ಅಡುಗೆ ಗೊತ್ತಿದ್ದರಷ್ಟೆ ಸಾಲದು. ಬಹಳ ಸಾರಿ ಸಣ್ಣಪುಟ್ಟ ಉಪಾಯಗಳು ಅಡುಗೆಯನ್ನು ಸುಲಭವಾಗಿಯೂ ಸರಳವಾಗಿಯೂ ಬದಲಾಯಿಸಿಬಿಡುತ್ತದೆ. ಅಷ್ಟೇ ಅಲ್ಲ, ಅಡುಗೆಯೊಂದು ಬಹಳ ಮಜಾ ಕೊಡುವ ಕೆಲಸ ಅನಿಸಿಕೊಳ್ಳಲು, ಆಗಾಗ ಮಾಡಿಕೊಳ್ಳುವ ಮಾರ್ಪಾಡುಗಳು, ಕಿರಿಕಿರಿಯೆನ್ನುವ ವಿಚಾರಗಳಿಗೆ ಸರಳೋಪಾಯಗಳು, ರುಚಿ ಹೆಚ್ಚು ಮಾಡಲು ಅನುಸರಿಸಬೇಕಾದ ಸಣ್ಣ ಟ್ವಿಸ್ಟ್ ಎಲ್ಲವೂ ಬಹುಮುಖ್ಯವಾಗುತ್ತದೆ. ಹಾಗಾಗಿಯೇ ಇಂದಿನ ಕಾಲದಲ್ಲಿ, ಕೇವಲ ಅಡುಗೆ ಗೊತ್ತಿದ್ದರಷ್ಟೆ ಸಾಲದು, ಜಾಣತನದಿಂದ ಚುಟುಕಾಗಿ ನಿರ್ವಹಿಸುವ ಕಲೆಯೂ ಗೊತ್ತಿರಬೇಕು!
ಹೊಸತೊಂದು ಅಡುಗೆ ಟ್ರೈ ಮಾಡುತ್ತಿದ್ದೀರೆಂದಿಟ್ಟುಕೊಳ್ಳಿ. ಕೇವಲ ಆ ತಿಂಡಿಯ ಹೆಸರು ಕೇಳಿಯೇ ಬಾಯಲ್ಲಿ ನೀರೂರಿ ಸೀದಾ ಅಡುಗೆಗೆ ರೆಡಿಯಾಗಬೇಡಿ. ಮೊದಲು ರೆಸಿಪಿಯನ್ನೊಮ್ಮೆ ಓದಿ ಅರ್ಥೈಸಿಕೊಳ್ಳಿ. ಅವರು ಹೇಳಿದವುಗಳೆಲ್ಲ ಮನೆಯಲ್ಲಿ ಇದೆಯೇ ಪರೀಕ್ಷಿಸಿಕೊಳ್ಳಿ. ಇದಕ್ಕೆ ತಗಲುವ ಸಮಯದ ಲೆಕ್ಕಾಚಾರವಿರಲಿ. ಹೆಚ್ಚಿಡಬೇಕಾದ ತರಕಾರಿಗಳನ್ನು ಮೊದಲೇ ಹೆಚ್ಚಿಡಿ. ಅವರು ಹೇಳಿದ ಪ್ರಮಾಣವನ್ನಷ್ಟೆ ಬಳಸಿ. ಆಗಷ್ಟೇ ಅಂದುಕೊಂಡದ್ದು ಹಾಗೆಯೇ ನಡೆಯುತ್ತದೆ. ಗಡಿಬಿಡಿಯಿಂದ ಅಡುಗೆ ಕೆಟ್ಟರೆ ಮೂಡೂ ಕೆಡುತ್ತದೆ.
ಈರುಳ್ಳಿ ಹೆಚ್ಚೋದು ಯಾರು ಎಂದು ತಲೆ ನೋವಾದರೆ, ಮೊದಲು ಈರುಳ್ಳಿಯನ್ನು ಎರಡು ಹೋಳು ಮಾಡಿ ನೀರಿನಲ್ಲಿ ನೆನೆಸಿಡಿ. ೧೦ ನಿಮಿಷ ಬಿಟ್ಟು ಹೆಚ್ಚಿ. ಕಣ್ಣು ಮೂಗಲ್ಲಿ ನೀರು ಸುರಿಸುತ್ತಾ ನೀವು ಕಷ್ಟ ಪಡುವುದು ಇದರಿಂದ ತಪ್ಪುತ್ತದೆ.
ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಮೊದಲೇ ಮಾಡಿಟ್ಟು ಫ್ರಿಜ್‌ನಲ್ಲಿ ಶೇಖರಿಸಿಡುವ ಅಭ್ಯಾಸವಿದ್ದರೆ, ಇದು ಹೆಚ್ಚು ಕಾಲ ಫ್ರೆಶ್ ಆಗಿ ಕೆಡದಂತೆ ಉಳಿಯಲು ಸ್ವಲ್ಪ ಎಣ್ಣೆ ಹಾಗೂ ಉಪ್ಪನ್ನು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಿ.
ಅನ್ನ ಬೆಂದ ಮೇಲೂ ಉದುರುದಾರಿ ಬಿಳಿಯಾಗಿಯೇ ಉಳಿಯಬೇಕು ಅಂತ ನಿಮಗನಿಸಿದರೆ, ಅಕ್ಕಿಯನ್ನು ನಾಲ್ಕೈದು ಬಾರಿ ತೊಳೆಯಿರಿ. ಜೊತೆಗೆ ಅನ್ನ ಬೇಯುವ ಸಂದರ್ಭ ೨-೩ ಹನಿ ನಿಂಬೆರಸ ಹಾಕಿ.
ಸೊಪ್ಪುಗಳನ್ನು ಒಂದು ವಾರ ಕಾಲ ಕೆಡದಂತೆ ಫ್ರೆಷ್ ಆಗಿರಿಸಲು, ಅವುಗಳನ್ನು ಸಣ್ಣದಾಗಿ ಹೆಚ್ಚಿ ದಪ್ಪ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿಡಬಹುದು.
ಯಾವುದೋ ತರಕಾರಿಯನ್ನು ಬೇಯಿಸಿದ ಪೋಷಕಾಂಶಯುಕ್ತ ನೀರನ್ನು ಹಾಗೆಯೇ ಚೆಲ್ಲಬೇಡಿ. ಚಪಾತಿ ಹಿಟ್ಟು ಕಲಸಲು ಬಳಸಿ. ಅಥವಾ ಯಾವುದಾದರೂ ಗ್ರೇವಿಗೆ ಬಳಸಿ.
ಇದನ್ನೂ ಓದಿ: ಬ್ಯಾಚುಲರ್ ಕಿಚನ್: ಫಿಟ್ನೆಸ್ ಪ್ರಿಯ ಬ್ಯಾಚುಲರ್‌ಗಳಿಗೆ ದಿಢೀರ್ ಪನೀರ್ ಫ್ರೈ!
ಬೆಳ್ಳುಳ್ಳಿ ಎಸಳನ್ನು ಸುಲಭವಾಗಿ ಬಿಡಿಸಲು ಸುಲಿಯುವ ಮುನ್ನ ಅದಕ್ಕೆ ಎಣ್ಣೆ ಸವರಿ ಒಂದರ್ಧ ಗಂಟೆ ಬಿಸಿಲಲ್ಲಿಡಬೇಕು.
ಸಕ್ಕರೆ ಡಬ್ಬಿಗೆ ಇರುವೆಗಳು ಮುತ್ತದಂತೆ ಅದರೊಳಗೆ ಮೂರ್ನಾಲ್ಕು ಲವಂಗವನ್ನು ಹಾಕಬಹುದು. ಹಸಿಮೆಣಸು ಫ್ರೆಷ್ ಆಗಿರಲು ಅದರ ತೊಟ್ಟು ತೆಗೆದು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಬೇಕು.
ಮನೆಯಲ್ಲೇ ಫ್ರೆಂಚ್ ಫ್ರೈಸ್ ಮಾಡಲು ಪ್ರಯತ್ನಿಸಿ, ಛೇ ಇದ್ಯಾಕೆ ಮೆತ್ತಗಾಗುತ್ತಿದೆ ಎಂದು ಬೇಸರಿಸಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಫ್ರೈಂಚ್ ಫ್ರೈಸ್ ಮಾಡುವ ವಿಧಾನ ಬದಲಾಯಿಸಿಕೊಳ್ಳಿ. ಒಮ್ಮೆ ಎಣ್ಣೆಯಲ್ಲಿ ಅರ್ಧ ಹುರಿದ ಫ್ರೆಂಚ್ ಫ್ರೈಸನ್ನು ಡಬ್ಬಿಯೊಳಗೆ ಹಾಗಿ ಫ್ರೀಜರ್‌ನಲ್ಲಿ ನಾಲ್ಕೈದು ಗಂಟೆಗಳ ಕಾಲ ಇಟ್ಟು ಮತ್ತೆ ತೆಗೆದು ಮತ್ತೊಮ್ಮೆ ಕರಿಯಿರಿ. ಈಗ ಗರಿಗರಿಯಾದ ಫ್ರೆಂಚ್ ಫ್ರೈಸ್ ರೆಡಿ.
ಚಪಾತಿ ಹಾಗೂ ರೋಟಿ ಮೆದುವಾಗಿರಬೇಕಾದರೆ, ಲಟ್ಟಿಸುವುದಕ್ಕಿಂತ ಅರ್ಧ ಗಂಟೆ ಮೊದಲೇ ಹಿಟ್ಟು ಕಲಸಿಡಿ.
ಬಾದಾಮಿಯ ಸಿಪ್ಪೆ ಸುಲಿಯಲು ಕಷ್ಟವಾದರೆ ೧೦-೧೫ ನಿಮಿಷ ನೆನೆಹಾಕಿ ಸುಲಿಯಿರಿ. ಸುಲಭವಾಗುತ್ತದೆ.
ಬೆಳಗಿನ ಉಪಹಾರಕ್ಕೆ ಚಪಾತಿ, ಪರಾಠ ಮಾಡುತ್ತಿದ್ದರೆ, ಹೆಚ್ಚು ಪೋಷಕಾಂಶಯುಕ್ತದ್ದನ್ನಾಗಿ ಬದಲಾಯಿಸಲು ಇವಕ್ಕೆ ಪಾಲಕ್ ಸೊಪ್ಪಿನ ಪೇಸ್ಟನ್ನೋ, ತುರಿದ ಕ್ಯಾರೆಟನ್ನೋ, ತುರಿದ ಕ್ಯಾಬೇಜನ್ನೋ, ಹೆಚ್ಚಿದ ಮೆಂತೆ ಸೊಪ್ಪನ್ನೋ, ಬೇಯಿಸಿ ಪೇಸ್ಟ್ ಮಾಡಿದ ತರಕಾರಿಗಳನ್ನೋ ಹಿಟ್ಟಿಗೆ ಸೇರಿಸಿಕೊಳ್ಳಬಹುದು. ತರಕಾರಿ ತಿನ್ನಲು ತಪ್ಪಿಸಿಕೊಳ್ಳುವ ಮಕ್ಕಳ ಹೊಟ್ಟೆಗೆ ಪೋಷಕಾಂಶಗಳು ಹೋಗುವಂತೆ ಮಾಡಲೂ ಇವು ಸುಲಭೋಪಾಯ.
ಇದನ್ನೂ ಓದಿ: ಮನೆಯಲ್ಲೇ ಮಾಡಬಹುದಾದ ಈ 5 ಪಾನೀಯಗಳಿಂದ ಬೊಜ್ಜು ಕರಗಿಸಿ