ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಕಣ್ಣಿನ ರೆಕ್ಕೆಯಂತೆ ಬಿಂಬಿಸುವ ವಿಂಗ್ಡ್ ಐ ಲೈನರ್ ಮೇಕಪ್ ಕಾನ್ಸೆಪ್ಟ್ ಬ್ಯೂಟಿ ಪ್ರಿಯರನ್ನು ಮತ್ತೊಮ್ಮೆ ಸೆಳೆದಿದೆ. ಸುಂದರ ಕಂಗಳನ್ನು ಐ ಲೈನರ್‌ನಲ್ಲಿ ರೆಕ್ಕೆಯಂತೆ ಚಿತ್ರಿಸಿ ಆಕರ್ಷಕವಾಗಿಸುವ ಈ ಬ್ಯೂಟಿ ಕಾನ್ಸೆಪ್ಟ್ ಮೇಕಪ್ ಪ್ರಿಯರನ್ನು ಸಮ್ಮೋಹನಗೊಳಿಸಿದೆ. ಕಣ್ಣುಗಳು ಹಾರಲು ರೆಡಿಯಾಗಿವೆಯೇನೋ ಎಂದೆನಿಸುತ್ತದೆ. ಅಂತಹ ಜಾದೂ ಈ ವಿಂಗ್ಡ್ ಐ ಲೈನರ್‌ನಲ್ಲಿ ಇದೆ.
ನೀಲಾಕಾಶದಲ್ಲಿತೇಲಲು ಸಿದ್ಧವಾಗಿರುವ ಹಕ್ಕಿಗಳಂತೆ ಕಾಣುವ ಕಂಗಳು, ರೆಕ್ಕೆಯಂತೆ ಕಾಣುವ ತಿದ್ದಿ ತೀಡಿದ ರೆಪ್ಪೆಗಳು. ವಿಂಗ್ಡ್ ಐ ಲೈನ್ ಮೇಕಪ್‌ನ ಹೈಲೈಟ್.
ವಾಟರ್‌ಪ್ರೂಫ್ ಐ ಲೈನರ್
ಇದೀಗ ಮಾರುಕಟ್ಟೆಯಲ್ಲಿ ಮಾನ್ಸೂನ್‌ಗೆ ಸೂಟ್ ಆಗುವ ಸಾಕಷ್ಟು ಬ್ರಾಂಡ್‌ನ ವಾಟರ್‌ಪ್ರೂಫ್‌ನ ಲಿಕ್ವಿಡ್ ಐ ಲೈನರ್‌ಗಳು ಬಂದಿವೆ. ಐ ಲೈನರ್ ಪೆನ್ಸಿಲ್‌ಗಳು ನಾನಾ ವರ್ಣಗಳಲ್ಲಿ ದೊರೆಯುತ್ತಿವೆ. ಇನ್ನು ಐ ಲೈನರ್ ಸ್ಕೆಚ್ ಪೆನ್‌ಗಳು ಕೂಡ ದೊರೆಯುತ್ತಿವೆ. ಐ ಲೈನರ್‌ಗಿಂತ ಸ್ಕೆಚ್ ಪೆನ್‌ಗಳು ದುಬಾರಿ. ಇನ್ನು ಶಿಮ್ಮರಿಂಗ್ ಐ ಲೈನರ್‌ಗಳಲ್ಲಿ ಆಕರ್ಷಕವಾಗಿ ವಿಂಗ್ಡ್ ಐ ಲೈನರ್ ತೀಡಬಹುದು. ಆದರೆ, ಬ್ಲಾಕ್ ಔಟರ್‌ಲೈನ್ ಇದ್ದರೇ ಮಾತ್ರ ವಿಂಗ್ಡ್ ಐ ಲೈನರ್ ಮೇಕಪ್ ಚೆನ್ನಾಗಿ ಕಾಣಲು ಸಾಧ್ಯ ಎನ್ನುವ ಮೇಕಪ್ ಆರ್ಟಿಸ್ಟ್ ದಿವಿಜಾ ಪ್ರಕಾರ, ನಾನಾ ಬಗೆಯಲ್ಲಿ ಇವನ್ನು ಪ್ರಯೋಗಿಸಬಹುದಂತೆ.
ವಿಂಗ್ಡ್ ಐ ಲೈನರ್ ಹಿಸ್ಟರಿ
ಈ ಬಗೆಯ ಐ ಲೈನರ್ ಮೇಕಪ್ ನಿನ್ನೆ ಮೊನ್ನೆಯದಲ್ಲ! ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಕಾಜಲ್ ಬಳಸಿ ಈ ಐ ಮೇಕಪ್ ಮಾಡಿಕೊಳ್ಳುತ್ತಿದ್ದಳಂತೆ. ರಾಜ ಮನೆತನದ ಹೆಣ್ಣುಮಕ್ಕಳು ಮೊದಲಿನಿಂದಲೂ ಕಂಗಳ ಸೌಂದರ್ಯಕ್ಕಾಗಿ ಕಾಡಿಗೆಯನ್ನು ಬಳಸುತ್ತಿದ್ದರೆನ್ನಲಾಗಿದೆ. ಮೊಗಲರ ರಾಣಿಯರು ಕಾಜಲ್ ಅನ್ನು ಐ ಲೈನರ್‌ನಂತೆ ಬಳಸುತ್ತಿದ್ದರು. ಜೋಧಾ ಕಾಲದಿಂದಲೂ ಇದು ಪ್ರಚಲಿತದಲ್ಲಿತ್ತು. ಅಷ್ಟೇಕೆ! ಹೆಣ್ಣಿನ ಮನಮೋಹಕ ಕಂಗಳನ್ನು ನೋಡಿ ಪ್ರೇಮಪಾಶದಲ್ಲಿಸಿಲುಕುತ್ತಿದ್ದ ಬಹಳಷ್ಟು ಪ್ರೇಮ್‌ಕಹಾನಿಗಳನ್ನು ಗಮನಿಸಬಹುದು.
ಟ್ರೈ ಮಾಡಿ ನೋಡಿ
ನೀವು ಧರಿಸುವ ಉಡುಪಿಗೆ ಮ್ಯಾಚಿಂಗ್ ಆಗುವಂತಹ ಯಾವುದೇ ವರ್ಣದ ಸ್ಮಡ್ಜ್ ಪ್ರೂಫ್ ಐ ಲೈನರ್ ಆಯ್ಕೆ ಮಾಡಿಕೊಳ್ಳಿ. ಕಣ್ಣಿನ ಕೆಳ ರೆಪ್ಪೆಯಿಂದ ಮೇಲ್ಭಾಗಕ್ಕೆ ರೆಕ್ಕೆಯ ಕೊನೆಯಂತೆ ಬ್ರಶ್‌ನಲ್ಲಿ ಹಚ್ಚಿ. ಇನ್ನು ಮೇಲಿನ ರೆಪ್ಪೆಯ ಒಂದು ಕಡೆಯಿಂದ ಮೇಲ್ಭಾಗದಲ್ಲಿಕೆಳಗಿನ ರೆಪ್ಪೆಯ ಲೈನ್‌ಗೆ ತಾಗಿಸಿ. ನೋಡಲು ಇದು ರೆಕ್ಕೆಯ ಕೊನೆಯ ತುದಿಯಂತೆ ಕಾಣಬೇಕು. ನಿಮಗೆ ಎಷ್ಟು ಉದ್ದ ಬೇಕು ಅಷ್ಟುದ್ದ ಈ ಲೈನನ್ನು ಎಳೆಯಬಹುದು. ಕೊನೆಯಲ್ಲೆ ಜಾಯಿಂಟ್ ಆಗಬೇಕು. ನಿಮ್ಮ ಆಯ್ಕೆಗೆ ತಕ್ಕಂತೆ ಅಗಲ ಹಾಗೂ ಉದ್ದವಾಗಿ ಬ್ರಶ್ ಮುಖಾಂತರವೇ ಎಳೆಯಬಹುದು. ಇನ್ನು ಔಟ್‌ಲೈನ್‌ನೊಳಗೆ ಮ್ಯಾಚ್ ಆಗುವ ಶೇಡನ್ನು ಕೂಡ ಫಿಲ್ ಮಾಡಬಹುದು.
ಕಣ್ಣಿನ ಆಕಾರಕ್ಕೆ ತಕ್ಕಂತಿರಲಿ
ವಿಂಗ್ಡ್ ಐ ಲೈನ್ ಬರೆಯುವ ಮುನ್ನ ನಿಮ್ಮ ಕಂಗಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮದು ಬಟ್ಟಲು ಕಣ್ಣುಗಳಾದಲ್ಲಿ ದೊಡ್ಡದಾದ ವಿಂಗ್ಸ್ ಬರೆಯಬೇಡಿ. ಹೆಚ್ಚು ಮೊನಾಚಾದ ಲೈನ್ ನೀಡಬೇಡಿ. ಇದು ಕಂಗಳನ್ನು ಮತ್ತಷ್ಟು ದೊಡ್ಡದಂತೆ ಬಿಂಬಿಸುತ್ತದೆ. ಚಿಕ್ಕ ಕಂಗಳಾದಲ್ಲಿ ಕೊಂಚ ದೊಡ್ಡಾದಾದ ವಿಂಗ್ಡ್ ಐ ಲೈನ್ ಬರೆದರೂ ಪರವಾಗಿಲ್ಲ. ಕೊಂಚ ದಪ್ಪನಾಗಿ ತೀಡಿದರೂ ಮನಮೋಹಕವಾಗಿ ಕಾಣುತ್ತದೆ. ಬೆಕ್ಕಿನ ಕಂಗಳಿದ್ದಲ್ಲಿಆದಷ್ಟೂ ವಿಂಗ್ಡ್ ಐ ಲೈನ್ ಬರೆಯುವುದನ್ನು ಅವಾಯ್ಡ್ ಮಾಡಿ. ಯಾಕೆಂದರೆ ಸೂಟ್ ಆಗದು. ಇನ್ನು ಬ್ರೌನ್ ಅಥವಾ ನೀಲಿ ಕಂಗಳಿಗೂ ವಿಂಗ್ಡ್ ಐ ಲೈನ್ ಮೇಕಪ್ ಓಕೆ.
ಟ್ರಡಿಷನಲ್ ಡ್ರೆಸ್‌ಗೆ ಪರ್ಫೆಕ್ಟ್ ಮ್ಯಾಚ್
ಟ್ರಡಿಷನಲ್ ಲುಕ್‌ಗೆ ವಿಂಗ್ಡ್ ಐ ಲೈನರ್ ಮನಮೋಹಕವಾಗಿ ಕಾಣುತ್ತದೆ. ಅದರಲ್ಲೂಸೀರೆ ಹಾಗೂ ರಾಯಲ್ ಲುಕ್ ನಿಡುವ ಉಡುಪುಗಳಿಗೆ, ಸಲ್ವಾರ್ ಹಾಗೂ ಗಾಗ್ರ, ಲೆಹೆಂಗಾಗಳಿಗೆ ವಿಂಗ್ಡ್ ಐ ಲೈನರ್ ಚೆನ್ನಾಗಿ ಕಾಣುತ್ತದೆ.
ಸಿಂಪಲ್ ಟಿಪ್ಸ್ ತಿಳಿದುಕೊಳ್ಳಿ
- ಮೇಕಪ್ ಮುಗಿದ ನಂತರ ಕೊನೆಯಲ್ಲಿ ವಿಂಗ್ಡ್ ಐ ಲೈನರ್ ಹಚ್ಚಿ.
- ಮಾನ್ಸೂನ್ನಲ್ಲಿ ವಾಟರ್ ಪ್ರೂಫ್ ಐ ಲೈನರ್ ಬಳಸಿ.
- ಬ್ಲಾಕ್ ಐ ಲೈನ್ ಎಲ್ಲಾ ಬಗೆಯ ಮೇಕಪ್ಗೂ ಮ್ಯಾಚ್ ಆಗುತ್ತದೆ.
- ಧರಿಸುವ ಡಿಸೈನರ್ವೇರ್ಗೆ ತಕ್ಕಂತೆ ಸೂಟ್ ಆಗುವಂತಿರಬೇಕು.
- ಕಣ್ಣಿನ ಅಲರ್ಜಿ ಇರುವವರಿಗೆ ಈ ಡಿಸೈನ್ ಬೇಡ.
- ಮಲಗುವ ಮುನ್ನ ಐ ಲೈನ್ ಮೇಕಪ್ ತೆಗೆಯುವುದು ಮುಖ್ಯ.
…………
ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್ ಸೆನ್ಸ್