Site icon Vistara News

Toothbrush Using Tips: ನಿಮ್ಮ ಬ್ರಷ್‌ ಬದಲಿಸಿದ್ದು ಯಾವಾಗ ನೆನಪಿದೆಯಾ?

Toothbrush Using Tips

ನಮ್ಮ ವೈಯಕ್ತಿಕ ಶುಚಿತ್ವದ ವಿಷಯ ಬಂದಾಗ ನಾವೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉದಾ, ನಮ್ಮ ಬಾಚಣಿಕೆ ಅಥವಾ ನಮ್ಮ ಹಲ್ಲುಜ್ಜುವ ಬ್ರಷ್‌ಗಳ ಬಗ್ಗೆ (Toothbrush Using Tips) ನಾವೆಷ್ಟು ಗಮನ ನೀಡುತ್ತೇವೆ? ಬಾಚಣಿಕೆಯನ್ನು ಯಾವಾಗ ಶುಚಿ ಮಾಡುತ್ತೇವೆ? ಹಲ್ಲುಜ್ಜುವ ಬ್ರಷ್ ಎಷ್ಟು ತಿಂಗಳಿಗೊಮ್ಮೆ ಬದಲಾಯಿಸುತ್ತೇವೆ? ಇಂಥ ವಿಷಯಗಳು ಸಣ್ಣದಾದರೂ ಬಾಯಿಯ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ನಿರ್ಧರಿಸುತ್ತವೆ. ಈ ಕುರಿತಾದ ಇನ್ನಷ್ಟು ವಿವರಗಳು ಇಲ್ಲಿವೆ. ಯಾವ ವಸ್ತುವನ್ನು ಶುಚಿ ಮಾಡುವುದಕ್ಕೆ ಬಳಸುತ್ತೇವೋ ಅದನ್ನು ಮೊದಲು ಸ್ವಚ್ಛ ಮಾಡಿಕೊಳ್ಳಬೇಕಾದ್ದು ಅಗತ್ಯ. ಅದರಲ್ಲೂ ಬಾಯಿಯ ಆರೋಗ್ಯ ರಕ್ಷಣೆಗೆ ಉಪಯೋಗವಾಗುವ ಬ್ರಷ್‌ಗಳೇ ಕೊಳೆಯಾಗಿದ್ದರೆ ಹಲ್ಲು, ಒಸಡುಗಳ ಸ್ಥಿತಿ ಎನು? ಆದರೆ ಎಷ್ಟು ಜನ ಈ ಬಗ್ಗೆ ಲಕ್ಷ್ಯ ವಹಿಸುತ್ತಾರೆ? ಕಾಲಕಾಲಕ್ಕೆ ಅದನ್ನು ಬದಲಾಯಿಸುತ್ತಾರೆ? ಯಾವಾಗ ಬದಲಾಯಿಸಬೇಕು ಎನ್ನುವ ಮಾಹಿತಿ ಎಷ್ಟು ಜನರಲ್ಲಿ ಇರುತ್ತದೆ? ಅದನ್ನೆಲ್ಲ ಯಾಕಾಗಿ ತಿಳಿದುಕೊಳ್ಳಬೇಕು?

ಬ್ರಷ್‌ ಹೇಗಿರಬೇಕು?

ಈ ಪ್ರಶ್ನೆಗೆ ಉತ್ತರ ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಯಾವುದನ್ನೇ ತೆಗೆದುಕೊಂಡರು, ಅದರ ಬಳಕೆಯ ತುದಿ ಒರಟಾಗಿರಬಾರದು. ಹಾಗಿದ್ದರೆ ಹಲ್ಲು ಮತ್ತು ಒಸಡುಗಳಿಗೆ ಹಾನಿ. ಬದಲಿಗೆ, ಮೃದುವಾಗಿರುವ ಬ್ರಿಸಲ್‌ಗಳು ಇರುವುದನ್ನು ಆಯ್ದುಕೊಳ್ಳಿ. ಅವುಗಳಲ್ಲಿ ಹಾರ್ಡ್‌, ಮೀಡಿಯಂ, ಸಾಫ್ಟ್‌, ಅಲ್ಟ್ರಾ ಸಾಫ್ಟ್‌ ಎಂಬ ನಾಲ್ಕು ವಿಧಗಳಿವೆ.
ಸಾಫ್ಟ್‌ ಮತ್ತು ಅಲ್ಟ್ರಾ ಸಾಫ್ಟ್‌ ಬ್ರಷ್‌ಗಳು ಹಲ್ಲುಗಳು ಸುಂದರವಾಗಿ ಒಂದೇ ಸಾಲಿನಲ್ಲಿದ್ದು, ಹುಳುಕು-ಕಲೆಗಳು ಇಲ್ಲದವರಿಗೆ ಸೂಕ್ತವಾದದ್ದು. ಆದರೆ ಹಲ್ಲುಗಳು ಸಾಲಿನಲ್ಲಿದ್ದೆ ಸೊಟ್ಟವಾಗಿದ್ದರೆ, ಮೀಡಿಯಂ ಬೇಕಾಗಬಹುದು. ತೀರಾ ಅಡ್ಡಾದಿಡ್ಡಿಯಾಗಿದ್ದು, ಕಲೆಗಳೂ ಇದ್ದರೆ ಒರಟಾದವು ಅಗತ್ಯವಾಗಬಹುದು. ಆದರೆ ಯಾವುದನ್ನೇ ತೆಗೆದುಕೊಂಡರೂ, ಅದು ಬಾಯಿಯ ಎಲ್ಲಾ ದಿಕ್ಕಿಗೂ ಸುಲಭಕ್ಕೆ ಹೋಗಿ ಸ್ವಚ್ಛ ಮಾಡುವಂತಿರಬೇಕು.

ಯಾವಾಗ ಬದಲಿಸಬೇಕು?

ಪ್ರತಿ 3-4 ತಿಂಗಳಿಗೆ ಬ್ರಷ್‌ ಬದಲಿಸಬೇಕು ಎಂಬುದು ದಂತಾರೋಗ್ಯ ತಜ್ಞರ ಅಭಿಮತ. ಕೆಲವೊಮ್ಮೆ ಅದಕ್ಕೂ ಮುನ್ನವೇ ಬದಲಿಸುವುದು ಬೇಕಾಗಲೂಬಹುದು. ಬ್ರಷ್‌ ತುದಿಯ ಕೂದಲು ಆಕಾರಗೆಟ್ಟಿದ್ದರೆ, ಸೊಟ್ಟಗಾಗಿ ತನ್ನ ಕೆಲಸ ಮಾಡಲು ಅಸಮರ್ಥವಾಗಿದ್ದರೆ ಅದನ್ನು ಬದಲಾಯಿಸಬೇಕು. ಅದಿಲ್ಲದಿದ್ದರೆ, ಹಲ್ಲಿನ ಎನಾಮಲ್‌ ಕವಚಕ್ಕೆ ಹಾನಿಯಾಗಬಹುದು; ಒಸಡುಗಳು ಗಾಯವಾಗಿ ರಕ್ತ ಸೋರಬಹುದು; ಸೂಕ್ಷ್ಮ ಸಂವೇದನೆಗಳು ಹೆಚ್ಚಬಹುದು.
ಯಾವುದಾದರೂ ಸೋಂಕು ತಗುಲಿದ್ದರೆ ಬ್ರಷ್‌ ಬದಲಾವಣೆ ಅಗತ್ಯ. ಅಂದರೆ ಜ್ವರ, ಗಂಟಲುನೋವು, ಕೆಮ್ಮು, ಶ್ವಾಸಕೋಶದ ಸೋಂಕುಗಳು- ಇಂಥವು ಬಂದರೆ, ಸೋಂಕು ಗುಣವಾದ ಬಳಿಕ ಬ್ರಷ್‌ ಬದಲಿಸಿ. ಇದು ಬಾಯಿಯ ಆರೋಗ್ಯದ ದೃಷ್ಟಿಯಿಂದ ಅಗತ್ಯವಾದದ್ದು. ಒಂದೊಮ್ಮೆ ಸೋಂಕಿತರ ಆರೈಕೆಯನ್ನು ಯಾರಾದರೂ ಮಾಡುತ್ತಿದ್ದರೆ, ಅವರೂ ಬ್ರಷ್‌ ಬದಲಿಸುವುದು ಒಳ್ಳೆಯದು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

ತಂತ್ರಗಳು

ಬ್ರಷ್‌ ಮಾಡುವ ತಂತ್ರಗಳನ್ನು ಸರಿಯಾಗಿ ರೂಢಿಸಿಕೊಳ್ಳಿ. ಅದಿಲ್ಲದಿದ್ದರೆ ಹಲ್ಲುಗಳ ಮೇಲೆ ಪ್ಲೇಕ್‌ನಂತೆ ಕೂರುವುದು, ಬಣ್ಣಗೆಡುವುದು, ಹುಳುಕಾಗುವುದು ಹೆಚ್ಚುತ್ತದೆ. ಒರಟಾಗಿ ಉಜ್ಜಿದರೆ ಎನಾಮಲ್‌ ಹಾಳಾಗಿಬಿಡುತ್ತದೆ. ಹಾಗಾಗಿ ಬಾಯಿಯ ಆರೋಗ್ಯ ರಕ್ಷಣೆಯಲ್ಲಿ ಈ ಎಲ್ಲ ಅಂಶಗಳೂ ಮುಖ್ಯವಾಗಿವೆ.
ಬ್ರಷ್‌ಗಳನ್ನು ಹೇಗೆ, ಎಲ್ಲಿ ಇರಿಸಿಕೊಳ್ಳುತ್ತೀರಿ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಒಂದೇ ಕಡೆ ಹತ್ತಾರು ಬ್ರಷ್‌ಗಳನ್ನು ತುರುಕಿದಂತೆ ಇರಿಸಿಕೊಳ್ಳುವವರು ನೀವಾಗಿದ್ದರೆ, ಈ ಮೂಲಕವೂ ಸೋಂಕುಗಳು ಬರಬಹುದು ಎನ್ನುವುದು ತಿಳಿದಿರಲಿ. ಹಾಗಾಗಿ ಬ್ರಷ್‌ ಮೂಲಕ ಬ್ಯಾಕ್ಟೀರಿಯ ಬರಬಾರದೆಂದರೆ, ಅದಕ್ಕೊಂದು ಸರಿಯಾದ ಕೇಸ್‌ ಹಾಕಿ ಇರಿಸಿಕೊಳ್ಳಿ.

Exit mobile version