ಆಕರ್ಷಕವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಚ್ಛೆ ಇರುವುದಿಲ್ಲ ಹೇಳಿ? ಸೌಂದರ್ಯ ಎನ್ನುವುದು ಯಾವಾಗಲೂ ನೋಡುವವರ ಕಣ್ಣಿನಲ್ಲಿರುತ್ತದೆ ಎಂಬ ಮಾತನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವಾದರೂ, ಬಾಹ್ಯ ಸೌಂದರ್ಯ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದೂ ಅಷ್ಟೇ ಸತ್ಯ.
ನಮ್ಮ ನಡೆ ನುಡಿ ವರ್ತನೆ ಸೇರಿದಂತೆ ಹಲವು ವಿಚಾರಗಳು ನಮ್ಮನ್ನು ಆಕರ್ಷಕವಾಗಿ ಕಾಣಿಸುವಲ್ಲಿ ಕೊಡುಗೆ ನೀಡುತ್ತದೆ. ಹಾಗಾಗಿ ನಾವು ಆಕರ್ಷಕವಾಗಿ ಕಾಣಿಸಲು ಈ ಪ್ರಯತ್ನಗಳನ್ನು ಮಾಡಬಹುದು.
೧. ಮುಖದ ಮೇಲಿನ ಮಂದಹಾಸ ಎಲ್ಲರಿಗೂ ಖುಷಿ, ಸಂತೋಷವನ್ನು ಹಂಚುತ್ತದೆ. ಮುಖದಲ್ಲಿನ ನಗು ನಮ್ಮ ಮೇಲೆ ಇತರರು ಆಕರ್ಷಣೆ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ತ್ರೀಯರು, ಮುಖ ಗಂಟಿಕ್ಕಿದ ಗಂಡಸರಿಗಿಂತಲೂ, ಮಂದಸ್ಮಿತ ಬೀರುತ್ತಿರುವ ಪುರುಷರತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಹೆಚ್ಚು ನಗಬೇಡಿ!
೨. ದೇಹದ ಭಂಗಿಯನ್ನು ಸರಿಯಾಗಿರಿಸುವುದು ಒಳ್ಳೆಯದು. ನೇರವಾದ ಸ್ಪಷ್ಟವಾದ ನಡಿಗೆ, ಭಂಗಿ ಕೂಡಾ ನಮ್ಮ ಮೇಲಿನ ಆಕರ್ಷಣೆಯ ಪ್ರಮುಖ ಕೊಂಡಿ. ಇದು ನಮ್ಮ ಆತ್ಮವಿಶ್ವಾಸವನ್ನು ಹೇಳುತ್ತದೆ. ಒಂದು ಕಡೆ ವಾಲಿದಂತೆ ಕುಳಿತಿದ್ದರೆ, ನೀವು ಅಷ್ಟೊಂದು ಸ್ಥಿರವಾದ ಮನಸ್ಸಿನವರಲ್ಲ ಎಂದು ಅರ್ಥವಾಗುತ್ತದೆ.
೩. ಸೂಕ್ತವಾದ ಬಟ್ಟೆ ಧರಿಸುವುದು ಕೂಡಾ ಬಹಳ ಮುಖ್ಯ. ನಾವು ಧರಿಸಿದ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಸಂದರ್ಭಕ್ಕೆ ತಕ್ಕ ಹಾಗೆ ಬಟ್ಟೆ ಧರಿಸುವ ಕಲೆ ತಿಳಿದಿರುವುದು ಅಗತ್ಯ. ಸಾಂಪ್ರದಾಯಿಕ ಸಮಾರಂಭಗಳಿಗೆ ಕಚೇರಿ ದಿರಿಸು ಸರಿಹೋಗುವುದಿಲ್ಲ.
೪. ಹಾಸ್ಯ ಪ್ರವೃತ್ತಿ ಕೂಡಾ ಅಷ್ಟೇ ಮುಖ್ಯ. ಇಬ್ಬರ ನಡುವೆ ಒಂದು ಹಿತವಾದ ಭಾವನೆ ಹಾಗೂ ಸಹಜವಾಗಿರಲು ಹಾಸ್ಯ ಪ್ರವೃತ್ತಿ ಬಹಳ ಉಪಯೋಗಕ್ಕೆ ಬರುತ್ತದೆ. ಆದರೆ ಹಾಸ್ಯಕ್ಕೂ ಅವಹೇಳನಕ್ಕೂ ವ್ಯತ್ಯಾಸ ತಿಳಿದಿರುವುದು ಅಗತ್ಯ.
೫. ಪ್ರತಿಭೆ ಕೂಡಾ ಆಕರ್ಷಣೆಯನ್ನು ಹೆಚ್ಚು ಮಾಡುತ್ತದೆ. ಸಾಧಾರಣ ರೂಪಿನ ವ್ಯಕ್ತಿ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದರೆ ಸಹಜವಾಗಿ ಅವರತ್ತ ಆಕರ್ಷಿತರಾಗುವ ಸಂದರ್ಭ ಹೆಚ್ಚಿರುತ್ತದೆ.
೬. ಜ್ಞಾನ ಕೂಡ ಆಕರ್ಷಣೆಯ ಕೇಂದ್ರ ಬಿಂದು. ಪ್ರಸ್ತುವ ಪ್ರಸಕ್ತ ವಿದ್ಯಮಾನ, ವಿಜ್ಞಾನ, ತಂತ್ರಜ್ಞಾನ ಅಥವಾ ಯಾವುದೇ ಕ್ಷೇತ್ರದ ಮೇಲಿನ ತಿಳುವಳಿಕೆ, ಹಿಡಿತ ಕೂಡಾ ಇತರರಿಗೆ ನಿಮ್ಮ ಮೇಲಿನ ಆಕರ್ಷಣೆ ಹೆಚ್ಚುವಂತೆ ಮಾಡುತ್ತದೆ.
೭. ನಮ್ಮ ಮೇಲೆ ನಮಗಿರುವ ಪ್ರೀತಿ ಹಾಗೂ ಆತ್ಮವಿಶ್ವಾಸ ಕೂಡಾ ಬಹಳ ಮುಖ್ಯ. ಅದು ನಮ್ಮ ನಡತೆ, ವ್ಯಕ್ತಿತ್ವದ ಮೇಲೆ ಪ್ರತಿಫಲಿಸುವ ಮೂಲಕ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ| Beauty secret: ಹೆಣ್ಮಕ್ಕಳ ನಿಜವಾದ ಸೌಂದರ್ಯ ಅಡಗಿರುವುದೆಲ್ಲಿ? ಇಲ್ಲಿವೆ 6 Secret points