ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದು ಗಾದೆಯೇ ಹೇಳುವಂತೆ, ಉಪ್ಪಿಲ್ಲದೆ ರುಚಿಯಾಗಿ ತಿನ್ನುವುದು ಸಾಧ್ಯವಿಲ್ಲ. ಉಪ್ಪಿಲ್ಲದ ಊಟ ಉಣ್ಣುವುದು ಬಲು ಕಷ್ಟ. ಇಂತಹ ಉಪ್ಪು ಜೀವನದಲ್ಲಿ ಎಷ್ಟು ಬೇಕೋ ಅಷ್ಟಿದ್ದರೆ ಹೊಟ್ಟೆಗೂ ದೇಹಕ್ಕೂ ಹಿತ. ಇಂತಹ ಉಪ್ಪಿನಿಂತ ಕೇವಲ ಅಡುಗೆಗಷ್ಟೇ ಲಾಭ ಎಂದು ನೀವಂದುಕೊಂಡರೆ ತಪ್ಪಾದೀತು. ಅಡುಗೆಮನೆಯ ವಸ್ತುಗಳಿಂದ ಕೇವಲ ಅಡುಗೆಯಷ್ಟೇ ಅಲ್ಲ. ಹಲವು ಕೆಲಸಗಳನ್ನು ಮಾಡಬಹುದು ಎಂಬುದನ್ನು ನಾವು ಅರಿತುಕೊಂಡರೆ, ಆಪತ್ಕಾಲಕ್ಕೆ ಇವೆಲ್ಲವೂ ಸಹಾಯಕ್ಕೆ ಬರುತ್ತವೆ. ಹಾಗಾಗಿ, ಇಪ್ಪಿನ ಉಪಯೋಗವನ್ನೂ ನಾವು ಅರಿತುಕೊಳ್ಳುವ ಅಗತ್ಯವಿದೆ. ಉಪ್ಪು ಕೇವಲ ಅಡುಗೆಗಷ್ಟೇ ಅಲ್ಲ. ಕ್ಲೀನ್ ಮಾಡಲು ಅತ್ಯಂತ ಸುಲಭದ ಹಾಗೆಯೇ ಪರಿಣಾಮಕಾರಿ ಉಪಾಯ. ಇದು ಹಲವೆಡೆ ಯಾವುದೇ ಕ್ಲೀನಿಂಗ್ ಏಜೆಂಟ್ ಲಿಕ್ವಿಡ್ ಮಾಡದ ಮ್ಯಾಜಿಕ್ ಅನ್ನು ಮಾಡಿ ಬಿಡುತ್ತದೆ. ಬನ್ನಿ, ಯಾವೆಲ್ಲ ಕ್ಲೀನಿಂಗ್‌ಗಾಗಿ ಉಪ್ಪನ್ನು ಬಳಸುವುದರಿಂದ (Use Salt For Cleaning) ಲಾಭವಿದೆ ನೋಡೋಣ.
ಕಿಚನ್ ಕ್ಲೀನ್ ಆಗಿ ನೀವು ಇಟ್ಟುಕೊಂಡಿರಬಹುದು. ಆದರೆ ನಿಮ್ಮ ಕಟ್ಟಿಂಗ್ ಬೋರ್ಡನ್ನು ಯಾವಾಗ ಕ್ಲೀನ್ ಮಾಡಿದ್ದೀರಿ? ನೀವು ನಿಮ್ಮ ಪಾತ್ರೆಯನ್ನು ತೊಳೆದಂತೆ, ತರಕಾರಿ ಕತ್ತರಿಸಲು ಬಳಸುವ ಕಟ್ಟಿಂಗ್ ಬೋರ್ಡ್ ಅನ್ನೂ ಆಗಾಗ ಚೆನ್ನಾಗಿ ಸ್ವಚ್ಛಗೊಳಿಸುತ್ತಲೇ ಇರಬೇಕು. ಇದನ್ನು ಸ್ವಚ್ಛಗೊಳಿಸುವ ವಿಧಾನ ಬಹಳ ಸಿಂಪಲ್. ಸ್ವಲ್ಪ ಉಪ್ಪನ್ನು ಕಟ್ಟಿಂಗ್ ಬೋರ್ಡ್ ಮೇಲೆ ಸಿಂಪಡಿಸಿ. ಅರ್ಧ ನಿಂಬೆಹಣ್ಣನ್ನು ತೆಗೆದುಕೊಂಡು ಇಡೀ ಕಟ್ಟಿಂಗ್ ಬೋರ್ಡನ್ನು ಚೆನ್ನಾಗಿ ತಿಕ್ಕಿ ನೀರಿನಿಂದ ಆಮೇಲೆ ಸ್ವಚ್ಛಗೊಳಿಸಿ. ಉಪ್ಪು ಹಾಗೂ ನಿಂಬೆಹಣ್ಣಿ ಇವೆರಡೂ ಪರಸ್ಪರ ವರ್ತಿಸಿ ಕಟ್ಟಿಂಗ್ ಬೋರ್ಡ್ ಮೇಲಿರುವ ಹಠಮಾರಿ ಕಲೆಗಳನ್ನೂ ಓಡಿಸಿ ನಿಮ್ಮ ಕಟ್ಟಿಂಗ್ ಬೋರ್ಡ್ ಹೊಸದರಂತೆ ಫಳಫಳನೆ ಹೊಳೆಯುವಂತೆ ಮಾಡುತ್ತದೆ. ಇದರಿಂದ ಕಟ್ಟಿಂಗ್ ಬೋರ್ಡ್‌ನ ಮೇಲಿರುವ ಹಳೆ ಕಲೆಗಳು, ಬ್ಯಾಕ್ಟೀರಿಯಾಗಳು ಎಲ್ಲವೂ ನಿಂಬೆ ಹಾಗೂ ಉಪ್ಪಿನ ಶಕ್ತಿಯಿಂದ ಮಾಯವಾಗುತ್ತದೆ.
ಭಾರತೀಯರಾದ ನಮ್ಮ ಅಡುಗೆಮನೆಯಲ್ಲಿ ನಾವು ಬಹಳಷ್ಟು ಬಾರಿ ತುಪ್ಪ ಎಣ್ಣೆಯನ್ನು ಧಾರಾಳವಾಗಿ ಬಳಸುತ್ತೇವೆ. ಇಂತಹ ಸಂದರ್ಭ ನಮ್ಮ ಬಾಣಲೆಗಳು, ತವಾಗಳು ಎಣ್ಣೆಯುಕ್ತವಾಗುವುದುಂಟು. ಈ ಹಠಮಾರಿ ಎಣ್ಣೆಯನ್ನು ತೊಳೆಯಲು ಕೆಲವೊಮ್ಮೆ ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದೆ. ಇಂತಹ ಸಂದರ್ಭ ಉಪ್ಪು ನೆರವಿಗೆ ಬರುತ್ತದೆ. ಬಾಣಲೆ ಅಥವಾ ತವಾ ಬಿಸಿ ಇರುವಾಗಲೇ ಉಪ್ಪನ್ನು ಚೆನ್ನಾಗಿ ಎಲ್ಲ ಭಾಗಗಳಿಗೂ ಚಿಮುಕಿಸಿ. ಹತ್ತು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ಪಾತ್ರೆ ತೊಳೆಯುವ ಸ್ಕ್ರಬ್‌ನಲ್ಲಿ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆಯಿರಿ. ಉಪ್ಪು ಎಲ್ಲ ಗ್ರೀಸ್ ಅನ್ನೂ ಹೀರಿಕೊಂಡು ಅದನ್ನು ಬುಡದಿಂದಲೇ ತೊಲಗಿಸುವ ಕಾರ್ಯ ಮಾಡುತ್ತದೆ.
ನಿಮ್ಮ ಕಿಚನ್ ಸಿಂಕ್ ಆಗಾಗ ಕಸಕಟ್ಟಿದಂತಾಗಿ ಬ್ಲಾಕ್ ಆಗುತ್ತದೆಯೇ? ಹಾಗಾದರೆ ಅದಕ್ಕೂ ಉಪ್ಪಿನಲ್ಲಿ ಉತ್ತರವಿದೆ. ಅರ್ಧ ಕಪ್ ಆಗುವಷ್ಟು ಉಪ್ಪನ್ನು ಸಿಂಕ್‌ಗೆ ಹಾಗೆಯೇ ಸುರಿಯಿರಿ. ನಂತರ ಬಿಸಿ ಬಿಸಿ ಕುದಿಯುವ ನೀರನ್ನು ಸಿಂಕ್‌ಗೆ ಹಾಕಿ. ಸಿಂಕ್‌ನ ಒಳಗೆ ಅಂಟಿಕೊಂಡ ಎಲ್ಲ ಕೊಳೆಯೂ ಕೊಚ್ಚಿಕೊಂಡು ಹೋಗಿ, ಸಿಂಕ್‌ನ ಹರಿದುಹೋಗುವ ದ್ವಾರ ಕ್ಲೀನ್ ಆಗುತ್ತದೆ. ನೀರು ಸರಾಗವಾಗಿ ಹರಿದು ಹೋಗುತ್ತದೆ.
ನಿಮ್ಮ ಬಳಿ ಇರುವ ಹಿತ್ತಾಳೆ, ತಾಮ್ರದ ಪಾತ್ರೆಗಳೆಲ್ಲ ಕಪ್ಪುಕಪ್ಪಾಗಿಬಿಡುತ್ತದೆಯೋ? ಹಾಗಿದ್ದರೆ ಅದನ್ನು ತೊಳೆಯಲು ನಿಮ್ಮ ಡಿಶ್ ವಾಶರ್ ಲಿಕ್ವಿಡ್ ಹಾಕಿ ಉಜ್ಜಿ ಉಜ್ಜಿ ಕೈ ನೋಯುತ್ತಿದೆಯೋ? ಹಾಗಿದ್ದರೆ ಅದಕ್ಕೆ ಅದಕ್ಕೂ ಉಪ್ಪಿನಲ್ಲಿ ಉತ್ತರವಿದೆ. ಉಪ್ಪು, ಮೈದಾ ಹಾಗೂ ವಿನೆಗರ್ ಇವು ಮೂರನ್ನೂ ಒಂದೇ ಪ್ರಮಾಣದಲ್ಲಿ ಬೆರೆಸಿ ಹಿಟ್ಟಿನಂತೆ ಮಾಡಿ. ಅದನ್ನು ಪಾತ್ರೆಯ ಮೇಲ್ಮೈಗೆ ಹಚ್ಚಿ. ನಂತರ ಚೆನ್ನಾಗಿ ತಿಕ್ಕಿ ತೊಳೆಯಿರಿ. ನಿಮ್ಮ ಕಪ್ಪಾದ ಪಾತ್ರೆಗಳೆಲ್ಲ ಫಳಫಳ ಹೊಳೆಯುತ್ತದೆ. ದೇವರಿಗೆ ಹಚ್ಚುವ ದೀಪವನ್ನು ತೋಳೆಯಲೂ ಈ ಉಪಾಯವನ್ನು ಮಾಡಬಹುದು.
ಇದನ್ನೂ ಓದಿ: Mattress Buying Guide: ಹಾಸಿಗೆಗಳಲ್ಲಿ ಎಷ್ಟೊಂದು ವಿಧ? ಯಾವುದು ಸೂಕ್ತ ಆಯ್ಕೆ ಮಾಡಿಕೊಳ್ಳಿ
ಕಾಫಿ ಹಾಗೂ ಚಹಾದ ಪಾತ್ರೆಗಳ್ಲಲಿಯೂ ಕೆಲವೊಮ್ಮೆ ಹಠಮಾರಿ ಕಂದು ಕಲೆಗಳು ಅಂಟಿಕೊಂಡು ಬಿಟ್ಟಿರುವುದನ್ನು ನೀವು ಗಮನಿಸಿರಬಹುದು. ಇದನ್ನು ತೊಳೆಯಲು ಕೂಡಾ ಉಪ್ಪನ್ನು ಬಳಸಬಹುದು. ಉಪ್ಪನ್ನು ಸ್ಕ್ರಬ್ ಮಾಡಿ ತೊಳೆದರೆ ಎಂಥ ಕಲೆಗಳೂ ಮಂಗಮಾಯ. ಒಮ್ಮೆ ಪ್ರಯತ್ನಿಸಿ ನೋಡಿ.