ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ಆಷಾಡದ ಸೇಲ್ ಭರದಿಂದ ಸಾಗಿದೆ. ಇನ್ನೇನು ಈ ಮಾಸ ಮುಗಿಯುವ ಹಂತಕ್ಕೆ ಬಂದಿದ್ದು, ಕಳೆದ ಸೀಸನ್‌ನ ಸೇಲ್ ಜತೆ ಆಷಾಡದ ಸೇಲ್ ಕೂಡ ಸೇರಿಕೊಂಡಿದೆ.
ಕಳೆದ ಸೀಸನ್‌ನಲ್ಲಿ ಬಿಡುಗಡೆಯಾದ ಸಾಕಷ್ಟು ಉಡುಪುಗಳು, ಸೀರೆಗಳು, ಆಕ್ಸೇಸರೀಸ್ ಹಾಗೂ ಫುಟ್‌ವೇರ್ ಸೇರಿದಂತೆ ವಾರ್ಡ್ರೋಬ್‌ಗೆ ಸಂಬಂಧಪಟ್ಟ ಎಲ್ಲಾ ಸಾಮಗ್ರಿಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಲಾಗುತ್ತದೆ. ಅಂದ ಹಾಗೆ, ಆಷಾಡ ಮಾಸದಲ್ಲಿ ಶಾಪಿಂಗ್ ಮಾಡುವವರು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆರಂಭದಲ್ಲಿ ಸೀಸನ್ ಸೇಲ್ ಎನ್ನಲಾದ ಈ ಕಾನ್ಸೆಪ್ಟ್ ತಿಂಗಳ ಆರಂಭ ಇಲ್ಲವೇ ಮಧ್ಯಂತರದಲ್ಲಿ ಆಷಾಡದ ಸೇಲ್ ಆಗಿ ಪರಿವರ್ತನೆಯಾಗುತ್ತದೆ. ಗ್ರಾಹಕರನ್ನು ಜಾಹೀರಾತುಗಳ ಮೂಲಕ ಸೆಳೆಯಲಾಗುತ್ತದೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪಟ್ರ್ಸ್.
ಸ್ಟಾಕ್ ಕ್ಲಿಯರೆನ್ಸ್ ಸೇಲ್ ಸದುಪಯೋಗ
ಇನ್ನು ಸ್ಟಾಕ್ ಕ್ಲಿಯರೆನ್ಸ್ ಸೇಲ್‌ಗಳಲ್ಲಿ ಕೊಂಚ ಬುದ್ಧಿ ಉಪಯೋಗಿಸಿದಲ್ಲಿ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಹಾಗೆಂದು ಕಂಡ ಕಂಡ ಉಡುಪುಗಳನ್ನು ಕೊಂಡರೇ ಲಾಭಕ್ಕಿಂತ ನಷ್ಟವೇ ಹೆಚ್ಛಾಗಬಹುದು. ಹಾಗಾಗಿ ತಮಗೆ ಅಗತ್ಯವಿರುವ ಉಡುಪುಗಳನ್ನು ಖರೀದಿಸಿದಾಗ ಉಳಿತಾಯವಾಗಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಉದಾಹರಣೆಗೆ, ನೈಟ್‌ವೇರ್, ಡೈಲಿ ಮನೆಯಲ್ಲಿ ಧರಿಸಬಹುದಾದ ಉಡುಪುಗಳು ಹಾಗೂ ಡೆನೀಮ್ ಡ್ರೆಸ್‌ಗಳು, ಪ್ಯಾಂಟ್ ಹಾಗೂ ಮಕ್ಕಳ ಉಡುಪುಗಳು ಕ್ಲಿಯರೆನ್ಸ್ ಸೇಲ್‌ನಲ್ಲಿ ಕೊಂಡಲ್ಲಿ ಲಾಭವಾದೀತು. ಟ್ರೆಂಡ್‌ಗೆ ಸೂಟ್ ಆಗದಿದ್ದರೂ ಕೂಡ ಮನೆಯಲ್ಲೆ ಇವನ್ನು ಧರಿಸಬಹುದಾಗಿರುವುದರಿಂದ ಹೆಚ್ಚೆನೂ ಡಿಫರೆನ್ಸ್ ಅನಿಸುವುದಿಲ್ಲ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್.
ಆಷಾಡ ಸೀರೆ ಸೇಲ್
ಮುಂಬರುವ ಶ್ರಾವಣಕ್ಕೆ ಅದರಲ್ಲೂ ಫೆಸ್ಟೀವ್ ಸೀಸನ್ ಗೆ ಹೊಸ ವಿನ್ಯಾಸದ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗಾಗಿ ಈ ಕಳೆದ ಸೀಸನ್‌ನಲ್ಲಿ ಬಿಡುಗಡೆಯಾದ ನಾನಾ ವೆರೈಟಿ ಸೀರೆಗಳಿಗೆ ಇದೀಗ ಸೇಲ್ ಘೋಷಿಸಲಾಗಿದೆ. ಸೀರೆ ಪ್ರೇಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಸೀಸನ್‌ಗೆ ಟ್ರೆಂಡಿಯಾಗಿರದಿದ್ದರೂ ಮಿಕ್ಸ್ ಮ್ಯಾಚ್ ಮಾಡಿ ಧರಿಸುವ ಅವಕಾಶವಿರುವುದರಿಂದ ಪ್ರತಿ ಬಾರಿ ಆಷಾಡ ಸೀರೆ ಸೇಲ್ ಕಾನ್ಸೆಪ್ಟ್ ಎಲ್ಲೆಡೆ ಯಶಸ್ವಿಯಾಗಿಯೇ ನಡೆಯುತ್ತದೆ. ಖರೀದಿಸುವವರ ಸಂಖ್ಯೆಯೂ ಜಾಸ್ತಿ ಇರುತ್ತದೆ.
ಜ್ಯುವೆಲರಿ ಕೊಳ್ಳುಗರಿಗೆ ಗಿಫ್ಟ್ಸ್
ಇನ್ನು ಶ್ರಾವಣ ಬಂತೆಂದರೇ ಹಬ್ಬ-ಹರಿದಿನಗಳ ಸಂಭ್ರಮ ಹೆಚ್ಚು. ಆಗ ಬೆಳ್ಳಿ-ಬಂಗಾರದ ಬೆಲೆ ಇದ್ದಕ್ಕಿದ್ದಂತೆ ಏರುತ್ತದೆ. ಇನ್ನು ಆಷಾಡದಲ್ಲಿ ಜುವೆಲರಿಗಳನ್ನು ಕೊಳ್ಳುವವರು ಕಡಿಮೆ. ಹಾಗಾಗಿ ಸಾಕಷ್ಟು ಜುವೆಲರಿ ಶಾಪ್‌ಗಳು ಆಫರ್ ಹಾಗೂ ವಿನಾಯತಿ ನೀಡುತ್ತವೆ. ಮೇಕಿಂಗ್ ಚಾರ್ಜ್ ಕಡಿತಗೊಳಿಸುತ್ತವೆ. ಇಲ್ಲವೇ ಫ್ರೀ ಗಿಫ್ಟ್ ನೀಡುತ್ತವೆ. ಈ ಸೌಲಭ್ಯವನ್ನು ಕೂಡ ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ ಜುವೆಲರಿ ಶಾಪ್‌ವೊಂದರ ಮ್ಯಾನೇಜರ್.
ಮಾಲ್‌ಗಳಲ್ಲಿ ಕಿಡ್ಸ್‌ವೇರ್‌ಗೆ ಡಿಸ್ಕೌಂಟ್ಸ್
ಈ ಆಷಾಡದಲ್ಲಿ ಮಕ್ಕಳ ಉಡುಪುಗಳು ಹಾಗೂ ಆಕ್ಸೆಸರೀಸ್‌ಗಳ ಮೇಲೆ ಮಾಲ್‌ಗಳಲ್ಲಿ ಮಾತ್ರವಲ್ಲ, ಶಾಪಿಂಗ್ ಸ್ಟೋರ್‌ಗಳಲ್ಲೂ ಡಿಸ್ಕೌಂಟ್ಸ್ ನೀಡುತ್ತಿರುವುದು ಎಲ್ಲೆಡೆ ಕಾಣಬಹುದು. ಮುಂಬರುವ ಶ್ರಾವಣಕ್ಕೆ ಹಾಗೂ ಫೆಸ್ಟಿವ್ ಸೀಸನ್‌ಗೆ ಹೊಸತು ಪ್ರಾಡಕ್ಟ್‌ಗಳು ಈ ಜಾಗಕ್ಕೆ ಆಗಮಿಸುತ್ತಿರುವುದೇ ಆಷಾಡ ಸೇಲ್ ಮಾಡಲು ಪ್ರಮುಖ ಕಾರಣ ಎನ್ನುತ್ತಾರೆ ಮಾಲ್‌ವೊಂದರ ಕಿಡ್ಸ್ ಶಾಪ್‌ನ ಸೇಲ್ಸ್ ಮ್ಯಾನೇಜರ್.
ನೀವೇನಾದರೂ ಆಷಾಡ ಸೇಲ್‌ನಲ್ಲಿ ಖರೀದಿಸುವುದಾದಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
- ಖರೀದಿಸುವ ಉಡುಪುಗಳ ಗುಣಮಟ್ಟ ತಿಳಿದುಕೊಂಡು ಖರೀದಿಸಿ.
- ಆನ್ಲೈನ್ನಲ್ಲಿ ಖರೀದಿಸುವ ಮುನ್ನ ಎಚ್ಚರವಿರಲಿ.
- ಸೇಲ್ಸ್ ಎಲ್ಲೆಲ್ಲಿದೆ ಎಂಬುದರ ಬಗ್ಗೆ ಜಾಹೀರಾತುಗಳಿಂದ ಮಾಹಿತಿ ಪಡೆಯಬಹುದು.
- ಸೇಲ್‌ಗಳಲ್ಲಿ ಕೊಳ್ಳುವ ಪ್ರಾಡಕ್ಟ್ಗಳಿಗೆ ಎಕ್ಸ್ಚೇಂಜ್ ಸೌಲಭ್ಯ ಇರುವುದಿಲ್ಲ.
- ಮಲ್ಟಿ ಪರ್ಪಸ್ ಸೀರೆಗಳನ್ನು ಖರೀದಿಸಿದಲ್ಲಿ, ಉಡುಪುಗಳನ್ನಾಗಿ ಪರಿವರ್ತಿಸಬಹುದು.
- ಇಲ್ಲಿನ ಫುಟ್ವೇರ್ಗಳು ಮುಂಬರುವ ಸೀಸನ್‌ಗೆ ಸೂಟ್ ಆಗದು ಎಂಬುದು ನೆನಪಿರಲಿ.
- ಜುವೆಲರಿ ಕೊಳ್ಳುವುದಾದಲ್ಲಿ ಹಬ್ಬಗಳಿಗೂ ಧರಿಸಬಹುದಾದ ವಿನ್ಯಾಸದವನ್ನು ಖರೀದಿಸಿ.
………
ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು