ಆಹಾರ/ಅಡುಗೆ
Summer Drinks: ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ತಂಪಾದ ದೇಸೀ ಪಾನೀಯಗಳಿವು
ತಂಪಾಗಿಸುವ ಜೊತೆಗೆ ಹೊಟ್ಟೆಯನ್ನೂ ತುಂಬಿಸುವ ಪಾನೀಯಗಳಿವೆ. ಬೇಸಿಗೆಯಲ್ಲಿ ಎಲ್ಲರೂ ಆಗಾಗ ಮಾಡಬಹುದಾದ ಪ್ರೊಟೀನ್ ಹಾಗೂ ಪೋಷಕಾಂಶಗಳಿಂದಲೂ ಸಂಪದ್ಭರಿತವಾಗಿರುವ ಈ ಪೇಯಗಳು ದೇಹಕ್ಕೆ ತಂಪು, ಮನಸ್ಸಿಗೂ ಹಿತ.
ಬೇಸಿಗೆ ಬರುತ್ತಿದ್ದಂತೆ ದೇಹ ತಂಪಾಗಿರಿಸಬಲ್ಲ ಪೇಯಗಳತ್ತ ನಾವು ಮುಖ ಮಾಡಬೇಕಾಗುತ್ತದೆ. ನಿತ್ಯವೂ ಎಳನೀರು, ತಾಳೆಹಣ್ಣು, ಕಲ್ಲಂಗಡಿ, ಖರ್ಬೂಜ ಇತ್ಯಾದಿಗಳನ್ನು ತಿಂದು ಕುಡಿದು ಮಾಡುವುದು ಸಾಮಾನ್ಯ. ವಿಪರೀತ ಬಿಸಿಲಿನ ಝಳಕ್ಕೆ ಏನಾದರೊಂದು ಹೊಸ ಪೇಯ ಮಾಡಬೇಕು, ಆದೇ ಕಲ್ಲಂಗಡಿ, ಅದೇ ಖರ್ಬೂಜ ತಿಂದು ಬೋರಾಯಿತು, ಅದನ್ನೇ ಎಷ್ಟು ತಿನ್ನುವುದು ಎಂದು ಯೋಚಿಸುತ್ತಿದ್ದೀರಾದರೆ, ಇಲ್ಲಿ ಇನ್ನೂ ಕೆಲವು ತಂಪಾಗಿಸುವ ಜೊತೆಗೆ ಹೊಟ್ಟೆಯನ್ನೂ ತುಂಬಿಸುವ ಪಾನೀಯಗಳಿವೆ. ಬೇಸಿಗೆಯಲ್ಲಿ ಎಲ್ಲರೂ ಆಗಾಗ ಮಾಡಬಹುದಾದ ಪ್ರೊಟೀನ್ ಹಾಗೂ ಪೋಷಕಾಂಶಗಳಿಂದಲೂ ಸಂಪದ್ಭರಿತವಾಗಿರುವ ಈ ಪೇಯಗಳು ದೇಹಕ್ಕೆ ತಂಪು, ಮನಸ್ಸಿಗೂ ಹಿತ.
ಸತ್ತು ಅಥವಾ ಚೆನ್ನಾ ಶರಬತ್ತು: ಉತ್ತರ ಭಾರತದಲ್ಲಿ ಸತ್ತು ಎಂದು ಕರೆಯಲ್ಪಡುವ ಕಡಲೆ ಅಥವಾ ಚೆನ್ನಾಕಾಳಿನ ಶರಬತ್ತು ಕೂಡಾ ಬಿಸಿಲಿನ ಝಳಕ್ಕೆ ಅತ್ಯುತ್ತಮ ಪೇಯ. ಮೂರ್ನಾಲ್ಕು ಚಮಚ ಕಡಲೆ ಬೇಳೆ ಅಥವಾ ಚೆನ್ನಾವನ್ನು ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿದುಕೊಂಡು ತಣಿಸಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. ಇದಕ್ಕೆ ಬೆಲ್ಲ, ಅಥವಾ ಸಕ್ಕರೆ, ಸೇರಿಸಿ ರುಬ್ಬಿಕೊಳ್ಳಿ. ನಂತರ ಇದನ್ನು ನೀರಿಗೆ ಹಾಕಿ ಗಂಟಾಗದಂತೆ ಕಲಕಿ, ಆಥವಾ ಬೇಕಿದ್ದರೆ ಮಿಕ್ಸಿಯಲ್ಲೊಮ್ಮೆ ತಿರುಗಿಸಿ. ಕೊಂಚ ನಿಂಬೆರಸ, ಜೀರಿಗೆಪುಡಿ ಸೇರಿಸಿ. ಘಮಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಸೇರಿಸಿ. ರುಚಿಯಾದ ದೇಹಕ್ಕೆ ತಂಪೆನಿಸುವ ಸತ್ತು ಪೇಯ ರೆಡಿ. ಉತ್ತರ ಭಾರತದಲ್ಲಿ ಬೇಸಿಗೆಯಲ್ಲಿ ಜನಪ್ರಿಯ ಪೇಯವಿದು.
ಎಳ್ಳಿನ ಜ್ಯೂಸ್: ಮೂರರಿಂದ ನಾಲ್ಕು ಚಮಚ ಎಳ್ಳು, ರುಚಿಗೆ ತಕ್ಷ್ಟು ಬೆಲ್ಲ, ಚಿಟಿಕೆ ಏಲಕ್ ಹಾಗೂ ಒಂದೆರಡು ಚಮಚ ತುರಿದ ತೆಂಗಿನಕಾಯಿ ಇದ್ದರೆ ಅತ್ಯದ್ಭುತ ರುಚಿಯ ತಂಪಾದ ಎಳ್ಳಿನ ಜ್ಯೂಸ್ ತಯಾರಿಸಿಕೊಳ್ಳಬಹುದು. ಮೂರ್ನಾಲ್ಕು ಚಮಚ ಎಳ್ಳನ್ನು ಬಾಣಲೆಯಲ್ಲಿ ಹುರಿದುಕೊಂಡು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ, ಇದಕ್ಕೆ ಕೊಂಚ ಏಲಕ್ಕಿ, ತುರಿದ ತೆಂಗಿನಕಾಯಿ ಹಾಕಿ ರುಬ್ಬಿ. ಅದು ಚೆನ್ನಾಗಿ ಪುಡಿಯಾದ ಮೇಲೆ ಅದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಈಗ ಸೋಸಿಕೊಂಡು ಹೆಚ್ಚಿಗೆ ನೀರು ಬೇಕಿದ್ದರೆ ಸೇರಿಸಿ ಕುಡಿಯಬಹುದು. ಬೆಲ್ಲ ಬೇಡದಿದ್ದರೆ ಬೆಲ್ಲದ ಬದಲಿಗೆ ಜೇನುತುಪ್ಪವನ್ನೂ ಸೇರಿಸಬಹುದು. ದೇಹಕ್ಕೆ ತಂಪಾಗಿರುವ ರುಚಿಯೂ ಹೌದು. ತೆಂಗಿನ ತುರಿಯ ಬದಲಿಗೆ ಹಾಲು ಸೇರಿಸಿಯೂ ಮಾಡಿಕೊಂಡು ಕುಡಿಯಬಹುದು.
ಹೆಸರುಕಾಳಿನ ಜ್ಯೂಸ್: ಕಾಲು ಕಪ್ ಹೆಸರು ಕಾಳು, ಎರಡು ಮೂರು ಚಮಚ ತೆಂಗಿನ ತುರಿ, ಘಮಕ್ಕೆ ಚಿಟಿಕೆ ಏಲಕ್ಕಿ ಹಾಗೂ ಸಿಹಿರುಚಿಗೆ ಬೆಲ್ಲ ಅಥವಾ ಸಕ್ಕರೆ ಇಷ್ಟಿದ್ದರೆ ಸಾಕು, ಈ ತಂಪಾದ ಪಾನೀಯ ಸರಳವಾಗಿ ಮಾಡಿ ಕುಡಿಯಬಹುದು. ಕಾಲು ಕಪ್ ಹೆಸರುಕಾಳನ್ನು ಬಾಣಲೆಯಲ್ಲಿ ಹುರಿಯಿರಿ. ಕಾಳಿನ ಘಮ ಬದಲಾಗಿ ಹುರಿದ ಪರಿಮಳ ಮೂಗಿಗೆ ಅಡರುವಾಗ, ಕಂದು ಬಣ್ಣಕ್ಕೆ ತಿರುಗಲು ಆರಂಭವಾಗುವ ಹೊತ್ತಿಗೆ ಒಲೆಯ ಉರಿ ಆರಿಸಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಹಾಕಿ ಹುಡಿಮಾಡಿ. ಬೆಲ್ಲ ಹಾಗೂ ತೆಂಗಿನ ತುರಿಯನ್ನೂ ಸೇರಿಸಿ ಏಲಕ್ಕಿಯನ್ನು ಸೇರಿಸಿ ನೀರು ಹಾಕಿ ಮಿಕ್ಸಿ ತಿರುಗಿಸಿ. ಬೇಕಿದ್ದರೆ ಐಸ್ ಸೇರಿಸಿ ಸೋಸಿಕೊಳ್ಳಿ. ಬೇಸಿಗೆಯ ಧಗೆಗೆ ಪ್ರೊಟೀನ್‌ಯುಕ್ತ ಈ ಪಾನೀಯ ತಂಪು ಕೂಡಾ. ಜೊತೆಗೆ ರುಚಿಯೂ ಹೌದು.
Energy Drinks: ಅತೀವ ಸುಸ್ತಿಗೆ ಇಲ್ಲಿವೆ ಚೈತನ್ಯದಾಯಕ ಪಾನೀಯಗಳು!ಇದನ್ನೂ ಓದಿ:
ಆಹಾರ/ಅಡುಗೆ
Food Tips: ಡಯಟ್‌ನಲ್ಲಿದ್ದೂ ಪಾನಿಪುರಿ ತಿನ್ನಬೇಕೇ? ಡಯಟ್ ಫ್ರೆಂಡ್ಲೀ ಪಾನಿಪುರಿಗೆ ಕೆಲವು ಸಲಹೆಗಳು!
ಮನೆಯಲ್ಲಿ ಪಾನಿಪುರಿ ಮಾಡಲು ಹೊರಟವರು, ಆದಷ್ಟೂ ಆರೋಗ್ಯಕರ ರೀತಿಯಲ್ಲಿ, ತೂಕ ಇಳಿಸಿಕೊಳ್ಳುವ ಡಯಟ್‌ಗೆ ಸರಿಹೊಂದುವಂತೆ ಹೇಗೆ ಮಾಡಿ ತಿನ್ನಬಹುದೆಂಬ ಸರಳ ಸೂತ್ರಗಳು ಇಲ್ಲಿವೆ.
ತೂಕ ಇಳಿಸಿಕೊಳ್ಳುವುದೇನೂ ಸರಳವಲ್ಲ. ಹಾಗಂತ ಶಿಸ್ತಿನ ಜೀವನಶೈಲಿ, ಆಹಾರ ಪದ್ಧತಿ ಹಾಗೂ ವ್ಯಾಯಾಮದಿಂದ ಆರೋಗ್ಯಕರ ಶೈಲಿಯಲ್ಲಿಯೇ ತೂಕ ಇಳಿಸಿಕೊಳ್ಳಲು ಸಾದ್ಯವಿದೆ. ಆದರೆ ತೂಕ ಇಳಿಸಿಕೊಳ್ಳುವ, ಜಂಕ್‌ನಿಂದ ದೂರವಿರುವ ನಿಶ್ಚಯ ಮಾಡಿಕೊಂಡಮೇಳೆ ಬಹಳ ಜನರನ್ನು ಸೆಳೆಯುವುದು ಸ್ಟ್ರೀಟ್ ಫುಡ್. ಬೀದಿ ಬದಿಯ ಚಾಟ್‌ಗಳಿಂದ ದೂರವಿರಬೇಕೆಂದರೆ ಅದಕ್ಕೆ ಮನೋಬಲವೂ ಬೇಕು. ಯಾಕೆಂದರೆ ಬೀದಿಬದಿಯ ಚಾಟ್‌ಗಳು, ತಿಂಡಿಗಳು ಇಂದು ಬಹುತೇಕರ ಆಹಾರಸಂಸ್ಕೃತಿಯಲ್ಲಿ ಸೇರಿಹೋಗಿದೆ. ವಾರಕ್ಕೊಮ್ಮೆಯಾದರೂ ಗೋಲ್‌ಗಪ್ಪಾ, ಪಾನಿಪುರಿ, ಮಸಾಲೆಪುರಿಗಳಿಲ್ಲದೆ ಜೀವನ ಹೇಗೆ ಎಂಬ ಯೋಚನೆ ಬಹುತೇಕರಿಗೆ ಬಂದೀತು. ಹಾಗಾದರೆ, ಬಾಯಿಚಪಲಕ್ಕಾದರೂ ಪಾನಿಪುರಿ ತಿನ್ನಬೇಕು ಅನಿಸಿದವರು ಮನೆಯಲ್ಲಿ ಪಾನಿಪುರಿ ಮಾಡಲು ಹೊರಟವರು, ಆದಷ್ಟೂ ಆರೋಗ್ಯಕರ ರೀತಿಯಲ್ಲಿ, ತೂಕ ಇಳಿಸಿಕೊಳ್ಳುವ ಡಯಟ್‌ಗೆ ಸರಿಹೊಂದುವಂತೆ ಹೇಗೆ ಮಾಡಿ ತಿನ್ನಬಹುದೆಂಬ ಸರಳ ಸೂತ್ರಗಳು ಇಲ್ಲಿವೆ. ಈ ತಂತ್ರಗಳನ್ನು ಅನುಸರಿಸಿದರೆ, ನಿಶ್ಚಿಂತೆಯಿಂದ ಆರೋಗ್ಯಕರ ಪಾನಿಪುರಿ ತೂಕ ಹೆಚ್ಚಿಸಿಕೊಳ್ಳುವ ಭಯವಿಲ್ಲದೆ ನಿಮ್ಮ ಹೊಟ್ಟೆ ಸೇರುತ್ತದೆ.
೧. ಪುರಿ ಮನೆಯಲ್ಲೇ ಮಾಡಿ: ರಸ್ತೆಬದಿಯಲ್ಲಿ ದೊರೆಯುವ ಪಾನಿಪುರಿ ರುಚಿಯಾಗಿರುತ್ತದೆ ನಿಜ. ಅದನ್ನೇ ವಾರದಲ್ಲಿ ಎರಡು ಬಾರಿ ಹೊಟ್ಟೆ ತುಂಬಿಸಿದರೆ ಏನಾಗಬಹುದು ಹೇಳಿ! ರಸ್ತೆಬದಿಯ ಪುರಿ ಮಾಡಲು ಯಾವ ಎಣ್ಣೆಯನ್ನು ಬಳಸಿರಬಹುದು ಎಂಬ ಯೋಚನೆ ಬಂದರಂತೂ ಕಥೆ ಮುಗಿಯಿತು. ಅದಕ್ಕಾಗಿಯೇ ಪುರಿಯನ್ನು ಯಾಕೆ ನೀವು ಮನೆಯಲ್ಲೇ ಮಾಡಬಾರದು? ಮನೆಯಲ್ಲಿಯೇ ಎಣ್ಣೆಹಾಕದೆ ಏರ್ ಫ್ರೈಯರ್‌ನಲ್ಲೋ ಅಥವಾ ಒಳ್ಳೆ ಎಣ್ಣೆಯಲ್ಲೋ ನೀವೇ ಮಾಡಿದರೆ ಹೊರಗೆ ತಿನ್ನುವ ಪುರಿಗಳಿಗಿಂತ ಒಳ್ಳೆಯದೇ!
೨. ಆಲೂಗಡ್ಡೆ ಕಡಿಮೆ ಹಾಕಿ: ಪಾನಿಪುರಿಯ ಒಳಗೆ ಹಾಕುವ ಬೇಯಿಸಿದ ಆಲೂಗಡ್ಡೆಯ ಮಸಾಲೆ ಮಾಡುವಾಗ ಅದರ ಪ್ರಮಾಣವನ್ನು ಕಡಿಮೆ ಮಾಡಿ. ಅಥವಾ ಆಲೂಗಡ್ಡೆಯ ಬದಲಾಗಿ ಬೇಯಿಸಿದ ಚೆನ್ನಾ ಹಾಕಬಹುದು. ಅದಕ್ಕೆ ಮೊಳಕೆ ಕಾಳುಗಳನ್ನು ಸೇರಿಸಬಹುದು.
ಇದನ್ನೂ ಓದಿ: Food Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?
೩. ಮಸಾಲೆಗಳನ್ನು ಧಾರಾಳವಾಗಿ ಬಳಸಿ: ಮನೆಯಲ್ಲೇ ಮಾಡುವ ಪಾನಿಪುರಿಯ ಪಾನಿಗೆ ಹಾಗೂ ಸಿಹಿ ಚಟ್ನಿಗೆ ಧಾರಾಳವಾಗಿ ಮಸಾಲೆಗಳನ್ನು ಹಾಕಿ. ಹುಣಸೆಹಣ್ಣು, ಖರ್ಜೂರ ಸೇರಿಸಿ ಮಾಡಿದ ಸಿಹಿ ಚಟ್ನಿ, ಚೆನ್ನಾಗಿ ಪುದಿನ ಕೊತ್ತಂಬರಿ ಸೊಪ್ಪು ಹಾಕಿದ ಹಸಿರು ಚಟ್ನಿ, ಇಂಗು, ಸೋಂಪು, ಜೀರಿಗೆ, ಸೈಂದವ ಲವಣ, ಜಲ್ಜೀರಾ ಇತ್ಯಾದಿಗಳನ್ನು ಹಾಕಿ ಮಾಡಿದ ಪಾನಿ ಎಲ್ಲವೂ ಉತ್ತಮ ಗುಣಮಟ್ಟದ್ದು, ನಿಮ್ಮದೇ ಮನೆಯದ್ದು ಎಂಬ ಭರವಸೆ, ನೆಮ್ಮದಿಯೂ ನಿಮ್ಮಲ್ಲಿರುತ್ತದೆ. ಈ ಎಲ್ಲ ಮಸಾಲೆಗಳು ದೇಹಕ್ಕೆ ಒಳ್ಳೆಯದೇ.
೪. ಕಡಿಮೆ ತಿನ್ನಿ: ಪಾನಿಪುರಿಯ ಒಂದು ವಿಶೇಷತೆಯೆಂದರೆ ಅದು ಹೆಚ್ಚು ಕ್ಯಾಲರಿಯ ತಿನಿಸಲ್ಲ. ಆದನ್ನು ಆರೋಗ್ಯಕರವಾದ ಶೈಲಿಯಲ್ಲಿ ಮಾಡಿದರೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಿನ್ನಬಹುದು. ಬರ್ಗರ್, ಪಿಜ್ಜಾ, ಮಂಚೂರಿಯನ್, ಚೀಸ್ ಕಾರ್ನ್ ರೋಲ್ ಮತ್ತಿತರ ಜಂಕ್‌ಗಳಿಗೆ ಹೋಲಿಸಿದರೆ, ಇದು ಅಷ್ಟು ಕ್ಯಾಲರಿಯನ್ನು ಹೊಂದಿಲ್ಲ ನಿಜ. ಆದರೆ, ತಿನ್ನುವಾಗಿ ರುಚಿಯೆಂದು ಹೊಟ್ಟೆಯ ಮೇಲಿನ ಗಮನ ಬೇರೆಡೆಗೆ ಹೋಗದಿರಲಿ. ಹೊಟ್ಟೆಯ, ನಾಲಿಗೆಯ ಮಾತು ಕೇಳದೆ ನೀವು ಅಂದುಕೊಂಡದ್ದರ ಬಗ್ಗೆ ಯೋಚಿಸಿ.
ಇದನ್ನೂ ಓದಿ: Motivation: ಬಿ ಟೆಕ್ ಪಾನಿಪುರಿವಾಲಿ: ದೆಹಲಿಯ ರಸ್ತೆಗಳಲ್ಲಿ 21ರ ಹುಡುಗಿಯ ಯಶಸ್ವಿ ಉದ್ಯಮ!
ಆಹಾರ/ಅಡುಗೆ
Ram Navami 2023: ರಾಮನವಮಿಯ ದಿನ ಮನೆಯಲ್ಲೇ ಮಾಡಬಹುದಾದ ರಾಮನ ಪ್ರಿಯವಾದ ಭಕ್ಷ್ಯಗಳಿವು!
ರಾಮನಿಗೆ ಪ್ರಿಯವಾದ ಭಕ್ಷ್ಯಗಳನ್ನು ಮನೆಯಲ್ಲೇ ಮಾಡುವುದು ಹಬ್ಬದ ಖುಷಿಗಳಲ್ಲೊಂದು. ಹಾಗಾಗಿ ರಾಮನವಮಿಯ (Ram Navami 2023) ಪ್ರಮುಖ ಭಕ್ಷ್ಯಗಳನ್ನು ಇಲ್ಲಿ ನೋಡೋಣ.
ಮರ್ಯಾದಾ ಪುರುಷೋತ್ತಮ ರಾಮನ ಹುಟ್ಟುಹಬ್ಬ (Ram Navami 2023) ಎಂದರೆ, ಭಾರತದ ಪ್ರಮುಖ ಹಬ್ಬಗಳಲ್ಲೊಂದು. ರಾಮನಿಗೆ ಪ್ರಿಯವಾದ ಭಕ್ಷ್ಯಗಳನ್ನು ಮನೆಯಲ್ಲೇ ಮಾಡುವುದು ಹಬ್ಬದ ಖುಷಿಗಳಲ್ಲೊಂದು. ಹಬ್ಬದ ಹೆಸರಿನಲ್ಲಿ ಇಂದು ಪುರಾತನ, ತಲೆತಲಾಂತರಗಳಿಂದ ನಡೆದುಬಂದ ದೇಸೀ ತಿನಿಸುಗಳನ್ನು ಮಾಡಲು ಪ್ರಯತ್ನಿಸುವುದು ಹಾಗೂ ಸಂಪ್ರದಾಯ, ಆಚರಣೆ, ಸಂಸ್ಕೃತಿಯನ್ನು ಜೀವಂತವಾಗಿರುಸುವುದನ್ನು ನಮ್ಮ ಕಿರಿಯರಿಗೆ ದಾಟಿಸುವುದೂ ಕೂಡಾ ಅತ್ಯಂತ ಅಗತ್ಯ. ಹಾಗಾಗಿ ರಾಮನವಮಿಯ ಪ್ರಮುಖ ಭಕ್ಷ್ಯಗಳನ್ನು ಇಲ್ಲಿ ನೋಡೋಣ.
೧. ಕೋಸಂಬರಿ ಹಾಗೂ ಪಾನಕ: ಸಲಾಡ್ ಅಥವಾ ಕೋಸಂಬರಿ ಹಾಗೂ ತಂಪು ಪಾನೀಯ ಪಾನಕ ರಾಮನವಮಿಯ ವಿಶೇಷತೆಗಳಲ್ಲೊಂದು. ರಾಮನವಮಿಯ ದಿನ ಸಿಹಿತಿಂಡಿ ಮಾಡಲಾಗದಿದ್ದರೂ ಬಹುತೇಕರು ಪಾನಕ ಹಾಗೂ ಕೋಸಂಬರಿ ಮಾಡುವುದುಂಟು. ಸಣ್ಣಕ್ಕೆ ಹೆಚ್ಚಿದ ಸೌತೆಕಾಯಿ, ನೆನೆಸಿದ ಹೆಸರು ಬೇಳೆ, ಕಾಯಿತುರಿ, ತುರಿದ ಕ್ಯಾರೆಟ್, ಸಣ್ಣಕ್ಕೆ ಹೆಚ್ಚಿದ ಹಸಿಮೆಣಸು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಒಂದು ಒಗ್ಗರಣೆ ಹಾಕಿದರೆ ಈ ಕೋಸಂಬರಿ ರೆಡಿ. ಬೆಲ್ಲದ ತುರಿ, ಕರಿಮೆಣಸು ಏಲಕ್ಕಿ ಹಾಗೂ ಒಣ ಶುಂಠಿ ಪುಡಿ ಹಾಕಿ ಮಾಡಿದ ಸಿಹಿಯಾದ ತಂಪು ತಂಪು ಪಾನಕವೂ ರಾಮನಿಗೆ ಪ್ರಿಯ. ಇವೆರಡನ್ನಾದರೂ ರಾಮನ ಮುಂದಿಟ್ಟು ಪೂಜೆ ಮಾಡಿ ಸೇವಿಸದರೆ, ರಾಮನವಮಿ ಆಚರಿಸಿದ ಸಂತಸ.
೨. ಚಲಿಮಿಡಿ: ಆಂದ್ರಪ್ರದೇಶ, ತೆಲಂಗಾಣಗಳಲ್ಲಿ ರಾಮನವಮಿಯಂದು ಮಾಡುವ ಸಾಂಪ್ರದಾಯಿಕ ಸಿಹಿತಿಂಡಿ. ಇದು ರಾಂನಿಷ್ಟ ಎಂಬ ನಂಬಿಕೆ ರಾಮ ಭಕ್ತರದ್ದು. ಅಕ್ಕಿಯನ್ನು ನೆನೆಸಿ ರುಬ್ಬಿ ಕಾಯಿಸಿ ಅದಕ್ಕೆ ಬೆಲ್ಲ, ಕಾಯಿತುರಿ, ತುಬ್ಬ, ಏಲಕ್ಕಿ ಹಾಕಿ ಲಡ್ಡಿನ ಹಾಗೆ ಉಂಡೆ ಕಟ್ಟಿ ಹಬೆಯಲ್ಲಿ ಬೇಯಸಿಸುವ ಅಪರೂಪದ ಸಾಂಪ್ರದಾಯಿಕ ತಿನಿಸಿದು. ರಾಮನವಮಿಯ ದಿನ ಆಂದ್ರ ಪ್ರದೇಶದಲ್ಲಿ ಮಾಡುವ ವಿಶೇಷ ಭಕ್ಷ್ಯಗಳಲ್ಲಿ ಇದೂ ಒಂದು.
೩. ರೋಟ್: ರಾಮ ಬಂಟ ಹನುಂತನಿಗೆ ಪ್ರಿಯವಾದ ತಿನಿಸು ಈ ರೋಟ್. ಈ ತಿನಿಸು ಇತ್ತೀಚೆಗಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ಗೋಧಿ ಹಿಟ್ಟು, ತುಪ್ಪ, ಸಕ್ಕರೆ ಅಥವಾ ಬೆಲ್ಲ, ಏಲಕ್ಕಿ ಪುಡಿ, ಪುಡಿ ಮಾಡಿದ ಒಣಹಣ್ಣು ಹಾಗೂ ಬೀಜಗಳನ್ನು ಹಾಕಿ ವಡೆಯ ರೂಪದಲ್ಲಿ ಎಣ್ಣೆಯಲ್ಲಿ ಕರಿದು ಮಾಡುವ ತಿನಿಸಿದು.
೪. ನೀರು ಮಜ್ಜಿಗೆ: ಪಾನಕದಂತೆಯೇ ರಾಮನವಮಮಿಯ ದಿನದಂದು ವ್ಯಾಪಕವಾಗಿ ಮಾಡುವ ಇನ್ನೊಂದು ಪಾನೀಯ ನೀರು ಮಜ್ಜಿಗೆ. ಮೊಸರನ್ನು ಕಡೆದು ಮಜ್ಜಿಗೆ ಮಾಡಿ, ಮಜ್ಜಿಗೆಯನ್ನು ನೀರು ಮಾಡಿ ಅದಕ್ಕೆ, ಹಸಿಮೆಣಸು, ಶುಂಠಿ, ಚಾಟ್ ಮಸಾಲೆ, ಜೀರಿಗೆ ಪುಡಿ, ಇಂಗು, ಕೊತ್ತಂಬರಿ ಸೊಪ್ಪು ಅಥವಾ ಕರಿಬೇವಿನ ಒಗ್ಗರಣೆ, ರುಚಿಗೆ ಉಪ್ಪು ಇಷ್ಟಿದ್ದರೆ ಈ ಮಜ್ಜಿಗೆ ಲೋಟಗುಟ್ಟಲೆ ಸುರಿ ಸುರಿದು ಕುಡಿಯಬಹುದು.
೫. ಸಾಬುದಾನ ಪಾಯಸ: ಸಬ್ಬಕ್ಕಿ ಅಥವಾ ಸಾಬುದಾನ ಪಾಯಸ ರಾಮನಿಗೆ ಅತ್ಯಂತ ಪ್ರಿಯವಂತೆ! ಹಾಗಂತ ರಾಮನ ಭಕ್ತರ ನಂಬಿಕೆ. ಹೀಗಾಗಿ ರಾಮನವಮಿಯ ದಿನ ಸಬ್ಬಕ್ಕಿಯ ಪಾಯಸ ಖಂಡಿತವಾಗಿಯೂ ಎಲ್ಲರೂ ರಾಮನಿಗಾಗಿ ತಮ್ಮ ಮನೆಗಳಲ್ಲಿ ಮಾಡಿ ನೈವೇದ್ಯ ಇಡುತ್ತಾರೆ.
೬. ರಘುಪತಿ ಲಡ್ಡು: ರಾಮನಿಗೆ ಗೋಧಿಹಿಟ್ಟಿನ ಲಡ್ಡು ಬಹಳ ಪ್ರಿಯವಂತೆ. ಇದಕ್ಕೆ ರಘುಪತಿ ಲಡ್ಡು ಎಂಬ ಹೆಸರೂ ಇದೆ. ಬಾಣಲೆಯಲ್ಲಿ ಎರಡು ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ, ಬಾದಾಮಿ ಹಾಕಿ ಹುರಿದುಕೊಂಡು ಬದಿಯಲ್ಲಿಡಿ. ಬಾಣಲೆಯಲ್ಲಿ ಒಂದು ಕಪ್ ಗೋಧಿ ಹುಡಿ ಹುರಿದುಕೊಂಡು ಅದಕ್ಕೆ ಒಂದು ಕಪ್ ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಅರ್ಧ ಕಪ್ ತುರಿದ ಬೆಲ್ಲ ಸೇರಿಸಿ. ಏಲಕ್ಕಿ ಪುಡಿ, ಸ್ವಲ್ಪ ಒಣ ದ್ರಾಕ್ಷಿ, ಹುರಿದುಕೊಂಡ ಬಾದಾಮಿ ಹಾಗೂ ಗೋಡಂಬಿ ಸೇರಿಸಿ ಬಿಸಿಯಾಗಿರುವಾಗಲೇ ಲಡ್ಡಿನ ರೂಪದಲ್ಲಿ ಉಂಡೆ ಕಟ್ಟಿ. ಉಂಡೆ ಕಟ್ಟಲು ಬರದಿದ್ದರೆ ಬೇಕಾದಷ್ಟು ತುಪ್ಪ ಸೇರಿಸಿಕೊಳ್ಳಿ. ಇದಾಗ್ಯೂ ಉಂಡೆ ಕಟ್ಟಲು ಕಷ್ಟವಾದರೆ, ಒಂದೆರಡು ಹಾಲಿನ ಹನಿ ಹಾಕಿ ಉಂಡೆ ಕಟ್ಟಲು ಪ್ರಯತ್ನಿಸಬಹುದು.
ಇದನ್ನೂ ಓದಿ: Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಆಹಾರ/ಅಡುಗೆ
Chicken Manchurian: ಚಿಕನ್ ಮಂಚೂರಿಯನ್ ಯಾರದ್ದು? ಟ್ವಿಟರ್‌ನಲ್ಲಿ ಭಾರತ-ಪಾಕ್ ನೆಟ್ಟಿಗರ ಜಟಾಪಟಿ
Chicken Manchurian: ಚಿಕನ್ ಮಂಚೂರಿಯನ್ ಪಾಕಿಸ್ತಾನದ ರೆಸಿಪಿ ಎಂಬರ್ಥದಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಟ್ವೀಟ್ ಮಾಡಿತ್ತು. ಇದು ಭಾರತ ಮತ್ತು ಪಾಕಿಸ್ತಾನಿ ನೆಟ್ಟಿಗರ ಕದನಕ್ಕೆ ಕಾರಣವಾಗಿದೆ.
ನವದೆಹಲಿ: ಭಾರತದ ಬಹುತೇಕ ರೆಸ್ಟೊರೆಂಟ್‌ಗಳಲ್ಲಿ ಚಿಕನ್ ಮಂಚೂರಿಯನ್ (Chicken Manchurian) ಅತ್ಯಂತ ಬೇಡಿಕೆಯ ಡಿಶ್. ಭಾರತ ಮಾತ್ರವಲ್ಲದೇ, ದಕ್ಷಿಣ ಏಷ್ಯಾದಲ್ಲೇ ಈ ಡಿಶ್‌ಗೆ ವ್ಯಾಪಕ ಬೇಡಿಕೆ ಇದೆ. ಆದರೆ, ದಿ ನ್ಯೂಯಾರ್ಕ್ ಟೈಮ್ಸ್ (The New York Times) ಈ ಚಿಕನ್ ಮಂಚೂರಿಯನ್ ಬಗ್ಗೆ ಮಾಡಿದ ಟ್ವೀಟ್‌ವೊಂದು, ಸೋಷಿಯಲ್ ಮೀಡಿಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ನೆಟ್ಟಿಗರ ನಡುವಿನ ಕದನಕ್ಕೆ ಕಾರಣವಾಗಿದೆ.
ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಚಿಕನ್ ಮಂಚೂರಿಯನ್ ತಯಾರಿಸುವ ಮಾಹಿತಿಯನ್ನು ಒಳಗೊಂಡ ಲೇಖನವನ್ನು ಟ್ಯಾಗ್ ಮಾಡಿ, a stalwart of Pakistani Chinese cooking ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ನೊಂದಿಗೆ ಚಿಕನ್ ಮಂಚೂರಿಯನ್ ಮಾಲೀಕತ್ವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಚರ್ಚೆಗಳು ಶುರುವಾಗಿವೆ.
ಚಿಕನ್ ಮಂಚೂರಿಯನ್ ರೆಸಿಪಿ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ಮಾಡಿರುವ ಟ್ವೀಟ್
ಭಾರತೀಯ ನೆಟ್ಟಿಗರು ನ್ಯೂಯಾರ್ಕ್ ಟೈಮ್ಸ್ ತಪ್ಪು ಮಾಹಿತಿಯನ್ನು ನೀಡಿದೆ ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಅಲ್ಲದೇ, ಚಿಕನ್ ಮಂಚೂರಿಯನ್ ಮೊದಲು ತಯಾರಿಸಿದ್ದೇ ಭಾರತದಲ್ಲಿ ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದ ನೆಟ್ಟಿಗರು ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಚಿಕನ್ ಮಂಚೂರಿಯನ್ ಮೂಲ ಪಾಕಿಸ್ತಾನದ್ದು ಎಂದು ವಾದಿಸಿದ್ದಾರೆ.
ಈ ಎರಡೂ ವಾದಗಳ ಮಧ್ಯೆ ಅರ್ಥ ಸತ್ಯ ಮತ್ತು ಸುಳ್ಳು ಇದೆ. ಕೆಲವು ವರದಿಗಳ ಪ್ರಕಾರ, ಮುಂಬೈನಲ್ಲಿ ಈಗಲೂ ರೆಸ್ಟೆರೊಂಟ್‌ಗಳನ್ನು ಹೊಂದಿರುವ ಚೀನಾ ಮೂಲದ ಬಾಣಸಿಗ ನೆಲ್ಸನ್ ವಾಂಗ್ ಅವರು ಈ ಚಿಕನ್ ಮಂಚೂರಿಯನ್ ಮೊದಲಿಗೆ ಪರಿಚಯಿಸಿದ್ದಾರೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಕೂಡ ವರದಿ ಮಾಡಿದೆ. ನೆಲ್ಸನ್ ವಾಂಗ್ ಅವರು ಭಾರತದಲ್ಲಿ ನೆಲಿಸಿದ್ದ ಚೀನಾ ಬಾಣಸಿಗರ ಮೂರನೇ ತಲೆಮಾರಿನ ವ್ಯಕ್ತಿಯಾಗಿದ್ದಾರೆ.
ಮತ್ತೆ ಕೆಲವು ವರದಿಗಳು, ಚಿಕನ್ ಮಂಚೂರಿಯನ್ ಪಾಕಿಸ್ತಾನದಲ್ಲಿ ಮೊದಲಿಗೆ ತಯಾರಿಸಲಾಯಿತು ಎಂದು ಹೇಳಿವೆ. 1970ರ ದಶಕದಲ್ಲಿ ಪಾಕ್ ಬಾಣಸಿಗ ಅಲಿ ಸಿಕಂದರ್ ತಾಹಿರ್ ಎಂಬಾತ, ಚೀನಿ ಶೈಲಿಯಲ್ಲಿ ಚಿಕನ್ ಮಂಚೂರಿಯನ್ ತಯಾರಿಸಿದನಂತೆ. ಈತ ಮೊದಲು ಕರಾಚಿಯ ಚೀನಿ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಖಾದ್ಯಗಳು, ಮಸಾಲೆಗಳನ್ನು ಬಳಸಿಕೊಂಡು ಸ್ಥಳೀಯವಾಗಿ ಚಿಕನ್ ಮಂಚೂರಿಯನ್ ಸಿದ್ಧಪಡಿಸಿದ. ಮುಂದೆ ಈ ಚಿಕನ್ ಮಂಚೂರಿಯನ್ ಭಾರತಕ್ಕೂ ಕಾಲಿಟ್ಟು ಪ್ರಸಿದ್ಧಿಯಾಯಿತು ಎಂದು ಹೇಳಲಾಗುತ್ತಿದೆ. ಆದರೆ, ನಿರ್ದಿಷ್ಟವಾಗಿ ಇದು ಪಾಕಿಸ್ತಾನ ಅಥವಾ ಭಾರತದ್ದೇ ಎಂದು ಹೇಳುವುದಕ್ಕೆ ದಾಖಲೆಗಳಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: Fried Chicken: ಹೊಂಬಣ್ಣದ ಗರಿ ಗರಿ ಫ್ರೈಡ್ ಚಿಕನ್ ಮನೆಯಲ್ಲೇ ಮಾಡಲು ಐದು ಸೂತ್ರಗಳು!
ಚಿಕನ್ ಮಂಚೂರಿಯನ್ ಇತಿಹಾಸ ಏನೇ ಇರಲಿ. ಆದರೆ, ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನಿ ನೆಟ್ಟಿಗರಿಬ್ಬರೂ ಚಿಕನ್ ಮಂಚೂರಿಯನ್ ಮೇಲೆ ತಮ್ಮ ಮಾಲೀಕತ್ವವನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿದ್ದಾರೆ!
ಆಹಾರ/ಅಡುಗೆ
Kitchen Tips: ಊಟದ ಡಬ್ಬಿಯಲ್ಲಿ ಉಳಿದು ಹೋಗುವ ಕೆಟ್ಟ ವಾಸನೆಯಿಂದ ಮುಕ್ತಿ ಹೇಗೆ? ಇಲ್ಲಿವೆ ಟಿಪ್ಸ್!
ಎಷ್ಟೇ ಚೆನ್ನಾಗಿ ತೊಳೆದರೂ, ನಿತ್ಯವೂ ಊಟ ತೆಗೆದುಕೊಂಡು ಹೋಗುವ ಡಬ್ಬಿಯಲ್ಲಿ ಅಳಿಸಲಾಗದ ವಾಸನೆಯೊಂದು ಉಳಿದುಕೊಂಡ ಹಾಗೆ ಅನಿಸತೊಡಗುತ್ತದೆ. ಊಟದ ಡಬ್ಬಿಯ ಕೆಟ್ಟ ವಾಸನೆಯನ್ನು ಹೋಗುವಂತೆ ಮಾಡುವ ಉಪಾಯಗಳೇನು ಎಂಬುದನ್ನು ನೋಡೋಣ.
ಭಾರತೀಯ ಅಡುಗೆಯಲ್ಲಿ ನಾವು ಸಾಕಷ್ಟು ಮಸಾಲೆ ಪದಾರ್ಥಗಳನ್ನು ನಿತ್ಯವೂ ಬಳಸುತ್ತೇವೆ. ಹಿಂದಿನಿಂದಲೂ ನಮ್ಮ ಹಿರಿಯರು ಅಡುಗೆಮನೆಯಲ್ಲಿ ಧಾರಾಳವಾಗಿ ಗರಂ ಮಸಾಲಾ, ಅರಿಶಿನ, ಚಾಟ್ ಮಸಾಲಾ ಹೀಗೆ ಬಗೆಬಗೆಯ ಮಸಾಲೆಗಳನ್ನು ನಮ್ಮ ಆಹಾರದಲ್ಲಿ ಸೇರಿಸುತ್ತಲೇ ಬಂದಿದ್ದಾರೆ. ಇದು ಭಾರತೀಯ ಅಡುಗೆಯ ಸ್ವಾದವನ್ನೂ ರಂಗನ್ನೂ ಘಮವನ್ನೂ ಹೆಚ್ಚಿಸಿದೆಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಆದರೆ, ನಿತ್ಯವೂ ಇಂತಹ ಅಡುಗೆಯನ್ನು ಡಬ್ಬಿಯಲ್ಲಿ ಹಾಕಿ ಆಫೀಸಿಗೆ ಕೊಂಡೊಯ್ಯುತ್ತೇವೆ. ಅಲ್ಲೇ ತೊಳೆದು ತಂದರೂ, ಸರಿಯಾಗಿ ಮನೆಯಲ್ಲಿ ತೊಳೆಯಲು ಮತ್ತೆ ಡಬ್ಬಿ ಬಿಚ್ಚುತ್ತೇವೆ. ನಿತ್ಯವೂ ಬಗೆಬಗೆಯ ಆಹಾರ ಹೊತ್ತುಕೊಂಡು ಹೋದ ಡಬ್ಬಿ ಮಾತ್ರ ಘಮ್ಮೆಂದು ನಾರಲು ಶುರುವಾಗಿರುತ್ತದೆ. ಎಷ್ಟೇ ಚೆನ್ನಾಗಿ ತೊಳೆದರೂ, ನಿತ್ಯವೂ ಊಟ ತೆಗೆದುಕೊಂಡು ಹೋಗುವ ಡಬ್ಬಿಯಲ್ಲಿ ಅಳಿಸಲಾಗದ ವಾಸನೆಯೊಂದು ಉಳಿದುಕೊಂಡ ಹಾಗೆ ಅನಿಸತೊಡಗುತ್ತದೆ. ಕೆಲವೊಮ್ಮೆ ಒಂದು ಅಡುಗೆಯನ್ನು ತೆಗೆದುಕೊಂಡು ಹೋದ ಡಬ್ಬಿಯಲ್ಲಿ ತೊಳೆದು ಮತ್ತೊಂದನ್ನು ಹಾಕಿ ತೆಗೆದುಕೊಂಡು ಹೋದರೂ ಹಳೆಯ ಆಹಾರದ ವಾಸನೆ ಹೊಸ ತಿಂಡಿಯೊಂದಿಗೆ ಸೇರಿಕೊಂಡು ಹೊಸ ತಿಂಡಿಯ ನಿಜವಾದ ಘಮ ಸವಿಯಲು ಸಿಗುವುದಿಲ್ಲ. ಇನ್ನೂ ಕೆಲವೊಮ್ಮೆ ಮಸಾಲೆ ಪದಾರ್ಥಗಳನ್ನು ಹಾಕಿಟ್ಟ ಡಬ್ಬಿಯಲ್ಲಿ ಬೇರೇನನ್ನೂ ಹಾಕಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ. ಹೀಗೆ ಊಟದ ಡಬ್ಬಿಯ ಕೆಟ್ಟ ವಾಸನೆಯನ್ನು ಹೋಗುವಂತೆ ಮಾಡುವ ಉಪಾಯಗಳೇನು ಎಂಬುದನ್ನು ನೋಡೋಣ.
1. ಬೇಕಿಂಗ್ ಸೋಡಾ: ಕೆಟ್ಟ ವಾಸನೆಯನ್ನು ತೆಗೆಯುವಲ್ಲಿ ಬೇಕಿಂಗ್ ಸೋಡಾ ಪರಿಣಾಮಕಾರಿ ಕೆಲಸ ಮಾಡುತ್ತದೆ. ಒಂದು ಚಮಚ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಕಲಸಿ ಪೇಸ್ಟ್ ಮಾಡಿಕೊಂಡು ಊಟದ ಡಬ್ಬಿಯೊಳಗೆ ಹಚ್ಚಿ ಒಂದೆರಡು ಗಂಟೆ ಬಿಡಿ. ನಂತರ ಬಿಸಿನೀರಿನಲ್ಲಿ ತೊಳೆಯಿರಿ. ಡಬ್ಬಿಯಲ್ಲಿರುವ ಹಳೆಯ ಕೆಟ್ಟ ವಾಸನೆ ಮಾಯವಾಗುತ್ತದೆ.
2. ಆಲೂಗಡ್ಡೆ: ಹಸಿ ಆಲೂಗಡ್ಡೆಯೂ ಊಟದ ಡಬ್ಬಿಯ ಕೆಟ್ಟ ವಾಸನೆ ಹೋಗಲಾಡಿಸುತ್ತದೆ ಎಂದರೆ ನಂಬುತ್ತೀರಾ? ಹೌದು. ಹಸಿ ಆಲೂಗಡ್ಡೆಯನ್ನು ಉರುಟಾದ ಹೋಳುಗಳನ್ನಾಗಿ ಮಾಡಿ ಆ ಹೋಳಿನಿಂದ ಊಟದ ಡಬ್ಬಿಯ ಒಳಮೈಯನ್ನು ಉಜ್ಜಿ. ಹೋಳನ್ನು ಹಾಗೆಯೇ ೧೫-೨೦ ನಿಮಿಷಗಳ ಕಾಲ ಒಳಗೆ ಬಿಡಿ.
ಇದನ್ನೂ ಓದಿ: smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು
3. ವೈಟ್ ವಿನೆಗರ್: ವೈಟ್ ವಿನೆಗರ್‌ಗೆ ಬ್ಯಾಕ್ಟೀರಿಯಾವನ್ನು ಸಾಯಿಸುವ ಶಕ್ತಿಯಿದ್ದು, ಅದರ ಜೊತೆಗೆ, ಆಲ್ಕಲೈನ್ ವಾಸನೆಯನ್ನು ಹೊಡೆದೋಡಿಸುವ ತಾಕತ್ತಿದೆ. ವಿನೆಗರ್ ಹಾಗೂ ನೀರು ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೆಲ ಗಂಟೆಗಳ ಕಾಲ ಡಬ್ಬಿಯಲ್ಲಿ ತುಂಬಿಸಿಡಿ. ನಂತರ ಬಿಸಿನೀರಿನಲ್ಲಿ ತೊಳೆದು ಒಣಗಿಸಿದರೆ, ಎಂಥ ವಾಸನೆಯಿದ್ದರೂ ವಾಸನೆ ಮಾಯವಾಗುತ್ತದೆ.
4. ನಿಂಬೆಹಣ್ಣಿನ ಸಿಪ್ಪೆ: ನಿಂಬೆಹಣ್ಣನ್ನು ಬಳಸಿದ ಮೇಲೆ ಅದರ ಸಿಪ್ಪೆಯನ್ನು ಎಸೆಯುವ ಬದಲು ತೆಗೆದಿಡಿ. ಅದನ್ನು ವಾಸನೆಯುಕ್ತ ಡಬ್ಬಿಯೊಳಗೆ ಹಾಕಿ ತಿಕ್ಕಿ ಒಂದೆರಡು ಗಂಟೆ ಹಾಗೇ ಬಿಡಿ. ಆಮೇಲೆ ತೊಳೆದು ಒಣಗಿಸಿ. ಡಬ್ಬಿಯ ಕಲೆ, ವಾಸನೆ ಎಲ್ಲವೂ ಹೋಗುತ್ತದೆ.
೫. ಚೆಕ್ಕೆ: ಚೆಕ್ಕೆಯೂ ಕೂಡಾ ವಾಸನೆಯನ್ನು ಹೊಡೆದೋಡಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಊಟದ ಡಬ್ಬಿಯಲ್ಲಿನ ಕೆಟ್ಟ ವಾಸನೆ ತೆಗೆಯುತ್ತದೆ. ಚೆಕ್ಕೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಅದನ್ನು ಊಟದ ಡಬ್ಬಿಗೆ ಹಾಕಿಡಿ. ನಂತರ ತೊಳೆಯಿರಿ. ವಾಸನೆ ಹೋಗುತ್ತದೆ.
ಇದನ್ನೂ ಓದಿ: Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?