ಅಗತ್ಯವೇ ಆವಿಷ್ಕಾರಗಳ ತಾಯಿ ಅಥವಾ ತಂದೆ. ತಂದೆ-ತಾಯಿ ಎನಿಸಿಕೊಳ್ಳುವುದಕ್ಕೆ ತಡೆಯೊಡ್ಡುವ ಕಾರಣಕ್ಕೇ ಆವಿಷ್ಕಾರಗೊಂಡವು ಗರ್ಭನಿರೋಧಕಗಳು. ಮಹಿಳೆಯರಿಗೆ ಹಲವರು ರೀತಿಯ ಆಯ್ಕೆಗಳಿಗೆ ಈ ನಿಟ್ಟಿನಲ್ಲಿ. ಆದರೆ ಪುರುಷರಿಗೆ ಸದ್ಯಕ್ಕೆ ಇರುವ ಆಯ್ಕೆಗಳು ಎರಡೇ- ವ್ಯಾಸೆಕ್ಟಮಿ ಅಥವಾ ಕಾಂಡೊಮ್‌ಗಳು. ಸಾವಿರಾರು ವರ್ಷಗಳಿಂದ ಇದೇ ಆಯ್ಕೆಗಳು ಚಾಲ್ತಿಯಲ್ಲಿವೆ. ಇದೀಗ ಮೂರನೆಯ ಆಯ್ಕೆಯೂ ಲಭ್ಯವಾಗುವ ಹಂತದಲ್ಲಿದೆ- ಪುರುಷರ ಗರ್ಭನಿರೋಧಕ ಮಾತ್ರೆಗಳು! (Male Pill: )
ವಿಜ್ಞಾನ ನಿಯತಕಾಲಿಕ ನೇಚರ್ ಕಮ್ಯುನಿಕೇಷನ್ಸ್‌ನಲ್ಲಿ (Nature Communications) ಈ ಕುರಿತ ಅಧ್ಯಯನದ ವರದಿ ಪ್ರಕಟಗೊಂಡಿದೆ. ಈ ಹಿಂದೆಯೂ ಪುರುಷರಿಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿದ್ದರೂ ಫಲಪ್ರದವಾಗಿರಲಿಲ್ಲ. ಇದೀಗ ನಡೆಯುತ್ತಿರುವ ಪ್ರಯೋಗ ಪ್ರಾಣಿಗಳ ಮೇಲೆ ಬೇಕಾದ ರೀತಿಯಲ್ಲಿ ಪರಿಣಾಮ ಬೀರಿದ್ದು, ಮಾನವರನ್ನು ಒಳಗೊಂಡ ಕ್ಲಿನಿಕಲ್ ಪ್ರಯೋಗಗಳಿಗೆ ಸಿದ್ಧವಾಗಿದೆ. ಅಗತ್ಯ ಸುರಕ್ಷತಾ ಗುರಿಗಳನ್ನು ಈ ಮಾತ್ರೆಗಳು ತಲುಪಿವೆಯೇ, ಅಡ್ಡ ಪರಿಣಾಮಗಳಿವೆಯೇ ಮತ್ತು ಎಷ್ಟು ನಿಖರವಾದ ಪರಿಣಾಮ ಬೀರುತ್ತವೆ ಎಂಬುದನ್ನು ಪರೀಕ್ಷಿಸಲು ವಿಜ್ಞಾನಿಗಳು ಸಿದ್ಧರಾಗಿದ್ದಾರೆ.
ಇಲಿಗಳ ಮೇಲೆ ಪ್ರಯೋಗ
ಈ ಮಾತ್ರೆಗಳನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಸುಮಾರು ಎರಡೂವರೆ ಗಂಟೆಗಳ ಕಾಲ ಅದು ವೀರ್ಯಾಣುವನ್ನು ನಿಷ್ಕ್ರಿಯ ಸ್ಥಿತಿಯಲ್ಲಿ ಇರಿಸಿತ್ತು. ಮೂರು ತಾಸುಗಳ ನಂತರ, ಅವುಗಳಲ್ಲಿ ಸ್ವಲ್ಪ ಚಲನೆ ಕಂಡುಬಂದಿತ್ತು. ೨೪ ತಾಸುಗಳು ಕಳೆಯುವಷ್ಟರಲ್ಲಿ ವೀರ್ಯಾಣುಗಳು ಸಾಮಾನ್ಯ ಸ್ಥಿತಿಯನ್ನು ತಲುಪಿದ್ದವು. ಈ ಔಷಧದ ಪ್ರಯೋಗದಿಂದ ಇಲಿಗಳ ವರ್ತನೆಯಲ್ಲಿ ಯಾವುದೇ ವ್ಯತ್ಯಾಸವೂ ಕಂಡುಬರಲಿಲಲ್ಲ. ಸುಮಾರು ೫೦ಕ್ಕೂ ಹೆಚ್ಚು ಬಾರಿ ಬೇರೆ ಬೇರೆ ಇಲಿಗಳ ಮೇಲೆ ಇವುಗಳನ್ನು ಪ್ರಯೋಗಿಸಲಾಗಿದೆ ಎನ್ನುತ್ತದೆ ವರದಿ.
ಅಧ್ಯಯನಕಾರರ ಪ್ರಕಾರ, ಈ ಮಾತ್ರೆ ದೇಹ ಸೇರಿದ ೩೦ರಿಂದ ೬೦ ನಿಮಿಷಗಳಲ್ಲಿ ಕೆಲಸ ಪ್ರಾರಂಭಿಸುತ್ತದೆ. ಈವರೆಗಿನ ಯಾವುದೇ ಹಾರ್ಮೋನ್ ಸಹಿತ ಅಥವಾ ರಹಿತ ಪುರುಷರ ಗರ್ಭನಿರೋಧಕಗಳು ಕೆಲಸ ಆರಂಭಿಸಲು ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದವು. ಇದು ಕ್ಷಿಪ್ರವಾಗಿ ಕೆಲಸ ಮಾಡುತ್ತದೆ. ಇದರ ಪರಿಣಾಮ ದೇಹದಿಂದ ನಿರ್ಗಮಿಸುವುದಕ್ಕೂ ಒಂದು ದಿನ ಸಾಕು. ಉಳಿದವು ದೀರ್ಘಕಾಲ ತೆಗೆದುಕೊಂಡಿವೆಯಂತೆ. ಇದಿನ್ನು ಅಗತ್ಯ ಪ್ರಯೋಗಗಳನ್ನು ಮುಗಿಸಿ, ಮಾರುಕಟ್ಟೆಗೆ ಬರುವುದಕ್ಕೆ ಎಷ್ಟು ಕ್ಷಿಪ್ರ ಅಥವಾ ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: