ಇದು ಒಂಥರಾ ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬಂಥ ಜಿಜ್ಞಾಸೆ. ಗುಟ್ಟನ್ನು (Secrets) ಗುಟ್ಟಾಗಿಯೇ ಇರಿಸಿಕೊಳ್ಳಬಲ್ಲ ಜಾಣ್ಮೆ ಯಾರಿಗೆ ಹೆಚ್ಚು? ಮಹಿಳೆಯರಿಗೋ? ಪುರುಷರಿಗೋ? ಇಂಥದ್ದೊಂದು ಪ್ರಶ್ನೆ ಕೇಳಿದರೆ ಸಾಮಾನ್ಯವಾಗಿ ಎಲ್ಲರೂ ಪುರುಷರೇ ಎಂದು ಉತ್ತರ ಕೊಟ್ಟಾರು. ಮಹಿಳೆಯರು ಸಾಧಾರಣವಾಗಿ ಗುಟ್ಟನ್ನು ಬಹುಬೇಗ ತಮ್ಮ ಪ್ರೀತಿಪಾತ್ರರಲ್ಲಿ ರಟ್ಟು ಮಾಡಿಬಿಡುತ್ತಾರೆ ಎಂದು ಹಲವರು ಹೇಳುವುದುಂಟು. ಹೆಂಗಸರ ಬಾಯಲ್ಲಿ ಗುಟ್ಟು ಉಳಿಯುವುದುಂಟೇ? ಎಂಬ ಗಾದೆಯೇ ಇರುವುದರಿಂದ, ಇದು ಕಷ್ಟದ ಪ್ರಶ್ನೆಯೇ ಅಲ್ಲ ಎಂದು ಹಲವರು ಹೇಳಿಯಾರು. ಆದರೂ, ಇಂಥದ್ದನ್ನು ಖಂಡತುಂಡವಾಗಿ ಹೇಳಲು ಯಾವುದೇ ಆಧಾರಗಳಿಲ್ಲ!
ಹಾಗಾದರೆ ಪುರುಷರೇನೂ ಕಮ್ಮಿಯಿಲ್ಲ. ಇವರು ಸೀಕ್ರೆಟ್‌ಗಳನ್ನು ಬಾಯಿ ಬಿಡುವುದೇ ಇಲ್ಲ ಅಂತೇನೂ ಇಲ್ಲ. ಪುರುಷರು ಡೀಪ್ ಸೀಕ್ರೆಟ್ ಹೆಚ್ಚಾಗಿ ಬಯಲು ಮಾಡುವುದು ಒಂದೇ ಸಂದರ್ಭದಲ್ಲಂತೆ, ಅದು ಅತಿಯಾಗಿ ಕುಡಿದಾಗ. ಅದೊಂದು ಸಂದರ್ಭ ಬಿಟ್ಟರೆ ತಾನು ಹೇಳಬಾರದೆಂದು ಅಂದುಕೊಂಡ ವಿಚಾರಗಳ್ನು ಪುರುಷರು ಎಷ್ಟೇ ಕಷ್ಟ ಆದರೂ ಬಾಯಿ ಬಿಡುವುದಿಲ್ಲವಂತೆ. ಆದರೆ, ಕುಡಿದು ಮತ್ತೇರಿದರೆ ಮಾತ್ರ ಎಂತಹ ಸೀಕ್ರೆಟ್ ಬೇಕಿದ್ದರೂ ಸುಲಭವಾಗಿ ಹೇಳಿಬಿಡುತ್ತಾರೆ. ಹೇಳಬಾರದೆಂದು ತಡೆಹಿಡಿದ್ದೆಲ್ಲ ಓತಪ್ರೋತವಾಗಿ ಹೊರಬರುತ್ತದಂತೆ!
ಆದರೆ ಮಹಿಳೆಯರು ಹಾಗಲ್ಲ. ಅವರ ಬಾಯಿಯಿಂದ ಗುಟ್ಟು ರಟ್ಟಾಗಲು ಬೇರೆಯದೇ ಕಾರಣಗಳಿವೆ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಮನಸ್ಸಿಗೆ ನೋವಾದಾಗ, ಸೀಕ್ರೆಟ್ಟನ್ನು ಬಯಲು ಮಾಡುತ್ತಾರಂತೆ. ಅದೂ ಅವರಿಗೆ ನೋವಾಗಿದ್ದು ಇನ್ನೊಂದು ಮಹಿಳೆಯಿಂದಲೇ ಆಗಿದ್ದರೆ ಕಥೆ ಮುಗಿದಂತೆಯೇ. ಅಂತಹ ಸಂದರ್ಭದಲ್ಲಿ ಹೆಗಲು ಕೊಟ್ಟ, ನೋವನ್ನು ಅರ್ಥ ಮಾಡಿಕೊಂಡು ಸಮಾಧಾನ ಮಾಡಲು ಬಂದ ಜೀವಕ್ಕೆ ಹೆಣ್ಣುಮಕ್ಕಳು ಬಹುಬೇಗನೆ ಶರಣಾಗಿಬಿಡುತ್ತಾರಂತೆ. ತನಗೆ ನೋವಾದ ಮಹಿಳೆಯ ಎಂತಹ ಖಾಸಗಿ ಸೀಕ್ರೆಟ್‌ಗಳು ತನಗೆ ಗೊತ್ತಿದ್ದರೂ, ಒಂದೇ ಉಸಿರಿಗೆ ಎಲ್ಲವನ್ನೂ ಪುಂಖಾನುಪುಂಖವಾಗಿ ಹೇಳಿಬಿಡುತ್ತಾರಂತೆ.
ಆದರೆ ಪುರುಷರ ಕೈಯಲ್ಲಿ ಹೀಗೆ ಗುಟ್ಟನ್ನು ಗುಟ್ಟಾಗಿ ಇಡುವುದು ಸಾಧ್ಯವಾಗುತ್ತದಂತೆ. ಸಾಮಾನ್ಯವಾಗಿ ಪುರುಷರು ತಮ್ಮ ಖಾಸಗಿ ವಲಯದಲ್ಲಿ ಮಾತಾಡಿಕೊಂಡ ಗುಟ್ಟನ್ನು ಇತರರ ಜೊತೆಗೆ ಮತ್ತೆ ಮಾತನಾಡುವಷ್ಟು ಗಂಭೀರವಾಗಿ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲವಂತೆ. ಅವರಿಂದ ತಮಗೆ ಬೇಸರವಾಗಿದ್ದರೂ, ಅದನ್ನು ಅಲ್ಲೇ ಬಿಟ್ಟು ಬೇಗ ಮುನ್ನಡೆಯುತ್ತಾರಂತೆ.
ಸಮೀಕ್ಷೆಗಳ ಪ್ರಕಾರ, ಮಹಿಳೆ ಗುಟ್ಟೊಂದನ್ನು ಕಡಿಮೆಯೆಂದರೆ 37 ನಿಮಿಷಗಳ ಕಾಲ, ಹೆಚ್ಚೆಂದರೆ 47 ಗಂಟೆಗಳ ಕಾಲ ಹಿಡಿದಿಡಬಲ್ಲಳು. ಹಾಗಾದರೆ ಏನೇ ಗುಟ್ಟು ಹೇಳಿದರೂ ಮಹಿಳೆಯ ಬಳಿ ಎರಡು ದಿನಕ್ಕಿಂದ ಹೆಚ್ಚು ಕಾಲ ಆ ಗುಟ್ಟು ಬಾಳಲಾರದು, ಅದು ರಟ್ಟಾಗುವುದು ಖಚಿತ ಎನ್ನುತ್ತದೆ ಈ ಸಮೀಕ್ಷೆ.
ಈ ಸಮೀಕ್ಷೆಯನ್ನು ಮಾಡಲು ಇಂಗ್ಲೆಂಡಿನಲ್ಲಿ ಮೂರು ಸಾವಿರ ಮಹಿಳೆಯರನ್ನು ಬಳಸಿದ್ದು, ಅವರು 18ರಿಂದ 65ರ ವಯಸ್ಸಿನವರೆಗಿನವರಾಗಿದ್ದರು. ಅವರಿಗೆ ಗೊತ್ತಾದ ಸೀಕ್ರೆಟ್ ಎಷ್ಟೇ ಖಾಸಗಿಯಾಗಿರಲಿ, ಶೇಕಡಾ 45 ಮಂದಿ ಖಂಡಿತ ಆ ಗುಟ್ಟನ್ನು ಮತ್ತೊಬ್ಬರಿಗೆ ಹೇಳಿ ಹೃದಯ ಹಗುರ ಮಾಡಿಕೊಳ್ಳುತ್ತೇವೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ. ಆದರೆ, ಹಾಗೆ ಸೀಕ್ರೆಟ್ ಮತ್ತೊಬ್ಬರಿಗೆ ದಾಟಿಸಿದ ಮೇಲೆ ಅವರಿಗೆ ಹೇಳಿಬಿಟ್ಟೆನಲ್ಲಾ ಎಂಬ ಗಿಲ್ಟ್ ಕೂಡಾ ಕಾಡುತ್ತದಂತೆ. ಬಹಳಷ್ಟು ಮಹಿಳೆಯರು ತಾವು ಕುಡಿದಾಗ ಹೇಳಿಬಿಡುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ತಮಗೆ ಗೊತ್ತಿರುವ ಸೀಕ್ರೆಟ್‌ಗಳನ್ನೆಲ್ಲಾ ಗಂಡ, ಬಾಯ್‌ಫ್ರೆಂಡ್, ಅಮ್ಮ ಅಥವಾ ಪರಮಾಪ್ತ ಗೆಳತಿಯ ಬಳಿ ಹೇಳುತ್ತೇವೆ ಎಂದಿದ್ದಾರೆ.
ಆದರೆ ಶೇಕಡಾ 83ರಷ್ಟು ಮಂದಿ ತಮ್ಮ ಬಳಿ ಇದನ್ನು ಯಾರಿಗೂ ಹೇಳಬೇಡ ಎಂದು ಹೇಳಿದ ವಿಶ್ವಾಸಾರ್ಹ ಗುಟ್ಟನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ, ಯಾರಿಗೂ ಹೇಳುವುದಿಲ್ಲ ಎಂದು ಹೇಳಿದ್ದಾರೆ. ಅವರ ಪ್ರಕಾರ, ಮಹಿಳೆಯರು ತಮಗೆ ಗೊತ್ತಿರುವ ಗುಟ್ಟುಗಳ ಅರ್ಧದಷ್ಟನ್ನೂ ಬೇರೆಯವರೊಂದಿಗೆ ಹೇಳಿಕೊಳ್ಳುವುದಿಲ್ಲ. ಯಾಕೆಂದರೆ, ಮಹಿಳೆ ಭಾವಜೀವಿ. ಕಾಳಜಿ ಆಕೆಯಲ್ಲಿ ಪುರುಷರಿಗಿಂತ ಹೆಚ್ಚು ಇರುತ್ತದೆ. ಆಕೆಯಲ್ಲಿ ಅಮ್ಮನಂತಹ ಗುಣ ಇರುವುದರಿಂದ ಹಾಗೂ ಅಮ್ಮನೂ ಆಗಿರುವುದಿಂದ ಸಾಕಷ್ಟು ವಿಚಾರಗಳು, ಸೂಕ್ಷ್ಮಗಳು ಅವಳಿಗೆ ಗೊತ್ತಿದ್ದರೂ ಸುಮ್ಮನಿರುತ್ತಾಳೆ ಎಂದಿದೆ.
ಸಮೀಕ್ಷೆಯ ಪ್ರಕಾರ ಮಹಿಳೆಗೆ ವಾರಕ್ಕೆ ಮೂರಾದರೂ ಗಾಸಿಪ್ ಸಿಗುತ್ತದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಮಾತನಾಡುವುದರಿಂದ ಅವರಿಗೆ ಗಾಸಿಪ್ ಹೆಚ್ಚು ಸಿಗುತ್ತದೆ ಎಂದಿದೆ. ವಿಚಿತ್ರವೆಂದರೆ, ಶೇ 27 ಮಂದಿ ಹೆಣ್ಣುಮಕ್ಕಳು ಮಾತ್ರ ತಮಗೆ ಗೊತ್ತಿರುವ ಸೀಕ್ರೆಟ್‌ಗಳು ಕೆಳಿಸಿಕೊಂಡು ಸ್ವಲ್ಪ ಹೊತ್ತಿನ ನಂತರ ನಮಗೆ ಮರೆತೇ ಹೋಗಿರುತ್ತದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!