ಬಟ್ಟೆಯಂಗಡಿಗಳಲ್ಲಿ ಹೋದಾಗ ʻಸ್ಕಿನ್ನಿʼ ವಿಭಾಗದಲ್ಲಿ ಓಡಾಡುತ್ತಿರುವ ಒಂದಿಷ್ಟು ಜನರಂತೂ ಕಣ್ಣಿಗೆ ಬಿದ್ದೇಬೀಳುತ್ತಾರೆ. ಮಾತ್ರವಲ್ಲ, ಸ್ಲಿಮ್ ಫಿಟ್‌ಗಳತ್ತ ಓಡಾಡುವರೆಲ್ಲಾ ಸಪೂರ ಇರುವವರೆಂದು ಭಾವಿಸುವ ಅಗತ್ಯವೂ ಇಲ್ಲ. ಒಟ್ಟಾರೆಯಾಗಿ ಇರುವುದಕ್ಕಿಂತ ತೆಳ್ಳಗೆ ಕಾಣಬೇಕೆಂಬ ಉದ್ದೇಶದಿಂದ ಅತ್ಯಂತ ಬಿಗಿಯಾದ ಉಡುಪುಗಳನ್ನು ಧರಿಸುವವರು ಬಹಳಷ್ಟು ಜನರಿದ್ದಾರೆ. ಇದರಿಂದ ಧರಿಸುವವರಿಗೆ ಕಿರಿಕಿರಿ ಮಾತ್ರವಲ್ಲ, ಆರೋಗ್ಯಕ್ಕೂ ಏನಾದರೂ ತೊಂದರೆ ಇದೆಯೇ ಎಂಬುದೀಗ ಪ್ರಶ್ನೆ
ಸುಮಾರು 20ನೇ ಶತಮಾನದವರೆಗೆ ಪಶ್ಚಿಮ ದೇಶಗಳಲ್ಲೆಲ್ಲಾ ಮಹಿಳೆಯರ ದೇಹವೆಂದರೆ ʻಹೀಗೆಯೇʼ ಇರಬೇಕೆಂಬ ಹುಕಿ ಬಂದವರಂತೆ ಕಾಶಟ್ (corsets) ಗಳನ್ನು ಧರಿಸುವುದು ಸಾಮಾನ್ಯವಾಗಿತ್ತು. ನಡುವಿನ ಭಾಗವನ್ನು ಅತ್ಯಂತ ಬಿಗಿಯಾಗಿಸಿ, ಮೇಲೆ ಮತ್ತು ಕೆಳಗಿನ ಭಾಗಗಳನ್ನು ಅಗಲವಾಗಿಸುವಂತೆ ಈ ರೂಪಿಸಲಾಗಿದ್ದ ಒಳಉಡುಪುಗಳಿವು. ಧರಿಸಿದಾಗ ಹಿಂಸೆ ಎನಿಸುವಷ್ಟು ಕಿರಿಕಿರಿಯಾಗುತ್ತಿದ್ದರೂ, ಅಂದಿನ ಬಹಳಷ್ಟು ಮಂದಿ ಚಂದದ ಹೆಸರಿನಲ್ಲಿ ಇದಕ್ಕೆ ಮೊರೆ ಹೋಗಿದ್ದು ಸುಳ್ಳೇನಲ್ಲ. ನಡುವಿನ ಭಾಗಕ್ಕೆ ವಿಪರೀತ ಒತ್ತಡ ಹೇರುತ್ತಿದ್ದ ಈ ಒಳ ವಸ್ತ್ರಗಳಿಂದಾಗಿ ಜಠರ, ಕರುಳು ಮತ್ತು ಶ್ವಾಸಕೋಶದ ಸಮಸ್ಯೆಗಳಿಗೆ ಒಳಗಾದವರು ಲೆಕ್ಕವಿಲ್ಲದಷ್ಟು ಮಂದಿ.
ಇಂದಿನ ಸ್ಕಿನ್ನಿ ಜೀನ್ಸ್‌ಗಳು ಇಷ್ಟು ಕ್ರೂರಿಗಳಲ್ಲದೆ ಇದ್ದರೂ, ಅತಿ ಬಿಗಿಯಾದ ಉಡುಪುಗಳನ್ನು ತೊಡುವುದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇಲ್ಲದಿಲ್ಲ. ಉದಾ, ಅತಿ ಬಿಗಿಯಾದ ಬ್ರಾ ಧರಿಸುವುದರಿಂದ ಸರಾಗ ಉಸಿರಾಟಕ್ಕೆ ಅಡಚಣೆ ಆಗುವುದಂತೂ ಹೌದು. ಎಲ್ಲಿ ಉಸಿರಾಟ ಸಾಮಾನ್ಯವಾಗಿಲ್ಲವೋ ಅಲ್ಲಿ ದೇಹಕ್ಕೆ ಬೇಕಾದ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ತಲೆನೋವು, ಏಕಾಗ್ರತೆಯ ಕೊರತೆಯಂಥ ಸಮಸ್ಯೆಗಳು ಬರುತ್ತವೆ. ದೇಹದ ಚಲನೆಯಲ್ಲಿ ವ್ಯತ್ಯಾಸವಾಗುತ್ತದೆ. ಈ ಬಿಗಿತದಿಂದ ಉಂಟಾಗುವ ನೋವಿಗೆ ಹೃದಯದಲ್ಲೋ, ಶ್ವಾಸಕೋಶದಲ್ಲೋ ನೋವಾಗುತ್ತಿದೆ ಎಂಬ ಭಾವ ಬರುವ ಸಾಧ್ಯತೆಯೂ ಇದೆ.
ಮೇಲ್ಭಾಗದ ಉಡುಪುಗಳಿಗೆ ಮಾತ್ರ ಹಾಗೆ ಅಂತೇನಿಲ್ಲ. ಅತಿ ಬಿಗಿಯಾದ ಸ್ಕಿನ್ನಿ ಜೀನ್ಸ್‌ಗಳೂ ಕೆಲವೊಮ್ಮೆ ಉಪದ್ರವಕಾರಿಗಳೇ. ಕಟಿಯ ಸುತ್ತಲಿರುವ ವಸ್ತ್ರ ಬಿಗಿಯಾಗಿ ಒತ್ತಿದಂತೆ, ಕುತ್ತಿಗೆ ಹಿಚುಕಿದಂತೆ ಅಂಟಿಕೊಂಡಿದ್ದರೆ, ಧರಿಸಿದವರಿಗೆ ಬೆನ್ನು ನೇರವಾಗಿಸಿ ಕುಳಿತುಕೊಳ್ಳಲಾದರೂ ಸಾಧ್ಯವೇ? ದೇಹಕ್ಕೆ ಆರಾಮವಲ್ಲದ ಭಂಗಿಯಲ್ಲಿ ಬಗ್ಗಿಸಿ ಅಥವಾ ಸೊಟ್ಟಾಗಿ ಕುಳಿತುಕೊಂಡರೆ ಬೆನ್ನು ನೋವು ಆರಂಭವಾಗಲು ಹೆಚ್ಚು ದಿನಗಳ ಅಗತ್ಯವಿಲ್ಲ.
ಇನ್ನು ವ್ಯಾಯಾಮ ಮಾಡುವಾಗಿನ ಉಡುಪುಗಳು ಬಿಗಿಯಾಗಿದ್ದರೆ ಸಮಸ್ಯೆಗಳು ಬೇರೆ ರೀತಿಯದ್ದು. ದೇಹ ಚಟುವಟಿಕೆಯಲ್ಲಿದ್ದಾಗ ಸ್ರವಿಸಿದ ಬೆವರನ್ನು ಒಂದೋ ಧರಿಸಿದ ವಸ್ತ್ರಗಳು ಹೀರಿಕೊಳ್ಳಬೇಕು ಅಥವಾ ಗಾಳಿಗೆ ಆರಿಹೋಗಲು ಬಿಡಬೇಕು. ವ್ಯಾಯಾಮದಲ್ಲಿ ಧರಿಸುವ ವಸ್ತ್ರಗಳು ಹತ್ತಿಯದ್ದು ಅಲ್ಲದಿದ್ದರೆ ವಸ್ತ್ರಗಳು ಬೆವರು ಹೀರುವುದಿಲ್ಲ. ಗಾಳಿಯಾಡಲು ಅವಕಾಶವಿಲ್ಲದೆ ಬಿಗಿಯಾಗಿದ್ದರೆ, ಚರ್ಮಕ್ಕೆ ಕಿರಿಕಿರಿ ತಪ್ಪಿದ್ದಲ್ಲ. ಮಾತ್ರವಲ್ಲ, ರಕ್ತ ಪರಿಚಲನೆಯೂ ಏರುಪೇರಾಗಬಹುದು. ಒಳ ಉಡುಪುಗಳು ಅತಿ ಬಿಗಿಯಾದರೂ ಇಂಥದ್ದೇ ಸಮಸ್ಯೆಗಳು ಎದುರಾಗುತ್ತವೆ. ಮಹಿಳೆಯರಲ್ಲಿ ಸೋಂಕಿನ ಸಮಸ್ಯೆಯೂ ಕಾಡಬಹುದು. ಪುರುಷರಲ್ಲಿ ಫಲವಂತಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಹಾಗಿದ್ದರೆ ಎಂಥ ವಸ್ತ್ರಗಳು ನಮಗೆ ಅಗತ್ಯ? ಧರಿಸಿದಾಗ ನಾವು ಹೇಗೆ ಕಾಣುತ್ತೇವೆ ಎಂಬಷ್ಟೇ ಮುಖ್ಯವಾಗಿದ್ದು, ಧರಿಸಿದಾಗ ಎಷ್ಟು ಆರಾಮದಾಯಕ ಎಂಬುದು. ಕಿರಿಕಿರಿ ಉಂಟುಮಾಡುವ ವಸ್ತ್ರಗಳಲ್ಲಿ ಸುಂದರವಾಗಿ ಕಾಣಲು ನಿಜಕ್ಕೂ ಸಾಧ್ಯವೇ ಎಂಬುದನ್ನು ಯೋಚಿಸಬೇಕು. ಹಾಗಾಗಿ ವಸ್ತ್ರಗಳನ್ನು ಆಯ್ಕೆ ಮಾಡುವಾಗ ಚಂದಕ್ಕೆ ಕೊಡುವಷ್ಟೇ ಪ್ರಾಶಸ್ತ್ಯವನ್ನು ಆರಾಮಕ್ಕೆ ಕೊಡುವುದೂ ಅಗತ್ಯ.
ಇದನ್ನೂ ಓದಿ| Jacket Saree Fashion | ಚಳಿಗಾಲದಲ್ಲಿ ಟ್ರೆಂಡಿಯಾದ ಜಾಕೆಟ್ ಸೀರೆ ಫ್ಯಾಷನ್