Site icon Vistara News

Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!

Saffron

ಕಾಶ್ಮೀರ ಎಂದರೆ ಥಟ್ಟನೆ ನೆನಪಿಗೆ ಬರುವುದು ನಯನ ಮನೋಹರ ಸ್ವರ್ಗಸದೃಶ ದೃಶ್ಯದ ನಡುವೆ ಕೇಸರಿ (Saffron). ಕಾಶ್ಮೀರದ ಕೇಸರಿಯನ್ನು (Kashmir Saffron) ಜತನದಿಂದ ಕಾಪಾಡಿಕೊಂಡು ಮನೆಯಲ್ಲಿ ಹಬ್ಬದಡುಗೆ ಮಾಡುವಾಗಲೋ, ಪಾಯಸಕ್ಕೋ ಯಾವಾಗಲಾದರೊಮ್ಮೆ ಬಳಸುವ ಬಲು ಅಪರೂಪದ ವಿಶೇಷ ವಸ್ತು. ಕೇಸರಿ ಎಂದರೆ ಅದು ಶ್ರೀಮಂತರ ಸೊತ್ತು ಎಂಬ ನಂಬಿಕೆಯಿದೆ. ಒಂದಿಷ್ಟು ಎಸಳುಗಳು ಸೇರಿ ಗ್ರಾಂ ಲೆಕ್ಕದಲ್ಲಿ ಬಿಕರಿಯಾಗುವ ಈ ವಿಶೇಷ ಘಮದ ಮಸಾಲೆ ಕಾಶ್ಮೀರದ ಹೆಸರನ್ನೂ ತನ್ನಲ್ಲಿ ಹೊತ್ತುಕೊಂಡಿದೆ. ಅತ್ಯಂತ ದುಬಾರಿ ಎಂಬ ಕಿರೀಟ ಹೊತ್ತ ಇದರಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ (Saffron Health Benefits) ಇವೆ. ಬನ್ನಿ, ಕೇಸರಿಯ ಸೇವನೆಯಿಂದ ಯಾವೆಲ್ಲ ಆರೋಗ್ಯಕರ ಲಾಭಗಳನ್ನು (Health tips) ಪಡೆಯಬಹುದು ಎಂಬುದನ್ನು ನೋಡೋಣ.

1. ಕೇಸರಿ ಅತ್ಯಂತ ಶಕ್ತಿಯುತವಾದ ಆಂಟಿಆಕ್ಸಿಡೆಂಟ್‌ ಅನ್ನು ತನ್ನಲ್ಲಿ ಹೊಂದಿದೆ. ಈ ಆಂಟಿ ಆಕ್ಸಿಡೆಂಟ್‌ಗಳು ಹಲವು ಬಗೆಯ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಮುಖ್ಯವಾಗಿ, ಗರ್ಭಿಣಿ ಸ್ತ್ರೀಯರು ಕೇಸರಿಯನ್ನು ನಿತ್ಯವೂ ಕೊಂಚ ಕೊಂಚವಾಗಿ ಸೇವಿಸುವುದು ಅವರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ಗರ್ಭಪಾತದ ಸಂಭವನೀಯತೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ಕಂಡು ಬರುವ ಮೈಕೈ ನೋವು, ಒತ್ತಡ, ಹಾಗೂ ಮಾನಸಿಕ ತುಮುಲಗಳು, ಮೂಡು ಬದಲಾವಣೆ ಇತ್ಯಾದಿಗಳಿಗೂ ಒಳ್ಳೆದಂತೆ.

2. ಮಾನಸಿಕ ಒತ್ತಡ ಹಾಗೂ ಖಿನ್ನತೆಯಂತಹ ಸಮಸ್ಯೆಗಳಿಗೂ ಕೇಸರಿ ಒಳ್ಳೆಯದು. ಅದಕ್ಕೇ ಇದನ್ನು ಸೂರ್ಯನ ಬೆಳಕಿಗೆ ಹೋಲಿಸಲಾಗುತ್ತದೆ. ಸೂರ್ಯನ ಬೆಳಕು ತರುವಂತೆ ಇದು ಮಾನಸಿಕ ಪ್ರಫುಲ್ಲತೆಯನ್ನು ತರುತ್ತದೆ. ಬಾಡಿದ್ದ ಮನಸ್ಸನ್ನು ಚಿಗಿತುಕೊಳ್ಳುವಂತೆ ಮಾಡುವ ಶಕ್ತಿ ಇದಕ್ಕಿದೆ. ಇದು ಸಂಶೋಧನೆಗಳಿಂದಲೂ ದೃಢಪಟ್ಟಿದೆ.

3. ಕೇಸರಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕ್ಯಾನ್ಸರ್‌ ವಿರುದ್ಧವೂ ಹೋರಾಡುತ್ತದೆ. ಇದು ಅಪಾಯಕಾರಿಯೆನಿಸುವ ಫ್ರೀ ರ್ಯಾಡಿಕಲ್ಸ್‌ಗಳ ವಿರುದ್ಧ ಹೋರಾಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರದಂತೆ ತಡೆಯುತ್ತದೆ ಎನ್ನುತ್ತದೆ ಸಂಶೋಧನೆಗಳು.

4. ಮುಖ್ಯವಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಋತುಚಕ್ರದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಋತುಚಕ್ರಕ್ಕೂ ಮೊದಲು ಹಾಗೂ ಮುಟ್ಟಿನ ಸಂದರ್ಭ ಅತೀವ ಸೊಂಟನೋವು, ಕೆಳಹೊಟ್ಟೆಯಲ್ಲಿ ನೋವು, ಕಾಲುಗಳ ಸೆಳೆತ, ಬೆನ್ನುನೋವು, ಸುಸ್ತು ಸೇರಿದಂತೆ ದೈಹಿಕ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳುಂಟಾಗುವುದನ್ನು ಇದು ಕಡಿಮೆ ಮಾಡುತ್ತದೆ. ಇವುಗಳಿಂದ ಆರಾಮ ದೊರೆಯುತ್ತದೆ.

5. ಆಂಟಿ ಡಿಪ್ರೆಸೆಂಟ್‌ ಹಾಗೂ ಅತೀವ ಔಷಧಿಗಳನ್ನು ಸೇವಿಸಿ ಉಂಟಾಗಿರುವ ಲೈಂಗಿಕ ಸಮಸ್ಯೆಗಳಿಗೂ ಇದು ಒಳ್ಳೆಯ ಮದ್ದು. ಲೈಂಗಿಕಾಸಕ್ತಿ ಮೊಳೆಯುವಲ್ಲಿ, ಪುರುಷರಲ್ಲಿ ಉದ್ದೀಪನ ಶಕ್ತಿ ಕಡಿಮೆಯಾದಾಗ ಸೇರಿದಂತೆ ಲೈಂಗಿಕ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಲ್ಲದು.

6. ದಿನವೂ ಆಹಾರದ ಮೂಲಕ ಸ್ವಲ್ಪ ಕೇಸರಿಯನ್ನು ಸೇವಿಸುವಿದರಿಂದ ತೂಕವನ್ನೂ ಕಡಿಮೆ ಮಾಡಬಹುದದಂತೆ. ಅಂದರೆ, ಕೇಸರಿಯನ್ನು ಸೇವಿಸಿದ ಮಂದಿ, ಹೆಚ್ಚು ಹಸಿವೆಯಾಗುವ ಸಮಸ್ಯೆಯಿಂದ ಪಾರಾಗುವುದರಿಂದ ಸಹಜವಾಗಿಯೇ ಆಗಾಗ ಏನಾದರೊಂದು ತಿನ್ನುವ ಚಟದಿಂದ ಹೊರಬಂದು ತೂಕದಲ್ಲಿಯೂ ಇಳಿಕೆ ಕಾಣುತ್ತಾರೆ. ಮುಖ್ಯವಾಗಿ ಆರೋಗ್ಯ ಉತ್ತಮವಾಗುತ್ತದೆ.

7. ಹೃದಯದ ಸಮಸ್ಯೆಗಳಿಗೂ ಕೇಸರಿ ಸಹಾಯ ಮಾಡುತ್ತದಂತೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೊಲೆಸ್ಟೆರಾಲ್‌ ಮಟ್ಟವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೆ, ಹೃದಯದ ರಕ್ತನಾಳಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ ಹಾಗೂ ರಕ್ತ ಪರಿಚಲನೆ ಸರಾಗವಾಗಿ ಆಗುವಂತೆ ಮಾಡುತ್ತದೆ.

8. ಮಧುಮೇಹಿಗಳಿಗೂ ಕೇಸರಿ ಒಳ್ಳೆಯದೇ. ಇದು ಸಕ್ಕರೆಯ ಮಟ್ಟ್ವನ್ನೂ ಕಡಿಮೆಗೊಳಿಸಲು ಕೊಂಚ ಸಹಾಯ ಮಾಡುತ್ತದೆ.

ಇದನ್ನೂ ಓದಿ: Morning walk benefits: ಸಂಜೆಗಿಂತ, ಬೆಳಗ್ಗೆ ಎದ್ದ ಕೂಡಲೇ ವಾಕಿಂಗ್‌ ಮಾಡುವುದು ಯಾಕೆ ಒಳ್ಳೆಯದು ಗೊತ್ತೇ?

9. ಕಣ್ಣಿನ ಆರೋಗ್ಯಕ್ಕೂ ಇದು ಅತ್ಯುತ್ತಮ. ವಯಸ್ಕರಲ್ಲಿರುವ ಕಣ್ಣಿನ ತೊಂದರೆಗಳಿಗೆ ಇದು ಒಳ್ಳೆಯ ಮನೆಮದ್ದು. ದೃಷ್ಟಿದೋಷಗಳನ್ನು ಇದು ನಿಧಾನವಾಗಿ ಕಡಿಮೆಗೊಳಿಸಲು ತನ್ನದೇ ಕಾಣಿಕೆ ನೀಡುತ್ತದೆ ಎನ್ನುತ್ತವೆ ಸಂಶೋಧನೆಗಳು.

10. ಸ್ಮರಣ ಶಕ್ತಿಗೂ ಇದು ಅತ್ಯಂತ ಒಳ್ಳೆಯದು. ಹಿರಿಯರಲ್ಲಿ ಕಾಣಿಸಿಕೊಳ್ಳುವ ಅಲ್ಜೈಮರ್‌ ಕಾಯಿಲೆಯಂತರ ಸ್ಮರಣ ಶಕ್ತಿಯ ಸಮಸ್ಯೆಗಳಿಗೂ ಸೇರಿದಂತೆ, ಮರೆವಿಗೆ ಇದು ಅತ್ಯುತ್ತಮ ಮದ್ದು. ಇದರಲ್ಲಿರು ಆಂಟಿ ಆಕ್ಸಿಡೆಂಟ್‌ಗಳು ನೆನಪುಶಕ್ತಿಯನ್ನು ಹೆಚ್ಚಿಸುತ್ತವೆ.

ಆದರೆ, ಅತಿಯಾದರೆ ಅಮೃತವೂ ವಿಷ ಎಂಬ ಸತ್ಯ ಇಲ್ಲಿಗೂ ಹೊಂದಿಕೆಯಾಗುತ್ತದೆ. ಹೆಚ್ಚು ಕೇಸರಿ ಸೇವನೆ ವಿಷಕಾರಿ. ದಿನವೂ ಸೇವಿಸುವವರು ದಿನಕ್ಕೆ ಹೆಚ್ಚೆಂದರೆ ಐದಾರು ದಳಗಳನ್ನು ಸೇವಿಸಬಹುದು.

ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!

Exit mobile version