ನಮ್ಮ ದೇಹಕ್ಕೆ ಬೇಕಾದ ಅಗತ್ಯ ಜೀವಸತ್ವಗಳಲ್ಲಿ ಒಂದು ವಿಟಮಿನ್ ಡಿ. ದೇಹಕ್ಕೆ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಹೀರಲು ಸಾಧ್ಯವಾಗುವುದು ಸೂಕ್ತ ಪ್ರಮಾಣದಲ್ಲಿ ವಿಟಮಿನ್ ಡಿ ದಾಸ್ತಾನು ಇದ್ದರೆ ಮಾತ್ರ. ಹಾಗಾಗಿಯೇ ಮೂಳೆಗಳು ಶಕ್ತಿಯುತವಾಗಿರಲು, ಸೋಂಕುಗಳು ಹಾಗೂ ಉರಿಯೂತ ಬಾಧಿಸದಿರಲು ಡಿ ಜೀವಸತ್ವ ಪ್ರಮುಖವಾಗಿ ಬೇಕು.
ದೇಹಕ್ಕೆ ಬೇಕಾಗಿರುವುದು ಹೇಗೆ ದೊರೆಯುತ್ತದೆ ಮತ್ತು ದೊರೆಯದಿದ್ದರೆ ಏನಾಗುತ್ತದೆ ಎಂಬುದೀಗ ಪ್ರಶ್ನೆ. ವಿಟಮಿನ್ ಡಿ ಕೊರತೆ ಎಲ್ಲಾ ವಯೋಮಾನದವರನ್ನೂ ಬಾಧಿಸಬಹುದು. ಕಾರಣ, ಡಿ ಜೀವಸತ್ವ ದೊರೆಯುವ ಮೂಲಗಳ ಬಗ್ಗೆ ಇರುವ ಅರಿವಿನ ಕೊರತೆ. ಸೂರ್ಯನ ಬಿಸಿಲಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ದೊರೆಯುತ್ತದೆ, ನಿಜ. ಆದರೆ ದಿನದಲ್ಲಿ ಅದಷ್ಟು ಹೊತ್ತು ನಮ್ಮನ್ನು ನಾವು ಬಿಸಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಇಡೀ ದಿನ ಒಳಾಂಗಣದಲ್ಲೇ ವ್ಯವಹರಿಸಿ, ಮನೆಯಿಂದ ಹೊರಬಿದ್ದ ಕೂಡಲೆ ಬಸ್ಸು, ಕಾರು, ಆಟೋ ಹತ್ತಿಬಿಟ್ಟರೆ ಸೂರ್ಯನ ಬಿಸಿಲು ಮೈಗೆ ತಾಗುವುದಾದರೂ ಹೇಗೆ?
ಆಹಾರಗಳೂ ಇವೆ
ವಿಟಮಿನ್ ಡಿ ನೀಡುವ ಆಹಾರಗಳೂ ಬೇಕಷ್ಟಿವೆ. ಮೀನು ಹಾಗೂ ಮೀನೆಣ್ಣೆಯ ವಸ್ತುಗಳಲ್ಲಿ ಡಿ ಜೀವಸತ್ವ ಸಮೃದ್ಧವಾಗಿದೆ. ಉತ್ತಮ ಕೊಬ್ಬಿನಾಂಶವಿರುವ ಟ್ರೌಟ್, ಸಾಲ್ಮನ್, ಟ್ಯೂನ್ ಮತ್ತು ಮ್ಯಾಕೆರೆಲ್‌ನಂಥ ಮೀನುಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದಲ್ಲದೆ, ಮೀನೆಣ್ಣೆಯ ಮೂಲಕವೂ ನೈಸರ್ಗಿಕವಾಗಿ ವಿಟಮಿನ್ ಡಿ ಪಡೆಯಲು ಸಾಧ್ಯವಿದೆ.
ಮೊಟ್ಟೆ
ಇದರ ಬಿಳಿ ಭಾಗದಲ್ಲಿ ಪ್ರೊಟೀನ್ ಸಾಂದ್ರವಾಗಿ ಇರುವಂತೆ, ಹಳದಿ ಭಾಗದಲ್ಲಿ ಕೊಬ್ಬು, ಖನಿಜಗಳು ಮತ್ತು ಡಿ, ಎ ಮತ್ತು ಬಿ ವಿಟಮಿನ್‌ಗಳು ದೊರೆಯುತ್ತವೆ.
ಅಣಬೆ
ಸೂರ್ಯನ ಬೆಳಕಿಗೆ ಒಡ್ಡಿದಾಗ ವಿಟಮಿನ್ ಡಿ ಸಂಶ್ಲೇಷಿಸಿಕೊಳ್ಳುವ ಸಾಮರ್ಥ್ಯವನ್ನು ಅಣಬೆಗಳು ಸಹ ಹೊಂದಿವೆ. ನೈಸರ್ಗಿಕವಾಗಿ ಕಾಡುಗಳಲ್ಲಿ ಬೆಳೆದಿರುವ ಅಣಬೆಗಳಲ್ಲಿ ಡಿ ಜೀವಸತ್ವ ಹೆಚ್ಚು ಸಾಂದ್ರವಾಗಿರುತ್ತದೆ. ಆದರೆ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳು ದುರ್ಲಭವಾಗಿರುವುದರಿಂದ, ಕೃಷಿಯ ಮೂಲಕ ಬೆಳೆಸಿರುವ ಅಣಬೆಗಳ ಮೂಲಕವೂ ಡಿ ಜೀವಸತ್ವವನ್ನು ಪಡೆಯಬಹುದು.
ಡೇರಿ ಉತ್ಪನ್ನಗಳು
ಹಸುವಿನ ಹಾಲು ಸಹ ಡಿ ಜೀವಸತ್ವದ ಸ್ವಾಭಾವಿಕ ಮೂಲ. ಹಾಲು, ಮೊಸರು, ಬೆಣ್ಣೆ, ಚೀಸ್‌ಗಳ ಮೂಲಕ ವಿಟಮಿನ್ ಡಿ ಪಡೆಯಬಹುದು. ಮಾತ್ರವಲ್ಲ, ಹಾಲಿಗೆ ಪರ್ಯಾಯವಾಗಿ ಬಳಸುವ ಸೋಯಾ ಹಾಲು, ಅಕ್ಕಿ ಹಾಲು, ತೆಂಗಿನ ಹಾಲು, ಬಾದಾಮಿ ಹಾಲುಗಳಲ್ಲೂ ವಿಟಮಿನ್ ಡಿ ಸಾಕಷ್ಟು ಅಡಗಿದೆ.
ಕೊರತೆಯಾದರೆ ಏನಾಗುತ್ತದೆ?
ವಿಟಮಿನ್ ಡಿ ಕೊರತೆ ಇದೆ ಎಂಬುದು ಹೇಗೆ ತಿಳಿಯುತ್ತದೆ? ಕೆಲವು ನೋವುಗಳು ಮತ್ತೆ ಮತ್ತೆ ಕಾಡಬಹುದು. ನಿಮ್ಮದೇ ಔಷಧಿಯಲ್ಲಿ ಉಪಶಮನಗೊಂಡರೂ ತಿರುಗಿ ಬರಬಹುದು. ಅಂದರೆ, ಸ್ನಾಯು ನೋವು ಅಥವಾ ಸ್ನಾಯು ಸೆಳೆತಗಳು ಕೆಲಕಾಲ ಬಾಧಿಸಿ ಕಡಿಮೆಯಾದಂತೆನಿಸಿ, ಮತ್ತೆಮತ್ತೆ ಬರಬಹುದು. ಆರ್ಥರೈಟಿಸ್‌ನಂತೆ ಮೂಳೆಗಳಲ್ಲಿ ನೋವು ಕಾಣಬಹುದು. ಮೂಳೆ ಮುರಿತವೂ ಸಂಭವಿಸಬಹುದು. ಪದೇಪದೆ ಸೋಂಕುಗಳು ಬಾಧಿಸುತ್ತಿದ್ದರೆ ವಿಟಮಿನ್ ಡಿ ಕೊರತೆಯೂ ಕಾರಣವಿರಬಹುದು. ಊಟ ಮಾಡಿದ್ದರೂ, ನಿದ್ದೆ ಸಾಕಷ್ಟು ಮಾಡಿದ್ದರೂ ಸದಾ ಆಯಾಸ ಕಾಡುತ್ತಲೇ ಎಂದಾದರೆ ಡಿ ಜೀವಸತ್ವ ಕಡಿಮೆಯಿರಬಹುದು. ಮೂಡ್ ಏರುಪೇರಾಗುವುದು ಸಹ ವಿಟಮಿನ್ ಡಿ ಕೊರತೆಯ ಲಕ್ಷಣಗಳಲ್ಲಿ ಒಂದು.
ಇಂಥ ಸಮಸ್ಯೆಗಳು ಕಂಡರೆ ಅಂಗಡಿಗಳಲ್ಲಿ ದೊರೆಯುವ ವಿಟಮಿನ್ ಡಿ ಪೂರಕ ಮಾತ್ರೆಗಳನ್ನು ತಂದು ʻಗುಳುಂʼ ಮಾಡುವುದಲ್ಲ! ಈ ಲಕ್ಷಣಗಳು ಬೇರಾವ ಸಮಸ್ಯೆಯ ಸೂಚಕವಲ್ಲ ಎಂಬುದನ್ನು ಮೊದಲು ವೈದ್ಯರು ದೃಢಪಡಿಸಬೇಕು. ವಿಟಮಿನ್ ಡಿ ಮಟ್ಟ ಎಷ್ಟಿದೆ ಎಂಬುದು ಪತ್ತೆಯಾದ ನಂತರ, ಮುಂದೆ ಮಾಡಬೇಕಾದ್ದೇನು ಎಂಬುದನ್ನು ವೈದ್ಯರೇ ಸೂಚಿಸುತ್ತಾರೆ. ಆದರೆ ಮದ್ದು ಮಾಡುವುದಕ್ಕಿಂತ ಮೊದಲಿಗೆ ತಡೆಯವುದು ಜಾಣತನವಾದ್ದರಿಂದ ನಮ್ಮ ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧವಾಗಿ ಇರುವಂತೆ ಗಮನಿಸಿವುದು ಜಾಣತನವಲ್ಲವೇ?
ಇದನ್ನೂ ಓದಿ| Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ