ಬಹಳಷ್ಟು ಸಾರಿ ನಾವು ಅಂದುಕೊಳ್ಳುತ್ತೇವೆ, ಕೊರಿಯನ್ನರ ಚರ್ಮ ಹೇಗೆ ಅಷ್ಟು ನುಣುಪಾಗಿದೆ?! ಚೀನೀಯರ ಕೂದಲು ಹೇಗೆ ಅಷ್ಟು ದಟ್ಟವಾಗಿ ನಯವಾಗಿದೆ?! ಒಂದೊಂದು ಭಾಗದ ಜನತೆಯ ಸೌಂದರ್ಯ ಹಿಂದೆ ಯಾವ ಗುಟ್ಟು ಇದೆಯೋ ಏನೋ, ಅದು ವಂಶವಾಹಿನಿಯೇ ಇರಬಹುದು, ಆದರೆ, ಜನರ ಸಹಜ ಕುತೂಹಲದ ನೋಟ ನಿಲ್ಲುವುದಿಲ್ಲ. ನಿಮ್ಮ ಈ ಕೂದಲ ಸೌಂದರ್ಯದ ರಹಸ್ಯ ಏನು? ನಿಮ್ಮ ನಯವಾದ ಹೊಳಪಿನ ತ್ವಚೆಗೆ ಕಾರಣ ಏನು ಎಂದು ಕೇಳದೆ ಬಿಡುವುದಿಲ್ಲ. ಬಹಳಷ್ಟು ಸಾರಿ, ಅವರು ಬಳಸುವ ಶಾಂಪೂ, ಕ್ರೀಮು, ಸೀರಮ್ಮುಗಳ ಗುಟ್ಟನ್ನು ಹೇಳಿ ಕೇಳಿದವರನ್ನು ದಂಗಾಗಿಸುವುದೂ ನಿಜ. ಯಾಕೆಂದರೆ, ಅಂಥ ಪ್ರಾಡಕ್ಟುಗಳಿಂದ ಎಲ್ಲರಿಗೂ ಒಂದೇ ಬಗೆಯ ರಿಸಲ್ಟು ಸಿಕ್ಕಿದ್ದಿದ್ದರೆ, ಪ್ರಪಂಚ ಹೀಗಿರುತಿತ್ತಾ? ಸಿಗುವ ಉತ್ತರ ಬಹಳ ನೀರಸವಾಗಿರುತ್ತದೆ ಎಂಬ ಸತ್ಯವೂ ಗೊತ್ತಿದ್ದೂ ಗೊತ್ತಿದ್ದೂ, ಜನರು ಕೇಳುವುದನ್ನು ಬಿಡುವುದಿಲ್ಲ!
ಆದರೆ ಇಲ್ಲೊಂದು ಸೀಕ್ರೆಟ್ ಇದೆ. ಚೀನೀಯರ ಕೂದಲು ದಟ್ಟವಾಗಿಯೂ, ನಯವಾಗಿಯೂ, ಹೊಳಪಿನಿಂದಲೂ ಕೂಡಿರುವುದಕ್ಕೆ ಅದರ ಹಿಂದೊಂದು ಚರಿತ್ರೆಯೇ ಇದೆ. ಹಾಗಾದರೆ ಈ ಕಥೆಯನ್ನಿಲ್ಲಿ ಕೇಳಿ. ಮಧ್ಯಚೀನಾದಲ್ಲೊಂದು ಹಳ್ಳಿಯಿದೆ. ಇದು ಅಂತಿಂಥ ಹಳ್ಳಿಯಲ್ಲ! ಇದು ಜಗತ್ತಿನಲ್ಲೇ ಅತ್ಯಂತ ಉದ್ದ ಕೂದಲ ಹಳ್ಳಿ ಎಂದು ವಿಖ್ಯಾತಿ ಪಡೆದ ಹಾಗೂ ಗಿನ್ನಿಸ್ ದಾಖಲೆಯಲ್ಲಿ ಸೇರಿದ ಹಳ್ಳಿ!
ಲಾಂಗ್‌ಶೆಂಗ್‌ನ ʻಹುಯಾಂಗ್ಲೋ ಯಾವೋʼ ಹಳ್ಳಿಯೇ ಇಂಥ ಹೆಸರು ಪಡೆದ ಹಳ್ಳಿ! ಈ ಹಳ್ಳಿಯ ಯಾವೋ ಜನತೆ ಹುಟ್ಟುತ್ತಲೇ, ಅತ್ಯದ್ಭುತ ಕೂದಲನ್ನು ಪಡೆದ ಮಂದಿ. ಸುಮಾರು ೪೦೦ ಮಂದಿಯಿರುವ ಈ ಹಳ್ಳಿಯಲ್ಲಿ ಬಹುತೇಕ ಎಲ್ಲ ಮಹಿಳೆಯರಿಗೂ ಮೂರು ಅಡಿಗಿಂತಲೂ ನೀಳ ಕೂದಲಿದೆ. ಎರಡು ಸಾವಿರ ವರ್ಷಗಳಷ್ಟು ಹಳೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಇಲ್ಲಿನ ಮಂದಿಗೆ ಕೂದಲು ದೇವರು ಕೊಟ್ಟ ವರ. ಒಬ್ಬ ಮಹಿಳೆಗೆ ಏಳು ಅಡಿ ಉದ್ದದ ಕೂದಲಿದೆಯಂತೆ!
ಇದನ್ನೂ ಓದಿ | Marriage Invitation | ಫಾರ್ಮಾಸಿಸ್ಟ್- ನರ್ಸ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್ ವೈರಲ್
ಇನ್ನೂ ಒಂದು ಸಂಗತಿಯೆಂದರೆ, ಹುಟ್ಟಿದ ಮೇಲೆ ಯಾವೋ ಜನಾಂಗಕ್ಕೆ ಸೇರಿದ ಮಹಿಳೆ ಕೂದಲು ಕತ್ತರಿಸುವುದಿಲ್ಲವಂತೆ! ಜೀವನದಲ್ಲಿ ಒಂದೇ ಒಂದು ಸಂದರ್ಭ ಬಿಟ್ಟು ಆಮೇಲೆ ಯಾವತ್ತೂ ಕೂದಲಿಗೆ ಕತ್ತರಿ ಪ್ರಯೋಗ ಮಾಡುವುದಿಲ್ಲವಂತೆ. ಅದು ಆಕೆಯ ಮದುವೆಯ ದಿನ.
ಯಾವೋ ಸಂಸ್ಕೃತಿಯಲ್ಲಿ ಉದ್ದ ಕೂದಲು ಎಂದರೆ ಐಶ್ವರ್ಯ, ಉತ್ತಮ ಭವಿಷ್ಯ, ಆರೋಗ್ಯದ ಸಂಕೇತ. ಕೂದಲು ಉದ್ದ ಇದ್ದಷ್ಟೂ ಅದೃಷ್ಟವಂತರು ಎಂಬ ನಂಬಿಕೆ ಅಲ್ಲಿಯ ಜನರದ್ದು. ಇಷ್ಟಲ್ಲದೆ, ಕೂದಲ ಬಗೆಗೆ ಅವರ ಸಂಸ್ಕೃತಿಯಲ್ಲಿ ವಿವಿಧ ಚಿತ್ರವಿಚಿತ್ರ ಆಚರಣೆಗಳೂ ಇವೆಯಂತೆ! ಇಂತಹ ಕೆಲವುಗಳ ಪೈಕಿ ಒಂದು, ಇಲ್ಲಿನ ಮಹಿಳೆಯ ಕೂದಲನ್ನು ಗಂಡ ಹಾಗೂ ಆಕೆಯ ಮಕ್ಕಳು ಬಿಟ್ಟು ಯಾರೂ ಮುಟ್ಟಬಾರದಂತೆ. ಹಾಗೆಂದು ಆಕೆಯ ಕುಟುಂಬಸ್ಥರಲ್ಲದೆ ಬೇರೆ ಪರಪುರುಷನೊಬ್ಬ ಆಕೆಯ ಕೂದಲ ಸಣ್ಣ ಎಳೆಯನ್ನು ಮುಟ್ಟಿದರೂ ಸಾಕು, ಆತ ಆಕೆಯ ಮನೆಯಲ್ಲಿ ಮೂರು ವರ್ಷ ಆ ಮನೆಯ ಅಳಿಯನಾಗಿ ಅಂದರೆ ಆಕೆಯ ಗಂಡನಾಗಿ ಇರಬೇಕು. ಇಂಥ ವಿಚಿತ್ರ ಆಚರಣೆಗೆ ೧೯೮೦ರಲ್ಲಿ ಕಾನೂನಿನ ಕಡಿವಾಣ ಬಿದ್ದಿದೆ.
ಇದನ್ನೂ ಓದಿ | ಸಲಿಂಗಿ ಪುರುಷರ ಅದ್ಧೂರಿ ಮದುವೆ; ಸಂಭ್ರಮದ ಕ್ಷಣದ ಫೋಟೊ, ವಿಡಿಯೊ ವೈರಲ್
ಹುಳಿಬರಿಸಿದ ತಿಳಿಗಂಜಿಯ ರಹಸ್ಯ: ಹಾಗಾದರೆ ಅಲ್ಲಿನ ಮಹಿಳೆಯರ ಉದ್ದ ನಯವಾದ ಕೂದಲ ರಹಸ್ಯವಾದರೂ ಏನು ಎಂದು ಕೇಳಿದರೆ ಅಲ್ಲಿನ ಮಂದಿಯ ಏಕೈಕ ಉತ್ತರ ಹುಳಿ ಬರಿಸಿದ ಗಂಜಿಯಂತೆ! ಇದೇನು ಎಂದು ಆಶ್ಚರ್ಯ ಪಡಬೇಡಿ. ಇಲ್ಲಿನ ಮಂದಿ ತಮ್ಮ ಕೂದಲ ರಕ್ಷಣೆಗೆ ತಲೆತಲಾಂತರದಿಂದ ಬಳಸುವುದು ಗಂಜಿ. ಅಕ್ಕಿಯನ್ನು ತೊಳೆದು, ನೀರಿನಲ್ಲಿ ನೆನೆ ಹಾಕಿ ನಂತರ ಸುಮಾರು ೧೫ ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಕುದಿದ ಮೇಲೆ ಇದನ್ನು ಸೋಸಿ, ತಿಳಿಗಂಜಿಯನ್ನು ಹಾಗೆಯೇ ಒಂದೆರಡು ದಿನ ಬಿಡಬೇಕು. ಎರಡನೇ ದಿನ ಇದು ಹುಳಿಬರಲು ಶುರುವಾಗುತ್ತದೆ. ಈ ಹುಳಿಬಂದ ಗಂಜಿಗೆ ನಿಮಗೆ ಬೇಕಾದ ಎಸೆನ್ಶಿಯಲ್ ಎಣ್ಣೆಯ ಮೂರ್ನಾಲ್ಕು ಹನಿ ಸೇರಿಸಿ ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಸ್ವಲ್ಪ ಹೊತ್ತು ಬಿಟ್ಟು ಯಾವ ಶಾಂಪೂ ಅಗತ್ಯವೂ ಇಲ್ಲದೆ ಹಾಗೆಯೇ ತೊಳೆದುಕೊಂಡರೆ ಕೂದಲು ಫಳಪಳ, ಘಮಘಮ!
ಯಾವೋ ಮಹಿಳೆಯರು ಇದನ್ನು ಅನಾದಿ ಕಾಲದಿಂದಲೂ ಬಳಸುತ್ತಲೇ ಬಂದಿದ್ದಾರಂತೆ. ವಿಟಮಿನ್ ಇ ಹೇರಳವಾಗಿರುವ ಇದು ಕೇವಲ ಕೂದಲಿಗೆ ಮಾತ್ರವಲ್ಲ, ಮುಖಕ್ಕೂ ಒಳ್ಳೆಯದೇ ಅಂತೆ!