Site icon Vistara News

ನೀವು ಹೆಚ್ಚು ಶಾಪಿಂಗ್‌ ಮಾಡುವಂತೆ ಹೇಗೆ ಟ್ರಿಕ್‌ ಮಾಡ್ತಾರೆ ಗೊತ್ತಾ?

ಮಾಲ್‌ಗಳಲ್ಲಾಗಲೀ, ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಾಗಲೀ, ಮಳಿಗೆಯವರು ಅನುಸರಿಸುವುದು ಒಂದೇ ಮಂತ್ರ- ಗ್ರಾಹಕರಿಂದ ಇನ್ನಷ್ಟು ಶಾಪಿಂಗ್‌ ಮಾಡಿಸಿ. ನೀವೇ ಗಮನಿಸಿರಬಹುದು- ನಾವು ಒಂದು ಪೊರಕೆ ಖರೀದಿಸಲೆಂದು ಮಾಲ್‌ಗೆ ಹೋಗುತ್ತೇವೆ. ಆದರೆ ಹತ್ತಾರು ಸಾವಿರ ರೂಪಾಯಿಗಳ ಖರೀದಿ ಮಾಡಿಕೊಂಡು ಮರಳಿ ಬರುತ್ತೇವೆ. ಉದ್ದೇಶವೇ ಇಲ್ಲದಿದ್ದರೂ ಇಷ್ಟೊಂದು ಖರ್ಚು ಮಾಡಿದ್ದು ಹೇಗೆ? ಇಲ್ಲಿದೆ ಮಳಿಗೆಗಳು ಅನುಸರಿಸುವ ಟ್ರಿಕ್ಕುಗಳು:

  1. ನೀವು ಪರಿಚಯದ ಗ್ರೋಸರಿ ಸ್ಟೋರ್‌ಗೆ ಹೋಗಿ ನೋಡಿ. ಅಲ್ಲಿ ಕಳೆದ ವಾರ ಇದ್ದಂತೆ ಈ ವಾರ ವಸ್ತುಗಳು ಇರುವುದಿಲ್ಲ. ಎಲ್ಲಿಯದನ್ನೋ ಎಲ್ಲಿಗೋ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಅದ್ಯಾಕೆ? ಯಾಕೆಂದರೆ ನೀವು ಅದೆಲ್ಲಿದೆ ಎಂದು ಹುಡುಕಾಡುತ್ತಾ ಹೋಗಬೇಕು. ಈ ಹುಡುಕಾಟದಲ್ಲಿ ನೀವು ಶಾಪ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ, ಇತರ ವಿಭಾಗಗಳನ್ನೂ ಗಮನವಿಟ್ಟು ನೋಡುತ್ತೀರಿ. ಆಗ ಒಂದಲ್ಲ ಒಂದು ವಸ್ತು ನಿಮ್ಮನ್ನು ಸೆಳೆಯುತ್ತದೆ, ಖರೀದಿಸುತ್ತೀರಿ.
  2. ಸಮೀಕ್ಷೆಗಳು ತಿಳಿಸುವಂತೆ, 50%ಕ್ಕೂ ಅಧಿಕ ಮಂದಿ ಸಾಮಗ್ರಿ ಕೊಳ್ಳುವುದೇ ಇಂಪಲ್ಸಿವ್‌ನೆಸ್‌ ಅಥವಾ ತಕ್ಷಣದ ಪ್ರಚೋದನೆಯಿಂದ. ಇಂದಿಗೂ ʼಒಂದು ಕೊಂಡರೆ ಇನ್ನೊಂದು ಉಚಿತʼ ʼಎರಡು ಕೊಂಡರೆ ಮೂರನೆಯದು ಉಚಿತʼ ʼಆರು ಸಾವಿರ ರೂಪಾಯಿ ಬಿಲ್‌ ಮಾಡಿದರೆ ಒಂದು ಸಾವಿರ ವಿನಾಯಿತಿʼ ಮುಂತಾದ ಪ್ರಚೋದನೆಗಳು ಅದ್ಭುತವಾಗಿಯೇ ವರ್ಕೌಟ್‌ ಆಗುತ್ತವೆ.
  3. ಅದ್ಭುತವೆನಿಸುವ ಆಫರ್‌ಗಳು ಕಂಡಾಗ ಸಹಜವಾಗಿಯೇ ಅಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಈ ಹೆಚ್ಚಿದ ಬೇಡಿಕೆಯೇ, ತಡ ಮಾಡಿದರೆ ಅದು ಅಲಭ್ಯವಾಗಬಹುದು ಎಂದು ನಿಮ್ಮಲ್ಲಿ ಒತ್ತಡ ಸೃಷ್ಟಿಸಿ, ತಕ್ಷಣವೇ ಖರೀದಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ಅದು ನನಗೆ ನಿಜವಾಗಿಯೂ ಬೇಕೇ ಬೇಡವೇ ಎಂದು ನಿರ್ಧರಿಸುವ ವಿವೇಕ ಆ ಕ್ಷಣ ಜಾಗೃತವಾಗಿ ಇರುವುದಿಲ್ಲ.
  4. ಬಂಡಲ್‌ ಆಫರ್‌ಗಳು ನಿಮ್ಮನ್ನು ಪ್ರಚೋದಿಸುವ ಇನ್ನೊಂದು ವಿಧ. ಒಂದೇ ರೇಜರ್‌ ಕೊಳ್ಳಲು ಹೋಗುವವರು, ನಾಲ್ಕು ರೇಜರ್‌ಗಳನ್ನು ಕಟ್ಟು ಮಾಡಿ ಒಳ್ಳೆಯ ದರ ಅಂಟಿಸಿ ಇಟ್ಟರೆ ತೆಗೆದುಕೊಳ್ಳಲು ಮುಂದಾಗುತ್ತಾರೆ. ಅಲ್ಲಿಗೆ ಮೂರು ರೇಜರ್‌ ಹೆಚ್ಚಿಗೆ ಕೊಂಡಂತಾಯಿತು.
  5. ನೀವು ಶಾಪಿಂಗ್‌ ಹೋಗುವ ಮಳಿಗೆಗಳ ವಿನ್ಯಾಸ ಗಮನಿಸಿದ್ದೀರಾ? ನೀವು ಸಾಗಬೇಕಾದ ದಾರಿಯನ್ನು ಅಪ್ರದಕ್ಷಿಣವಾಗಿ (Anti cloakwise) ರೂಪಿಸಿರುತ್ತಾರೆ. ಪ್ರದಕ್ಷಿಣಾಕಾರವಾಗಿ ಸಾಗುವುದು ಮನುಷ್ಯರಿಗೆ ಸುಲಭ. ಅಂಥ ವ್ಯವಸ್ಥೆಯಲ್ಲಿ ಹುಡುಕುವ ಸಾಮಗ್ರಿಗಳೂ ಬಲು ಬೇಗನೆ ಸಿಕ್ಕಿಬಿಡುತ್ತವೆ. ಆದರೆ ಅಪ್ರದಕ್ಷಿಣ ವಿನ್ಯಾಸ ಹಾಗೂ ಎಕ್ಸಿಟ್‌ ಸುಲಭವಾಗಿ ಸಿಗದಂತೆ ರೂಪಿಸಿದರೆ- ಆಗ ನೀವು ಹೆಚ್ಚು ಸಮಯ ಶಾಪ್‌ನಲ್ಲಿ ಕಳೆಯುತ್ತೀರಿ. ಹೆಚ್ಚು ವಸ್ತುಗಳು ನಿಮ್ಮ ಗಮನ ಸೆಳೆಯುತ್ತವೆ.

6. ಸಾಮಗ್ರಿಗಳನ್ನು ಇಡುವ ಶೆಲ್ಫ್‌ಗಳ ನಡುವೆ ಸಾಗುವ ದಾರಿ (ಕಾರಿಡಾರ್)‌ ಅಗಲ ಹೆಚ್ಚು ಇದ್ದಷ್ಟೂ, ನೀವು ಸರಾಗವಾಗಿ ಮುಂದೆ ಹೋಗುತ್ತೀರಿ. ಹಾಗೆ ಆಗುವುದು ಮಳಿಗೆಯವರಿಗೆ ಬೇಕಿಲ್ಲ. ಹೀಗಾಗಿ ಶೆಲ್ಫ್‌ಗಳ ಅಂತರ ಕಡಿಮೆ ಇರುತ್ತದೆ. ನೀವು ಕೈ ಹಾಕಿದರೆ ಎರಡೂ ಬದಿಯ ಶೆಲ್ಫ್‌ಗಳು ಕೈಗೆ ಸಿಗಬೇಕು, ಹಾಗಿರುತ್ತವೆ.

7. ರ‍್ಯಾಕ್‌ಗಳ ನಡುವಿನ ದಾರಿಗಳ ಕೊನೆಯಲ್ಲಿ ಏನಿದೆ ಎಂಬುದು ಮುಖ್ಯ. ಆ ಕೊನೆಯವರೆಗೂ ಗ್ರಾಹಕ ಹೋಗಬೇಕು, ನೋಡಬೇಕು- ಅದಕ್ಕೆ ತಕ್ಕಂಥ ಆಕರ್ಷಕ ಡಿಸ್‌ಪ್ಲೇಯನ್ನು ಕಾರಿಡಾರ್‌ನ ಕೊನೆಯಲ್ಲಿ ಜೋಡಿಸಿರುತ್ತಾರೆ.

8. ಶಾಪಿಂಗ್‌ ಕಾರ್ಟ್‌ಗಳನ್ನು ಗಮನಿಸಿದ್ದೀರಾ? ಅಧ್ಯಯನದ ಪ್ರಕಾರ, 1975ರಿಂದ ಇಲ್ಲಿಯವರೆಗೆ ಕಾರ್ಟ್‌ಗಳ ಗಾತ್ರಗಳ ಮೂರು ಪಟ್ಟು ಹೆಚ್ಚಿದೆಯಂತೆ. ಕಾರ್ಟ್‌ ಗಾತ್ರ ಹೆಚ್ಚಾದಷ್ಟೂ, ಅಯ್ಯೋ ಇದು ಖಾಲಿ ಇದೆಯಲ್ಲಾ ಅನ್ನಿಸಿ ಅದನ್ನು ತುಂಬಿಸಿಕೊಳ್ಳಲು ಗ್ರಾಹಕ ಮುಂದಾಗುತ್ತಾನಂತೆ! ಅದಕ್ಕೇ ನೀವು ಒಂದೇ ವಸ್ತು ಕೊಳ್ಳಲು ಹೋದರೂ ಮಳಿಗೆಯವರು ಕಾರ್ಟ್‌ ಹಿಡಿದುಕೊಳ್ಳುವಂತೆ ಪ್ರಚೋದಿಸುತ್ತಾರೆ.

9. ಬ್ರೆಡ್‌, ಹಾಲು ಮುಂತಾದ ದಿನನಿತ್ಯದ ಅಗತ್ಯ ವಸ್ತುಗಳನ್ನು ಪಕ್ಕನೆ ಕೈಗೆ ಸಿಗದಂತೆ ಸ್ಟೋರ್‌ನವರು ಯಾಕೆ ಇಟ್ಟಿರುತ್ತಾರೆ ಎಂಬುದಕ್ಕೂ ಮೇಲಿನದೇ ಕಾರಣ.

ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

10. ಬ್ರೆಡ್‌ ಕೊಂಡವನು ಬಟರ್‌ ಅಥವಾ ಫ್ರುಟ್‌ ಜ್ಯಾಮ್‌ ತೆಗೆದುಕೊಳ್ಳುತ್ತಾನೆ ಎನ್ನುವುದು ಕಾಮನ್‌ ಸೆನ್ಸ್.‌ ಆದರೆ ಅವುಗಳನ್ನು ಬ್ರೆಡ್‌ನ ರ‍್ಯಾಕ್‌ಗಿಂತ ದೂರದಲ್ಲಿ ಇಟ್ಟಿರುತ್ತಾರೆ. ನೀವು ಅಷ್ಟು ದೂರ ನಡೆಯಲಿ ಎಂಬುದೇ ಉದ್ದೇಶ.

11. ಚೆಕ್‌ಔಟ್‌ ಜಾಗವನ್ನು ಕಡಿಮೆ ಮಾಡುವುದು, ಬಿಲ್ಲಿಂಗ್‌ ಕೌಂಟರ್‌ಗಳನ್ನು ಕಡಿಮೆ ಇಡುವುದು ನೀವು ಇನ್ನಷ್ಟು ಸಮಯ ಮಾಲ್‌ನಲ್ಲಿರಿ ಎಂಬ ಉದ್ದೇಶದಿಂದಲೇ. ಚೆಕೌಟ್‌ ಕೌಂಟರ್‌ನಲ್ಲಿ ಕ್ಯಾಂಡಿ, ಚಾಕೊಲೇಟ್‌ನಂತಹ ವಸ್ತುಗಳನ್ನು ಇಟ್ಟಿರುವುದು ಇಂಪಲ್ಸಿವ್‌ ಬೈಯಿಂಗ್‌ ಹೆಚ್ಚಲಿ ಎಂದೇ.

12. ಬಾಟಾ ಚಪ್ಪಲಿಗಳ ದರ ರೂ.999 ಯಾಕೆ ಇಟ್ಟಿರುತ್ತಾರೆ? ಯಾಕೆಂದರೆ ಆರಂಭದ 9 ಮಾತ್ರ ನಿಮ್ಮಲ್ಲಿ ರಿಜಿಸ್ಟರ್‌ ಆಗುತ್ತದೆ. ಸಾವಿರ ದಾಟಿಲ್ಲ ಎನಿಸುತ್ತದೆ. ಸಾವಿರದ ಮುಂದೆ ಅದು ಸಣ್ಣ ಅಂಕಿ ಎನಿಸುತ್ತದೆ.

13. ಕೂಪನ್‌ಗಳು, ಉಚಿತ ಕೊಡುಗೆಗಳು, ಸೀಮಿತ ಸಮಯದ ಆಫರ್‌ಗಳು, ಸೀಮಿತ ಪ್ರಮಾಣದ ವಸ್ತುಗಳು- ಇವೆಲ್ಲವೂ ನಿಮ್ಮನ್ನು ಸೆಳೆದು ಬಲಿ ಹಾಕುವ ತಂತ್ರಗಳೇ ಆಗಿವೆ.

Exit mobile version