Site icon Vistara News

Quit Smoking: ಧೂಮಪಾನದ ತೆಕ್ಕೆಯಿಂದ ಬಿಡಿಸಿಕೊಳ್ಳಲು 6 ಮಾರ್ಗಗಳು!

This Smart Necklace Can Help you Stop Smoking

ಧೂಮಪಾನ ಮನುಷ್ಯನನ್ನು ಹಿತವಾಗಿ ಅಪ್ಪಿಕೊಂಡು ಕೊಲ್ಲುವ ಒಂದು ಚಟ. ಒಮ್ಮೆ ಧೂಮಪಾನದ ತೆಕ್ಕೆಯೊಳಗೆ ಜಾರಿದರೆ ಮತ್ತೆ ಅಲ್ಲಿಂದ ತಪ್ಪಿಸಿಕೊಳ್ಳುವುದು ಕಷ್ಟ. ಹೃದಯದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್‌, ಪಾರ್ಶ್ವವಾಯು, ಮಂಡಿನೋವು. ರಕ್ತದೊತ್ತಡ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳೂ ಧೂಮಪಾನಿಗಳನ್ನೇ ಹುಡುಕಿಕೊಂಡು ಬರುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಒಮ್ಮೆ ಹತ್ತಿಸಿಕೊಂಡ ಧೂಮಪಾನದ ಚಟ, ಕೆಟ್ಟದ್ದೆಂದು ಗೊತ್ತಿದ್ದರೂ ಅದರಿಂದ ಬಿಡಿಕೊಳ್ಳುವುದು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಬಿಡಬೇಕೆಂದು ಅಂದುಕೊಂಡರೆ, ಬಹಳ ಸಾರಿ ಇದಕ್ಕೆ ವೃತ್ತಿಪರರ ಸಹಾಯವೂ ಬೇಕಾಗುತ್ತದೆ. ಇದರ ಹೊರತಾಗಿಯೂ ಮನಸ್ಸು ಮಾಡಿದರೆ, ಆತ್ಮವಿಶ್ವಾಸವಿದ್ದರೆ  ಧೂಮಪಾನವನ್ನು ಶಾಶ್ವತವಾಗಿ ತೊರೆಯಲು ಕೆಲವು ಆಹಾರಕ್ರಮವೂ ಸಹಾಯ ಮಾಡುತ್ತದೆ. ನಿತ್ಯಜೀವನದಲ್ಲಿ, ಆರೋಗ್ಯಕರ ಜೀವನಪದ್ಧತಿ ಹಾಗೂ ಆಹಾರಕ್ರಮಗಳ ಮೂಲಕ ಧೂಮಪಾನದ ಚಟಕ್ಕೆ ತಾವೇತಾವಾಗಿ ಮುಕ್ತಿ ಕರುಣಿಸಬಹುದು.

೧. ಹಾಲು: ಧೂಮಪಾನ ಬಿಡಬೇಕೆಂದರೆ ಸಹಾಯ ಮಾಡುವ ಪೇಯ ಹಾಲು. ಇದನ್ನು ವೈದ್ಯರುಗಳೂ ಧೂಮಪಾನಿಗಳಿಗೆ ಸಲಹೆ ನೀಡುತ್ತಾರೆ. ಧೂಮಪಾನ ಮಾಡುವ ಬದಲು ಹಾಲು ಕುಡಿದರೆ ನಿಧಾನವಾಗಿ ಧೂಮಪಾನದತ್ತ ಚಿತ್ತ ಕಡಿಮೆಯಾಗಿ ಅಭ್ಯಾಸ ಕೈಬಿಡಲು ಸಹಾಯವಾಗುತ್ತದೆ. ಧೂಮಪಾನ ಮಾಡಬೇಕೆನಿಸಿದಾಗಲೆಲ್ಲ ಸ್ವಲ್ಪ ಹಾಲು ಕುಡಿಯುವುದನ್ನು ರೂಢಿಸಿಕೊಳ್ಳಿ.

೨. ಹಣ್ಣು ಹಾಗೂ ತರಕಾರಿಗಳು: ಹಣ್ಣು ಹಾಗೂ ತರಕಾರಿಗಲೂ ಹಾಲಿನಂತೆಯೇ ಕೆಲಸ ಮಾಡಬಲ್ಲವು. ಪ್ರತಿ ಬಾರಿ ಧೂಮಪಾನ ಮಾಡಬೇಕೆನಿಸಿದಾಗ ಹಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಧೂಮಪಾನದ ಬಯಕೆ ತನ್ನಿಂದ ತಾನಾಗೇ ಕಡಿಮೆಯಾಗುತ್ತದೆ. ಹಣ್ಣುಗಳು ಆಂಟಿ ಆಕ್ಸಿಡೆಂಟ್‌ಗಳನ್ನೂ ದೇಹಕ್ಕೆ ನೀಡುವುದರಿಂದ ದೇಹಕ್ಕೆ ಧೂಮಪಾನದಿಂದಾಗ ಹಾನಿಯನ್ನು ತಪ್ಪಿಸಿ ಡಿಟಾಕ್ಸ್‌ ಮಾಡಲು ಸಹಾಯ ಮಾಡುತ್ತದೆ.

೩. ಪಾಪ್‌ಕಾರ್ನ್‌ ಹಾಗೂ ಹುರಿದ ಬೀಜಗಳು: ಧೂಮಪಾನ ಬಿಡಲು ಪ್ರಯತ್ನಿಸುವಾಗ ಎಲ್ಲರನ್ನು ಕಾಡುವ ಸಮಸ್ಯೆ ಎಂದರೆ ಹಸಿವು. ಹಸಿವಾದಂತಾಗಿ ಮತ್ತೆ ಸಿಗರೇಟಿನತ್ತ ಕೈ ತಾನಾಗೇ ಹೋಗುತ್ತದೆ. ಇದಕ್ಕಾಗಿಯೇ ಯಾವಾಗಲೂ ಜೊತೆಯಲ್ಲಿ ಮೆಲ್ಲುವಂತ ಸ್ನ್ಯಾಕ್‌ಗಳ್ನು ಇಟ್ಟುಕೊಳ್ಳಬಹುದು. ಕಚೇರಿಗೆ ಗೋಗುವಾಗ ಜೊತೆಯಲ್ಲಿ ಪಾಪ್‌ಕಾರ್ನ್‌ ಅಥವಾ ಹುರಿದ ಬೀಜಗಳು ಉತ್ತಮ ಸಹಾಯ ಮಾಡುತ್ತವೆ. ಕಚೇರಿಯ ಸಮಯದಲ್ಲಿ ಕೆಲಸದ ನಡುವೆ ಎದ್ದು ಹೋಗಿ ಒಂದು ಧಮ್‌ ಎಳೆದು ಬರುವ ಅನಿಸಿದಾಗ ಪಾಪ್‌ಕಾರ್ನ್‌ ಬಾಯಿಗೆ ಹಾಕಿಯೋ, ಹುರಿದ ಬಾದಾಮಿ, ಗೋಡಂಬಿ, ಪಿಸ್ತಾ, ಸೂರ್ಯಕಾಂತಿ ಬೀಜಗಳು, ಕುಂಬಳದ ಬೀಜಗಳಂತಹ ಪ್ರೊಟೀನ್‌ಯುಕ್ತ ಸ್ನ್ಯಾಕ್‌ಗಳನ್ನು ತಿನ್ನಬಹುದು.

೪. ಸಿಹಿತಿಂಡಿಗಳು: ಧೂಮಪಾನ ಬಿಡಲು ಪ್ರಯತ್ನ ಪಡುವಾಗ ನಾಲಿಗೆ ಚಪಲ ಮಿತಿಮೀರುತ್ತದೆ. ಏನಾದರೂ ತಿನ್ನುತ್ತಿರಬೇಕೆಂಬ ಆಸೆ, ಸಿಹಿತಿಂಡಿ ಮೆಲ್ಲಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಚಾಕೋಲೇಟ್, ಒಣದ್ರಾಕ್ಷಿ, ಅಥವಾ ಹಣ್ಣುಗಳನ್ನು ಈ ಸಂದರ್ಭ ತಿನ್ನಬಹುದು.

ಇದನ್ನೂ ಓದಿ: Health tips: ತಡರಾತ್ರಿ ತಿನ್ನುವುದು ಯಾಕೆ ಒಳ್ಳೆಯದಲ್ಲ ಗೊತ್ತೇ?

೫. ದಾಲ್ಚಿನಿ ಅಥವಾ ಚೆಕ್ಕೆ: ದಾಲ್ಚಿನಿ ಅಥವಾ ಚೆಕ್ಕೆ ಧೂಮಪಾನ ಬಿಡಲು ಬಯಸುವ ಮಂದಿ ಅಗತ್ಯ ಸೇವಿಸಬೇಕಾದ ಮಸಾಲೆ ಪದಾರ್ಥ. ಒಂದು ತುಂಡು ಚೆಕ್ಕೆಯನ್ನು ಬಾಯಲ್ಲಿ ಹಾಕಿ ಹಾಗೇ ಬಿಡುವುದರಿಂದ, ಅಥವಾ ಬಹಳ ಹೊತ್ತಿನವರೆಗೆ ಅದನ್ನು ಹಾಗೆಯೇ ಜಗಿಯುತ್ತಾ ರಸ ಹೀರಿಕೊಂಡು ಕೆಲಸ ಮಾಡುತ್ತಿರುವುದರಿಂದ ನಾಲಿಗೆ ಚಪಲವನ್ನು ಗಣನೀಯವಾಗಿ ಇಳಿಕೆಯಾಗುತ್ತದೆ. ಮತ್ತೆ ಮತ್ತೆ ಧೂಮಪಾನ ಮಾಡಬೇಕೆಂಬ ಆಸೆಯನ್ನು ಇದು ಹತ್ತಿಕ್ಕುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ, ಧೂಮಪಾನ ಬಿಡಲು ಪ್ರಯತ್ನಿಸುವ ಎಲ್ಲರೂ ಜೇಬಿನಲ್ಲೊಂದು ಪುಟಾಣಿ ತುಂಡು ದಾಲ್ಚಿನಿಯನ್ನು ಇಟ್ಟುಕೊಳ್ಳಿ. ಗೂಡಂಗಡಿ ಕಂಡ ತಕ್ಷಣ ಸಿಗರೇಟು ಪ್ಯಾಕೇಟು ಕೊಂಡು ಅರುವ ಅಂತ ಅನಿಸಿದಾಗ ಈ ಮರದ ತೊಗಟೆ ಎಂಬ ದಾಲ್ಚಿನಿಯನ್ನು ಬಾಯಲ್ಲಿ ಹಾಕಿಟ್ಟುಕೊಳ್ಳಿ. ಇದರ ಘಮ ಬಹಳ ಹೊತ್ತು ನಿಮ್ಮನ್ನು ಮನಸ್ಸು ಚಂಚಲವಾಗದಂತೆ ತಡೆಯುತ್ತದೆ.

೬. ಹರ್ಬಲ್‌ ಚಹಾ: ಸಾಮಾನ್ಯ ಚಹಾ ಹಾಗೂ ಕಾಫಿಯಲ್ಲಿರುವ ಕೆಫೀನ್‌ ಅಂಶ ಸಿಗರೇಟಿನಲ್ಲಿರುವ ಉತ್ತೇಜಕ ಆಂಶವನ್ನು ಹೆಚ್ಚು ಮಾಡುತ್ತವೆ. ಅದಕ್ಕಾಗಿ ಬಹಳ ಮಂದಿ ಚಹಾ ಬ್ರೇಕ್‌ ಸಂದರ್ಭ ಸಿಗರೇಟು ಬಾಯಿಗಿಡುತ್ತಾರೆ. ಸಿಗರೇಟು ಬಿಡಲು ಯೋಚಿಸಿದ ಕೆಲ ತಿಂಗಳುಗಳವರೆಗೆ ಚಹಾ ಕಾಫಿಯಿಂದ ದೂರವಿರಿ. ಬದಲಾಗಿ ಹರ್ಬಲ್‌ ಚಹಾ, ಗ್ರೀನ್‌ ಟೀ ಮೊದಲಾದ ಆರೋಗ್ಯಕರ ಪರ್ಯಾಯಗಳನ್ನು ಹುಡುಕಿ. ಇವು ನಿಮ್ಮನ್ನು ಇನ್ನಷ್ಟು ಶಿಸ್ತಿನತ್ತ ಪ್ರೇರೇಪಿಸಿ ಸಿಗರೇಟು ಬಿಡುವ ನಿಲುವಿಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!

Exit mobile version