Site icon Vistara News

Mental health | ಸ್ಥಿರತೆ ಕಾಪಾಡಿಕೊಳ್ಳಲು ಕೆಲವು ಸರಳ ಸೂತ್ರಗಳು

ಇತ್ತೀಚೆಗೆ ವಿಶ್ವ ಮಾನಸಿಕ ಆರೋಗ್ಯ ದಿನ (ಅ.10) ಬಂದುಹೋಯಿತು. ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅತ್ಯಂತ ಎಚ್ಚರ ವಹಿಸುತ್ತಿರುವ ಇಂದಿನ ದಿನಗಳಲ್ಲಿ ಮಾನಸಿಕ ಸ್ವಾಸ್ಥ್ಯ ತನ್ನಷ್ಟಕ್ಕೆ ತಾನೇ ನಿರ್ವಹಣೆ ಆಗುವುದಿಲ್ಲವೇ? ಇಷ್ಟಕ್ಕೂ ಅಂಥದ್ದೇನಾಗಿದೆ ನಮಗೆ? ಈ ಮಾದರಿಯ ಯೋಚನೆಗಳು ಬರುವುದು ಅಸಹಜ ಅಲ್ಲದಿದ್ದರೂ ಅದನ್ನು ಸರಿ ಎಂದುಕೊಳ್ಳಲಾಗದು. ಜೀವನವನ್ನು ಸುಲಭ, ಸರಳ ಮತ್ತು ಗೊಂದಲರಹಿತ ಮಾಡಿಕೊಳ್ಳಲು ಅಗತ್ಯವಾಗಿ ಬೇಕಾಗಿರುವುದು ಮಾನಸಿಕ ಆರೋಗ್ಯ. ನಿರೋಗಿಯಾಗಿ ಜೀವನ ಸಾಗಿಸಬೇಕಿದ್ದರೆ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳು ಒಂದೇ ನಾಣ್ಯದ ಎರಡು ಮುಖ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ.

ಕೋವಿಡ್‌-೧೯ರ ಹಿನ್ನೆಲೆಯಲ್ಲಿ ಉದ್ಭವಿಸುತ್ತಿರುವ ಮಾನಸಿಕ ಸಮಸ್ಯೆಗಳು ಗಾಬರಿ ಹುಟ್ಟಿಸುವ ಮಟ್ಟಿಗೆ ಹೆಚ್ಚಾಗಿವೆ. ಹಾಗಾಗಿ ವಿಶ್ವ ಮಾನಸಿಕ ಆರೋಗ್ಯ ದಿನಕ್ಕೆ ಹಿಂದೆಂದಿಗಿಂತ ಹೆಚ್ಚಿನ ಪ್ರಾಮುಖ್ಯತೆ ಈಗ ಒದಗಿಬಂದಿದೆ. ಧನಾತ್ಮಕ ಮಾನಸಿಕ ಸ್ಥಿತಿ ನಮ್ಮನ್ನು ಎಂಥಾ ಸಂಕಷ್ಟದ ಸುಳಿಯಿಂದಲೂ ಪಾರು ಮಾಡಬಲ್ಲದು. ನಾವೇನು ಯೋಚಿಸುತ್ತೇವೆಯೋ ಅದನ್ನೇ ಕೃತಿಯಲ್ಲಿ ತೋರಿಸುತ್ತೇವೆ. ಮಾನಸಿಕ ಸ್ಥಿರತೆ ಮತ್ತು ಅರಿವಿನ ತೀಕ್ಷ್ಣತೆಯನ್ನು ವೃದ್ಧಿಸಿಕೊಳ್ಳಲು ಕೆಲವು ಸರಳ ಮಾರ್ಗಗಳು ಇಲ್ಲಿವೆ.

ಧ್ಯಾನ: ಐದೇ ನಿಮಿಷಗಳಿಗಾದರೂ ಸರಿ, ಪ್ರತಿದಿನ ಮಾಡಿ. ಧ್ಯಾನಕ್ಕೆ ಧಾರ್ಮಿಕ ನಂಟು ಹಾಕುವ ಅಗತ್ಯವಿಲ್ಲ. ನಮ್ಮ ಮನಸ್ಸನ್ನು ಒಂದೆಡೆಯಲ್ಲಿ ಕೇಂದ್ರೀಕರಿಸಿಕೊಂಡು, ತುಮುಲಗಳಿಂದ ಬಿಡಿಸಿಕೊಳ್ಳುತ್ತಾ ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸುವ ಅತ್ಯಂತ ಪ್ರಬಲ ಅಸ್ತ್ರವಿದು. ಒತ್ತಡ ಮತ್ತು ಖಿನ್ನತೆಯಂಥ ಮನೋವಿಕಾರಗಳಿಂದ ಇದು ಖಂಡಿತಕ್ಕೂ ನಮ್ಮನ್ನು ರಕ್ಷಿಸಬಲ್ಲದು. ಊಟ, ಸ್ನಾನ, ನಿದ್ದೆಯಂತೆಯೇ ಧ್ಯಾನಕ್ಕೂ ದಿನದ ಒಂದಿಷ್ಟು ನಿಮಿಷಗಳನ್ನು ಮೀಸಲಿಡಿ. ಸತತ ಅಭ್ಯಾಸದಿಂದ ಅಚಲವಾದ ಮಾನಸಿಕ ದೃಢತೆಯನ್ನು ಹೊಂದುವುದು ಖಂಡಿತಾ ಸಾಧ್ಯವಿದೆ.

ಗೆಜೆಟ್‌ಗಳಿಂದ ದೂರವಿರಿ: ದಿನದಲ್ಲಿ ಒಂದಿಷ್ಟು ಹೊತ್ತು ಗೆಜೆಟ್‌ಗಳಿಂದ ಕಡ್ಡಾಯವಾಗಿ ದೂರವಿರುವುದು ಅವಶ್ಯಕ. ಈ ಸಮಯವನ್ನು ಕುಟುಂಬದೊಂದಿಗೆ ಕಳೆಯಬಹುದು, ನಿಮ್ಮಿಷ್ಟದ ಇನ್ನಾವುದೋ ಹವ್ಯಾಸಕ್ಕೆ ಮೀಸಲಿಡಬಹುದು. ಅದರಲ್ಲೂ, ನಿದ್ದೆಗೆ ಮುನ್ನ ಒಂದಿಷ್ಟು ಹೊತ್ತು ಮೊಬೈಲ್‌ ಮುಟ್ಟದಿರುವುದು ನಮ್ಮ ಸ್ವಾಸ್ಥ್ಯದ ದೃಷ್ಟಿಯಿಂದ ಕ್ಷೇಮ. ಆ ನೀಲಿ ಪರದೆಯಿಂದ ಕಣ್ಣಿಗೆ ಮುಕ್ತಿ ನೀಡುವುದು ಮಾತ್ರವಲ್ಲ, ಬೇಡದ ಕೊಳೆಯನ್ನು ಮನಸ್ಸಿನಲ್ಲಿ ತುಂಬಿಸಿ ರಾಡಿಯೆಬ್ಬಿಸಿಕೊಳ್ಳುವ ಅಗತ್ಯವಿಲ್ಲ. ಹಾಸಿಗೆಯಲ್ಲಿ ಉರುಳಿಕೊಂಡು ಒಂದಿಷ್ಟು ಪುಸ್ತಕ ಓದಿ, ರಾತ್ರಿ ಕಣ್ತುಂಬಾ ನಿದ್ರಿಸಿದರೆ, ಮಾರನೇ ದಿನ ನಮ್ಮ ಮನಸ್ಸು ಉಲ್ಲಾಸದಿಂದಿರುತ್ತದೆ.

ನಿಸರ್ಗದ ಸಾಂಗತ್ಯ: ಅಂದರೆ, ನಮ್ಮ ಮೊಬೈಲ್‌ ಅಥವಾ ಲಾಪ್‌ಟಾಪ್‌ನ ಸ್ಕ್ರೀನ್‌ಗೆ ಹಾಕಿಕೊಳ್ಳುವ ನಿಸರ್ಗದ ರಮಣೀಯ ವಾಲ್‌ಪೇಪರ್‌ಗಳಲ್ಲ. ನಾವೇ ನಿಸರ್ಗದೊಂದಿಗೆ ಇರಿಸಿಕೊಳ್ಳುವ ಸಂಪರ್ಕದ ಬಗ್ಗೆ ಹೇಳುತ್ತಿರುವುದು. ನಿಜ, ಮನಸ್ಸಿಗೆ ಬೇಕೆಂದಾಗ ಕಾಡಿನ ನಡುವೆಯೋ ಅಥವಾ ಸಮುದ್ರದ ತೀರದಲ್ಲಿಯೋ ಹೋಗಿ ಕುಳಿತುಕೊಳ್ಳುವುದು ಸಾಧ್ಯವಿಲ್ಲ. ಆದರೆ ಕಿವಿಗೆ ಇಯರ್‌ ಪ್ಲಗ್‌ ಹಾಕದೆಯೇ ಪಾರ್ಕ್‌ನಲ್ಲೊಂದು ಸುತ್ತು ಹಾಕಬಹುದು. ಸಮಯವಿದ್ದಾಗ ನಮ್ಮದೇ ಸುತ್ತಲಿನ ಗಿಡಮರಗಳಲ್ಲಿನ ಪಕ್ಷಿಗಳನ್ನು ವೀಕ್ಷಿಸಬಹುದು. ಸೂರ್ಯೋದಯ ಅಥವಾ ಸೂರ್ಯಾಸ್ತ ವೀಕ್ಷಿಸುವ ಸಾಧ್ಯತೆಯಿದ್ದರೆ ಇನ್ನೂ ಒಳ್ಳೆಯದು. ಚಲಿಸುತ್ತಿರುವ ಮೋಡಗಳೋ ಸುರಿಯುತ್ತಿರುವ ಮಳೆಯೋ ಮನಸ್ಸಿಗೆ ಮುದ ನೀಡಬಹುದು. ಯಾವ್ಯಾವುದೋ ವಿಷಯಕ್ಕೆ ರಚ್ಚೆ ಹಿಡಿಯುವ ನಮ್ಮ ಮನಸ್ಸಿಗೆ ಸಾಂತ್ವನ ಹೇಳುವ ಶಕ್ತಿ ನಿಸರ್ಗಕ್ಕೆ ಇರುವುದಂತೂ ಹೌದು.

ಇದನ್ನೂ ಓದಿ | Mindfulness | ಮನಸ್ಸು ಸದಾ ಕೂಲ್‌ ಆಗಿರಲು ಇಲ್ಲಿದೆ ನೀತಿ ಸಂಹಿತೆ!

ಹೀಗೂ ಮಾಡಬಹುದು: ಕೋಪ, ಹತಾಶೆ, ದ್ವೇಷ, ಕಿರಿಕಿರಿಯಂಥ ನಕಾರಾತ್ಮಕ ಭಾವನೆಗಳು ಪದೇಪದೆ ಮನಸ್ಸನ್ನು ಕಾಡುತ್ತಿವೆಯೇ? ಅವುಗಳನ್ನು ಪ್ರೀತಿಯಿಂದಲೇ ಸ್ವೀಕರಿಸಿ, ಬಂದ ದಾರಿಯಲ್ಲಿ ಹಿಂದಿರುವುದಕ್ಕೆ ಸೂಚಿಸಿ. ಇಂಥ ಸಂದರ್ಭದಲ್ಲಿ ಭಾವನಾತ್ಮಕವಾಗಿ ಸ್ಪಂದಿಸುವುದಕ್ಕಿಂತ, ಕ್ರಿಯಾತ್ಮಕವಾಗಿ ಸ್ಪಂದಿಸುವುದು ಹೆಚ್ಚಿನ ಫಲಿತಾಂಶ ನೀಡುತ್ತದೆ. ಉದಾ, ಯಾರ ಮೇಲೋ ಸಿಟ್ಟಿದೆ ಎಂದರೆ, ಭಾವನೆಗಳಲ್ಲಿ ಮೀಯುತ್ತಾ ಕೂಗಿ-ಕಿರುಚಿ ಅಥವಾ ಅತ್ತು-ಕರೆದು ಮಾಡುವ ಬದಲು, ಬೆವರೊಡೆಯುವಂಥ ಯಾವುದಾದರೂ ಒರಟು ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಒಂದು ತಾಸು ವಾಕಿಂಗ್‌ ಮಾಡಿ/ ಸೈಕಲ್‌ ಹೊಡೆದು, ನಿಮ್ಮಷ್ಟಕ್ಕೇ ಮನಸ್ಸು ಹಗುರ ಮಾಡಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ಮನಸ್ಸನ್ನು ಬೇರೆಡೆ ತಿರುಗಿಸುವುದು ಪ್ರಯೋಜನಕಾರಿ.

ಇಷ್ಟಾಗಿಯೂ ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ? ಒತ್ತಡ, ಕೊರಳುಬ್ಬಿದಂಥ ಅನುಭವ ಮತ್ತೆಮತ್ತೆ ಆಗುತ್ತಿದೆಯೇ? ಬೇಡದ ಆಲೋಚನೆಗಳು ಹೆಡೆ ಎತ್ತಿ ನಿಲ್ಲುತ್ತಿವೆಯೇ? ಖಂಡಿತ ಮನೋವೈದ್ಯರನ್ನು ಕಾಣಿ. ಮನೋವೈದ್ಯರು ಎಂದರೆ ʻಹುಚ್ಚರ ಅಥವಾ ತಲೆ ಸರಿ ಇಲ್ಲದವರʼ ವೈದ್ಯರು ಎಂಬಂಥ ಕಳಂಕಗಳೆಲ್ಲ ಈಗ ಮಗುಚಿಬಿದ್ದಿವೆ. ಈಗಿನ ಒತ್ತಡದ ಬದುಕಿನಲ್ಲಿ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದು ಎಷ್ಟು ಕಷ್ಟ ಮತ್ತು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಅರ್ಥವಾಗುವ ವಿಷಯವೇ. ನಿಮಗೆಂದೇ ಅಲ್ಲ, ನಿಮಗೆ ಬೇಕಾದವರು ನೋವು, ತೊಂದರೆಯಲ್ಲಿದ್ದರೆ ಅವಶ್ಯವಾಗಿ ನೆರವಾಗಿ. ಲೇಖಕ ಫ್ರೆಡ್‌ ರೋಜರ್ಸ್‌ ಅವರ “ನೋವಿಲ್ಲದೆ ಬದುಕಿಲ್ಲ. ಈ ನೋವುಗಳೇ ನಮ್ಮ ಬೆಳಗಣಿಗೆಗೆ ಗ್ರಾಸ ಒದಗಿಸುತ್ತವೆ” ಎಂಬ ಮಾತುಗಳು ಪ್ರಸ್ತುತ ಎನಿಸುವುದಿಲ್ಲವೇ?

ಇದನ್ನೂ ಓದಿ | Spiritual tourism | ದೇಹ, ಮನಸ್ಸುಗಳ ಜತೆಗೆ ಆತ್ಮಕ್ಕೂ ಪ್ರವಾಸ ಬೇಕೆ? ಇಲ್ಲಿವೆ ನೋಡಿ ಐದು ತಾಣಗಳು

Exit mobile version