಕ್ಕೆ ಆಹ್ಲಾದವೆನ್ನಿಸುತ್ತದೆ. ಹರಿಯುವ ತೊರೆಯಲ್ಲಿ ನೀರಾಟವಾಡಿ ಬರಬೇಕು ಎನ್ನಿಸುತ್ತದೆ. ಹೀಗಿದ್ದರೂ ಶರೀರದ ರೋಗ ನಿರೋಧಕ ಶಕ್ತಿ (Mansoon Health Tips) ಉತ್ತಮ ಸ್ಥಿತಿಯಲ್ಲಿರುವುದು ಅವಶ್ಯಕ. ಏಕೆಂದರೆ ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದ ಮಕ್ಕಳಿಂದ ವಯಸ್ಕರ ತನಕ ಎಲ್ಲರಿಗೂ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಶೀತ, ಜ್ವರ, ಕಫ, ಕೆಮ್ಮು , ಗಂಟಲು ನೋವು ಇತ್ಯಾದಿ ತೊಂದರೆಗಳು ಮಳೆಗಾಲದಲ್ಲಿ ಬಂದು ಹೋಗುತ್ತವೆ. ಇದಕ್ಕೆ ಕಾರಣವಾಗುವ ವೈರಲ್‌ ಸೋಂಕು ಬರದಂತೆ ತಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ಕೈಗೊಳ್ಳಬಹುದು. ಈ ಕುರಿತ ಉಪಯುಕ್ತ ವಿವರ ಇಲ್ಲಿದೆ.

ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ: ಮಳೆಗಾಲದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದರಿಂದ ವೈರಲ್‌ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಊಟ, ತಿಂಡಿಗಳನ್ನು ಸೇವಿಸುವುದಕ್ಕೆ ಮೊದಲು ಹಾಗೂ ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಸೀನಿದ್ದರೆ, ಕಫ ಹೊರ ಹಾಕಿದ್ದರೆ, ಕೈತೋಟದಲ್ಲಿ ಕೆಲಸ ಮಾಡಿ ಬಂದಿದ್ದರೆ ಕೈಗಳನ್ನು ತೊಳೆಯಿರಿ. ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಬಹುದು.

ಮನೆಯಲ್ಲಿಯೇ ತಯಾರಿಸಿದ ಅಡುಗೆಯನ್ನು ಸೇವಿಸಿ: ಹೊರಗಿನ ಊಟೋಪಚಾರ, ತಿಂಡಿಗಳಿಂದ ದೂರವಿರಿ. ಗಲೀಜು, ಕಶ್ಮಲ ಇರುವ ಜಾಗದಿಂದ ದೂರ ಇರಿ. ಮಳೆಗಾಲದಲ್ಲಿ ಇಂಥ ಸ್ಥಳಗಳಲ್ಲಿ ಕೀಟಾಣುಗಳ ಉತ್ಪತ್ತಿ ಜಾಸ್ತಿ.

ಪೌಷ್ಟಿಕಾಹಾರ ಸೇವಿಸಿ. ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಸೋಂಕಿನಿಂದ ತಡೆಯುತ್ತದೆ.

ಚೆನ್ನಾಗಿ ನಿದ್ರಿಸಿ: ಮಳೆಗಾಲದಲ್ಲಿ ಶರೀರದ ರೋಗ ನಿರೋಧಕತೆ ಹೆಚ್ಚಿಸಲು ಉತ್ತಮ ನಿದ್ದೆ ಅಗತ್ಯ. ಸಾಮಾನ್ಯವಾಗಿ ದಿನಕ್ಕೆ ಸರಾಸರಿ 6 ಗಂಟೆಗಳ ನಿದ್ದೆ ಅವಶ್ಯಕ ಎನ್ನುತ್ತಾರೆ. ಇದು ನಿಮ್ಮನ್ನು ಚೇತೋಹಾರಿಯಾಗಿಸುತ್ತದೆ. ಸ್ವಚ್ಛ ವಾದ ನೀರನ್ನು ಸೇವಿಸುವುದು ಕೂಡ ಅತ್ಯಂತ ಮುಖ್ಯ. ಕಲುಷಿತ ನೀರು ಬಳಸದಿರಿ.

ತರಕಾರಿ, ಹಣ್ಣು ಹಂಪಲುಗಳನ್ನು ತೊಳೆದು ಬಳಸಿ: ಮಳೆಗಾಲದಲ್ಲಿ ಆಗಲಿ ಇತರ ಯಾವುದೇ ಕಾಲದಲ್ಲಾಗಲಿ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಸೇವಿಸುವ ಮುನ್ನ ಅವುಗಳನ್ನು ಚೆನ್ನಾಗಿ ತೊಳೆಯಬೇಕು. ಏಕೆಂದರೆ ಅವುಗಳು ನಿಮ್ಮನ್ನು ತಲುಪುವುದಕ್ಕೆ ಮುನ್ನ ಧೂಳು, ಕಲುಷಿತ ವಾತಾವರಣಕ್ಕೆ ತೆರೆದಿರುತ್ತವೆ. ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ಒಡ್ಡಿರುತ್ತವೆ. ಇದು ವೈರಲ್‌ ಸೋಂಕಿಗೆ ಕಾರಣವಾದೀತು. ಮಾರುಕಟ್ಟೆಯಲ್ಲಿ ಕತ್ತರಿಸಿ ತೆರೆದಿಟ್ಟಿರುವ ತರಕಾರಿ, ಹಣ್ಣುಗಳನ್ನು ಸೇವಿಸುವುದರಿಂದ ದೂರ ಇದ್ದುಬಿಡಿ.

ಆಹಾರ ಹಂಚಿಕೆ ಬೇಡ: ನೀವು ಒಂದು ವೇಳೆ ವೈರಲ್‌ ಸೋಂಕಿಗೆ ಒಳಗಾಗಿದ್ದರೆ, ಶೀತ, ಕಫ ಬಂದಿದ್ದರೆ ಆಗ ಇತರರೊಡನೆ ಆಹಾರ-ವಿಹಾರ, ವಿನಿಮಯ ಬೇಡ. ಇದರಿಂದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಇದೆ.

ಮುನ್ನೆಚ್ಚರಿಕೆ ಕ್ರಮ ಸೂಕ್ತ: ಮಳೆಗಾಲದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಬಿಸಿ ನೀರು, ಬಿಸಿಯಾದ ಸೂಪ್‌, ಹಸಿರು ತರಕಾರಿ, ಕುಚ್ಚಿಲಕ್ಕಿ ಗಂಜಿ, ಒಣಹಣ್ಣುಗಳನ್ನು ಸೇವಿಸಬಹುದು. ಒಂದು ವೇಳೆ ಪದೇಪದೆ ಜ್ವರ ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ, ಔಷಧಗಳನ್ನು ಪಡೆಯಿರಿ. ಹೆಚ್ಚು ವಿಶ್ರಾಂತಿ ಪಡೆಯಿರಿ.

ಇದನ್ನೂ ಓದಿ: World Bicycle Day : ಸೈಕಲ್‌ ಹೊಡೆಯಿರಿ, ಆರೋಗ್ಯ ಹೆಚ್ಚಿಸಿಕೊಳ್ಳಿ

Exit mobile version