Site icon Vistara News

Summer Drinks: ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ತಂಪಾದ ದೇಸೀ ಪಾನೀಯಗಳಿವು

juice

ಬೇಸಿಗೆ ಬರುತ್ತಿದ್ದಂತೆ ದೇಹ ತಂಪಾಗಿರಿಸಬಲ್ಲ ಪೇಯಗಳತ್ತ ನಾವು ಮುಖ ಮಾಡಬೇಕಾಗುತ್ತದೆ. ನಿತ್ಯವೂ ಎಳನೀರು, ತಾಳೆಹಣ್ಣು, ಕಲ್ಲಂಗಡಿ, ಖರ್ಬೂಜ ಇತ್ಯಾದಿಗಳನ್ನು ತಿಂದು ಕುಡಿದು ಮಾಡುವುದು ಸಾಮಾನ್ಯ. ವಿಪರೀತ ಬಿಸಿಲಿನ ಝಳಕ್ಕೆ ಏನಾದರೊಂದು ಹೊಸ ಪೇಯ ಮಾಡಬೇಕು, ಆದೇ ಕಲ್ಲಂಗಡಿ, ಅದೇ ಖರ್ಬೂಜ ತಿಂದು ಬೋರಾಯಿತು, ಅದನ್ನೇ ಎಷ್ಟು ತಿನ್ನುವುದು ಎಂದು ಯೋಚಿಸುತ್ತಿದ್ದೀರಾದರೆ, ಇಲ್ಲಿ ಇನ್ನೂ ಕೆಲವು ತಂಪಾಗಿಸುವ ಜೊತೆಗೆ ಹೊಟ್ಟೆಯನ್ನೂ ತುಂಬಿಸುವ ಪಾನೀಯಗಳಿವೆ. ಬೇಸಿಗೆಯಲ್ಲಿ ಎಲ್ಲರೂ ಆಗಾಗ ಮಾಡಬಹುದಾದ ಪ್ರೊಟೀನ್ ಹಾಗೂ ಪೋಷಕಾಂಶಗಳಿಂದಲೂ ಸಂಪದ್ಭರಿತವಾಗಿರುವ ಈ ಪೇಯಗಳು ದೇಹಕ್ಕೆ ತಂಪು, ಮನಸ್ಸಿಗೂ ಹಿತ.

ಸತ್ತು ಅಥವಾ ಚೆನ್ನಾ ಶರಬತ್ತು: ಉತ್ತರ ಭಾರತದಲ್ಲಿ ಸತ್ತು ಎಂದು ಕರೆಯಲ್ಪಡುವ ಕಡಲೆ ಅಥವಾ ಚೆನ್ನಾಕಾಳಿನ ಶರಬತ್ತು ಕೂಡಾ ಬಿಸಿಲಿನ ಝಳಕ್ಕೆ ಅತ್ಯುತ್ತಮ ಪೇಯ. ಮೂರ್ನಾಲ್ಕು ಚಮಚ ಕಡಲೆ ಬೇಳೆ ಅಥವಾ ಚೆನ್ನಾವನ್ನು ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿದುಕೊಂಡು ತಣಿಸಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. ಇದಕ್ಕೆ ಬೆಲ್ಲ, ಅಥವಾ ಸಕ್ಕರೆ, ಸೇರಿಸಿ ರುಬ್ಬಿಕೊಳ್ಳಿ. ನಂತರ ಇದನ್ನು ನೀರಿಗೆ ಹಾಕಿ ಗಂಟಾಗದಂತೆ ಕಲಕಿ, ಆಥವಾ ಬೇಕಿದ್ದರೆ ಮಿಕ್ಸಿಯಲ್ಲೊಮ್ಮೆ ತಿರುಗಿಸಿ. ಕೊಂಚ ನಿಂಬೆರಸ, ಜೀರಿಗೆಪುಡಿ ಸೇರಿಸಿ. ಘಮಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಸೇರಿಸಿ. ರುಚಿಯಾದ ದೇಹಕ್ಕೆ ತಂಪೆನಿಸುವ ಸತ್ತು ಪೇಯ ರೆಡಿ. ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ಜನಪ್ರಿಯ ಪೇಯವಿದು.

ಎಳ್ಳಿನ ಜ್ಯೂಸ್‌: ಮೂರರಿಂದ ನಾಲ್ಕು ಚಮಚ ಎಳ್ಳು, ರುಚಿಗೆ ತಕ್ಷ್ಟು ಬೆಲ್ಲ, ಚಿಟಿಕೆ ಏಲಕ್ ಹಾಗೂ ಒಂದೆರಡು ಚಮಚ ತುರಿದ ತೆಂಗಿನಕಾಯಿ ಇದ್ದರೆ ಅತ್ಯದ್ಭುತ ರುಚಿಯ ತಂಪಾದ ಎಳ್ಳಿನ ಜ್ಯೂಸ್‌ ತಯಾರಿಸಿಕೊಳ್ಳಬಹುದು. ಮೂರ್ನಾಲ್ಕು ಚಮಚ ಎಳ್ಳನ್ನು ಬಾಣಲೆಯಲ್ಲಿ ಹುರಿದುಕೊಂಡು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ, ಇದಕ್ಕೆ ಕೊಂಚ ಏಲಕ್ಕಿ, ತುರಿದ ತೆಂಗಿನಕಾಯಿ ಹಾಕಿ ರುಬ್ಬಿ. ಅದು ಚೆನ್ನಾಗಿ ಪುಡಿಯಾದ ಮೇಲೆ ಅದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಈಗ ಸೋಸಿಕೊಂಡು ಹೆಚ್ಚಿಗೆ ನೀರು ಬೇಕಿದ್ದರೆ ಸೇರಿಸಿ ಕುಡಿಯಬಹುದು. ಬೆಲ್ಲ ಬೇಡದಿದ್ದರೆ ಬೆಲ್ಲದ ಬದಲಿಗೆ ಜೇನುತುಪ್ಪವನ್ನೂ ಸೇರಿಸಬಹುದು. ದೇಹಕ್ಕೆ ತಂಪಾಗಿರುವ ರುಚಿಯೂ ಹೌದು. ತೆಂಗಿನ ತುರಿಯ ಬದಲಿಗೆ ಹಾಲು ಸೇರಿಸಿಯೂ ಮಾಡಿಕೊಂಡು ಕುಡಿಯಬಹುದು.

ಹೆಸರುಕಾಳಿನ ಜ್ಯೂಸ್‌: ಕಾಲು ಕಪ್‌ ಹೆಸರು ಕಾಳು, ಎರಡು ಮೂರು ಚಮಚ ತೆಂಗಿನ ತುರಿ, ಘಮಕ್ಕೆ ಚಿಟಿಕೆ ಏಲಕ್ಕಿ  ಹಾಗೂ ಸಿಹಿರುಚಿಗೆ ಬೆಲ್ಲ ಅಥವಾ ಸಕ್ಕರೆ ಇಷ್ಟಿದ್ದರೆ ಸಾಕು, ಈ ತಂಪಾದ ಪಾನೀಯ ಸರಳವಾಗಿ ಮಾಡಿ ಕುಡಿಯಬಹುದು. ಕಾಲು ಕಪ್‌ ಹೆಸರುಕಾಳನ್ನು ಬಾಣಲೆಯಲ್ಲಿ ಹುರಿಯಿರಿ. ಕಾಳಿನ ಘಮ ಬದಲಾಗಿ ಹುರಿದ ಪರಿಮಳ ಮೂಗಿಗೆ ಅಡರುವಾಗ, ಕಂದು ಬಣ್ಣಕ್ಕೆ ತಿರುಗಲು ಆರಂಭವಾಗುವ ಹೊತ್ತಿಗೆ ಒಲೆಯ ಉರಿ ಆರಿಸಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಹಾಕಿ ಹುಡಿಮಾಡಿ. ಬೆಲ್ಲ ಹಾಗೂ ತೆಂಗಿನ ತುರಿಯನ್ನೂ ಸೇರಿಸಿ ಏಲಕ್ಕಿಯನ್ನು ಸೇರಿಸಿ ನೀರು ಹಾಕಿ ಮಿಕ್ಸಿ ತಿರುಗಿಸಿ. ಬೇಕಿದ್ದರೆ ಐಸ್‌ ಸೇರಿಸಿ ಸೋಸಿಕೊಳ್ಳಿ. ಬೇಸಿಗೆಯ ಧಗೆಗೆ ಪ್ರೊಟೀನ್‌ಯುಕ್ತ ಈ ಪಾನೀಯ ತಂಪು ಕೂಡಾ. ಜೊತೆಗೆ ರುಚಿಯೂ ಹೌದು.

Energy Drinks: ಅತೀವ ಸುಸ್ತಿಗೆ ಇಲ್ಲಿವೆ ಚೈತನ್ಯದಾಯಕ ಪಾನೀಯಗಳು!ಇದನ್ನೂ ಓದಿ:

Exit mobile version