ಬೆಂಗಳೂರು: ಯುಗಾದಿ ಹಬ್ಬ (Ugadi 2023) ಇನ್ನೇನು ಬಂದೇ ಬಿಟ್ಟಿತು. ಹಿಂದೂಗಳ ಹೊಸ ವರ್ಷವಾದ ಈ ದಿನ ಎಲ್ಲೆಡೆ ಮಾವಿನ ತೋರಣ ಕಟ್ಟಿ, ಬೇವು ಬೆಲ್ಲ ಸೇವಿಸಿ, ಜೀವನದಲ್ಲಿ ಸಿಹಿ ಕಹಿ ಎರಡನ್ನೂ ಸಮಾನವಾಗಿ ಎದುರಿಸೋಣ ಎನ್ನುತ್ತಾ ಖುಷಿಹಂಚಿಕೊಳ್ಳುವುದು ಸಂಪ್ರದಾಯ. ಹಿಂದೂಗಳ ಹಬ್ಬವೆಂದ ಮೇಲೆ ಅಲ್ಲಿ ತರೇವಾರು ತಿನಿಸುಗಳು ಇರಲೇಬೇಕು. ಸಂಭ್ರಮಕ್ಕೆ ಮೆರಗು ನೀಡುವುದೇ ನಮ್ಮ ವಿಶೇಷ ಊಟ. ಈ ಹಬ್ಬಕ್ಕೆ ವಿಶೇಷವಾಗಿ ಏನು ಮಾಡುವುದು ಎನ್ನುವ ಯೋಚನೆಯಲ್ಲಿ ನೀವಿದ್ದರೆ ಇಲ್ಲಿದೆ ನಿಮಗಾಗಿ ಸ್ಪೆಷಲ್ ಮೆನು.
ಕೋಸಂಬರಿ
ಬೇಕಾಗುವ ಸಾಮಾಗ್ರಿಗಳು:
1/2 ಕಪ್ ಹೆಸರು ಬೇಳೆ
4 ಚಮಚ ತೆಂಗಿನ ತುರಿ
1 ಚಮಚ ನಿಂಬೆ ರಸ
1 ಚಮಚ ಸಾಸಿವೆ
ಸ್ವಲ್ಪ ಕರಿಬೇವಿನ ಸೊಪ್ಪು
1 ಕಪ್ ತುರಿದ ಸೌತೆಕಾಯಿ
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಚಮಚ ಅಡುಗೆ ಎಣ್ಣೆ
1/4 ಚಮಚ ಇಂಗು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಹೆಸರು ಬೇಳೆಯನ್ನು ಒಂದು ಗಂಟೆಯ ಕಾಲ ನೀರಿನಲ್ಲಿ ನೆನೆಸಿಡಿ. ಒಂದು ಪಾತ್ರೆಯಲ್ಲಿ ತುರಿದ ಸೌತೆಕಾಯಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ನಿಂಬೆ ರಸ, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ನೆನೆಸಿಟ್ಟಿದ್ದ ಹೆಸರು ಬೇಳೆಯನ್ನು ಹಾಕಿ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಇಂಗು, ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಸಿಡಿಯಲು ಬಿಡಿ. ನಂತರ ಅದನ್ನು ಸೌತೆಕಾಯಿ ಮಿಶ್ರಣವಿರುವ ಪಾತ್ರೆ ಸೇರಿಸಿ ಚೆನ್ನಾಗಿ ಕಲಸಿ. ಅಲ್ಲಿಗೆ ಕೋಸಂಬರಿ ಸವಿಯಲು ಸಿದ್ಧ.
ಬೇವು ಬೆಲ್ಲ
ಬೇಕಾಗುವ ಸಾಮಾಗ್ರಿ
1/4 ಕಪ್ ಪುಟಾಣಿ ಅಥವಾ ಹುರಿಗಡಲೆ
2-4 ಚಮಚ ಬೆಲ್ಲ
4 ಬಾದಾಮಿ
4 ಗೋಡಂಬಿ
1 ಚಮಚ ಬೇವಿನ ಹೂವು
4 ಬೇವಿನ ಎಲೆ (ಬೇಕಾದಲ್ಲಿ)
ಒಂದು ಏಲಕ್ಕಿ
ಮಾಡುವ ವಿಧಾನ
ಮೊದಲಿಗೆ ಪುಟಾಣಿ ಅಥವಾ ಹುರಿಗಡಲೆಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಅದಕ್ಕೆ ಬಾದಾಮಿ, ಗೋಡಂಬಿ, ಬೆಲ್ಲ, ಏಲಕ್ಕಿ, ಬೇವಿನ ಹೂವು ಮತ್ತು ಬೇವಿನ ಎಲೆ ಸೇರಿಸಿ ಪುನಃ ಪುಡಿ ಮಾಡಿ. ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ದೇವರಿಗೆ ನೈವೇದ್ಯ ಮಾಡಿ ಸೇವಿಸಿ.
ಬೇಳೆ ಹೋಳಿಗೆ
ಬೇಕಾಗುವ ಸಾಮಾಗ್ರಿಗಳು:
(ಹೂರಣಕ್ಕೆ)
1/2 ಕಪ್ ಕಡ್ಲೆ ಬೇಳೆ
1 1/2 ಕಪ್ ನೀರು
1/2 ಕಪ್ ಪುಡಿ ಮಾಡಿದ ಬೆಲ್ಲ
1 ಚಿಟಿಕೆ ಅರಿಶಿನ
1 ಚಮಚ ತುಪ್ಪ
(ಹಿಟ್ಟಿಗೆ)
1/2 ಕಪ್ ಮೈದಾ ಹಿಟ್ಟು
1/4 ಟೀ ಚಮಚ ಅರಿಶಿನ
2 ಚಮಚ ಎಣ್ಣೆ
1 ಪಿಂಚ್ ಉಪ್ಪು
ಅಗತ್ಯವಿರುವಂತೆ ನೀರು
4 ಟೀ ಚಮಚ ತುಪ್ಪ
ಮಾಡುವ ವಿಧಾನ
(ಹಿಟ್ಟು ತಯಾರಿಕೆ)
ಮೈದಾ ಹಿಟ್ಟು, ಅರಿಶಿಣ ಪುಡಿ, ಉಪ್ಪು ಮತ್ತು ನೀರನ್ನು ಬೆರೆಸಿ ಹಿಟ್ಟನ್ನು ಒರೆದುಕೊಳ್ಳುವ ಹದಕ್ಕೆ ತಯಾರಿಸಿ. ಹಿಟ್ಟನ್ನು ಸಿದ್ಧಪಡಿಸಿದ ನಂತರ, ಅದನ್ನು ಮುಚ್ಚಿ ಮತ್ತು 30 ನಿಮಿಷಗಳ ಕಾಲ ನೆನೆಯಲು ಬಿಡಿ.
(ಹೂರಣ)
ಕುಕ್ಕರ್‌ನಲ್ಲಿ 1-2 ಕಪ್ ನೀರಿನೊಂದಿಗೆ ಕಡ್ಲೆ ಬೇಳೆ, ಅರಿಶಿಣ ಪುಡಿಯನ್ನು ಸೇರಿಸಿ ಬೇಯಿಸಿ. ನಂತರ ಮುಚ್ಚಳ ತೆಗೆದು ಹೆಚ್ಚುವರಿ ನೀರನ್ನು ಸೋಸಿಕೊಳ್ಳಿ ಮತ್ತು ಬೇಯಿಸಿದ ಬೇಳೆಯನ್ನು ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ. ಸಣ್ಣ ಉರಿಯಲ್ಲಿ ಪ್ಯಾನ್ ಒಂದನ್ನು ಬಿಸಿ ಮಾಡಿ. ಬಾಣಲೆಗೆ 1 ಚಮಚ ತುಪ್ಪ ಸೇರಿಸಿ, ಬೆಲ್ಲ ಸೇರಿಸಿ ಮತ್ತು ಬೆಲ್ಲ ಸಂಪೂರ್ಣವಾಗಿ ಕರಗಲು ಬಿಡಿ. ಬೇಯಿಸಿದ ಕಡ್ಲೆ ಬೇಳೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ದಪ್ಪವಾದ ನಂತರ, ಚೆನ್ನಾಗಿ ಕಲಸಿ, ಹದವಾದ ಹೂರಣ ಮಾಡಿಟ್ಟುಕೊಳ್ಳಿ.
(ಹೋಳಿಗೆ ತಯಾರಿಸುವುದು)
ಮೊದಲಿಗೆ ಮೈದಾ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಅದನ್ನು ಸ್ವಲ್ಪ ಅಗಲಿಸಿಕೊಂಡು ಹೂರಣ ತುಂಬಿಸಿ. ಆ ಉಂಡೆಯನ್ನು ಚಪಾತಿಯಂತೆ ಒರೆದಿಟ್ಟುಕೊಂಡು ತವಾದ ಮೇಲೆ ಹಾಕಿ ಬೇಯಿಸಿ. ಎರಡೂ ಬದಿ ಬೇಯಿಸಿದ ನಂತರ ನಿಮ್ಮ ಹೋಳಿಗೆ ಸವಿಯಲು ಸಿದ್ಧ.
ಸಿಹಿ ಪೊಂಗಲ್
ಬೇಕಾಗುವ ಸಾಮಾಗ್ರಿಗಳು:
1/4 ಕಪ್ ಹೆಸರು ಬೇಳೆ
1/2 ಕಪ್ ಅಕ್ಕಿ
4 ಕಪ್ ಹಾಲು
250 ಗ್ರಾಂ ಪುಡಿ ಬೆಲ್ಲ
10 ಗೋಡಂಬಿ
10 ಬಾದಾಮಿ
10 ಒಣದ್ರಾಕ್ಷಿ
4 ಚಮಚ ತುಪ್ಪ
1 ಕಪ್ ನೀರು
1 ಚಮಚ ಪುಡಿ ಮಾಡಿದ ಏಲಕ್ಕಿ
ಮಾಡುವ ವಿಧಾನ
ಅಕ್ಕಿ ಮತ್ತು ಬೇಳೆಯನ್ನು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ. ಅದರಲ್ಲಿ ಪುಡಿ ಮಾಡಿದ ಬೆಲ್ಲ ಹಾಕಿ 1/2 ಕಪ್ ನೀರು ಹಾಕಿ ಕರಗಲು ಬಿಡಿ. ಅದು ಕರಗಿದ ಮೃದುವಾದ ನಂತರ ಗ್ಯಾಸ್ ಆಫ್ ಮಾಡಿ. ಬಾಣಲೆಗೆ ಹಾಲು ಹಾಕಿ ಕುದಿಯಲು ಬಿಡಿ. ಈಗ ಅಕ್ಕಿ ಮತ್ತು ಬೇಳೆಯನ್ನು ಸೋಸಿ ಹಾಲಿಗೆ ಸೇರಿಸಿ. 1/2 ಕಪ್ ನೀರು ಸೇರಿಸಿ ಮತ್ತು 10-15 ನಿಮಿಷ ಬೇಯಲು ಬಿಡಿ. ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಒಣದ್ರಾಕ್ಷಿ, ಬಾದಾಮಿ ಮತ್ತು ಗೋಡಂಬಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಅವುಗಳನ್ನು ಫ್ರೈ ಮಾಡಿ. ಈಗ ಹಾಲಿನ ಮಿಶ್ರಣಕ್ಕೆ ಹುರಿದ ಬೀಜಗಳು, ಬೆಲ್ಲದ ಪೇಸ್ಟ್ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಇನ್ನೊಂದು 10 ನಿಮಿಷ ಬೇಯಲು ಬಿಡಿ.
ಮಾವಿನಕಾಯಿ ಚಿತ್ರಾನ್ನ
ಬೇಕಾಗುವ ಸಾಮಾಗ್ರಿಗಳು:
1 ಕಪ್ ಅಕ್ಕಿ
2 ಚಮಚ ಹುರಿದ ಕಡಲೆಬೀಜ
1 ಚಮಚ ಕಡಲೆ ಬೇಳೆ
1/4 ಚಮಚ ಇಂಗು
1/4 ಚಮಚ ಅರಿಶಿಣ
1 ಚಮಚ ಅಡುಗೆ ಎಣ್ಣೆ
ಒಂದೆರೆಡು ಒಣ ಮೆಣಸು
3/4 ಕಪ್ ತುರಿದ ಹಸಿ ಮಾವು
1 ಚಮಚ ಸಾಸಿವೆ ಕಾಳು
1 ಚಮಚ ಉದ್ದಿನಬೇಳೆ
2 ಕರಿಬೇವಿನ ಸೊಪ್ಪು
3 ಚಮಚ ತುರಿದ ತೆಂಗಿನಕಾಯಿ ಮತ್ತು ರುಚಿಗೆ ತಕ್ಕಂತೆ ಉಪ್ಪು.
ಮಾಡುವ ವಿಧಾನ
ಮೊದಲಿಗೆ ಅನ್ನವನ್ನು ಮಾಡಿಟ್ಟುಕೊಳ್ಳಿ. ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಇಂಗು, ಒಣ ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಸೇರಿಸಿ. ಅವು ಸಿಡಿಯಲಾರಂಭಿಸಿದಾಗ ತುರಿದ ಮಾವಿನಕಾಯಿ ಮತ್ತು ಅರಿಶಿಣ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಮಾವು ಕುಗ್ಗಿ ಸಣ್ಣವಾಗುವವರೆಗೂ ಹುರಿಯಿರಿ. ನಂತರ ಬೇಯಿಸಿದ ಅನ್ನವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.