ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮನಮೋಹಕ ಡಿಸೈನರ್ ಶೀರ್ ದುಪಟ್ಟಾಗಳು ಮುಂಬರುವ ಫೆಸ್ಟೀವ್ ಸೀಸನ್ ಹಾಗೂ ವೆಡ್ಡಿಂಗ್ ಸೀಸನ್‌ಗೆ ಎಂಟ್ರಿ ನೀಡಿವೆ. ಪಾರದರ್ಶಕವಾಗಿರುವ ಈ ದುಪಟ್ಟಾಗಳ ಫ್ಯಾಬ್ರಿಕ್ ತೀರಾ ಮೃದುವಾಗಿರುತ್ತದೆ. ಇವುಗಳ ಮೇಲೆ ಕುಂದನ್, ಕ್ರಿಸ್ಟಲ್ ಹಾಗೂ ನಕ್ಷತ್ರದಂತೆ ಮಿನುಗುವ ಹರಳುಗಳನ್ನು ಅಂಟಿಸಲಾಗಿರುತ್ತದೆ. ಸಲ್ವಾರ್ ಕಮೀಝ್, ಲೆಹೆಂಗಾ, ಹಾಗೂ ಗ್ರ್ಯಾಂಡ್ ಔಟ್‌ಫಿಟ್‌ಗಳಿಗೆ ಇವು ಪರ್ಫೆಕ್ಟ್ ಮ್ಯಾಚ್ ಮಾಡಬಹುದು. ನೋಡಲು ಅತ್ಯಾಕರ್ಷಕವಾಗಿ ಕಾಣುವ ಈ ಬಗೆಯ ದುಪಟ್ಟಾಗಳು ಎಥ್ನಿಕ್ ಫ್ಯಾಷನ್‌ನಲ್ಲಿ ಸ್ಥಾನ ಗಿಟ್ಟಿಸಿವೆ.
“ನೋಡಿದರೆ ಧರಿಸಬೇಕೆನಿಸುವ ದುಪಟ್ಟಾವಿದು. ತೆರೆಯಂತೆ ಮರೆಮಾಚಿದರೂ ಮಿನುಗುವ ವಿನ್ಯಾಸ, ಡಾರ್ಕ್ ಹಾಗೂ ಲೈಟ್ ಕಲರ್‌ಫುಲ್ ಶೇಡ್ಸ್‌ನಲ್ಲೂ ಎದ್ದು ಕಾಣುವ ಡಿಸೈನ್‌ಗಳು. ಇವೇ ಪಾರದರ್ಶಕ ಡಿಸೈನರ್ ಶೀರ್ ದುಪಟ್ಟಾಗಳು. ಬ್ರೈಡಲ್‌ವೇರ್‌ನ ಗುಂಗಟ್‌ಗೂ ಮೆರಗು ನೀಡಿವೆ” ಎನ್ನುತ್ತಾರೆ ಡಿಸೈನರ್ ವಿದ್ಯಾ.
ನೆಟ್ಟೆಡ್ ಫ್ಯಾಬ್ರಿಕ್‌ನಲ್ಲಿ ಶೀರ್ ದುಪಟ್ಟಾ
ಪ್ರಮುಖವಾಗಿ ಶೀರ್‌ನಲ್ಲಿ ಬಳಸುವ ದುಪಟ್ಟಾಗಳು ನೆಟ್ಟೆಡ್‌ನದ್ದಾಗಿರುತ್ತದೆ. ಇನ್ನು ಕೆಲವು ಕ್ರೆಪ್ ಇಲ್ಲವೇ ಜಾರ್ಜೆಟ್ ಪಾರದರ್ಶಕ ಮೆಟೀರಿಯಲ್‌ನದ್ದಾಗಿರುತ್ತದೆ. ಅವುಗಳ ಮೆಟೀರಿಯಲ್ ಆಧಾರದ ಮೇಲೆ ಅವುಗಳ ವಿನ್ಯಾಸ ನಿರ್ಧರಿತವಾಗಿರುತ್ತದೆ. ಕೆಲವೊಂದು ಪಾರದರ್ಶಕವಾಗಿದ್ದರೂ ಫ್ಯಾಬ್ರಿಕ್ ವಿಭಿನ್ನವಾಗಿರುತ್ತದೆ. ಕೆಲವು ಶಿಮ್ಮರಿಂಗ್ ಫ್ಯಾಬ್ರಿಕ್‌ನಲ್ಲೂ ದೊರೆಯುತ್ತವೆ.
ರ್ಯಾಂಪ್‌ನಲ್ಲಿ ಹಿಟ್ ಆದ ದುಪಟ್ಟಾ
ಅಂದ ಹಾಗೆ, ಡಿಸೈನರ್ ಶೀರ್ ದುಪಟ್ಟಾಗಳು ಮೊದಲು ಹಿಟ್ ಆಗಿದ್ದು ರ್ಯಾಂಪ್ ಶೋಗಳಲ್ಲಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ. ಕೇವಲ ಬ್ರೈಡಲ್‌ವೇರ್‌ಗೆ ಸೀಮಿತವಾಗಿದ್ದ ಡಿಸೈನರ್ ಪಾರದರ್ಶಕ ದುಪಟ್ಟಾಗಳು ಇಂದು ಸಾಮಾನ್ಯ ಉಡುಪಿನ ಜತೆಗೂ ಕಾಣಿಸತೊಡಗಿವೆ. ಇನ್ನು ಸಿನಿಮಾಗಳಲ್ಲಿ ಈ ಡಿಸೈನರ್ ಶೀರ್ ದುಪಟ್ಟಾಗಳು ಹೆಚ್ಚು ವಿಜೃಂಭಿಸಿದ್ದು ಬ್ರೈಡಲ್ ಕಲೆಕ್ಷನ್‌ಗಳಲ್ಲಿ, ಸೆಲೆಬ್ರಿಟಿ ಡಿಸೈನರ್‌ಗಳಾದ ರೀತು ಕುಮಾರ್, ಮನೀಶ್ ಮಲ್ಹೋತ್ರಾ ಸೇರಿದಂತೆ ಸೆಲೆಬ್ರಿಟಿ ಸ್ಟಾರ್ಸ್ ಹಾಗೂ ಶೋ ಸ್ಟಾಪರ್‌ಗಳ ಮುಖಾಂತರ ಫ್ಯಾಷನ್‌ಲೋಕದಲ್ಲಿ ಪರಿಚಿತಗೊಂಡಿತು.
ದುಪಟ್ಟಾ ಲೆಸ್ ಡಿಸೈನರ್‌ವೇರ್‌ಗಳ ಕಾಲದಲ್ಲಿ ಇವು ಎಂಟ್ರಿ ನೀಡಿದ್ದು ಎಲ್ಲರ ಮನ ಗೆಲ್ಲಲು ಕಾರಣವಾಯಿತು ಎನ್ನುತ್ತಾರೆ ಡಿಸೈನರ್ ರಕ್ಷಾ. ನಾರ್ತ್ ಇಂಡಿಯಾದಲ್ಲಿ ಹೆಚ್ಚು ಪ್ರಚಲಿತವಿದ್ದ ಲೆಹೆಂಗಾ ಹಾಗೂ ಗಾಗ್ರ ಸೌತ್‌ನಲ್ಲಿಹೆಚ್ಚು ಟ್ರೆಂಡಿಯಾಗತೊಡಗಿದಂತೆ ಈರ್ ದುಪಟ್ಟಾಗಳು ಪ್ರಮುಖ ಸ್ಥಾನವನ್ನು ಪಡೆದವು ಎನ್ನುತ್ತಾರೆ.
ಮಿನುಗುವ ಶೀರ್ ದುಪಟ್ಟಾ ಡಿಸೈನ್ ಮಾಡಿ ನೋಡಿ
ನೀವೂ ಕೂಡ ಮನೆಯಲ್ಲೆ ಡಿಸೈನರ್ ದುಪಟ್ಟಾ ಸಿದ್ಧಪಡಿಸಬಹುದು ಎನ್ನುತ್ತಾರೆ ಡಿಸೈನರ್ ರಕ್ಷಾ ಈ ಬಗ್ಗೆ ಸಿಂಪಲ್ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ಮೊದಲಿಗೆ ಎರಡರಿಂದ ಎರಡೂ ಕಾಲ ಮೀಟರ್ ನೆಟ್ಟೆಡ್ ಇಲ್ಲವೇ ಪಾರದರ್ಶಕವಾದ ಸಾಫ್ಟ್ ಫ್ಯಾಬ್ರಿಕ್ ತೆಗೆದುಕೊಂಡು ಸೈಡನ್ನು ಝಿಗ್‌ಝಾಗ್ ಮಾಡಿಸಿ. ನಿಮಗೆ ಗೊತ್ತಿರುವ ಸೂಕ್ಷ್ಮ ಕುಸುರಿ ಚಿತ್ತಾರವನ್ನು ನಿಮ್ಮ ಕೈಗಳಿಂದಲೇ ರಚಿಸಿ. ಇಲ್ಲವೇ ಮಾರುಕಟ್ಟೆಯಲ್ಲಿ ದೊರೆಯುವ ಮಿನುಗುವಂತಹ ಚಮಕಿಗಳು, ಕುಂದನ್, ಕ್ರಿಸ್ಟಲ್ ಅನ್ನು ಕ್ಲಾತ್ ಗ್ಲೂನಿಂದ ಅಂಟಿಸಬಹುದು. ಇದಕ್ಕೆ ಸಂಬಂದಪಟ್ಟ ನಾನಾ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇಲ್ಲವೇ ರೆಡಿಮೇಡ್ ಕೂಡ ಪ್ಯಾಚ್‌ವರ್ಕ್ ಕೂಡ ಮಾಡಬಹುದು ಅಥವಾ ಅಂಟಿಸಬಹುದು. ಶೈನಿಂಗ್ ಬಾರ್ಡರ್ ಸೇರಿಸಿ ಹೊಲೆದಲ್ಲಿ ಅತ್ಯಾಕರ್ಷಕವಾದ ನೀವೇ ಡಿಸೈನ್ ಮಾಡಿದ ಶೀರ್ ದುಪಟ್ಟಾ ಧರಿಸಲು ರೆಡಿ.
ದುಪಟ್ಟಾ ಸ್ಟೈಲ್ ಟಿಪ್ಸ್…
- ಶೀರ್ ದುಪಟ್ಟಾಗಳನ್ನು ಧರಿಸುವ ಮುನ್ನ ಧರಿಸುವ ಡಿಸೈನರ್ವೇರ್ಗಳಿಗೆ ಮ್ಯಾಚ್ ಆಗುತ್ತವೆಯೇ ಎಂಬುದನ್ನು ಗಮನಿಸಿ.
- ಉದ್ದವಾಗಿರುವವರು ಆದಷ್ಟೂ ಲಾಂಗ್ ಶೀರ್ ದುಪಟ್ಟಾ ಆರಿಸಿಕೊಳ್ಳಬೇಕು.
- ಪ್ಲಂಪಿಯಾಗಿರುವವರು ಹಾಗೂ ಕುಳ್ಳಗಿರುವವರು ಚಿಕ್ಕ ಚಿಕ್ಕ ಫ್ಲೋರಲ್ ಹಾಗೂ ಸ್ಟಾರ್ ಡಿಸೈನ್ನ ದುಪಟ್ಟಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
- ಶೀರ್ ದುಪಟ್ಟಾ ಧರಿಸುವಾಗ ಉಡುಪಿನ ನೆಕ್ಲೈನ್ ಆಗಲವಾಗಿರಬೇಕು.
ಲೇಖಕಿ : ಫ್ಯಾಷನ್ ಪತ್ರಕರ್ತೆ
ಇದನ್ನೂ ಓದಿ | Fashion Colour Trend: ಫ್ಯಾಷನ್ ನಲ್ಲಿ ಸನ್ ಕಲರ್ ಡಿಸೈನ್ ವೇರ್