Site icon Vistara News

Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

Skin Care

ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಮಾತ್ರವೇ ಅಲ್ಲ, ಊಟ ಬಲ್ಲವನಿಗೆ ವಯಸ್ಸೂ ಆಗುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅಂದರೆ ಸರಿಯಾಗಿ ಊಟ ಮಾಡುವವರು ಚಿರಯೌವನಿಗರು ಎಂದಲ್ಲ, ಆದರೆ ಅವರಿಗೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ ಎಂಬುದು ತಾತ್ಪರ್ಯ. ಯಾವುದೋ ಮದುವೆ- ಕೂಟಗಳಿಗೆ ಹೋಗುವುದಿದ್ದರೆ ತುರ್ತಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದಕ್ಕೆ ಎಲ್ಲರಲ್ಲಿಯೂ ಏನಾದರೊಂದು ಉಪಾಯ ಇರುತ್ತದೆ. ಆದರೆ ಇವೆಲ್ಲಾ ತಾತ್ಕಾಲಿಕ ಎಂದಾಯಿತು. ಒಳಗಿನಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದಾದರೆ, ತ್ವಚೆಗೆ ಸತ್ವವೂ ಒಳಗಿನಿಂದಲೇ ದೊರೆಯಬೇಕೆ ಹೊರತು ಮೇಲಿನಿಂದ ಅಲ್ಲ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಾಯುವ ಜೀವಕೋಶಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳಲು ಸೂಕ್ತವಾದ ಆಹಾರ ಸೇವಿದಾಗ ಮಾತ್ರವೇ, ಚರ್ಮಕ್ಕಾಗುವ ಹಾನಿಯನ್ನು ತುಂಬಲು ಸಾಧ್ಯ. ಅದಕ್ಕಾಗಿ ಏನು ಮಾಡಬೇಕು?

ವಯಸ್ಸಾಗುವುದು ಸಾಮಾನ್ಯ ದೈಹಿಕ ಪ್ರಕ್ರಿಯೆ. ಆಂತರಿಕವಾಗಿ ಕಾಲಕ್ರಮೇಣ ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬಾಹ್ಯಸ್ವರೂಪದಲ್ಲಿ, ಅಂದರೆ ನಿದ್ದೆ ಸಾಕಾಗದೆ, ಪೋಷಣೆ ಕಡಿಮೆಯಾಗಿ, ಧೂಳು, ಹೊಗೆಯಂಥ ಮಾಲಿನ್ಯಗಳಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಅಸಾಧ್ಯವೇನಲ್ಲ. ಜೀವನಶೈಲಿಯನ್ನು ಆರೋಗ್ಯಕರವಾಗಿ ಉಳಿಸಿಕೊಂಡು, ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಆಹಾರ ನಮ್ಮ ಬದುಕಿನ ಭಾಗವಾದರೆ ಚರ್ಮವನ್ನು ನಳನಳಿಸುವಂತೆ ಇರಿಸಿಕೊಳ್ಳಲು ಆಗುತ್ತದೆ. ಯಾವೆಲ್ಲಾ ಪೋಷಕಾಂಶಗಳು ನಮ್ಮ ಚರ್ಮಕ್ಕೆ ಬೇಕು?

ಸೂಕ್ತ ಪೋಷಣೆ: ವಿಟಮಿನ್‌ ಎ ಅಥವಾ ಕೆರೋಟಿನಾಯ್ಡ್‌ನಂಥ ಸತ್ವಗಳು ಪ್ರಮುಖವಾಗಿ ಬೇಕು. ಕ್ಯಾರೆಟ್‌, ಗೆಣಸು, ದಪ್ಪ ಮೆಣಸು, ಪಪ್ಪಾಯಿ, ಮಾವು ಮುಂತಾದ ಹಣ್ಣು-ತರಕಾರಿಗಳಲ್ಲಿ ವಿಟಮಿನ್‌ ಎ ಯಥೇಚ್ಛವಾಗಿ ದೊರೆಯುತ್ತದೆ. ಇವುಗಳನ್ನು ಊಟದ ತಟ್ಟೆಗೆ ಸೇರಿಸಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡದಿದ್ದರಾಯಿತು.

ಲೈಕೋಪೇನ್:‌ ಟೊಮೇಟೊದಂಥ ಅಚ್ಚಕೆಂಪು ಬಣ್ಣದ ಹಣ್ಣು-ತರಕಾರಿಗಳಲ್ಲಿ ದೊರೆಯುವ ಸತ್ವವಿದು. ಗಾಯಗಳನ್ನು ಗುಣಪಡಿಸುವ, ಉರಿಯೂತವನ್ನು ತಗ್ಗಿಸುವ ಮತ್ತು ಕೊಲಾಜಿನ್‌ ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಲೈಕೋಪೇನ್‌ಗಳು ಹೊಂದಿವೆ. ಚರ್ಮಕ್ಕಾಗುವ ಯಾವುದೇ ಹಾನಿಯನ್ನು ಗುಣಪಡಿಸಲು ಲೈಕೋಪೇನ್‌ ನೆರವು ಬೇಕು.

ವಿಟಮಿನ್‌ ಬಿ೩: ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು, ಬಾರ್ಲಿ, ಓಟ್ಸ್‌ ಮುಂತಾದವುಗಳಿಂದ ದೊರೆಯುವ ಜೀವಸತ್ವವಿದು. ಚರ್ಮದ ಮೇಲೆ ಅತಿಯಾದ ಪಿಗ್‌ಮೆಂಟ್‌ಗಳನ್ನು ತಡೆಯಲು, ಸೂರ್ಯನ ಬಿಸಿಲಿನಿಂದಾಗುವ ಹಾನಿಯನ್ನು ಚರ್ಮ ಒಣಗುವುದನ್ನು ಕಡಿಮೆ ಮಾಡಲು ಅವಶ್ಯವಾಗಿ ಬೇಕಾದ ಪೋಷಣೆಯಿದು.

ವಿಟಮಿನ್‌ ಸಿ: ದೇಹದಲ್ಲಿರುವ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸಿ, ಕೊಲಾಜಿನ್‌ ಹೆಚ್ಚಿಸುವ ಅತಿ ಮುಖ್ಯ ಆಂಟಿಆಕ್ಸಿಡೆಂಟ್‌ ಇದು. ಹುಳಿ ಹಣ್ಣುಗಳಲ್ಲಿ, ಪೇರಲೆ, ಕಿವಿ ಹಣ್ಣು, ಬ್ರೊಕೊಲಿ, ದಪ್ಪಮೆಣಸು- ಹೀಗೆ ಸಿ-ಜೀವಸತ್ವ ಇರುವಂಥ ಹಣ್ಣುತರಕಾರಿಗಳು ಬಹಳಷ್ಟಿವೆ.

ವಿಟಮಿನ್‌ ಡಿ: ಚರ್ಮದ ಜೀವಕೋಶಗಳ ಬೆಳವಣಿಗೆ ಮತ್ತು ಗುಣಪಡಿಸುವಲ್ಲಿ ಡಿ-ಜೀವಸತ್ವವೂ ಸಹಕಾರಿ. ಮಾತ್ರವಲ್ಲ, ಸೋಂಕುಗಳು ಕಾಡದಂತೆ ಚರ್ಮವನ್ನು ಕಾಪಾಡುತ್ತದೆ ಇದು. ಸೂರ್ಯರಶ್ಮಿಯ ಹೊರತಾಗಿ, ತೈಲಭರಿತ ಮೀನುಗಳಲ್ಲಿ, ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿಭಾಗಗಳಲ್ಲಿ ಇದು ದೊರೆಯುತ್ತದೆ.

ವಿಟಮಿನ್‌ ಇ: ಎಂಟು ಬೇರೆಬೇರೆ ವಸ್ತುಗಳು ಒಟ್ಟಾಗಿ ಸೇರಿ ಇ-ಜೀವಸತ್ವವನ್ನು ಪೂರ್ಣಗೊಳಿಸುತ್ತವೆ. ಇವೆಲ್ಲ ಸೇರಿ ವಿಟಮಿನ್‌ ಸಿ ಜೊತೆಗೂಡಿ ದೇಹದಲ್ಲಿನ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸುತ್ತವೆ. ಸೂರ್ಯಕಾಂತಿ ಬೀಜ, ಬಾದಾಮಿ, ಅವಕಾಡೊ (ಬೆಣ್ಣೆ ಹಣ್ಣು), ಕೆಲವು ಸಸ್ಯಜನ್ಯ ಎಣ್ಣೆಗಳು, ಸಾಲ್ಮನ್‌ನಂಥ ಮೀನುಗಳಲ್ಲಿ ವಿಟಮಿನ್‌ ಇ ಲಭ್ಯವಿದೆ.

ಇದನ್ನೂ ಓದಿ| Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

Exit mobile version