Site icon Vistara News

World Hearing Day 2024: ಇಂದು ವಿಶ್ವ ಶ್ರವಣ ದಿನ: ಈ ಜಗತ್ತಿನ 150 ಕೋಟಿ ಜನರಿಗೆ ಕಿವುಡತನ ಸಮಸ್ಯೆ!

World Hearing Day

ಶ್ರವಣ ದೋಷದ ಸಮಸ್ಯೆ ವಿಶ್ವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಆಧ್ಯಯನ ವರದಿಯ ಪ್ರಕಾರ ಜಗತ್ತಿನಲ್ಲಿ 150 ಕೋಟಿ ಮಂದಿ ಕಿವುಡುತನ ಸಹಿತ ನಾನಾ ರೀತಿಯ ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2050ರಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 250 ಕೋಟಿಗೆ ತಲುಪಲಿದೆ.
ಮಾರ್ಚ್ 3 ರಂದು ಪ್ರಪಂಚದಾದ್ಯಂತ ವಿಶ್ವ ಶ್ರವಣ ದಿನವನ್ನು (World Hearing Day 2024) ಆಚರಿಸಲಾಗುತ್ತದೆ. ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟಲು ಮತ್ತು ಕಿವಿ ಹಾಗೂ ಶ್ರವಣ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯಸಂಸ್ಥೆ ವಿಶ್ವ ಶ್ರವಣ ದಿನವನ್ನು ಆಚರಿಸುತ್ತದೆ.

2024ರ ವಿಷಯ “ಮನಸ್ಥಿತಿಗಳನ್ನು ಬದಲಾಯಿಸಿ: ಸರ್ವರಿಗೂ ಕಿವಿ ಮತ್ತು ಶ್ರವಣ ಆರೈಕೆಯನ್ನು ನಿಜವಾಗಿಸೋಣʼ.
ಈ ವರ್ಷ ವಿಶ್ವ ಶ್ರವಣ ದಿನ ಸಾರ್ವಜನಿಕರು ಮತ್ತು ವೈದ್ಯಕೀಯ ಸೇವೆ ಒದಗಿಸುವವರಲ್ಲಿ ಅರಿವು ಮೂಡಿಸುವುದು ಹಾಗೂ ಮಾಹಿತಿ ಹಂಚುವ ಮೂಲಕ ಸಮಾಜದ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳಿಂದ ಎದುರಾಗುವ ಸವಾಲುಗಳನ್ನು ನಿವಾರಿಸುವ ಪ್ರಮುಖ ಉದ್ದೇಶವಾಗಿದೆ.

ಜಾಗತಿಕವಾಗಿ ಕಿವಿ ಮತ್ತು ಶ್ರವಣ ಆರೈಕೆಯ ಅಗತ್ಯವಿರುವ ಶೇ.80ರಷ್ಟು ಜನ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿಲ್ಲ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ನ್ಯೂನ್ಯತೆಯ ಬಗ್ಗೆ ಸಾಮಾಜಿಕ ತಪ್ಪುಗ್ರಹಿಕೆಗಳು ಮತ್ತು ಕಳಂಕಿತ ಮನಸ್ಥಿತಿಗಳು ಶ್ರವಣ ನ್ಯೂನ್ಯತೆಯನ್ನು ತಡೆಗಟ್ಟುವ ಮತ್ತು ಪರಿಹರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುವ ಅಂಶಗಳಾಗಿವೆ. ಹೀಗಾಗಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಸರಿಯಾದ ಗ್ರಹಿಕೆಗಳನ್ನು ಮರುರೂಪಿಸಲು ಸತ್ಯಾಧಾರಿತ ಮಾಹಿತಿಗಳನ್ನು ಹಂಚುವುದು ಕಿವಿ ಮತ್ತು ಶ್ರವಣ ಆರೈಕೆಗೆ ಅಗತ್ಯವಿರುವ ಎಲ್ಲರಿಗೂ ಅತ್ಯಗತ್ಯವಾದ ಆರೋಗ್ಯ ಸೇವೆ ಪಡೆಯುವಂತಾಗಲು ಅವಕಾಶ ದೊರಕಿಸಿಕೊಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

ಶ್ರವಣ ನ್ಯೂನ್ಯತೆಯು ವ್ಯಕ್ತಿಯ ಮಾತು – ಭಾಷೆ, ಕಲಿಕೆ, ಶೈಕ್ಷಣಿಕ, ಮಾನಸಿಕ, ಆರ್ಥಿಕ ಅಂಶಗಳ ಮೇಲೆ ಮತ್ತು ರಾಷ್ಟ್ರೀಯ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರವಣದೋಷವಿರುವ ಮಕ್ಕಳು ಪಠ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ, ಹೆಚ್ಚಿನ ವಯಸ್ಕರು ನಿರುದ್ಯೋಗದ ಸಮಸ್ಯೆ ಎದುರಿಸುತ್ತಾರೆ. ನ್ಯೂನ್ಯತೆಯು ಖಿನ್ನತೆ ಮತ್ತು ಆತಂಕ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಗಮನಿಸಬೇಕಾದ ಸಂಗತಿಗಳು

ಶ್ರವಣ ದೋಷವು ವಿಶ್ವಾದ್ಯಂತ ಹೆಚ್ಚಾಗುತ್ತಿದೆ. ಪ್ರಸ್ತುತ ವಿಶ್ವಾದ್ಯಂತ 150 ಕೋಟಿ ಜನ ಒಂದಲ್ಲ ಒಂದು ಬಗೆಯ ಶ್ರವಣ ದೋಷ ಹೊಂದಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಾಗುವ ಸಂಭವವಿದೆ; ಆಗ ಶ್ರವಣ ನ್ಯೂನ್ಯತೆ ಹೊಂದುವವರ ಸಂಖ್ಯೆ 250 ಕೋಟಿಗೂ ಹೆಚ್ಚಾಗುತ್ತದೆ. 2050ರಲ್ಲಿ ನಾಲ್ಕು ಜನರಲ್ಲಿ ಒಬ್ಬರು ಶ್ರವಣ ದೋಷ ಪಡೆದರೆ, 10 ಜನರಲ್ಲಿ ಒಬ್ಬರಿಗೆ ತೀವ್ರ ಪ್ರಮಾಣದ ಶ್ರವಣ ನ್ಯೂನ್ಯತೆ ಹೊಂದುವ ಅಪಾಯವಿದೆ.

ವಿಶ್ವಾದ್ಯಂತ 3.4 ಕೋಟಿ ಮಕ್ಕಳೂ ಸೇರಿ 43 ಕೋಟಿ ಜನ ತೀವ್ರವಾದ ಶ್ರವಣ ನ್ಯೂನ್ಯತೆಯಿಂದ ಬಳಲುತಿದ್ದಾರೆ. 13 ರಿಂದ 35 ವರ್ಷ ವಯಸ್ಸಿನ 100 ಕೋಟಿ ಯುವಕರು ತಪ್ಪಿಸಬಹುದಾದ ಶ್ರವಣ ದೋಷ ಹೊಂದುವ ಅಪಾಯದಲ್ಲಿದ್ದಾರೆ, ಮಕ್ಕಳೂ ಸೇರಿ 20 ಕೋಟಿ ಜನ ತಪ್ಪಿಸಬಹುದಾದ ಕಿವಿ ನ್ಯೂನ್ಯತೆ ಪಡೆದಿರುತ್ತಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ.25 ಕ್ಕಿಂತ ಹೆಚ್ಚು ಜನರು ಶ್ರವಣ ನ್ಯೂನ್ಯತೆ ಪಡೆದಿದ್ದಾರೆ.

ಭಾರತದಲ್ಲಿ 6.3 ಕೋಟಿ ಜನರು ಶ್ರವಣ ನ್ಯೂನ್ಯತೆ ಹೊಂದಿದ್ದಾರೆ. 2001ರ ಸಮೀಕ್ಷೆ ಪ್ರಕಾರ ಒಂದು ಲಕ್ಷ ಜನಸಂಖ್ಯೆಯಲ್ಲಿ 291 ವ್ಯಕ್ತಿಗಳು (ಹೆಚ್ಚಿನವರು 0 ರಿಂದ 14 ವಯೋಮಾನದ ಮಕ್ಕಳು) ತೀವ್ರವಾದ ನ್ಯೂನ್ಯತೆ ಹೊಂದಿದ್ದಾರೆ. ಕರ್ನಾಟಕದಲ್ಲಿ 6 ವರ್ಷದೊಳಗಿನ 20839 ಮಕ್ಕಳು ಸೇರಿದಂತೆ ಸುಮಾರು 40 ಲಕ್ಷ ಜನ ಶ್ರವಣ ನ್ಯೂನ್ಯತೆ ಪಡೆದಿದ್ದಾರೆ. ಅರ್ಧದಷ್ಟು ಪ್ರಕರಣಗಳನ್ನು ತಡೆಗಟ್ಟಬಹುದಾದರೂ ಸರಿಪಡಿಸದ ಶ್ರವಣ ನ್ಯೂನ್ಯತೆ ಶೈಕ್ಷಣಿಕ – ಸಾಮಾಜಿಕ ಬೆಂಬಲ ಮತ್ತು ಕಳೆದುಕೊಂಡ ಉತ್ಪಾದಕತೆಯ ಪರಿಣಾಮದಿಂದ ಜಾಗತೀಕವಾಗಿ ಸುಮಾರು US$ 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿಯಷ್ಟು ವಾರ್ಷಿಕ ವೆಚ್ಚವನ್ನು ಉಂಟು ಮಾಡುತ್ತದೆ).

2030 ರ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು, ಶ್ರವಣ ಆರೈಕೆ ಸೇರಿ ಎಲ್ಲಾ ಜನರು ಆರ್ಥಿಕ ಸಂಕಷ್ಠವನ್ನು ಎದುರಿಸದೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹೊಂದಿರಬೇಕು. ಹೀಗಾಗಿ ಮುಂದಿನ 10 ವರ್ಷಗಳಲ್ಲಿ (ವಿಶ್ವ ಸಂಸ್ಥೆಯ ಮದ್ಯಸ್ಥಿಕೆಗಳ ಮೂಲಕ) ಶ್ರವಣ ಆರೈಕೆ ಒದಗಿಸಲು ತಲಾ US$ 1.33 ಮಿಲಿಯನ್ ಡಾಲರ್ ಹೆಚ್ಚುವರಿ ವಾರ್ಷಿಕ ಹೂಡಿಕೆಯ ಅಗತ್ಯವಿರುತ್ತದೆ.

ಭಾರತಕ್ಕೆ ಬರೋಬ್ಬರಿ 7000 ಕೋಟಿಗೂ ಹೆಚ್ಚಿನ ವಾರ್ಷಿಕ ಹೂಡಿಕೆಯ ವೆಚ್ಚ ತಗುಲುತ್ತದೆ. ಕಿವಿ ಮತ್ತು ಶ್ರವಣ ಆರೈಕೆಯಲ್ಲಿ ಹೂಡಿಕೆ ವೆಚ್ಚ ಫಲಪ್ರದವಾಗಿರುತ್ತದೆ. ಹೂಡಿಕೆ ಮಾಡಿದ ಪ್ರತಿ ಒಂದು ಡಾಲರ್‌ಗೆ ಸುಮಾರು 16 ಪಟ್ಟು ಅಂತಾರಾಷ್ಟ್ರೀಯ ಡಾಲರ್‌ಗಳ ಆರೋಗ್ಯ ಲಾಭವನ್ನು ನೋಡಬಹುದು. ಶ್ರವಣ ದೋಷವನ್ನು ಹೊಂದಿರುವ ಶೇ. 80 ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿದ್ದಾರೆ.

ನಮ್ಮ ದೇಶದಲ್ಲಿ ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ N.P.P.C.D. (National Programme for Prevention and Control of Deafness) ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು 2007ರಲ್ಲಿ ಪ್ರಾರಂಭಿಸಲಾಗಿದೆ. ದೇಶಾದ್ಯಂತ 797 ಜಿಲ್ಲೆಗಳ ಪೈಕಿ 558 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಬಲಪಡಿಸಿ ಇಡೀ ದೇಶಕ್ಕೆ ವಿಸ್ತರಿಸಬೇಕು.

ನಾಯಕ್ – ವಾಕ್-ಶ್ರವಣ ಸಂಸ್ಥೆಯಿಂದ ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರ

ವಿಶ್ವ ಶ್ರವಣ ದಿನಾಚರಣೆಯ ಈ ಸಂದರ್ಭದಲ್ಲಿ ರಿಹ್ಯಾಬಿಲಿಟೇಷನ್ ಟ್ರಸ್ಟ್ ಸಹಯೋಗದೊಂದಿಗೆ “ನಾಯಕ್ – ವಾಕ್-ಶ್ರವಣ ಸಂಸ್ಥೆ” ಮಕ್ಕಳಿಗೆ ಉಚಿತ ಶ್ರವಣ ತಪಾಸಣಾ ಕೇಂದ್ರವನ್ನು ಆರಂಭಿಸಲಿದೆ. ಈ ಸೌಲಭ್ಯದಿಂದ ಶೈಶಾವಸ್ಥೆಯಲ್ಲಿಯೇ ಕಿವುಡುತನ ಹೊಂದಿರುವ ಮಕ್ಕಳ ನ್ಯೂನ್ಯತೆಯನ್ನು ಗುರುತಿಸಿ ಹಸ್ತಕ್ಷೇಪ ಒದಗಿಸುವ ಮೂಲಕ ಸಾಮಾನ್ಯವಾಗಿ ಕಿವಿಕೇಳುವ ಮಕ್ಕಳಂತೆ ಕಿವಿ ಕೇಳದ ಮಕ್ಕಳೂ ಸಹ ಸ್ವಾಭಾವಿಕ ವಾಕ್ ಕೌಶಲ್ಯ ಕಲಿಯಲು ಸಹಾಯವಾಗಲಿದೆ.

ಪೋಷಕರಿಗೆ ತಮ್ಮ ಶಿಶುಗಳಿಗೆ ಕಿವಿ ಕೇಳುತ್ತಿಲ್ಲ ಎಂದು ಅನಿಸಿದಲ್ಲಿ ಅಥವಾ ಮಕ್ಕಳ ವಾಕ್ ಶ್ರವಣ ಬೆಳವಣಿಗೆಯ ಹಂತಗಳು ತಡವಾದಲ್ಲಿ ಈ ಕೇಂದ್ರದಲ್ಲಿ ಕಿವಿ ಪರೀಕ್ಷಿಸಿಕೊಳ್ಳಬಹುದು. ಇದೇ ಮಾರ್ಚ್ 3ರ ಭಾನುವಾರದಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು ಉಚಿತ ಶ್ರವಣ ತಪಾಸಣೆ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ವಿಜ್ಞಾನಿ ಗಟಗಟ ಕುಡಿದಿದ್ದರು!

ಪ್ರತಿ ಮಂಗಳವಾರ ಈ ಕೇಂದ್ರದಲ್ಲಿ 3 ವರ್ಷದೊಳಗಿನ ಪುಟಾಣಿಗಳಿಗೆ ಉಚಿತವಾಗಿ ಶ್ರವಣ ತಪಾಸಣೆ ನಡೆಸಲಾಗುವುದು ಹೆಚ್ಚಿನ ಮಾಹಿತಿಗೆ 080-42075691 ದೂರವಾಣಿಗೆ ಸಂಪರ್ಕಿಸಬಹುದು.

Exit mobile version