Site icon Vistara News

ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

sleeping

ಹೃದಯ ಮತ್ತು ಮೆದುಳಿನ ಸ್ವಾಸ್ಥ್ಯ ಉತ್ತಮವಾಗಿರಬೇಕೆಂದರೆ ಕಣ್ಣು ತುಂಬ ನಿದ್ದೆ ಬೇಕು ಎಂಬುದಕ್ಕೆ ಈಗ ಅಮೆರಿಕ ಹೃದಯ ಸಂಸ್ಥೆ (ಎಎಚ್‌ಎ)ಯಿಂದ ಅಧಿಕೃತ ಮಾನ್ಯತೆ ದೊರೆತಿದೆ. ಹೃದಯಾರೋಗ್ಯಕ್ಕೆ ಅಗತ್ಯವಾದ ಎಂಟು ಅಂಶಗಳ ಪೈಕಿ ನಿದ್ದೆಯನ್ನೂ ಈ ಸಂಸ್ಥೆ ಮಾನ್ಯ ಮಾಡಿದೆ.

ಆಹಾರ, ವ್ಯಾಯಾಮ, ನಿಕೋಟಿನ್‌ ಪ್ರಭಾವ, ತೂಕ, ಕೊಲೆಸ್ಟ್ರಾಲ್‌ ಮಟ್ಟ, ಮಧುಮೇಹ ಮತ್ತು ರಕ್ತದೊತ್ತಡಗಳನ್ನು ಸೂಕ್ತವಾಗಿ ನಿಭಾಯಿಸಿದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸಂಸ್ಥೆ ಈ ಮೊದಲು ಹೇಳಿತ್ತು. ಈಗ ಈ ಪಟ್ಟಿಗೆ ನಿದ್ದೆಯನ್ನೂ ಸೇರಿಸಲಾಗಿದೆ. ʻನಿದ್ದೆ ಒಟ್ಟಾರೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾಗಿ ನಿದ್ದೆ ಮಾಡುವವರು ತಮ್ಮ ತೂಕ, ರಕ್ತದೊತ್ತಡ ಮತ್ತು ಮಧುಮೇಹವನ್ನೂ ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲರುʼ ಎನ್ನುತ್ತಾರೆ ಎಎಚ್‌ಎ ಅಧ್ಯಕ್ಷ ಡೊನಾಲ್ಡ್‌ ಲಾಯ್ಡ್‌-ಜೋನ್ಸ್‌.

ʻನಮ್ಮ ಶರೀರದ ಮೇಲೆ ಧರಿಸಿಕೊಳ್ಳುವಂತಹ ಉಪಕರಣಗಳು ಬಂದಾಗಿನಿಂದ ವ್ಯಕ್ತಿ ಎಷ್ಟು ನಿದ್ದೆ ಮಾಡುತ್ತಿದ್ದಾನೆಂಬುದನ್ನು ತಿಳಿದುಕೊಳ್ಳಬಹುದು. ಉತ್ತಮ ಹೃದಯಾರೋಗ್ಯ ಇದ್ದರೆ ಮಾತ್ರವೇ ಉತ್ತಮ ಗುಣಮಟ್ಟದ ಬದುಕು ರೂಢಿಸಿಕೊಳ್ಳಲು ಸಾಧ್ಯ. ಹೃದಯಾರೋಗ್ಯ ಉತ್ತಮವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಈ ಎಂಟು ಅಂಶಗಳ ಮೇಲೆ ನಿಗಾ ವಹಿಸುವುದು ಬದುಕಿನ ಎಲ್ಲಾ ಹಂತಗಳಲ್ಲಿರುವ ಎಲ್ಲರಿಗೂ ಅತ್ಯಗತ್ಯʼ ಎಂಬುದು ಅವರ ಸ್ಪಷ್ಟ ನುಡಿ.

ಇದನ್ನೂ ಓದಿ: ಮೊಬೈಲ್‌ ಹೆಚ್ಚು ನೋಡಿದರೆ ಆಯುಷ್ಯ ಕಡಿಮೆ ಆಗುತ್ತೆ; ಆತಂಕಕಾರಿ ವರದಿ ನೀಡಿದ ಸಂಶೋಧನೆ

ಜಾಗತಿಕ ಮಟ್ಟದಲ್ಲಿ ೨೦೧೯ರಲ್ಲಿ ಅಂದಾಜು ೧.೭೯ ಕೋಟಿ ಮಂದಿ ಹೃದಯ ಸಂಬಂಧಿ ರೋಗಗಳಿಂದ ಮೃತಪಟ್ಟಿದ್ದಾರೆ. ಇದು ಇಡೀ  ವಿ‍ಶ್ವದಲ್ಲಿ ಸಂಭವಿಸಿದ ಒಟ್ಟು ಮರಣ ಪ್ರಮಾಣದ ಶೇ. ೩೨ರಷ್ಟು. ಅದರಲ್ಲೂ ಕಡಿಮೆ ಮತ್ತು ಮಧ್ಯಮ ಆದಾಯವಿರುವ ರಾಷ್ಟ್ರಗಳಲ್ಲೇ ಈ ಪ್ರಮಾಣ ಹೆಚ್ಚಿರುವುದು ಕಂಡುಬರುತ್ತದೆ. ಕಳೆದೆರಡು ದಶಕಗಳಲ್ಲಿ ನಡೆಸಿದ ವಿವಿಧ ಅಧ್ಯಯನಗಳಲ್ಲಿ, ಜೀವನಶೈಲಿಯನ್ನು ಸೂಕ್ತವಾಗಿ ನಿಭಾಯಿಸುವುದರಿಂದ ಹೃದಯಸಂಬಂಧಿತ ಎಷ್ಟೋ ರೋಗಗಳನ್ನು ತಡೆಗಟ್ಟಬಹುದು ಎಂಬುದು ಕಂಡುಬಂದಿದೆ.

ಎಎಚ್‌ಎ ಹೇಳಿದ ಎಂಟು ಅಂಶಗಳನ್ನು ಇರಿಸಿಕೊಂಡು, ಸೊನ್ನೆಯಿಂದ ಆರಂಭಿಸಿ ನೂರರವರೆಗಿನ ಒಂದು ಮಾಪಕದಲ್ಲಿ ಹೃದಯದ ಆರೋಗ್ಯವನ್ನು ಅಳೆಯುವುದಾದರೆ, ೫೦ಕ್ಕಿಂತ ಕಡಿಮೆ ಅಂಕವನ್ನು ಗಳಿಸಿದವರ ಹೃದಯದ ಆರೋಗ್ಯ ಅಷ್ಟಕ್ಕಷ್ಟೆ. ೫೦-೭೯ ಇದ್ದವರದ್ದು ಪರವಾಗಿಲ್ಲ.  ೮೦ ಮತ್ತು ಅದಕ್ಕಿಂತ ಹೆಚ್ಚಿದ್ದವರದ್ದು ಉತ್ತಮ ಎಂದು ಹೇಳಲಾಗಿದೆ.

ಇದನ್ನೂ ಓದಿ: ಗೊರಕೆಯೆಂಬ ಘೋರ ವೈರಿ- ಇದರಿಂದ ಮುಕ್ತಿ ಹೇಗೆ?

Exit mobile version