ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಟ್ರಾವೆಲ್ ಫ್ಯಾಷನ್‌ನಲ್ಲಿ (Summer Fashion) ಲೈಟ್‌ವೈಟ್ ಟೈ ಡೈ ಡ್ರೆಸ್‌ಗಳು ಟ್ರೆಂಡಿಯಾಗಿವೆ. ಸ್ಮಾರ್ಟ್‌ನೆಸ್ ಇಷ್ಟಪಡುವ ಹುಡುಗಿಯರಿಗೆ ಪ್ರಿಯವಾಗಿವೆ. ಅಷ್ಟು ಮಾತ್ರವಲ್ಲದೆ, ನೋಡಲು ಕಲರ್‌ಫುಲ್ ಆಗಿರುವ ಇವು ಟ್ರಾವೆಲ್ ಟೈಮ್ ಫೋಟೊಶೂಟ್‌ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿವೆ.
ಏನಿದು ಟೈ ಡೈ ಡ್ರೆಸ್ ?
ಗುಜರಾತ್ ಹಾಗೂ ರಾಜಸ್ಥಾನ ಮೂಲ ವಿನ್ಯಾಸದ ಈ ಟೈ ಹಾಗೂ ಡೈ ಮಾಡಿದ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಲಾದ ವಿನ್ಯಾಸದ ಉಡುಪುಗಳಿಗೆ ಟೈ ಡೈ ಔಟ್‌ಫಿಟ್ಸ್ ಎಂದು ಕರೆಯಲಾಗುತ್ತದೆ. 70ರ ದಶಕದಲ್ಲಿ ಇವು ಹೆಚ್ಚು ಪ್ರಚಲಿತದಲ್ಲಿದ್ದವು. ಹಿಪ್ಪಿ ಸ್ಟೈಲ್‌ಗೆ ಸಾಥ್ ನೀಡಿ ಟ್ರೆಂಡಿಯಾಗಿದ್ದವು. ಪಾಪ್ ಫ್ಯಾಷನ್‌ನಲ್ಲೂ ಕೂಡ ಟ್ರೆಂಡ್ ಸೆಟ್ ಮಾಡಿದ್ದವು ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಅಂದ ಹಾಗೆ, ಇವನ್ನು ಬಾಂದನಿ ವಿನ್ಯಾಸವೆಂದು ನಮ್ಮಲ್ಲಿ ಹೇಳಲಾಗುತ್ತದೆ. ವಿದೇಶಕ್ಕೆ ರಫ್ತಾಗಿ ಕೊಂಚ ವೆಸ್ಟರ್ನ್ ಲುಕ್ ಪಡೆದ ನಂತರ ಇವು ಆನ್‌ಲೈನ್‌ನಲ್ಲಿ ಟೈ ಡೈ ಡ್ರೆಸ್‌ಗಳೆಂದೇ ಮಾರಾಟಕ್ಕೆ ಲಭ್ಯವಾಗುತ್ತಿವೆ. ಆದರೆ, ಬಹುತೇಕ ಫ್ಯಾಬ್ರಿಕ್ ಇಲ್ಲಿಂದಲೇ ರಫ್ತಾಗಿರುತ್ತದೆ ಎನ್ನುವ ಫ್ಯಾಷನಿಸ್ಟ್ ರಚಿತಾ ಪ್ರಕಾರ, ಈ ಉಡುಪುಗಳು ನಮ್ಮಲ್ಲಿ ಮೊದಲು ಎಥ್ನಿಕ್ ಲುಕ್ ನೀಡುವ ಗಾಗ್ರಾ, ಲೆಹೆಂಗಾ, ಸೀರೆ, ಸಲ್ವಾರ್ ಕಮೀಝ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ಇದೀಗ ಇವಕ್ಕೆ ಇಂಡೋ-ವೆಸ್ಟರ್ನ್ ವಿನ್ಯಾಸ ದೊರಕಿದ್ದು, ಕ್ಯಾಶುವಲ್ ಔಟ್‌ಫಿಟ್‌ಗಳಾಗಿ ಮಾತ್ರವಲ್ಲ, ಟ್ರಾವೆಲ್ ಕೆಟಗರಿಗೂ ಎಂಟ್ರಿ ನೀಡಿವೆ ಎನ್ನುತ್ತಾರೆ.
ಯಾವ್ಯಾವ ವಿನ್ಯಾಸಕ್ಕೆ ಬೇಡಿಕೆ
ಅಸ್ಸೆಮ್ಮಿಟ್ರಿಕಲ್ ಮ್ಯಾಕ್ಸಿ ಶೈಲಿಯ ಹಾಗೂ ಸಿಂಗಲ್ ಪೀಸ್ ಕಫ್ತಾನ್ ವಿನ್ಯಾಸವು ಟ್ರಾವೆಲ್ ಫ್ಯಾಷನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಇವು ಧರಿಸಿದಾಗ ಸ್ಲಿಮ್ ಲುಕ್ ನೀಡುವುದರಿಂದ ಅತಿ ಹೆಚ್ಚಾಗಿ ಪ್ಲಂಪಿ ಮಾನಿನಿಯರು ಧರಿಸುತ್ತಾರೆ. ಆದರೆ, ಮತ್ತಷ್ಟು ಸ್ಲಿಮ್ ಆಗಿ ಕಾಣಬೇಕೆಂದುಕೊಂಡವರು ಇದೇ ಫ್ಯಾಬ್ರಿಕ್‌ನ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಿತ್.
ಟೈ ಡೈ ಡ್ರೆಸ್ ಆಯ್ಕೆಗೆ 3 ಸಲಹೆ
- ಖರೀದಿಸುವ ಮೊದಲು ನಿರ್ವಹಣೆ ಬಗ್ಗೆ ಅರಿಯಿರಿ.
- ಕೆಲವು ಬಣ್ಣ ಬಿಡುವ ಸಾಧ್ಯತೆ ಇರುತ್ತದೆ. ಕೇಳಿ ತಿಳಿದುಕೊಳ್ಳಿ.
- ಪ್ರತ್ಯೇಕವಾಗಿ ಇರಿಸಿ. ಏಕೆಂದರೆ ಬಣ್ಣ ಮತ್ತೊಂದಕ್ಕೆ ಹತ್ತುವ ಸಾಧ್ಯತೆ ಇರುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Beach Fashion: ಸಮ್ಮರ್ ಬೀಚ್‌ಸೈಡ್ ಫ್ಯಾಷನ್‌ನಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಅಂಶಗಳು