Site icon Vistara News

Tips For Parents: ಮಗುವಿಗೆ ಕನ್ನಡಕ ಬೇಕೆಂಬುದು ಪಾಲಕರಿಗೆ ತಿಳಿಯುವುದು ಹೇಗೆ?

ಚಿಕ್ಕ ಮಕ್ಕಳ ಮುಖದ ಮೇಲೆ (Tips for Parents) ಕನ್ನಡಕ ಕಾಣುವುದು ಆಧುನಿಕ ಕಾಲದ ಸಾಮಾನ್ಯ ವಿಷಯಗಳಲ್ಲಿ ಒಂದು. ಅಗತ್ಯಕ್ಕಿಂತ ಎಷ್ಟೋಪಟ್ಟು ಅಧಿಕವಾಗಿ ಪರದೆಗೆ ಕಣ್ಣು ಕೀಲಿಸಿಕೊಂಡಿರುವುದಕ್ಕೆ ಮಕ್ಕಳ ಮುಗ್ಧ ಮುಖಕ್ಕೆ ʻಸುಲೋಚನʼ ಬರುವುದು ಮಾಮೂಲಿ ಎಂಬಂತಾಗಿದೆ. ಆದರೆ ಎಷ್ಟೋ ಬಾರಿ ಮಕ್ಕಳಿಗೆ ಕನ್ನಡದ ಅಗತ್ಯವಿದೆ, ದೃಷ್ಟಿ ಸಮಸ್ಯೆಯಿದೆ ಎನ್ನುವುದೇ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಹಾಗಾಗಿ ಅವರ ವರ್ತನೆಯಲ್ಲಿ ಹಠ, ಅಳು, ಕಿರಿಕಿರಿಯಂಥವು ಕಾಣಬಹುದು. ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ ತಿಳಿಯದ ಚಿಣ್ಣರು, ತಮಗೆ ತೋಚಿದಂತೆ ಅದನ್ನು ವ್ಯಕ್ತಪಡಿಸುತ್ತಾರಷ್ಟೆ. ಬೆಳೆಯುವ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ತೊಂದರೆಯನ್ನು ಶೀಘ್ರ ಚಿಕಿತ್ಸೆಗೆ ಒಳಪಡಿಸಿದರೆ, ಮಗುವಿಗೇ ಅನುಕೂಲ ತಾನೆ? ಆದರೆ ನಿತ್ಯದ ಬದುಕಿನಲ್ಲಿ ವ್ಯತ್ಯಾಸವಾಗುವಷ್ಟು ಢಾಳಾಗಿ ದೃಷ್ಟಿದೋಷಗಳು ಇರದಿದ್ದರೆ, ಅಲ್ಪಸ್ವಲ್ಪ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಇಂಥ ಕೆಲವು ಸೂಚನೆಗಳು ಮಕ್ಕಳಲ್ಲಿ ಕಾಣುವುದೇ ಎಂಬುದನ್ನು ಹೆತ್ತವರು, ಶಿಕ್ಷಕರು, ಪಾಲಕರು ಗಮನಿಸುವುದು ಅಗತ್ಯ.

ಏಕಾಗ್ರತೆಯ ಕೊರತೆ

ಮಕ್ಕಳಲ್ಲಿ ಏಕಾಗ್ರತೆ ಇದ್ದರೆ ಅದೇ ದೊಡ್ಡ ವಿಷಯ! ಮರ್ಕಟನಂಥ ಮನಸ್ಸಿಗೆ ನೂರೆಂಟು ಕಡೆ ಹಾರುವ ಉತ್ಸಾಹ ಇರುವಾಗ, ಅದನ್ನು ಒಂದೆಡೆ ನಿಲ್ಲಿಸುವುದು ಕಷ್ಟವೇ. ಆದಾಗ್ಯೂ, ಆಯಾ ಮಕ್ಕಳ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಏಕಾಗ್ರತೆ ಇದ್ದರೆ, ಅದು ಸರಿಯಾಗಿ ಗೋಚರಿಸುತ್ತಿಲ್ಲ ಎನ್ನುವ ಕಾರಣಕ್ಕೂ ಇರಬಹುದು. ಹಾಗಾಗಿ ಅದರ ದೃಷ್ಟಿಯನ್ನೊಮ್ಮೆ ಪರಿಶೀಲಿಸಿ.

ಪಠ್ಯ ಚಟುವಟಿಕೆಯಲ್ಲಿ ತೊಂದರೆ

ಈವರೆಗಿನ ಶಾಲಾ ಚಟುವಟಿಕೆಗಳಿಗಿಂತ ಈಗೀಗಿನದ್ದು ಕಡಿಮೆಯಾಗಿದ್ದರೆ, ಮಗು ಪುಸ್ತಕದಲ್ಲಿ ಬರೆಯುವಾಗ ತಪ್ಪು ಮಾಡುವುದು ಹೆಚ್ಚಾದರೆ, ಶಾಲೆಯಲ್ಲಿ ಶಿಕ್ಷಕರು ಬೋರ್ಡ್‌ ಮೇಲೆ ಬರೆದಿದ್ದನ್ನು ಕಾಪಿ ಮಾಡಿಕೊಳ್ಳುವಾಗಲೂ ಮಗು ತಪ್ಪು ಮಾಡುತ್ತಿದ್ದರೆ, ಬೋರ್ಡಿನಲ್ಲಿದ್ದಿದ್ದನ್ನು ಅಳಿಸಬಾರದೆಂದು ಪದೇಪದೆ ಶಿಕ್ಷಕರನ್ನು ಒತ್ತಾಯಿಸುತ್ತಿದ್ದರೆ, ನೇತ್ರ ತಜ್ಞರಲ್ಲಿ ಮಗುವನ್ನು ಕರೆದೊಯ್ಯುವುದು ಸೂಕ್ತ.

ತಲೆನೋವು

ಬೇರಾವುದೇ ಸಮಸ್ಯೆ ಇಲ್ಲದೆಯೂ ಆಗಾಗ ತಲೆನೋವಿನ ಬಾಧೆ ಇದ್ದರೆ, ಆಗಾಗ ಕಣ್ಣುಜ್ಜುತ್ತಿದ್ದರೆ, ಓದುವಾಗ ಮೆಳ್ಳೆಗಣ್ಣು ಅಥವಾ ಸಣ್ಣ ಕಣ್ಣು ಮಾಡುತ್ತಿದ್ದರೆ- ಇವೆಲ್ಲವೂ ದೃಷ್ಟಿ ದೋಷದ ಸಂಕೇತ ಆಗಿರಬಹುದು. ಹಾಗಾಗಿ ಇಂಥ ಲಕ್ಷಣಗಳನ್ನೂ ಗಮನಿಸಿ, ದೃಷ್ಟಿ ತಪಾಸಣೆಯನ್ನು ಮಾಡಿಸುವುದು ಒಳ್ಳೆಯದು.

ತಲೆ ಸೊಟ್ಟ ಮಾಡುವುದು

ಇಂಥ ಕೆಲವು ದೈಹಿಕ ಸ್ವರೂಪದ ಬದಲಾವಣೆಗಳು ಮಕ್ಕಳಲ್ಲಿ ಕಂಡರೆ ಹೆತ್ತವರು ಜಾಗ್ರತೆ ಮಾಡುವುದು ಕ್ಷೇಮ. ಓದುವಾಗ, ಬರೆಯುವಾಗ ಯಾವುದೋ ಒಂದು ಕೋನದಲ್ಲಿ, ಉಳಿದ ಕಡೆಗಿಂತ ದೃಷ್ಟಿ ಚೆನ್ನಾಗಿ ಗೋಚರಿಸುತ್ತದೆ ಎಂದಾದರೆ- ಅದಕ್ಕೆ ಪೂರಕವಾಗಿ ತಲೆ ಸೊಟ್ಟ ಮಾಡುವುದು, ಅದರಲ್ಲೂ ದೂರದ ವಸ್ತುಗಳನ್ನು ನೋಡುವುದಾಗ, ಅಂಗಡಿಗಳ ಫಲಕ ಓದುವಾಗ ಅವರು ಪಡುವ ಕಷ್ಟವು, ಅವರ ದೃಷ್ಟಿ ಸಮಸ್ಯೆಯತ್ತಲೇ ಬೆರಳು ಮಾಡುತ್ತದೆ.

ಕಣ್ಣು ನೋವು

ಇದಂತೂ ನೇರವಾಗಿ ಕಣ್ಣಿನ ಸಮಸ್ಯೆಯನ್ನೇ ಪ್ರತಿನಿಧಿಸುತ್ತದೆ. ಇದರ ಜೊತೆಗೆ ತಲೆನೋವೂ ಇರಬಹುದು, ಹೊಟ್ಟೆ ತೊಳೆಸುವುದು, ವಾಂತಿಯಂಥ ಲಕ್ಷಣಗಳು ಕಂಡರೆ ವೈದ್ಯರ ದರ್ಶನ ಅಗತ್ಯ. ಸರಿಯಾಗಿ ಗೋಚರಿಸದೆ ಇದ್ದಾಗ, ಕಣ್ಣುಗಳ ಮೇಲೆ ಬೀಳುವ ಅಧಿಕ ಒತ್ತಡದಿಂದ ಉಂಟಾಗುವಂಥ ಸಮಸ್ಯೆಗಳು ಇವೆಲ್ಲ.

ಹತ್ತಿರ ಹಿಡಿಯುವುದು

ಪುಸ್ತಕವನ್ನು ಹತ್ತಿರಕ್ಕೆ ಹಿಡಿದು ಓದುವುದು, ಮೊಬೈಲ್‌ ಅಥವಾ ಟ್ಯಾಬ್‌ಗಳನ್ನು ಮುಖದ ಸಮೀಪಕ್ಕೆ ತಂದುಕೊಳ್ಳುವುದು ಇಲ್ಲವೇ ಅವುಗಳಲ್ಲಿನ ಅಕ್ಷರಗಳನ್ನು ಹಿಗ್ಗಿಸಿ ದೊಡ್ಡದು ಮಾಡಿಕೊಳ್ಳುವುದು, ಟಿವಿ ನೋಡುವಾಗ ಮುಂದೆ ಹೋಗಿ ನಿಂತುಕೊಳ್ಳುವುದು- ಇವೆಲ್ಲವೂ ಕಣ್ಣಿನ ತೊಂದರೆ ಇರಬಹುದೆಂಬ ಸೂಚನೆಗಳು. ಇಂಥವನ್ನು ತಮಗರಿವಿಲ್ಲದಂತೆಯೇ ಮಕ್ಕಳು ಮಾಡುತ್ತಿರುತ್ತಾರೆ.

ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

ವರ್ತನೆಯಲ್ಲಿನ ಬದಲಾವಣೆ

ಇದ್ದಕ್ಕಿದ್ದಂತೆ ಅಳು, ಹಠ, ಕಿರಿಕಿರಿ, ಕೋಪ ಮಾಡಿಕೊಳ್ಳುವುದು, ಶಾಲೆಯ ಬಗ್ಗೆ ಮುನಿಸು, ಓದುವ ವಿಷಯದಲ್ಲಿ ಅಸಹನೆ- ಇಂಥವೆಲ್ಲ ದೃಷ್ಟಿ ಸರಿಯಾಗಿರದ ಕಾರಣ ತೋರುವ ಹತಾಶೆ ವರ್ತನೆಗಳಿರಬಹುದು. ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಳು/ನು ಹೀಗೇಕೆ ಮಾಡುತ್ತಿದ್ದಾರೆಂಬುದನ್ನು ತಿಳಿಯಿರಿ. ಸರಿಯಾಗಿ ಕಾಣಿಸುತ್ತಿಲ್ಲ ಎಂದಾದರೆ ನೇತ್ರ ತಜ್ಞರಲ್ಲಿ ಕರೆದೊಯ್ಯಿರಿ.

Exit mobile version