ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಬ್ಬದ ಸಂಭ್ರಮ ಹೆಚ್ಚಿಸುವ ರೆಡಿಮೇಡ್ ವರಮಹಾಲಕ್ಷ್ಮಿ (Varamahalaxmi Festival) ಮಾರುಕಟ್ಟೆಗೆ ಕಾಲಿಟ್ಟಿದ್ದು, ಅದರೊಂದಿಗೆ ದೇವಿಯ ಸೌಂದರ್ಯ ಹೆಚ್ಚಿಸುವ ಅಲಂಕಾರಿಕ ಸಾಮಗ್ರಿಗಳು ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ. ಇದರೊಂದಿಗೆ ಮನೆಯ ಒಳಾಂಗಣಕ್ಕೆ ಹಬ್ಬದ ಲುಕ್ ನೀಡಬಹುದಾದಂತಹ ಆಕರ್ಷಕ ಸಿಂಗಾರದ ಐಟಂಗಳು ಲಗ್ಗೆ ಇಟ್ಟಿವೆ.
ಲಕ್ಷ್ಮಿ ಮುಖವಾಡಕ್ಕೆ ಹೆಚ್ಚಿದ ಬೇಡಿಕೆ
ತರೇಹವಾರಿ ಲಕ್ಷ್ಮಿ ಮುಖವಾಡಗಳು ಮಾರುಕಟ್ಟೆಗೆ ಬಂದಿದ್ದು, ನಾನಾ ಮೆಟಲ್‌ನ ಮುಖವಾಡಗಳು ಹಾಗೂ ಲೈಟ್‌ವೈಟ್ ವುಡನ್ ವೈಟ್ ಮೆಟಲ್‌ನ ಮುಖವಾಡಗಳು ಹೆಚ್ಚು ಮಾರಾಟವಾಗುತ್ತಿವೆ. ಇನ್ನು ಗೌರಿಯಂತೆ ಕಾಣುವ ಮುಖವಾಡಗಳನ್ನು ಕೊಳ್ಳುವುದು ಸಾಮಾನ್ಯವಾಗಿದೆ. ಇನ್ನು ಬೆಳ್ಳಿಯ ಮುಖವಾಡಗಳನ್ನು ಕೊಳ್ಳಲಾಗದಿದ್ದವರು ಜರ್ಮನ್ ಸಿಲ್ವರ್ ಮುಖವಾಡಗಳನ್ನು ಖರೀದಿಸಲಾರಂಭಿಸಿದ್ದಾರೆ.
ಲಕ್ಷ್ಮಿ ಬೊಂಬೆ ಬಿಡಿ ಭಾಗಗಳು
ಇದೇನಿದು ? ಲಕ್ಷ್ಮಿ ದೇವಿಯ ಬಿಡಿಭಾಗಗಳು ಎಂದುಕೊಂಡಿದ್ದೀರಾ! ಹೌದು. ಕಳಸವನ್ನು ದೇವಿಯಂತೆ ಸಿಂಗರಿಸುವ ಬಿಡಿಭಾಗಗಳು ಕೂಡ ನಾನಾ ಸೈಝ್‌ನಲ್ಲಿ ಲಭ್ಯ.
ಕಿರೀಟ ಹಾಗೂ ಇತರೇ ಆಕ್ಸೆಸರೀಸ್
ದೇವಿಯನ್ನು ಅಲಂಕರಿಸುವ ಕಿರೀಟ ಹಾಗೂ ಪುಟ್ಟ ದಾವಣಿ ಲಂಗದ ಸೆಟ್, ಪುಟ್ಟ ರೆಡಿ ಸೀರೆಯ ಸೆಟ್‌ಗಳು ಆಕರ್ಷಕ ವಿನ್ಯಾಸದಲ್ಲಿ ನಾನಾ ಸೈಝ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ದೊರೆಯುತ್ತಿವೆ.
ಲಕ್ಷ್ಮಿಯ ಮಿನಿ ಆಭರಣಗಳು
ಲಕ್ಷ್ಮಿ ದೇವಿಗೆ ಸಿಂಗರಿಸವಂತಹ ಮಿನಿ ಆಭರಣಗಳು ನಾನಾ ವಿನ್ಯಾಸದಲ್ಲಿ ಸಿಗುತ್ತಿವೆ. ಕಾಸಿನ ಸರದಿಂದಿಡಿದು, ಹರಳಿನ ಲೇಯರ್ ಹಾರ, ನೆಕ್ಲೇಸ್, ಕಿವಿಯೊಲೆಗಳು, ಮೂಗುತಿ ಎಲ್ಲವೂ ರಿಟೇಲ್‌ನಲ್ಲಿ ದೊರೆಯುತ್ತಿವೆ.
ರೆಡಿಮೇಡ್ ವರಮಹಾಲಕ್ಷ್ಮಿ
ವರಮಹಾಲಕ್ಷ್ಮಿಯನ್ನು ಸಿಂಗರಿಸಲು ಸಮಯವಿಲ್ಲ ಎನ್ನುವವರಿಗೆಂದೇ ಮಾರುಕಟ್ಟೆಯಲ್ಲಿ ರೆಡಿಮೇಡ್ ವರಮಹಾಲಕ್ಷ್ಮಿ ದೊರೆಯುತ್ತಿವೆ. ಆಕಾರ, ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ. ಸಾವಿರ ರೂ.ಗಳಿಂದಿಡಿದು ಐವತ್ತು ಸಾವಿರ ರೂ.ಗಳವರೆಗೂ ಬೆಲೆಯಿದೆ.
ಕಮಲದ ಸಿಂಹಾಸನ
ಲಕ್ಷ್ಮಿಯನ್ನು ಕೂರಿಸಬಹುದಾದ ಕಮಲದ ಸಿಂಹಾಸನಗಳು, ಈ ಸೀಸನ್‌ನ ಹೈ ಲೈಟ್. ನೋಡಲು ಅತ್ಯಾಕರ್ಷವಾಗಿ ಕಾಣುವ ಈ ಲೋಟಸ್ ಚೇರ್‌ನಂತಹ ಆಸನಗಳು ಮೆಟಲ್‌ನಲ್ಲಿ ಮಾತ್ರವಲ್ಲ, ವುಡನ್‌ನಲ್ಲೂ ಸಿಗುತ್ತಿವೆ.
- ಹಬ್ಬದ ನಂತರ ವರಲಕ್ಷ್ಮಿ ಅಲಂಕಾರಿಕ ಸಾಮಗ್ರಿಗಳನ್ನು ಹಾಗೆಯೇ ತೆಗೆದಿರಿಸಿದಲ್ಲಿ ಮರು ಬಳಕೆ ಮಾಡಬಹುದು.
- ಆದಷ್ಟೂ ಪ್ಲಾಸ್ಟಿಕ್ ಅಲಂಕಾರಿಕ ಸಾಮಗ್ರಿಗಳನ್ನು ಬಳಸಬೇಡಿ.
- ಆನ್ಲೈನ್ಗಿಂತ ಅಂಗಡಿಗಳಲ್ಲಿ ಖರೀದಿಸಿ. ಗ್ಯಾರಂಟಿ ಸಿಗುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಫೆಸ್ಟಿವ್ ಲುಕ್‌ಗೆ ನಟ ಶರತ್ ಕ್ಷತ್ರೀಯ ಎಥ್ನಿಕ್ ಔಟ್‌ಫಿಟ್ಸ್ ಸಾಥ್