Site icon Vistara News

ಈ ಯೋಗಾಸನ ಮಾಡಿದರೆ ಮನಸ್ಸು ಕೂಡ ಕೂಲ್‌ ಕೂಲ್‌!

yoga malaika

ಇಂದಿನ ಬದಲಾದ ಜೀವನ ಶೈಲಿಯಿಂದ, ಆಹಾರ ಕ್ರಮದಿಂದ, ಹೆಚ್ಚಿನ ಒತ್ತಡದಿಂದ ನಿತ್ಯ ಜೀವನದ ಮೇಲೆ ಆಗುವ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಯೋಗದಷ್ಟು ಉಪಯೋಗಕರ ಜೀವನಶೈಲಿ ಇನ್ನೊಂದಿಲ್ಲ ಎಂಬುದು ಹೆಚ್ಚು ಪ್ರಚಾರದಲ್ಲಿದೆ. ಹಾಗಾಗಿಯೇ ಇಂದು ನಗರದೆಲ್ಲೆಡೆ ಹಲವಾರು ಯೋಗ ಸೆಂಟರ್ಗಳು, ಯೋಗದ ಮೂಲಕ ಮಾನಸಿಕ ಆರೋಗ್ಯ ಹೆಚ್ಚಿಸುವ ಥೆರಪಿಗಳು, ಕ್ಲಬ್‌ಗಳು ಹೆಚ್ಚಾಗುತ್ತಿವೆ. ಅನೇಕರು ಇದರ ಪ್ರಯೋಜನವನ್ನು ಪಡೆದುಕೊಂಡರೆ, ಇನ್ನೂ ಅನೇಕರು ತಮ್ಮಲ್ಲಾಗಿರುವ ದೈಹಿಕ ಮಾನಸಿಕ ಒತ್ತಡಕ್ಕೆ ಈ ಮೂಲಕ ದಾರಿ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ.

ಮಾನಸಿಕ ಸಮಸ್ಯೆಗಳು ಇಂದು ಕೇವಲ ವಯಸ್ಸಾದವರ ತೊಂದರೆಯಲ್ಲ. ಬದಲಾಗಿ, ಯುವಜನರು, ಮಕ್ಕಳೆನ್ನದೆ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಬದಲಾದ ಜೀವನ ಶೈಲಿಯೇ ಇವೆಲ್ಲದರ ಮೂಲ ಕಾರಣ. ಅತಿಯಾದ ಮಾನಸಿಕ ಒತ್ತಡ, ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚಾದಂತೆ ಇಂದಿನ ಯುವ ಜನರಲ್ಲಿ ಈ ಬಗ್ಗೆ ಅರಿವು ಹೆಚ್ಚಾಗಿದೆ. ಜನರು, ಜನರು ಪ್ರಾಣಾಯಾಮದಂತಹ ಪರ್ಯಾಯ ಉಪಾಯಗಳನ್ನೂ ತಮ್ಮ ಜೀವನಶೈಲಿಯಲ್ಲಿ ರೂಢಿಗೊಳಿಸುವತ್ತ ಮುಖ ಮಾಡುತ್ತಿರುವುದು ಉತ್ತಮ ಬೆಳವಣಿಗೆ.

ಖಿನ್ನತೆ, ಮಾನಸಿಕ ಒತ್ತಡದಂತಹ ಮಾನಸಿಕ ಏರಿಳಿತಗಳ ಸಮಸ್ಯೆಗೆ ಪ್ರಯೋಜನಕಾರಿಯಾಗಿ ಯಾವೆಲ್ಲ ಆಸನಗಳನ್ನು ದಿನನಿತ್ಯದ ಯೋಗಾಭ್ಯಾಸದಲ್ಲಿ ರೂಢಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ನೋಡೋಣ.

ವೃಕ್ಷಾಸನ
ಧನುರಾಸನ

೧. ವೃಕ್ಷಾಸನ: ಹೆಸರೇ ಹೇಳುವಂತೆ ಮರದಂತಿರುವ ಆಸನ. ಹೆಚ್ಚು ಕಷ್ಟವಿಲ್ಲದ, ಮಕ್ಕಳೂ ಮಾಡಬಹುದಾದ, ದಿನನಿತ್ಯದ ಯೋಗಾಭ್ಯಾಸದಲ್ಲಿ ಸೇರಿಸಿಕೊಳ್ಳಬಹುದಾದ ಸಾಮಾನ್ಯ ಆದರೆ ಪ್ರಯೋಜನಕಾರಿ ಆಸನವಿದು. ಕೈಗಳೆರಡನ್ನೂ ಮೇಲೆತ್ತಿ ನಮಸ್ಕಾರ ಭಂಗಿಯಲ್ಲಿ ನಿಂತು, ಒಂದು ಕಾಲನ್ನು ಮಡಚಿ ತೊಡೆಗೆ ಊರಿ ನಿಂತ ಭಂಗಿಯ ಆಸನವಿದು. ಏಕಾಗ್ರತೆಯನ್ನು ಹೆಚ್ಚು ಮಾಡಲು, ಒಂದೇ ವಿಚಾರದಲ್ಲಿ ಗಮನ ನೀಡುವ ಕ್ಷಮತೆಗೆ, ಹಾಗೂ ಆಂತರಿಕವಾಗಿ ನಮ್ಮನ್ನು ಶಾಂತಿಯಿಂದ ಇಡಲು ಮಾನಸಿಕ ಒತ್ತಡ ಕಡಿಮೆ ಮಾಡಲು ಇದು ಸಹಕಾರಿ.

೨. ಧನುರಾಸನ: ಧನುಸ್ಸಿನ ಹಾಗೆ ದೇಹ ಬಗ್ಗಿಸುವ ಆಸನವಿದು. ಇದು ದೇಹದ ತೂಕ ಕಡಿಮೆಗೊಳಿಸಲು ಪ್ರಯತ್ನಿಸುವ ಎಲ್ಲರೂ ಮಾಡಬೇಕಾದ ಆಸನವೇ ನಿಜವಾದರೂ, ಮಾನಸಿಕ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ಉದ್ವೇಗ, ಕಳವಳ, ಅತಿಯಾದ ಒತ್ತಡಗಳಿಂದ ಬಳಲುವ ಮಂದಿಗೆ ಈ ಆಸನ ಒಳ್ಳೆಯದು.

ನಾಡಿ ಶೋಧನ
ಉಷ್ಟ್ರಾಸನ

೩. ನಾಡಿ ಶೋಧನ: ಇದು ಉಸಿರಾಟದ ವ್ಯಾಯಾಮವಾಗಿದ್ದು ಇದರ ನಿಯಮಿತ ಅಭ್ಯಾಸ ಮಾನಸಿಕ ಒತ್ತಡವನ್ನಷ್ಟೆ ಅಲ್ಲದೆ ಖಿನ್ನತೆಗೂ ಉತ್ತಮ ಪರಿಹಾರ. ಸಾಮೂಹಿಕವಾಗಿ ಇತರರ ಜೊತೆಗೆ ಸೇರಿ ಮಾಡುವುದು ಹೆಚ್ಚು ಪರಿಣಾಮಕಾರಿ.

೪. ಉಷ್ಟ್ರಾಸನ: ಕ್ಯಾಮಲ್‌ ಪೋಸ್‌ ಎಂದು ಕರೆಯಲ್ಪಡುವ ಇದು ಹೆಚ್ಚು ಕಡಿಮೆ ಹೆಸರೇ ಹೇಳುವಂಥ ಭಂಗಿ. ಇದು ಮಾನಸಿಕ ಒತ್ತಡಕ್ಕೆ ಬಹಳ ಪರಿಣಾಮಕಾರಿ ಆಸನ. ಇದರ ಅಭ್ಯಾಸ ಮಾಡುತ್ತಿದ್ದಂತೆ ಒಡನೆಯೇ ದೇಹ ಹಾಗೂ ಮನಸ್ಸು ಶಾಂತಿಯನ್ನು ಅನುಭವಿಸುವಂತೆ ಮಾಡಿಬಿಡುವುದು ಈ ಆಸನದ ಹೆಗ್ಗಳಿಕೆ.

ಮಾರ್ಜರಿಯಾಸನ
ಹಾಸ್ಯಾಸನ

೫. ಮಾರ್ಜರ್ಯಾಸನ: ಕ್ಯಾಟ್‌ ಪೋಸ್‌ ಎಂದೂ ಕರೆಯಲ್ಪಡುವ ಈ ಆಸನ ಹೆಸರಿನಂತೆಯೇ ಬೆಕ್ಕಿನ ಹಾಗೆ ದೇಹವನ್ನು ಬಗ್ಗಿಸುವ ಆಸನ. ಇದು ದೈಹಿಕವಾಗಿ ಬೆನ್ನುಹುರಿ, ಹೊಟ್ಟೆಯ ಮಾಂಸಖಂಡಗಳಿಗೆ ಬಲ ನೀಡುವುದಲ್ಲದೆ, ಮಾನಸಿಕವಾಗಿಯೂ ಬಲ ನೀಡುವ ಆಸನ. ಇದು ಬಹಳ ಸುಲಭವಾಗಿ ಯಾರೂ ಮಾಡಿಕೊಳ್ಳಬಹುದಾಗಿದೆ.

೬. ಹಾಸ್ಯಾಸನ: ನಗುವಿಗಿಂತ ಉತ್ತಮ ಟಾನಿಕ್‌ ಇಲ್ಲ. ಅದಕ್ಕೇ, ಈಚಿನ ದಿನಗಳಲ್ಲಿ, ನಗೆಯ ಕ್ಲಬ್‌ಗಳು, ನಗಿಸುವುದಕ್ಕೆಂದೇ ಇರುವ ಸ್ಟಾಂಡ್‌ ಅಪ್‌ ಕಾಮಿಡಿಯನ್‌ಗಳು, ಪಾರ್ಕಿನಲ್ಲಿ ಲಾಫಿಂಗ್‌ ಕ್ಲಬ್‌ಗಳು ಹುಟ್ಟಿಕೊಂಡು ನಗುವನ್ನು ಔಷಧಿಯ ಹಾಗೆ ಹಂಚುವ ಕೆಲಸ ಮಾಡುತ್ತಿವೆ. ಹಾಸ್ಯಾಸನವೂ ಅಂಥದ್ದೇ. ಹೇಳುವುದಕ್ಕೆ ತೀರಾ ಸಿಲ್ಲಿಯಾಗಿ ಕಂಡರೂ, ಒಬ್ಬರೇ ನಗುವ ಅಭ್ಯಾಸ ಕಷ್ಟವೆಂದು ಅನಿಸಿದರೂ, ನಗುವುದೇ ಆಸನವಾಗಿರುವ ಇದು ಮಾನಸಿಕ ಒತ್ತಡ, ಕಳವಳ ಕಡಿಮೆ ಮಾಡಿ ಉಲ್ಲಾಸವನ್ನು ನೀಡುತ್ತದೆ.

ಪ್ರತಿಯೊಂದು ಆಸನವೂ ದೈಹಿಕವಾಗಿ ಪರಿಣಾಮಕಾರಿಯಾಗಿರುವಷ್ಟೇ ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ. ಹಾಗಾಗಿ ನಿತ್ಯ ಬದುಕಿನಲ್ಲಿ ಯೋಗಾಭ್ಯಾಸ ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಉತ್ತಮ.

ಇದನ್ನೂ ಓದಿ: ಯೋಗ ದಿನ ಅಷ್ಟೇ ಅಲ್ಲ, ದಿನಾ ಯೋಗ ಮಾಡಬೇಕೆನ್ನಲು 11 ಕಾರಣಗಳು!

Exit mobile version