ಪ್ರೀತಿಯಲ್ಲಿ ಬಿದ್ದವರಿಗೆ ಫೆಬ್ರವರಿ ತಿಂಗಳು ಬಹುಮುಖ್ಯವಾದದ್ದು. ಹೊಸದಾಗಿ ಪ್ರೀತಿಯಲ್ಲಿ ಬೀಳುತ್ತಿರುವವರಿಗೇ ಅದೊಂದು ದೊಡ್ಡ ಸಂಭ್ರಮ. ಇತ್ತೀಚೆಗಿನ ವರ್ಷಗಳಲ್ಲಿ ಪ್ರೇಮಿಗಳ ದಿನ ಎಂಬುದು ಒಂದು ವಾರ ಪೂರ್ತಿ ಆಚರಿಸುವ ಹಬ್ಬವಾಗಿಯೂ ಮಾರ್ಪಟ್ಟಿದೆ. ಅದಕ್ಕೆ ತಕ್ಕನಾಗಿ ಮಾರ್ಕೆಟಿಂಗ್ ತಂತ್ರಗಳೂ, ಈ ಪ್ರೇಮಿಗಳ ಮನಸ್ಸನ್ನರಿತು ಸಾಕಷ್ಟು ಪ್ರೇಮಿಗಳ ಕೆಲಸವನ್ನು ಸುಲಭ ಮಾಡಿ ಕೊಡುತ್ತಿವೆ. ಫೆಬ್ರವರಿ ೧೪ರಂದು ಪ್ರೇಮಿಗಳ ದಿನವಾದರೂ, ವಾರಪೂರ್ತಿ ಹಬ್ಬವಾಗಿ ಆಚರಿಸುವ ಮಂದಿಗಂತೂ ಒಂದೊಂದು ದಿನವೂ ಒಂದೊಂದು ವಿಶೇಷಗಳಾಗಿ ಮತ್ತಷ್ಟು ಆಕರ್ಷಣೆಯನ್ನು ಹುಟ್ಟುಹಾಕಿದೆ. ಹಾಗಾದರೆ, ಯಾವ ದಿನ ಯಾವ ವಿಶೇಷ ಎಂಬುದನ್ನು ಇಲ್ಲಿ ನೋಡೋಣ(Valentine’s Week 2023).
ಫೆಬ್ರವರಿ ೭- ರೋಸ್ ಡೇ: ಪ್ರೇಮಿಗಳ ವಾರ ಅಂದರೆ ವ್ಯಾಲೆಂಟೈನ್ ವೀಕ್ ಆರಂಭ ಇದು. ಇದು ನಿಮಗೆ ಯಾರಾದರೊಬ್ಬರ ಮೇಲೆ ಆಕರ್ಷಣೆಯಿದ್ದರೆ ಅವರಿಗೆ ಗುಲಾಬಿ ಕೊಟ್ಟು ಅಥವಾ ಗುಲಾಬಿ ಹೂಗಳ ಗುಚ್ಛವನ್ನೇ ಕೊಟ್ಟು ತಮ್ಮ ಮನದಲ್ಲಿರುವ ಭಾವನೆಯನ್ನು ತಿಳಿಸುವ ದಿನವಿದು. ಇದಕ್ಕಾಗಿ ಬಳಸುವ ಗುಲಾಬಿ ಕೆಂಪು ಬಣ್ಣದ್ದು. ಗುಲಾಬಿ ಅಂದರೆ ಪ್ರೀತಿ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಲು ಗುಲಾಬಿ ಹೂವಲ್ಲದೆ ಇನ್ಯಾವ ಹೂವಿಗೆ ಆ ಶಕ್ತಿಯಿದ್ದೀತು ಹೇಳಿ!
ಫೆಬ್ರವರಿ ೮-ಪ್ರೊಪೋಸ್ ಡೇ: ನಿಮ್ಮ ಮನದಾಳದ ಭಾವನೆಯನ್ನು ಹೇಳಿದ್ದಾಯಿತು. ಇನ್ನೇನು ಮಾಡೋಣ ಎಂದುಕೊಂಡು ತಲೆಕೆರೆದುಕೊಳ್ಳುವುದು ಬೇಡ. ಈಗ ನಿಮ್ಮ ಕೈಕಾಲುಗಳು ಅಲ್ಲಿಂದೇನು ಉತ್ತರ ಬಂದೀತು ಎಂಬ ಧಾವಂತದಲ್ಲಿ ನೆಲದ ಮೇಲೆ ನಿಲ್ಲುವುದಿಲ್ಲ. ಸಮಾಧಾನ, ಇಷ್ಟಕ್ಕೇ ಮುಗಿಯಲಿಲ್ಲ. ಒಂದು ಚೆಂದದ ರೊಮ್ಯಾಂಟಿಕ್ ಡಿನ್ನರ್ ಇಟ್ಟುಕೊಳ್ಳುವುದು ಈ ದಿನ ಪರ್ಫೆಕ್ಟ್. ಯಾಕೆಂದರೆ ಇದು ಪ್ರೊಪೋಸ್ ಡೇ. ಇಲ್ಲಿ ನೀವು ಮನಬಿಚ್ಚಿ ಎಲ್ಲ ಹೇಳಿ ಅವರ ಕಣ್ಣಲ್ಲಿ ನಿಮ್ಮ ಪ್ರೀತಿಯನ್ನು ಹುಡುಕಬಹುದು!
ಫೆಬ್ರವರಿ ೯- ಚಾಕೋಲೇಟ್ ಡೇ: ಪ್ರೊಪೋಸ್ ಮಾಡಿದ್ದಾಯಿತು ಮುಂದೇನು ಎಂಬ ಭಯವಿದ್ದರೆ, ಸುಮ್ಮನೆ ನಿಮ್ಮ ಪ್ರೇಮಿಗೊಂದು ಚಾಕೊಲೇಟ್ ಕೊಡಲು ಇದು ಸಕಾಲ. ಚಾಕೋಲೇಟ್ ಡೇ: ಚಾಕೋಲೇಟ್ ಎಂದರೆ ಮುಗ್ಧತೆ. ಪ್ರೀತಿಯೊಂದಿಗೆ ಮುಗ್ಧತೆಯೂ ಇರಬೇಕು. ಆಗಲೇ ಅಲ್ಲೊಂದು ಸ್ಪಟಿಕಶುದ್ಧ ಪ್ರೇಮವೊಂದು ಘನೀಭವಿಸೀತು. ಇನ್ನೂ ಹೊಸತನ ಬಯಸಿದರೆ, ಚಂದದ ಚಾಕೋಲೇಟ್ ಗಿಫ್ಟ್‌ಗಳು, ಪ್ರೇಮಿಯ ಹೆಸರು ಕೆತ್ತಿದ ಚಾಕೋಲೇಟ್‌ಗಳು, ಅತ್ಯಂತ ವಿಶೇಷ ಚಾಕೋಲೇಟ್ ಹ್ಯಾಂಪರ್‌ಗಳನ್ನೂ ಗಿಫ್ಟ್ ನೀಡಿ ಪ್ರೇಮಿಯ ಮುಖದಲ್ಲಿ ಸಂತೋಷ ಚಿಮ್ಮಿಸಬಹುದು.
ಫೆಬ್ರವರಿ ೧೦- ಟೆಡ್ಡಿ ಡೇ: ಟೆಡ್ಡಿ ಬೇರ್ ತಲೆತಲಾಂತರದಿಂದ ಬಂದ ಒಂದು ಮುಗ್ಧ ಉಡುಗೊರೆ. ಕ್ಯೂಟ್ ಆದ, ಸಂತೋಷ ಚಿಮ್ಮಿಸುವ, ಮುದ್ದು ಮಾಡಲು ಅತ್ಯಂತ ಸೂಕ್ತವಾದ ಟೆಡ್ಡಿಬೇರನ್ನು ನಿಮ್ಮ ಪ್ರೀತಿಸುವ ಮಂದಿಗೆ ಗಿಫ್ಟ್‌ಕೊಡಲು ಪರ್ಫೆಕ್ಟ್ ದಿನವಿದು. ನಿಮ್ಮ ನೆನಪಲ್ಲಿ ಟೆಡ್ಡಿಬೇರನ್ನು ಅವರ ಹೃದಯದಲ್ಲಿಟ್ಟರೆ ನಿಮಗೂ ಖುಷಿ, ಅವರಿಗೂ ಖುಷಿ!
ಫೆಬ್ರವರಿ ೧೧- ಪ್ರಾಮಿಸ್ ಡೇ: ಪ್ರೇಮಿಗಳು ಪರಸ್ಪರ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆ ಬೆಳೆಯಲು ಇದು ಅತ್ಯಂತ ಅಗತ್ಯ ಕೂಡಾ. ಈ ಸಂಬಂಧ ಇನ್ನಷ್ಟು ಗಟ್ಟಿಯಾಗಲು, ಅದು ಮತ್ತೊಂದು ಹಂತಕ್ಕೆ ತಲುಪಲು, ನೀವು ನಿಮ್ಮ ಭವಿಷ್ಯದ ಕನಸನ್ನು, ಜೊತೆಯಾಗಿ ಸಾಗಲು ನಿರ್ಧರಿಸುವುದಿದ್ದರೆ, ಅಂಥವಕ್ಕೆ ಈ ದಿನ ಸಕಾಲ.
ಫೆಬ್ರವರಿ ೧೨- ಹಗ್ ಡೇ: ಅಪ್ಪುಗೆ ಅಥವಾ ಹಗ್ ಯಾರಿಗೆ ಬೇಡ ಹೇಳಿ! ಪ್ರೀತಿ ಒಂದು ಹಂತ ದಾಟಿ ಮತ್ತೊಂದು ಹಂತಕ್ಕೆ ಸಾಗುವಾಗ ಆಗೀಗ ಒಮ್ಮೊಮ್ಮೆ ಬೆಚ್ಚನೆಯ ಹಗ್ ಬೇಕೇಬೇಕು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಎಂಬ ಕಾಳಜಿಯುಕ್ತ ಅಪ್ಪುಗೆ ಸದಾ ನಮ್ಮ ಪ್ರೀತಿಯನ್ನು ಕಾಯುತ್ತವೆ. ಅಂತಹ ಅಪ್ಪುಗೆಗೆ ಈ ದಿನ ಮೀಸಲು.
ಫೆಬ್ರವರಿ ೧೩- ಕಿಸ್ ಡೇ: ಅಪ್ಪಿಕೊಂಡದ್ದಾಯ್ತು. ಅಷ್ಟರಲ್ಲಾಗಲೇ ಇಬ್ಬರ ಹೃದಯಗಳು, ʻಇನ್ನು ಹತ್ತಿರ ಹತ್ತಿರ ಬರುವೆಯಾʼ ಎಂಬ ಹಾಡು ಹಾಡಲಾರಂಭಿಸುತ್ತದೆ. ಹತ್ತಿರವಾದದ್ದರ ಸಂಕೇತ ಮುತ್ತು. ಇನ್ನು ಎರಡು ದೇಹ ಒಂದೇ ಜೀವ ಎಂಬ ರಾಗ ಹಾಡುವ ಮುತ್ತಿನ ಮತ್ತು ಹತ್ತಿರ ತರಿಸುವ ಭಾವ ಬಂಧು. ಪ್ರೀತಿಯಲ್ಲಿ ಬಿದ್ದವರಿಗೆ, ಈಗಾಗಲೇ ಪ್ರೀತಿಯಲ್ಲಿರುವವರಿಗೆ, ಹಾಗೂ ವರ್ಷಗಟ್ಟಲೆ ಯಶಸ್ವಿಯಾಗಿ ಪ್ರೀತಿಯನ್ನು ನಿಭಾಯಿಸುಕೊಂಡು ಹೋಗುತ್ತಿರುವ ಎಲ್ಲ ಜೋಡಿಗಳಿಗೆ ಮುತ್ತಿನ ದಿನ ಮತ್ತಿನ ದಿನವೇ!
ಫೆಬ್ರವರಿ ೧೪- ಪ್ರೇಮಿಗಳ ದಿನ: ಇದು ಈ ಎಲ್ಲವಕ್ಕೂ ಕಳಶವಿಟ್ಟಂತೆ ಬರುವ ದಿನ. ಪ್ರೇಮಿಗಳ ಹಬ್ಬ. ಪ್ರೇಮಿಗಳ ಪಾಲಿಗೆ ಪ್ರತಿದಿನವೂ ಹಬ್ಬವಾದರೂ, ಒಂದು ದಿನ ಎಲ್ಲ ಗಡಿಬಿಡಿ, ಧಾವಂತಗಳನ್ನು ಮರೆತು ಪ್ರೀತಿಯನ್ನು ಆಚರಿಸಿಕೊಳ್ಳು ಇರುವ ದಿನ. ಇಡೀ ದಿನ ಪ್ರೇಮಿಗಳು ಜೊತೆಯಾಗಿ ಕಳೆದು ಪ್ರೀಸುವವರ ಜೊತೆಗೆ ಖುಷಿಯಾಗಿ ಕಳೆದು ಬದುಕನ್ನು ಇನ್ನಷ್ಟು ಚಂದವಾಗಿಸಲು ಇದೊಂದು ಅವಕಾಶ.
ಇದನ್ನೂ ಓದಿ: Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ?