Site icon Vistara News

Wedding Fashion : ಮದುವೆಯ ಹಳದಿ ಶಾಸ್ತ್ರದಲ್ಲಿ ಟ್ರೆಂಡಿಯಾದ ಮದುಮಗಳ ಫ್ಲವರ್‌ ಜ್ಯುವೆಲರಿಗಳು

Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮದುವೆಯ ಹಳದಿ ಶಾಸ್ತ್ರದಲ್ಲಿ ಮದುಮಗಳು ಧರಿಸುವ ಫ್ಲವರ್‌ ಜ್ಯುವೆಲರಿಗಳು ಇದೀಗ ಟ್ರೆಂಡಿಯಾಗಿವೆ. ಈ ಮದುವೆ ಸೀಸನ್‌ನಲ್ಲಿ ಬಿಡುಗಡೆಗೊಂಡಿರುವ ನಾನಾ ಬಗೆಯ ಫ್ಲವರ್‌ ಜ್ಯುವೆಲರಿಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನಲ್ಲಿ ದೊರೆಯುವ ಕೃತಕ ಹೂವುಗಳ ಜ್ಯುವೆಲರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಮದುವೆಯ ಈ ಶಾಸ್ತ್ರದಲ್ಲಿ ಕೇವಲ ಮದುಮಗಳು ಮಾತ್ರವಲ್ಲ, ಅಕ್ಕ-ತಂಗಿಯರು, ಸ್ನೇಹಿತೆಯರು ಕೂಡ ಫೋಟೊಶೂಟ್‌ಗಾಗಿ ಇವನ್ನು ಧರಿಸುವುದು ಸಾಮಾನ್ಯವಾಗತೊಡಗಿದೆ. ಪರಿಣಾಮ, ಈ ಫ್ಲವರ್‌ ಜ್ಯುವೆಲರಿಗಳ ಪ್ರೇಮಿಗಳು ಹೆಚ್ಚಾಗತೊಡಗಿದ್ದಾರೆ.

ಏನಿದು ಫ್ಲವರ್‌ ಜ್ಯುವೆಲರಿ?

ಮದುವೆಯ ಹಳದಿ ಶಾಸ್ತ್ರದಲ್ಲಿ ಶಾಕುಂತಲೆಯಂತೆ ಹೂವಿನ ಆಭರಣಗಳನ್ನು ಧರಿಸುವ ರಿವಾಜು ಮೊದಲಿನಿಂದಲೂ ಇತ್ತು. ಇದೀಗ, ಈ ಶಾಸ್ತ್ರಕ್ಕೆ ಮತ್ತಷ್ಟು ಮೆರುಗು ನೀಡಲು ಬ್ಯೂಟಿ ಎಕ್ಸ್‌ಪರ್ಟ್ಸ್‌ ಈ ಲುಕ್‌ಗೆ ಮಾನ್ಯತೆ ನೀಡುತ್ತಿರುವುದು ಮತ್ತಷ್ಟು ಟ್ರೆಂಡಿಯಾಗಲು ಕಾರಣ ಎನ್ನುತ್ತಾರೆ ಸೌಂದರ್ಯ ತಜ್ಞರು. ಅವರ ಪ್ರಕಾರ, ಶ್ರೀಮಂತರು ದುಬಾರಿ ನೈಜ ಹೂವಿನ ಆಭರಣಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಬೆಲೆ ಹೆಚ್ಚಾದರೂ ಸಹ ಹೂವಿನ ಮಾರಾಟಗಾರರ ಬಳಿ ಇಲ್ಲವೇ ಬ್ಯೂಟಿ ಎಕ್ಸ್‌ಪರ್ಟ್ ಬಳಿ ಕಸ್ಟಮೈಸ್‌ ಡಿಸೈನ್‌ ಮಾಡಿಸುತ್ತಾರೆ. ಇನ್ನು ಹೆಚ್ಚು ಬೆಲೆ ತೆರಲು ಸಾಧ್ಯವಿಲ್ಲ ಎನ್ನುವವರು ಮಾತ್ರ ಕೃತಕ ಹೂವಿನ ಆಭರಣಗಳಿಗೆ ಮೊರೆ ಹೋಗುತ್ತಾರೆ. ಇವಕ್ಕೆ ಅಂತಹ ದುಬಾರಿ ಬೆಲೆ ಇರದು ಎನ್ನುತ್ತಾರೆ ಎಕ್ಸ್‌ಪಟ್ರ್ಸ್.

ನೈಜ ಹೂವಿನ ಆಭರಣಗಳು

ದುಂಡು ಮಲ್ಲಿಗೆ, ಚಿಕ್ಕ ಚಿಕ್ಕ ಸೇವಂತಿಗೆ, ಗುಲಾಬಿ, ಲಿಲ್ಲಿ ಹೀಗೆ ನಾನಾ ಹೂಗಳ ಬಳಕೆಯಿಂದ ಇವನ್ನು ಸಿದ್ಧಪಡಿಸಲಾಗಿರುತ್ತದೆ. ಹಾಗಾಗಿ, ನೈಜ ಹೂವಿನ ಆಭರಣಗಳು ನೋಡಲು ಮನಮೋಹಕವಾಗಿ ಕಾಣುತ್ತವೆ. ಆದರೆ, ಇದರ ನಿರ್ವಹಣೆ ಮಾತ್ರ ಕರಾರುವಕ್ಕಾಗಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಅತಿ ಬೇಗ ಬಾಡಬಹುದು.

ಕೃತಕ ಫ್ಲವರ್‌ ಜ್ಯುವೆಲರಿಗಳು

ಹಳದಿ ಶಾಸ್ತ್ರದಲ್ಲಿ ಅರಿಶಿಣ ನೀರನ್ನು ಎರೆಚಾಡುವುದರಿಂದ ಕೃತಕ ಫ್ಲವರ್‌ ಜ್ಯುವೆಲರಿಗಳನ್ನು ಬಳಸುವುದು ಹೆಚ್ಚಾಗಿದೆ. ಧರಿಸಿದರೇ ಇವು ಬಾಡುವುದಿಲ್ಲ. ನೀರು, ಬಿಸಿಲು ಸೋಕಿದರೂ ಹಾಳಾಗುವುದಿಲ್ಲ. ಮರು ಬಳಕೆ ಮಾಡಬಹುದು. ಹಾಗಾಗಿ ಬಳಕೆದಾರರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Footwear Fashion: ವೆಡ್ಡಿಂಗ್‌ ಸೀಸನ್‌ ಟ್ರೆಂಡ್; ಜಗಮಗಿಸುವ ಶಿಮ್ಮರ್‌ ಫುಟ್‌ವೇರ್ಸ್‌

Exit mobile version