ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಧುವಿನ ಮಹಾರಾಣಿ ಲುಕ್‌ಗೆ ಸಾಥ್ ನೀಡಲು ಡಿಸೈನರ್ ದುಪಟ್ಟಾಗಳು ಎಂಟ್ರಿ ನೀಡಿವೆ. ಹೌದು. ಮದುವೆಯಲ್ಲಿ ಮದುಮಗಳ ಸಿಂಗಾರದಲ್ಲಿ ಇಂದಿಗೂ ಮುಂದುವರೆದ ಮೇಲುಡುಗೆಯ ಸ್ಥಾನಕ್ಕೆ ಇದೀಗ ಮನಮೋಹಕವಾಗಿರುವ ಡಿಸೈನರ್ ಗ್ರ್ಯಾಂಡ್ ದುಪಟ್ಟಾಗಳು ಆಗಮಿಸಿವೆ. ಈ ಮದುವೆ ಸೀಸನ್‌ನಲ್ಲಿ ಯಾವ್ಯಾವ ಬಗೆಯ ಡಿಸೈನರ್ ದುಪಟ್ಟಾಗಳು ಎಂಟ್ರಿ ನೀಡಿವೆ, ಯಾವ ಬಗೆಯದನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
ಮೇಲುಡುಗೆ ಬದಲು ಡಿಸೈನರ್ ದುಪಟ್ಟಾ
ಬಹಳಷ್ಟು ಮದುವೆಗಳಲ್ಲಿ ಮದುಮಗಳು ಸೀರೆಯ ಮೇಲೊಂದು ಮೇಲುಡುಗೆ ಹಾಕುವುದು ಹಿಂದಿನಿಂದಲೂ ರಿವಾಜು. ಎಷ್ಟೇ ಪಾಶ್ಚಿಮಾತ್ಯ ಸಂಸ್ಕೃತಿ ಫಾಲೋ ಮಾಡುವವರಾದರೂ ಮಹೂರ್ತ ಅಥವಾ ತಾಳಿ ಕಟ್ಟುವ ವೇಳೆ ಮದುವೆಯಾಗುವ ಹೆಣ್ಣು ಧರಿಸುವ ರೇಷ್ಮೆ ಸೀರೆಯೊಂದಿಗೆ ಹೆಗಲ ಮೇಲೆ, ಇಲ್ಲವೇ ತಲೆಯ ಮೇಲೆ ಮತ್ತೊಂದು ಉಡುಪನ್ನು ಹಾಕುವುದು ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ಆದರೆ, ದಶಕಗಳಿಂದ ಈ ಟ್ರೆಂಡ್‌ನಲ್ಲೂ ಬದಲಾವಣೆಯಾಗಿದೆ. ದುಪಟ್ಟಾ ಈ ಜಾಗವನ್ನು ಆಕ್ರಮಿಸಿಕೊಂಡಿದೆ. ಕೇವಲ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿದ್ದ ಈ ಫ್ಯಾಷನ್ ಇದೀಗ ಸಾಮಾನ್ಯ ಹೆಣ್ಣು ಮಕ್ಕಳ ಮದುವೆಯಲ್ಲೂ ಕಾಣಿಸಿಕೊಂಡಿದೆ. ಪರಿಣಾಮ, ದಪ್ಪನೆಯ ಮೇಲುಡುಗೆ ಅಥವಾ ಸೀರೆ ಹಾಕುವ ಬದಲು ಲೈಟ್‌ವೇಟ್ ಡಿಸೈನರ್ ದುಪಟ್ಟಾ ಬಳಸುವುದು ಚಾಲ್ತಿಗೆ ಬಂದಿದೆ. ಧರಿಸಿರುವ ಸೀರೆಗೆ ತಕ್ಕಂತೆ ಮಹಾರಾಣಿ ಲುಕ್ ನೀಡುವ ಈ ಡಿಸೈನರ್ ದುಪಟ್ಟಾಗಳು ವಧುವನ್ನು ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತವೆ ಎನ್ನುತ್ತಾರೆ ವೆಡ್ಡಿಂಗ್ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಆಯಾ ರೇಷ್ಮೆ ಸೀರೆಗೆ ತಕ್ಕಂತೆ ಇವುಗಳನ್ನು ಹಾಕಿದಾಗ ಇಡೀ ಲುಕ್ಕೇ ಬದಲಾಗುತ್ತದಂತೆ.
ವೆಡ್ಡಿಂಗ್ ಡಿಸೈನರ್ ದುಪಟ್ಟಾಗಳು
ಬನಾರಸಿ ಸಿಲ್ಕ್, ಪಾರದರ್ಶಕವಾಗಿರುವ ಡಿಸೈನರ್ ಸಾಫ್ಟ್ ಸಿಲ್ಕ್‌ನಿಂದ ಹಿಡಿದು ಕ್ರೇಪ್, ಕಾಂಚೀವರಂ, ಧರ್ಮವರಂ ಸೇರಿದಂತೆ ನಾನಾ ಬಗೆಯ ಡಿಸೈನರ್ ದುಪಟ್ಟಾಗಳು ಕಾಲಿಟ್ಟಿವೆ. ಗ್ರ್ಯಾಂಡ್ ಲುಕ್ ನೀಡುವ ಇವನ್ನು ಇದೀಗ ಬೋಟಿಕ್‌ಗಳು ಅಗತ್ಯತೆಗೆ ತಕ್ಕಂತೆ ಕಸ್ಟಮೈಸ್ಡ್ ಮಾಡಿ ಕೊಡುತ್ತಿವೆ. ಆದರೆ, ಸ್ಟೈಲಿಸ್ಟ್‌ಗಳು ಹೇಳುವ ಪ್ರಕಾರ, ವಧುವಿನ ರೇಷ್ಮೆ ಸೀರೆಗೆ ಮತ್ತೇ ಅದೇ ರೀತಿಯ ದಪ್ಪನೆಯ ಫ್ಯಾಬ್ರಿಕ್‌ನ ಮೇಲುಡುಗೆ ದುಪಟ್ಟಾ ಬಳಸಬಾರದು. ಇದು ವಧುವಿನ ಹೇರ್ ಸ್ಟೈಲ್ ಹಾಗೂ ಇತರೇ ಲುಕ್‌ಗೆ ಅಡ್ಡವಾಗುತ್ತದಂತೆ. ಅದರ ಬದಲಿಗೆ ಪಾರದರ್ಶಕವಿರುವಂತಹ ಶಿಮ್ಮರಿಂಗ್, ಜಾಲರಿ-ಮೆಶ್ ಡಿಸೈನ್ ಅಥವಾ ಗ್ಲಿಟ್ಟರ್ ಫ್ಯಾಬ್ರಿಕ್‌ನ ಡಿಸೈನರ್ ಬಾರ್ಡರ್ ದುಪಟ್ಟಾವನ್ನು ಬಳಸಬೇಕು. ಇದು ಮಹಾರಾಣಿ ಲುಕ್ ನೀಡುತ್ತದೆ ಎಂದು ಸಲಹೆ ನೀಡುತ್ತಾರೆ.
ವಧುವಿನ ಡಿಸೈನರ್ ದುಪಟ್ಟಾ ಆಯ್ಕೆಗೆ 5 ಟಿಪ್ಸ್
ಆದಷ್ಟೂ ಲೈಟ್‌ವೇಟ್‌ನದ್ದಾಗಿರಬೇಕು.
ಧರಿಸಿದಾಗ ಅದು ರಟ್ಟಿನಂತೆ ಕೂರಬಾರದು, ಬದಲು ಜಾರುವಂತಿರಬೇಕು.
ಶಿಮ್ಮರಿಂಗ್ ಫ್ಯಾಬ್ರಿಕ್‌ನ ಡಿಸೈನರ್ ದುಪಟ್ಟಾವನ್ನೇ ಆಯ್ಕೆ ಮಾಡಿ.
ಪಾರದರ್ಶಕವಾಗಿದ್ದಾಗ ಹೇರ್‌ಸ್ಟೈಲ್‌ಗೆ ಅಡ್ಡಬರುವುದಿಲ್ಲ.
ಆಕರ್ಷಕ ಬಾರ್ಡರ್‌ನದ್ದನ್ನು ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ವೆಡ್ಡಿಂಗ್ ಫ್ಯಾಷನ್ ಫೋಟೋ ಶೂಟ್‌ನಲ್ಲಿ ಟ್ರೆಂಡಿಯಾದ ದೇಸಿ ಲುಕ್