ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮಗೆ ಗೊತ್ತೆ? ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಸವಿಯಲು ಬಳಸುವ ಮಾವಿನ ಹಣ್ಣಿನಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಂತೆ! ಹಾಗೆನ್ನುತ್ತಾರೆ ಬ್ಯೂಟಿ ತಜ್ಞೆ ಉಮಾ. ಅವರ ಪ್ರಕಾರ, ಮಾವು ಚರ್ಮದ ಸೌಂದರ್ಯ ಹೆಚ್ಚಿಸಲು ಸಹಕಾರಿಯಂತೆ.
ಇನ್ನು ತಜ್ಞರ ಪ್ರಕಾರ, ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ವಿಟಮಿನ್ ‘ಸಿ’ ಹೇರಳವಾಗಿದೆ. ಹಾಗಾಗಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮ ಟ್ಯಾನ್ ಆಗಿರುವುದನ್ನು ಇದರಿಂದ ಹೋಗಲಾಡಿಸಬಹುದಂತೆ.
ಆಯಾ ಸೀಸನ್‌ನಲ್ಲಿ ದೊರೆಯುವ ಬಹುತೇಕ ಹಣ್ಣುಗಳು ದೇಹಕ್ಕೆ ಪೌಷ್ಟಿಕಾಂಶವನ್ನು ಪೂರೈಸುವುದು ಮಾತ್ರವಲ್ಲ, ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೆಂದು ಯದ್ವಾತದ್ವಾ ಕೂಡ ಬಳಸಕೂಡದು ಎಂದು ಸಲಹೆ ನೀಡುವ ಬ್ಯೂಟಿ ತಜ್ಞೆ ಉಮಾ, ನಿಮ್ಮ ಸುಕೋಮಲ ತ್ವಚೆಗೆ ಅನುಗುಣವಾಗಿ ಬಳಸಬೇಕು ಎನ್ನುತ್ತಾರೆ.
ಸುಕೋಮಲ ತ್ವಚೆಗಾಗಿ:
ಒಂದು ಮಾವಿನ ಹಣ್ಣಿನ ಚಿಕ್ಕ ಭಾಗವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಾಲು, ಅಕ್ಕಿ ಹಿಟ್ಟು ಹಾಗೂ ಜೇನುತುಪ್ಸ ಬೆರೆಸಿ ಮಿಶ್ರಣ ಮಾಡಿ. ತೆಳುವಾಗಿ ಮುಖದ ಮೇಲೆ ಲೇಪನ ಮಾಡಿ. 10 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ತ್ವಚೆ ಮೃದುವಾಗುವುದು.
ಸಿಪ್ಪೆಯಲ್ಲಿ ಫೇಸ್ ಪ್ಯಾಕ್:
ಮಾವಿನ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬಿಸಿಲಲ್ಲಿ ಒಣಗಿಸಿ, ಪೌಡರ್ ಮಾಡಿಟ್ಟುಕೊಳ್ಳಿ. ಒಂದು ಟೀ ಸ್ಪೂನ್ ಮೊಸರು ಸೇರಿಸಿ ಮಿಶ್ರ ಮಾಡಿ. ಮುಖಕ್ಕೆ ಲೇಪಿಸಿ, ತಣ್ಣಿರಿನಲ್ಲಿ ತೊಳೆಯಿರಿ. ಇದು ಕಲೆಯನ್ನು ಹೋಗಲಾಡಿಸುತ್ತದೆ.
ಮಿಶ್ರ ತ್ವಚೆಯವರಿಗೆ ಫೇಸ್‌ಪ್ಯಾಕ್:
ಮಾವಿನ ರಸಕ್ಕೆ ಸ್ವಲ್ಪ ಕಡಲೆಹಿಟ್ಟು ಮತ್ತು ಚೂರು ಜೇನುತುಪ್ಪ ಬೆರೆಸಿ ಮಿಶ್ರ ಮಾಡಿ. ತೆಳುವಾಗಿ ಮುಖದ ಮೇಲೆ ಲೇಪನ ಮಾಡಿ, ಒಣಗಿದ ನಂತರ ಮುಖವನ್ನು ವಾಶ್‌ಮಾಡಿ. ತ್ವಚೆ ಕಾಂತಿಯುಕ್ತವಾಗುವುದು.
ಎಣ್ಣೆ ತ್ವಚೆಯವರಿಗೆ ಕ್ಲೆನ್ಸಿಂಗ್:
ಹುಳಿ ಮಾವಿನ ರಸವನ್ನು ತ್ವಚೆಗೆ ಕ್ಲೆನ್ಸರ್‌ನಂತೆ ಬಳಸಬಹುದು. ಕತ್ತರಿಸಿದ ಚೂರು ಮಾವಿನ ತುಂಡಿನಿಂದ ದುಂಡಾಕಾರದಲ್ಲಿ ಮುಖವನ್ನು ಒಂದೆರೆಡು ನಿಮಿಷಗಳ ಕಾಲ ಮೃದುವಾಗಿ ಉಜ್ಜಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಚರ್ಮ ಸ್ವಚ್ಛಗೊಳ್ಳುತ್ತದೆ. ಅತಿ ಹೆಚ್ಚು ಸಮಯ ತ್ವಚೆಯನ್ನು ಉಜ್ಜಕೂಡದು. ಈ ಮಧ್ಯೆ ತ್ವಚೆಗೆ ಕಿರಿಕಿರಿಯಾದಲ್ಲಿ ಕ್ಲೆನ್ಸಿಂಗ್ ಮಾಡುವುದು ಬೇಡ.
(ಲೇಖಕರು ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಫ್ರಿಲ್- ಫ್ಲೇರ್ ಗೌನ್‌ಗೆ ಫ್ಯಾಷನ್ ಪ್ರಿಯರು ಫಿದಾ!