ಬೇಸಿಗೆ ಬಂದ ತಕ್ಷಣ ನಮ್ಮ ದಿರಿಸುಗಳಲ್ಲಿ ದಿಢೀರ್ ಬದಲಾವಣೆಗಳಾಗುತ್ತದೆ. ಅಷ್ಟರವರೆಗೆ ಜಾಕೆಟ್‌ಗಳನ್ನು ತೊಟ್ಟು ಚಳಿಗಾಗಿ ಬೇಕುಬೇಕಾದಂತೆ ಹಾಕಿಕೊಳ್ಳುತ್ತಿದ್ದವರು ಬೇಸಗೆ ಬಂತೆಂದ ತಕ್ಷಣ ಆದಷ್ಟೂ ಹತ್ತಿಬಟ್ಟೆಯ, ಹಗರುವಾದ ದಿರಿಸುಗಳನ್ನೇ ಧರಿಸಲು ಇಷ್ಟಪಡುತ್ತೇವೆ. ಆದರೆ, ಬೇಸಿಗೆಯೆಂದ ಮಾತ್ರಕ್ಕೆ ಇಷ್ಟೇ ಯೋಚನೆ ಇದ್ದರೆ ಸಾಲದು. ನಮ್ಮ ಜೊತೆಗೆ ಸುತ್ತಲಿನವರಿಗೂ ಬೇಸಿಗೆಯಲ್ಲಿ ತಾಜಾತನದ ಅನುಭೂತಿ ಕೊಡುವಂತ ಫ್ಯಾಷನ್ ಸೆನ್ಸ್ ನಮಗಿರಬೇಕು. ಇಲ್ಲದಿದ್ದರೆ, ಸದಾ ಸುಸ್ತಾದವರಂತೆ ಕಾಣುವುದು ಖಂಡಿತ. ಹಾಗಾದರೆ ಬೇಸಿಗೆಯಲ್ಲೂ ನಾವು ಫ್ರೆಶ್ ಆಗಿ ಕಂಗಳಿಸುತ್ತಾ, ಲವಲವಿಕೆಯ ಗಣಿಯಾಗಿ ಎಲ್ಲರಿಗೂ ಕಾಣಬೇಕೆಂದರೆ, ಖಂಡಿತವಾಗಿ ಫ್ಯಾಷನ್ ವಿಚಾರದಲ್ಲಿ ಈ ಕೆಲವು ತಪ್ಪುಗಳನ್ನು ಮಾಡಬೇಡಿ. ಅವುಗಳು ಯಾವುವು ಎಂದು ನೋಡೋಣ.
೧. ಪಾರದರ್ಶಕ ಉಡುಪು ತೊಡುವುದು: ಕೆಲವು ಬಟ್ಟೆಗಳನ್ನು ಎಲ್ಲಿ ತೊಡಬೇಕು ಎಂಬುದರ ಅರಿವು ನಮಗಿರಬೇಕು. ಉದಾಹರಣೆಗೆ ಬೇಸಿಗೆ ಎಂದುಕೊಂಡು ಪಾರದರ್ಶಕ ಉಡುಪನ್ನು ಎಲ್ಲ ಸಂದರ್ಭಗಳಲ್ಲೂ ತೊಡುವುದು ಚಂದವಲ್ಲ. ಬೀಚ್, ಕ್ಲಬ್, ಪಾರ್ಟಿಗಳಿಗಾದರೆ ಒಕೆ. ಆದರೆ, ವಾಕಿಂಗ್ ಸಂದರ್ಭ, ಮನೆ ಸಾಮಾನು ಖರೀದಿಸುವ ರೀಟೇಲ್ ಆಂಗಡಿಗೆ ಇಂಥ ದಿರಿಸಿನಲ್ಲಿ ಹೋಗಬೇಡಿ.
೨. ಬಟ್ಟೆಗೆ ಹೊಂದುವ ಒಳ ಉಡುಪುಗಳ ತಪ್ಪಾದ ಆಯ್ಕೆ: ಬಟ್ಟೆಗೆ ಹೊಂದುವ ಒಳುಡುಪುಗಳು ಅತ್ಯಂತ ಮುಖ್ಯ. ತೆಳ್ಳಗಿನ ಅಂಗಿಗೆ ಗಾಢ ಬಣ್ಣದ ಒಳಉಡುಪು ತೊಡುವುದು, ಅಥವಾ ಟಿ ಶರ್ಟ್ ಧರಿಸುವಾಗ ಅದಕ್ಕೆ ಸರಿಯಾಗಿ ಹೊಂದಿಕೆಯಾಗದ ಒಳ ಉಡುಪು ತೊಡುವುದನ್ನು ಮಾಡಬೇಡಿ. ಅಥವಾ ನಿಮ್ಮ ಸೈಜ್‌ಗೆ ತಕ್ಕನಾಗ ಒಳುಡುಪುಗಳನ್ನು ಧರಿಸುವುದನ್ನೂ ಅಭ್ಯಾಸ ಮಾಡಿ.
೩. ಎಲ್ಲ ಕಡೆಗೂ ಫ್ಲಿಪ್‌ಫ್ಲಾಪ್ ಧರಿಸುವುದು: ಬೀಚ್ ಹೊರತುಪಡಿಸಿ ಬೇರೆಲ್ಲೆಡೆಗೂ ಫ್ಲಿಪ್ ಫ್ಲಾಪ್ ಧರಿಸಬೇಡಿ. ಫ್ಲಿಪ್ ಫ್ಲಾಪ್‌ಗಳನ್ನೇ ಶರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರೆ ಅದು ಖಂಡಿತ ನಿಮ್ಮ ಪಾದಗಳಿಗೆ ತೊದರೆ ಕೊಡುತ್ತದೆ ಎಂಬುದನ್ನು ನೆನಪಿಡಿ. ಅಷ್ಟೇ ಅಲ್ಲ, ಕಚೇರಿಯ ಡ್ರೆಸ್‌ಗೆ ಹೊಂದಿಕೆಯಾಗುವ ಚಪ್ಪಲಿಯನ್ನು ಧರಿಸಿ.
೪. ಡೀಪ್ ನೆಕ್ ಇರುವ ಗಿಡ್ಡ ಅಂಗಿಯ ಆಯ್ಕೆ: ಎಷ್ಟೇ ಸೆಖೆ ಹೊರಗಡೆ ಇದ್ದರೂ ಈಗ ಬಟ್ಟೆ ಧರಿಸುವ ಸ್ವಾತಂತ್ರ್ಯ ಅವರವರದ್ದೇ ಎಂದುಕೊಂಡು ಡೀಪ್ ನೆಕ್ ಜೊತೆಗೆ ನಿಮ್ಮ ತೊಡೆಗಳನ್ನೂ ತೋರಿಸುವ ಡ್ರೆಸ್ ಧರಿಸಬೇಡಿ. ಗಿಡ್ಡವಾದ ಆದರೆ ನೆಕ್ ಕವರ್ ಆಗಿರುವ ಅಥವಾ ನೆಕ್ ಡೀಪ್ ಇರುವ ಆದರೆ ಉದ್ದವಾದ ಡ್ರೆಸ್ ಧರಿಸಿ. ಎರಡೂ ಕಡೆ ಪ್ರದರ್ಶನ ಬೇಡ.
೫. ಬಿಗಿಯಾದ ಉಡುಪು ತೊಡುವುದು: ಸೆಖೆಗಾಲದಲ್ಲಿ ಅತ್ಯಂತ ಟೈಟ್ ಇರುವ ಡ್ರೆಸ್ ಧರಿಸುವ ಮುನ್ನ ಯೋಚಿಸಿ. ಬೇಸಿಗೆಗೆ ಲೂಸ್ ಫಿಟ್ಟಿಂಗ್‌ನ ಡ್ರೆಸ್ ಸರಿಯಾಗಿ ಹೊಂದುತ್ತದೆ. ಅಷ್ಟೇ ಅಲ್ಲ, ತೊಡಲೂ ಆರಾಮದಾಯಕ.
೬. ಗಾಢ ಸುಗಂಧ ದ್ರವ್ಯದ ಜೊತೆಗೆ ಗಾಢವಾದ ಮೇಕಪ್ ಮಾಡಿಕೊಳ್ಳುವುದು: ಬೇಸಿಗೆಯಲ್ಲಿ ತೆಳುವಾದ ಮೇಕಪ್ ಅಥವಾ ನ್ಯೂಡ್ ಮೇಕಪ್ ಹೆಚ್ಚು ಹೊಂದಿಕೆಯಾಗುತ್ತದೆ. ಗಾಢವಾದ ಮೇಕಪ್ ಮಾಡಿಕೊಂಡು ಗಾಢವಾದ ಪರಿಮಳ ದ್ರವ್ಯಗಳನ್ನೂ ಲೇಪಿಸಿಕೊಳ್ಳುವುದು ಬೇಸಿಗೆಗೆ ಖಂಡಿತವಾಗಿಯೂ ಹೊಂದಿಕೆಯಾಗುವುದಿಲ್ಲ. ಲಘುವಾದ ಸುಗಂಧ, ಲಘುವಾದ ಮೇಕಪ್ ಬೇಸಿಗೆಗೆ ಬೆಸ್ಟ್.
೭. ಕಪ್ಪು ಬಟ್ಟೆ ಧರಿಸುವುದು: ಕಪ್ಪು ಬಟ್ಟೆ ಬೇಸಿಗೆಗೆ ಖಂಡಿತವಾಗಿಯೂ ಹೊಂದಿಕೆಯಾಗದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಬೇಸಿಗೆಯಲ್ಲಿ ಕಪ್ಪು ಬಟ್ಟೆ ಇನ್ನಷ್ಟು ಸೆಖೆಯನ್ನು ಜಾಸ್ತಿ ಮಾಡುವುದಷ್ಟೇ ಅಲ್ಲ, ಬೇಸಿಗೆಗೆ ಹೊಂದುವುದೂ ಇಲ್ಲ. ಹಾಗಾಗಿ, ಬೇಸಿಗೆಗೆ ಆದಷ್ಟೂ ತೆಳು ಬಣ್ಣಗಳ, ಹೂವುಗಳ ಪ್ರಿಂಟ್‌ಗಳಿರುವ, ಅಥವಾ ಪುಟ್ಟ ಪುಟ್ಟ ಚಿತ್ರಗಳಿರುವ, ಬ್ಲಾಕ್ ಪ್ರಿಂಟ್‌ಗಳಿರುವ ಹತ್ತಿ ಬಟ್ಟೆಯ ಉಡುಪುಗಳು ಬೇಸಿಗೆಗೆ ಅತ್ಯಂತ ಸೂಕ್ತ. ನೋಡುಗರಿಗೂ ಕಣ್ಣಿಗೆ ತಂಪು, ಹಿತಕರ.