ಬೆಂಗಳೂರು: ಯಾವುದೇ ಕಾರಣವಿಲ್ಲದೆ ಬೆಳಗ್ಗೆ ಆಲಸ್ಯ ಮತ್ತು ಖಿನ್ನತೆಯನ್ನು ಅನುಭವಿಸುತ್ತಿದ್ದೀರಾ? ಅಥವಾ ಹೊಸ ಮನೆಗೆ ಸ್ಥಳಾಂತರಗೊಂಡಾಗ ಇದ್ದಕ್ಕಿದ್ದಂತೆ ಹಣಕಾಸಿನ ಮೇಲೆ ಹೊಡೆತ ಬಿದ್ದ ಅನುಭವ ಆಗಿದೆಯಾ? ಹೌದು ಎಂದಾದರೆ ಇದು ಸ್ಥಳದ ವಾಸ್ತು ಕಾರಣದಿಂದ ಹೀಗೆ ಸಂಭವಿಸುತ್ತಿರಬಹುದು ಎಂದು ತಜ್ಞರು ಹೇಳುತ್ತಾರೆ. ಸುತ್ತಮುತ್ತಲಿರುವ ಶಕ್ತಿಗಳು ನಿಮ್ಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತವೆ. ಆದರೆ ಈ ಬಗ್ಗೆ ಚಿಂತೆ ಬೇಡ. ಇಂದಿನ ವಾಸ್ತು ಟಿಪ್ಸ್ (Vastu Tips) ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿ ನೀಡಲಿದೆ.
ಕುಬೇರ ಯಂತ್ರ
ಭಾರತದಲ್ಲಿ ಕುಬೇರನನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಕುಬೇರ ಚಿನ್ನ ಮತ್ತು ಶ್ರೀಮಂತಿಕೆಯ ಸಂಕೇತವೂ ಹೌದು. ಹೀಗಾಗಿ ಕುಬೇರ ಯಂತ್ರವನ್ನು ಮನೆಯಲ್ಲಿ ಇಡುವ ಮೂಲಕ ಸಮೃದ್ಧಿ ಹೊಂದಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಈಶಾನ್ಯ ಭಾಗವನ್ನು ಕುಬೇರ ಮೂಲೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಇಲ್ಲಿ ನೀವು ಕುಬೇರ ಯಂತ್ರವನ್ನು ಇರಿಸಬೇಕು. ಮಾತ್ರವಲ್ಲ ನಿಮ್ಮ ಮನೆಯ ಈಶಾನ್ಯ ಭಾಗವು ಶೌಚಾಲಯ, ಶೂ / ಚಪ್ಪಲಿ ಸ್ಟ್ಯಾಂಡ್ ಮತ್ತು ಭಾರವಾದ ಪೀಠೋಪಕರಣಗಳಿಂದ ಮುಕ್ತವಾಗಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.
ಶುಚಿತ್ವಕ್ಕೆ ಗಮನ ಹರಿಸಿ
ಅಸ್ತವ್ಯಸ್ತವಾದ, ಶುಚಿತ್ವ ಇಲ್ಲ ಮನೆಯ ಬಹು ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಸ್ವಚ್ಛತೆಯ ಕೊರತೆ ನಿಮ್ಮ ಊಹೆಗೂ ನಿಲುಕದ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಇದು ಆರೋಗ್ಯ ಮತ್ತು ಸಂಪತ್ತನ್ನು ಭಾದಿಸುತ್ತದೆ. ಹೀಗಾಗಿ ಯಾವತ್ತೂ ಮನೆಯ ಸ್ವಚ್ಛತೆಗೆ ಗಮನ ಕೊಡಿ. ಧನಾತ್ಮಕ ಶಕ್ತಿಯ ಸಂಚಾರಕ್ಕಾಗಿ ಬಾಗಿಲು, ಕಿಟಕಿಗಳನ್ನೂ ಶುಚಿಯಾಗಿಡಿ. ಬಳಸದೇ ಇರುವ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ಎಸೆಯಬೇಡಿ.
ಮುಖ್ಯದ್ವಾರ ಹೀಗಿರಲಿ
ಮುಖ್ಯದ್ವಾರದ ಮೂಲಕವೇ ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ. ಹೀಗಾಗಿ ನೀವು ಪ್ರವೇಶ ದ್ವಾರದ ವಿಚಾರದಲ್ಲಿ ಬಹಳ ಮುತುವರ್ಜಿ ವಹಿಸಬೇಕಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಮುಖ್ಯದ್ವಾರ ಇದ್ದರೆ ಉತ್ತಮ. ಸಂಪತ್ತು ಮತ್ತು ಆರೋಗ್ಯ ವೃದ್ಧಿಗಾಗಿ ಮುಂಭಾಗದ ಬಾಗಿಲು ಯಾವುದೇ ಬಿರುಕು ಅಥವಾ ವಿರೂಪಗಳಿಲ್ಲದೆ ಗಟ್ಟಿಮುಟ್ಟಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವೇಶ ದ್ವಾರವನ್ನು ನಾಮಫಲಕ, ಸಸ್ಯ, ಗಂಟೆ ಮತ್ತು ಧಾರ್ಮಿಕ ಚಿಹ್ನೆಗಳಿಂದ ಅಲಂಕರಿಸಬಹುದು. ಆದರೆ ಕನ್ನಡಿಗಳನ್ನು ಇರಿಸಬೇಡಿ.
ಬಾತ್‌ರೂಮ್ ಹೇಗಿದ್ದರೆ ಚೆನ್ನ?
ಬಾತ್‌ರೂಮ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಇದು ಸಂಪತ್ತಿನ ಮೇಲೆ ಮಾತ್ರವಲ್ಲ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಬಾತ್‌ರೂಮ್ ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿರಬೇಕು. ಪ್ರವೇಶ ದ್ವಾರ ಅಥವಾ ಮನೆಯ ಮಧ್ಯದಲ್ಲಿ ಎಂದಿಗೂ ಬಾತ್‌ರೂಮ್ ನಿರ್ಮಿಸಬೇಡಿ. ಯಾಕೆಂದರೆ ಅದು ಪ್ರವೇಶ ದ್ವಾರದಿಂದ ಕೇಂದ್ರದ ಕಡೆಗೆ ಹರಿಯುವ ದೈವಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ಬಾತ್‌ರೂಮ್ ಮೂಲೆಗಳನ್ನು ತಪ್ಪಿಸಿ. ಸ್ಥಳವನ್ನು ಶುದ್ಧೀಕರಿಸಲು ನೀವು ಕೆಲವು ಸಸ್ಯಗಳನ್ನು ಇರಿಸಬಹುದು.
ನೀರಿನ ಮೂಲಗಳು
ಹರಿಯುವ ನೀರು ನಿಮ್ಮ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ. ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ಅಥವಾ ಆಗ್ನೇಯ ಮೂಲೆಯಲ್ಲಿ ಈಜುಕೊಳಗಳು ಅಥವಾ ಕಾರಂಜಿಗಳಂತಹ ಯಾವುದೇ ಜಲಮೂಲಗಳನ್ನು ಇಡಬೇಡಿ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯೊಳಗೆ ಅಕ್ವೇರಿಯಂ ಇರಿಸಬಹುದು. ಆದಾಗ್ಯೂ ಸೋರಿಕೆಯು ಸಂಪತ್ತಿನ ನಷ್ಟವನ್ನು ಸೂಚಿಸುವುದರಿಂದ ಎಲ್ಲಿಯೂ ನೀರಿನ ಸೋರಿಕೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ ಆರೋಗ್ಯ ಮತ್ತು ಸಂಪತ್ತಿಗಾಗಿ ಓವರ್ ಹೆಡ್ ಟ್ಯಾಂಕ್ ಅನ್ನು ಮನೆಯ ಆಗ್ನೇಯ ಅಥವಾ ಈಶಾನ್ಯ ಮೂಲೆಗಳಲ್ಲಿ ಇಡಬೇಡಿ. ಓವರ್ ಹೆಡ್ ಟ್ಯಾಂಕ್ ಅನ್ನು ಮನೆಯ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು. ಒಂದು ವೇಳೆ ನೀವು ಅದನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದರೆ ಚಾವಣಿಯಿಂದ ಎರಡು ಅಡಿ ಎತ್ತರದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: Vastu Tips: ಹೊಸ ಮನೆ ನಿರ್ಮಿಸುವಾಗ ಈ ಅಂಶಗಳನ್ನು ಗಮನಿಸಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ