Site icon Vistara News

Stress Foods to avoid: ಒತ್ತಡ ಹೆಚ್ಚಾಗಿದೆ ಅನಿಸ್ತಿದೆಯಾ? ಅದಕ್ಕೆ ನೀವು ಸೇವಿಸುವ ಈ ಆಹಾರಗಳೂ ಕಾರಣವಿರಬಹುದು!

food for stress

ಆಧುನಿಕ ಜೀವನ ಶೈಲಿ (lifestyle) ಒತ್ತಡವನ್ನು (stress) ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಇದಕ್ಕೆ ನಿದ್ರೆ ಇಲ್ಲದಿರುವುದು (sleeplessness), ಅಧಿಕ ಕೆಲಸದ ಒತ್ತಡ, ಸಂಬಂಧಗಳ ಕಳಪೆ ನಿರ್ವಹಣೆ ಎಲ್ಲವೂ ಕಾರಣವಿರಬಹುದು. ಇದರ ಜತೆಗೆ ನೀವು ಸೇವಿಸುವ ಕೆಲವು ಆಹಾರ ಪದಾರ್ಥಗಳೂ ನಿಮ್ಮ ಆತಂಕದ ಮಟ್ಟವನ್ನು ಉಲ್ಬಣಗೊಳಿಸಬಹುದು ಎಂದರೆ ನಂಬುತ್ತೀರಾ? ಹೌದು. ಪೌಷ್ಟಿಕ ತಜ್ಞರು ಇದನ್ನು ಪ್ರತಿಪಾದಿಸುತ್ತಾರೆ. ಹಾಗಿದ್ದರೆ ಯಾವ ಆಹಾರಗಳು ಒತ್ತಡವನ್ನು ಪ್ರಚೋದಿಸುತ್ತವೆ (Stress Foods to avoid) ಎಂಬುದನ್ನು ನೋಡೋಣ. ಅವುಗಳಿಂದ ತುಸು ದೂರ ಉಳಿದು ನೆಮ್ಮದಿಯನ್ನು (stress relief) ಪಡೆಯೋಣ.

ಸಕ್ಕರೆ ಅಂಶದ ಆಹಾರಗಳು: ಸಿಹಿತಿಂಡಿ, ಸಕ್ಕರೆ ಅಂಶ ಹೆಚ್ಚಿರುವ ಆಹಾರ (sugar items) ಆತಂಕಕ್ಕೆ ಕೊಡುಗೆ ನೀಡುತ್ತವೆ. ಕೇಕ್‌ಗಳು ಮತ್ತು ಪೇಸ್ಟ್ರಿಗಳು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸ್ಪೈಕ್‌ ಮಾಡುತ್ತವೆ. ಅದರೊಂದಿಗೆ ನಿಮ್ಮ ಶಕ್ತಿಯು ಸಹ ಮೇಲಕ್ಕೆ ಕೆಳಕ್ಕೆ ತಾಂಡವವಾಡುತ್ತದೆ. ರಕ್ತದಲ್ಲಿನ ಸಕ್ಕರೆ ಅಧಿಕಗೊಂಡಾಗ ನಿಮ್ಮ ಮನಸ್ಥಿತಿ ಉದ್ವಿಗ್ನವಾಗುತ್ತದೆ. ಆತಂಕದ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ ಸಕ್ಕರೆ ಕಡಿಮೆ ಮಾಡುವ ಬಗ್ಗೆ ಯೋಚಿಸಬೇಕು. ಕೆಚಪ್, ಕೆಲವು ಸಲಾಡ್ ಡ್ರೆಸ್ಸಿಂಗ್‌ಗಳು, ಸ್ಪಾಗೆಟ್ಟಿ ಸಾಸ್‌ಗಳು, ಉಪಾಹಾರಗಳಲ್ಲಿ ಹೆಚ್ಚಿನ ಸಕ್ಕರೆ ಇರುತ್ತೆ. ಕೃತಕ ಸಿಹಿಕಾರಕಗಳನ್ನು ಸಾಮಾನ್ಯವಾಗಿ ಸಕ್ಕರೆಗೆ ಪರ್ಯಾಯವಾಗಿ ಶಿಫಾರಸು ಮಾಡಲಾಗುತ್ತೆ. ಆದರೆ ಇದೂ ಸರಿಯಲ್ಲ. ಆದರೆ ಪೌಷ್ಟಿಕವಲ್ಲದ ಸಿಹಿಕಾರಕಗಳು ದೇಹದಲ್ಲಿ ಉರಿಯೂತ ಮತ್ತು ಒತ್ತಡವನ್ನು ಹೆಚ್ಚಿಸುತ್ತವೆ.

ಕೆಫೀನ್‌ ಅಪಾಯಕರ: ಹೆಚ್ಚು ಕೆಫೀನ್ (caffeine) ದೇಹವನ್ನು ಅತಿಯಾಗಿ ಪ್ರಚೋದಿಸುತ್ತದೆ. ಆ ಮೂಲಕ ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳಿಗೆ ತೊಂದರೆ ಉಂಟುಮಾಡಬಹುದು. ಇದು ನರಮಂಡಲವನ್ನು ಉತ್ತೇಜಿಸುತ್ತದೆ, ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಹೆಚ್ಚಳ ಉಂಟುಮಾಡುತ್ತದೆ. ಅಂತಿಮವಾಗಿ ಆತಂಕದ ಭಾವನೆಗಳನ್ನು ಹೆಚ್ಚಿಸುತ್ತದೆ. ಯಾಕೆಂದರೆ ಸಿರೊಟೋನಿನ್ ಅನ್ನು ಉತ್ಪಾದಿಸುವ ದೇಹದ ಸಾಮರ್ಥ್ಯವನ್ನು ಕೆಫೀನ್‌ ಪ್ರತಿಬಂಧಿಸುತ್ತದೆ. ಸಣ್ಣ ಪ್ರಮಾಣದಲ್ಲಿ ತೆಗೆದುಕೊಳ್ಳುವ ಕೆಫೀನ್ ಸುರಕ್ಷಿತ. ಮಿತಿಮೀರಿದರೆ ಅನಪೇಕ್ಷಿತ ಅಡ್ಡ ಪರಿಣಾಮ ಖಚಿತ. ದಿನಕ್ಕೆ 400 ಮಿ.ಗ್ರಾಂವರೆಗೆ ಕೆಫೀನ್ ಓಕೆ. ಚಹಾ, ಕಾಫಿ, ಚಾಕೊಲೇಟ್ ಮತ್ತು ಕೆಲವು ತಲೆನೋವಿನ ಔಷಧಿಗಳಲ್ಲಿ ಕೆಫೀನ್ ಇರುತ್ತೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು: ಇವು (processed carbohydrates) ದೇಹದ ಉರಿಯೂತವನ್ನು ಉಲ್ಬಣಗೊಳಿಸುತ್ತವೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಒದಗಿಸುತ್ತವೆ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಹೊಂದಿರುವ ಆಹಾರಗಳಲ್ಲಿ ಫೈಬರ್ ಮತ್ತು ಸೂಕ್ಷ್ಮ ಪೋಷಕಾಂಶ ಇರುವುದಿಲ್ಲ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌, ಸಂಸ್ಕರಿಸಿದ ಧಾನ್ಯ ಸೇವಿಸುವವರು ಆತಂಕ ಮತ್ತು ಖಿನ್ನತೆ ಅನುಭವಿಸಬಹುದು. ಇದನ್ನು ಹೆಚ್ಚು ಸೇವಿಸುವ ಜನ ಸ್ಥೂಲಕಾಯಕ್ಕೆ ಸಹ ಒಳಗಾಗಬಹುದು. ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯಕ್ಕೂ ಇದು ಮೂಲ.

ಕರಿದ ಆಹಾರ: ಕರಿದ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಟ್ರಾನ್ಸ್ ಕೊಬ್ಬು ಇರುತ್ತದೆ. ಟ್ರಾನ್ಸ್ ಕೊಬ್ಬು ನಿಮ್ಮ ದೇಹದಲ್ಲಿ ಉರಿಯೂತಕ್ಕೆ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಉರಿಯೂತದ ಸ್ಥಿತಿ ಉಂಟಾದಾಗ ಒತ್ತಡದ ಮಟ್ಟ ಹೆಚ್ಚಾಗುತ್ತದೆ.

ಆಲ್ಕೋಹಾಲ್:‌ ಆತಂಕ ಕಡಿಮೆ ಮಾಡಲು ಕೆಲವರು ಆಲ್ಕೋಹಾಲ್‌ (alcohol) ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಕೆಟ್ಟದು. ಯಾಕೆಂದರೆ ಆಲ್ಕೋಹಾಲ್ ನಿಮ್ಮ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ ನರಗಳನ್ನು ಶಾಂತಗೊಳಿಸುವ ಬದಲು ಉದ್ರೇಕಿಸುತ್ತದೆ. ಸೆರೊಟೋನಿನ್ ಮತ್ತು ಮೆದುಳಿನಲ್ಲಿರುವ ಇತರ ಹಾರ್ಮೋನ್‌ಗಳು ಆಲ್ಕೋಹಾಲ್‌ನಿಂದ ಬದಲಾಗುತ್ತವೆ. ಇದು ಚಿಂತೆಯನ್ನು ಉಲ್ಬಣಗೊಳಿಸುತ್ತದೆ.

ಇದನ್ನೂ ಓದಿ: Neck Pain: ಬದುಕಿನಲ್ಲಿ ಒತ್ತಡ ಹೆಚ್ಚಾಗಿ ಕುತ್ತಿಗೆ ನೋವೇ? ಇವು ನೆರವಾಗಬಹುದು.

Exit mobile version