ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಮದುವೆಯ ಸೀಸನ್‌ನಲ್ಲಿ ಮದುಮಗಳ ಅಲಂಕಾರಕ್ಕೆ ಸಾಥ್ ನೀಡುವ ೭ ಬಗೆಯ ಗ್ರ್ಯಾಂಡ್ ಚೋಕರ್ ನೆಕ್ಲೇಸ್‌ಗಳು ಟ್ರೆಂಡಿಯಾಗಿವೆ. ಮದುಮಗಳ ಆಯಾ ವೆಡ್ಡಿಂಗ್ ಥೀಮ್‌ಗೆ ಧರಿಸಬಹುದಾದ ಈ ಚೋಕರ್‌ಗಳು ಯಾವ್ಯಾವ ಡಿಸೈನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ ಎಂಬುದರ ಬಗ್ಗೆ ಜ್ಯುವೆಲ್ ಡಿಸೈನರ್‌ಗಳು ಮಾಹಿತಿ ನೀಡಿದ್ದಾರೆ. ಅವರು ಹೇಳುವಂತೆ, ತೆಳುವಾದ ಚಿಕ್ಕ ಡಿಸೈನ್‌ನಿಂದಿಡಿದು ಭುಜದವರೆಗೂ ಅಗಲವಾಗಿ ಹರಡುವಂತಹ ಸ್ಟೇಟ್‌ಮೆಂಟ್ ಚೋಕರ್‌ಗಳು ಇಂದು ವೆಡ್ಡಿಂಗ್ ಸೀಸನ್‌ನಲ್ಲಿ ಎಂಟ್ರಿ ನೀಡಿವೆ.
೧. ಬಂಗಾರದ ಚೋಕರ್
ಬಂಗಾರದ ಚೋಕರ್‌ಗಳಲ್ಲೂ ನಾನಾ ವಿನ್ಯಾಸದವು ಲಭ್ಯ. ಇವು ಕತ್ತನ್ನು ಬಳಸುವುದರೊಂದಿಗೆ ಮದುಮಗಳಿಗೆ ಕಂಪ್ಲೀಟ್ ಗೋಲ್ಡ್ ಲುಕ್ ನೀಡುತ್ತವೆ. ಬಂಗಾರದ ಚೋಕರ್‌ಗಳು ತೂಕ ಹೆಚ್ಚಾದಂತೆ ಬೆಲೆಯೂ ಜಾಸ್ತಿ. ಆದ ಕಾರಣ ಬಹಳಷ್ಟು ಮಂದಿ ಲೈಟ್‌ವೈಟ್ ಚೋಕರ್‌ಗಳನ್ನು ಖರೀದಿಸುತ್ತಾರೆ. ಈ ಚೋಕರ್‌ಗಳಿಗೆ ಕಿವಿಯೊಲೆ ಹಾಗೂ ಬಳೆಗಳು ಸೆಟ್ ರೂಪದಲ್ಲಿ ದೊರೆಯುತ್ತವೆ.
೨. ಡಬ್ಬಲ್ ಲೇಯರ್ ಚೋಕರ್
ಈ ಚೋಕರ್‌ಗಳು ಮದುವೆ ಹಾಗೂ ಭಾರಿ ಸಮಾರಂಭಗಳಿಗೆ ಮ್ಯಾಚ್ ಆಗುತ್ತವೆ. ಇವನ್ನು ಧರಿಸಿದಾಗ ಹೆಚ್ಚು ಆಭರಣಗಳನ್ನು ಧರಿಸುವುದೇ ಬೇಡ. ಇವುಗಳು ೨ ಲೆಯರ್‌ನಿಂದ ನಾಲ್ಕೈದು ಲೆಯರ್ ಡಿಸೈನ್‌ನಲ್ಲಿ ದೊರಕುತ್ತವೆ.
೩. ರಾಯಲ್ ಕುಂದನ್ ಚೋಕರ್
ನಾರ್ತ್ ಇಂಡಿಯನ್ ಮದುವೆಗಳಲ್ಲಿ ಈ ಕುಂದನ್ ಚೋಕರ್ ಹೆಚ್ಚು ಜನಪ್ರಿಯ. ಇದೀಗ ನಮ್ಮಲ್ಲೂ ಮದುಮಗಳು ಲೆಹೆಂಗಾ ಧರಿಸಿದಾಗ ಈ ಚೋಕರ್ ಧರಿಸುವುದು ಹೆಚ್ಚಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣುವ ಇವು ಹಸಿರು, ಕೆಂಪು ಚಿಕ್ಕ ಮಿರರ್‌ನಂತಹ ಪ್ರೀಶಿಯಸ್ ಸ್ಟೋನ್ಸ್ ಒಳಗೊಂಡಿರುತ್ತವೆ. ಎಲ್ಲಾ ಬಗೆಯ ಮದುವೆ ಉಡುಪುಗಳಿಗೆ ಮ್ಯಾಚ್ ಆಗುತ್ತವೆ.
೪. ಟೆಂಪಲ್ ಡಿಸೈನ್ ಚೋಕರ್
ಇವು ಸೌತ್ ಇಂಡಿಯನ್ ಮದುವೆಗಳಲ್ಲಿ ಕಾಣಬಹುದು. ಸಾಂಪ್ರದಾಯಿಕ ವಿನ್ಯಾಸದೊಂದಿಗೆ ನವಿಲು, ಗರುಡ, ಕೃಷ್ಣ, ಶಿವ, ಲಕ್ಷ್ಮಿ ಸೇರಿದಂತೆ ನಾನಾ ಪ್ರಕಾರಗಳು ಈ ಡಿಸೈನ್‌ನಲ್ಲಿ ಕಾಣಬಹುದು. ಇವು ರೇಷ್ಮೆ ಸೀರೆಗಳಿಗೆ ಹೊಂದುತ್ತವೆ.
೫. ಡೈಮಂಡ್ ರಿಪ್ಲೀಕಾ ಚೋಕರ್
ವಜ್ರದ ಚೋಕರ್‌ಗಳು ಅತಿ ದುಬಾರಿ. ಶ್ರೀಮಂತರನ್ನು ಹೊರತುಪಡಿಸಿದಲ್ಲಿ, ಸಾಮಾನ್ಯರು ಇವುಗಳ ರಿಪ್ಲೀಕಾ ಚೋಕರ್‌ಗಳನ್ನು ಬಳಸುವುದೇ ಹೆಚ್ಚು. ಇವನ್ನು ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ಮದುಮಗಳು ಧರಿಸುವುದು ಕಾಮನ್.
೬. ಪೋಲ್ಕಿ-ಪರ್ಲ್ ಚೋಕರ್
ಪೋಲ್ಕಿ ವಿನ್ಯಾಸದ ಹರಳುಗಳಿರುವ ಈ ಚೋಕರ್‌ಗಳು ಕೂಡ ಅತ್ಯಾಕರ್ಷಕ ವಿನ್ಯಾಸದಲ್ಲಿ ದೊರೆಯುತ್ತವೆ. ಇನ್ನು ಪರ್ಲ್ ಚೋಕರ್‌ಗಳು ಟ್ರೆಡಿಷನಲ್ ಟಚ್ ನೀಡುತ್ತವೆ. ಕೆಲವೊಮ್ಮೆ ಈ ಎರಡೂ ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲೂ ದೊರೆಯುತ್ತವೆ.
೭. ಜೋಧಾ-ಅಕ್ಬರ್ ಚೋಕರ್
ಮೊಗಲರ ಕಾಲದ ಈ ವಿನ್ಯಾಸದ ಚೋಕರ್ ನೆಕ್ಲೇಸ್‌ಗಳು, ಜೋಧಾ-ಅಕ್ಬರ್ ಸೀರಿಯಲ್ ಬಂದು ಹೋದ ನಂತರ ಸಾಕಷ್ಟು ಪಾಪ್ಯುಲರ್ ಆಯಿತು. ಅತಿ ಗ್ರ್ಯಾಂಡ್ ಆಗಿರುವ ಈ ಚೋಕರ್ ನೆಕ್ಲೇಸ್ ಇಂದಿಗೂ ಜನಪ್ರಿಯ ಲಿಸ್ಟ್‌ನಲ್ಲೆ ಇದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Bridal Fashion : ಮದುವೆಯಲ್ಲಿ ಸೆಲೆಬ್ರೆಟಿ ಬ್ರೈಡ್‌ನಂತೆ ಕಾಣಿಸಬೇಕೆ? ಇಲ್ಲಿದೆ 5 ಐಡಿಯಾ