Site icon Vistara News

Self Love: ನಿನ್ನ ನೀನು ಮರೆತರೇನು ಸುಖವಿದೆ?!

happiness

ಹಾಗೆ ನೋಡಿದರೆ, ಪ್ರತಿಯೊಬ್ಬರಿಗೂ ತಮ್ಮನ್ನು ತಾವು ತಿದ್ದಿಕೊಳ್ಳಲು ಆಸೆಯಿರುತ್ತದೆ. ಆದರೆ, ಮನಸ್ಸಿರುತ್ತದೋ ಎಂಬುದು ಮುಖ್ಯವಾಗುತ್ತದೆ. ಒಮ್ಮೆ ನಾವು ಹೋಗುತ್ತಿರುವ ದಾರಿ ಹಾಗೂ ಹೋಗಬೇಕಾದ ದಾರಿಗಳ ಅಂತರ ಅರಿವಾದ ಮೇಲೆ ಎಷ್ಟರವರೆಗೆ ನಾವು ಅದನ್ನು ಹೇಗೆ ಸರಿಪಡಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಕೆಲವೊಮ್ಮೆ ಈ ಜ್ಞಾನೋದಯದ ಪರಿಣಾಮ ಕೇವಲ ಒಂದೆರಡು ದಿನ ಇದ್ದು ಅಮೇಲೆ ಯಥಾ ಪ್ರಕಾರ ಹಳೆಯ ಫಾರ್ಮ್‌ಗೇ ಮರಳುತ್ತೇವೆ. ಪ್ರತಿ ಹೊಸ ವರ್ಷದ ಆರಂಭದಲ್ಲಿ ನಾನು ಹೀಗೆ ಬದಲಾಗುತ್ತೇನೆ, ಇದನ್ನು ಮಾಡುತ್ತೇನೆ, ಇಂಥ ಬದಲಾವಣೆ ಮಾಡಿಕೊಳ್ಳಲೇಬೇಕು ಎಂದೆಲ್ಲ ನಮಗೆ ನಾವೇ ಆಣೆ, ಪ್ರಮಾಣಗಳನ್ನು ಮಾಡಿಕೊಂಡರೂ, ಯಥಾಪ್ರಕಾರ ಉದಾಸೀನ ನಮ್ಮನ್ನು ಮುತ್ತಿಕ್ಕಿ ಮತ್ತೆ, ಅಯ್ಯೋ ಯಾರಪ್ಪಾ ಮಾಡ್ತಾರೆ ಎಂದುಕೊಂಡು ಮಗ್ಗುಲು ಬದಲಾಯಿಸುತ್ತೇವೆ. ಅಥವಾ, ನಾಳೆಯಿಂದ ಮಾಡಿದರಾಯಿತು ಎಂದು ಪ್ರತಿಯೊಂದನ್ನೂ ನಾಳೆಗೆ ಮುಂದೂಡುತ್ತೇವೆ. ಅದು ನಮ್ಮ ಆಂತರಿಕ ವಿಷಯವಾಗಿರಬಹುದು, ಬಾಹ್ಯ ವಿಚಾರಗಳಾಗಿರಬಹುದು! ಬದಲಾವಣೆ ನಮ್ಮ ಅಂತರಂಗದಿಂದ ಆರಂಭವಾಗಬೇಕು. ಇವಿಷ್ಟರ ಬಗ್ಗೆ ನಿಮಗೆ ಕ್ಲಾರಿಟಿ ಇದ್ದರೆ, ಬದಲಾವಣೆ ಮಾಡಿಕೊಂಡು ಮುಂದೆ ಹೋಗುತ್ತಿದ್ದರೆ, ನೀವು ಸರಿಯಾದ ಹಾದಿಯಲ್ಲಿದ್ದೀರಿ ಎಂದರ್ಥ. ಇದಕ್ಕೆ ಸ್ವಾಭಿಮಾನ, ಸ್ವಯಂ ಪ್ರೀತಿ, (Self Love) ಅಗತ್ಯ. ಅದಕ್ಕೆ ಕೆಲವು ಮಾರ್ಗಗಳು ಇಲ್ಲಿವೆ.

1. ನಿಮ್ಮ ಬೆಳವಣಿಗೆಗೆ ಯಾವುದು ಮಾರಕ ಅನಿಸುತ್ತದೋ, ನಿಮಗೆ ಯಾವುದರಿಂದ ಹಿಂಸೆ ಅನಿಸುತ್ತದೋ ವೃಥಾ ಅವುಗಳ ಹಿಂದೆ ಬೀಳುವುದನ್ನು ಬಿಡಿ. ಅದು ನಿಮ್ಮ ಗೆಳೆಯರ ವಿಷಯದಲ್ಲಾಗಿರಬಹುದು, ಪ್ರೀತಿಯ ವಿಷಯದಲ್ಲಾಗಿರಬಹುದು. ವಾರ್ಡ್‌ರೋಬಿನಿಂದ ಹಳೆಯ ಬಟ್ಟೆಗಳನ್ನು ತೆಗೆದು ಬಿಸಾಕಿ, ನಿಮಗೆ ಬೇಕೆನಿಸುವ ಹೊಸ ಬಟ್ಟೆಗಳನ್ನು ಮಾತ್ರ ಇಟ್ಟಂತೆ ನಿಮಗೆ ಬೇಡದವುಗಳನ್ನು ನಿಮ್ಮ ಜೀವನದಿಂದ ಕಿತ್ತೆಸೆಯಿರಿ.

2. ನಿಮ್ಮ ಸುತ್ತಮುತ್ತಲಿನವರ ಬಗ್ಗೆ ನೀವು ಹೇಗೆ ಮಾತಾಡುತ್ತೀರಿ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಇನ್ನೊಬ್ಬರ ಏಳಿಗೆ, ಅಭಿವೃದ್ಧಿಯ ಬಗೆಗೆ ನಿಮಗೆ ಅನಿಸುವುದೇನು ಹಾಗೂ ಸಾರ್ವಜನಿಕವಾಗಿ ನೀವು ಯಾವ ಬಗೆಯ ಅಭಿಪ್ರಾಯ ವ್ಯಕ್ತಪಡಿಸುತ್ತೀರಿ ಎಂಬ ಬಗ್ಗೆ ನಿಮ್ಮ ಮಾತುಗಳ ಮೇಲೆ ಗಮನ ಇರಲಿ. ಈ ಆತ್ಮಾವಲೋಕನ ನಿಮ್ಮನ್ನು ಪಾಸಿಟಿವ್‌ ಮಾರ್ಗದಲ್ಲಿ (positive mindset) ಮುನ್ನಡೆಸುತ್ತದೆ. ನೀವು ಏನಾಗಬೇಕೆಂದು ಬಯಸುತ್ತೀರೋ ಅದರತ್ತ ಹೆಜ್ಜೆಯಿಡಲು ಇದು ಮೆಟ್ಟಿಲು.

3. ನೀವು ಯಾವಾಗಲೂ ಬೆರೆಯುವ, ನಿಮ್ಮ ಸುತ್ತಮುತ್ತಲ ಮಂದಿ ಮಾತನಾಡುವ ಬಗೆಯನ್ನು ಗಮನಿಸಿ. ಅವರು ಇನ್ನೊಬ್ಬರ ಯಶಸ್ಸನ್ನು ಉಡಾಫೆ ಮಾಡುತ್ತಾರೋ, ಮತ್ತೊಬ್ಬರ ಸೋಲನ್ನು ಆಡಿಕೊಂಡು ನಗುತ್ತಿದ್ದಾರೋ ಅಥವಾ ಯಾವಾಗಲೂ, ಬೇರೆಯವರನ್ನು ಆಡಿಕೊಳ್ಳುವುದರಲ್ಲಿ ಗಾಸಿಪ್ಪಿನಲ್ಲಿ ಸಮಯ ಕಳೆಯುತ್ತಿದ್ದಾರೋ? ಹಾಗಿದ್ದಲ್ಲಿ ನೀವು ಖಂಡಿತ ನಿಮ್ಮ ಬೆಳವಣಿಗೆಯ ಬಗ್ಗೆ ಯೋಚಿಸಿ. ಮುಲಾಜಿಗೆ ಬಿದ್ದು ಇಂಥದ್ದರಲ್ಲಿ ಕಾಲ ಕಳೆದು ನಿಮ್ಮ ಬೆಳವಣಿಗೆಗೆ ಕಡಿವಾಣ ಹಾಕುತ್ತೀರೋ ಅಥವಾ ಯಾವುದೇ ಬೆಳವಣಿಗೆಗೆ ಪ್ರೇರಣೆ ನೀಡದ ಇಂಥವರ ಜೊತೆಗೇ ಇರುತ್ತೀರೋ ಎಂಬುದನ್ನು ನಿರ್ಧರಿಸಿ.

positive attitude

4. ಇದು ಸ್ವಲ್ಪ ಕಷ್ಟದ್ದಾದರೂ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪೂರಕ. ನೀವು ಇಷ್ಟಪಡುವ ಯಾವುದೇ ವ್ಯಕ್ತಿಯ ಒಂದು ಪಾಸಿಟಿವ್‌ ಗುಣವನ್ನು (postiveness) ನೀವು ಗುರುತಿಸಲು ಪ್ರಯತ್ನಿಸಿ. ಇದು ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನು ನೋಡುವ ಗುಣವನ್ನು ನಿಮ್ಮಲ್ಲಿ ಉದ್ದೀಪನಗೊಳಿಸುತ್ತದೆ. ಜೊತೆಗೆ ಪ್ರತಿ ಸಂಬಂಧದ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ. ನಿಮ್ಮಲ್ಲಿರುವ ಗಿಲ್ಟ್‌ ಹಾಗೂ ಕೋಪವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Face Care: ಮುಖಕ್ಕೆ ವಯಸ್ಸಾಗದಂತೆ ಫಳಫಳ ಎನ್ನಲು ಈ ಐದು ಆಯುರ್ವೇದ ಸಾಧನ ಬಳಸಿ!

5. ನಿಮಗೆ ಯಾವುದು ನಿಜವಾಗಿಯೂ ಬೇಕು ಹಾಗೂ ನಿಮಗೆ ಯಾವುದು ಬೇಕು ಎಂದು ನೀವು ಅಂದುಕೊಂಡಿದ್ದೀರಿ ಎಂಬುದರ ಬಗ್ಗೆ ನಿಖರತೆ ಇರಲಿ. ನಿಜವಾಗಿಯೂ ಬೇಕು ಎನ್ನುವುದರ ಬಗ್ಗೆ ಫೋಕಸ್‌ ಮಾಡಿ. ಆ ನಿಟ್ಟಿನಲ್ಲಿ ಒಂದೇ ಗುರಿಯಲ್ಲಿ ಪ್ರಯತ್ನಪಡಿ. ಆಗ ಆ ವಿಷಯವನ್ನು ಪ್ರೀತಿಸುತ್ತಾ ನೀವು ಆ ದಾರಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.

6. ನಿಮ್ಮನ್ನು ನೀವು ಯಾವ ವಿಭಾಗದಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಹಾಗೂ ಇಷ್ಟರವರೆಗೆ ಹೇಗೆ ಬದಲಾಗಿದ್ದೀರಿ ಎಂಬ ಬಗ್ಗೆ ಆಗಾಗ ನಿಮ್ಮನ್ನು ನೀವು ಪ್ರಾಮಾಣಿಕವಾದ ಆತ್ಮಾವಲೋಕನ ಮಾಡಿಕೊಳ್ಳಿ. ಬೇರೆಯವರು ನಿಮಗೆ ಏನು ಮಾಡುತ್ತಿದ್ದಾರೆ, ಅವರಿಂದ ನಿಮಗೇನಾಯಿತು ಎಂಬುದಕ್ಕೆ ಹೆಚ್ಚು ತಲೆಕೆಡಿಸಬೇಡಿ. ನೀವು ನಿಮ್ಮ ಯಾವ ವಿಷಯವನ್ನು ಹೆಚ್ಚಾಗಿ ಗಮನ ಕೊಡಲಿಲ್ಲ ಎಂಬುದಕ್ಕೆ ಪ್ರಾಮುಖ್ಯತೆ ಕೊಡಿ ಹಾಗೂ ಅವುಗಳಿಂದ ಸುದಾರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ಇನ್ನೊಬ್ಬರು ಪ್ರೀತಿಸುತ್ತಿಲ್ಲ ಎಂಬಿತ್ಯಾದಿಗಳಿಗೆ ತಲೆ ಕೆಡಿಸುವುದನ್ನು ಬಿಟ್ಟು ನಿಮ್ಮನ್ನು ನೀವು ಪ್ರೀತಿಸಿ.

ಇದನ್ನೂ ಓದಿ: Happy Hormone: ಸಂತೋಷದ ಹಾರ್ಮೋನ್‌ ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿದಿದೆಯೇ?

Exit mobile version