Site icon Vistara News

World Vegan Day | ಇಂದು ವಿಶ್ವ ವೇಗನ್ ದಿನ, ಏನಿದು ವೇಗನ್, ಯಾಕೆ ಆಚರಣೆ?

Vegan

ಇಂದು ವಿಶ್ವ ಶಾಖಾಹಾರಿಗಳ ದಿನ (World Vegan Day). ವೇಗನ್‌ ಎಂದರೆ ಸಾಮಾನ್ಯವಾಗಿ ಬರುವ ಭಾವನೆ ಕಟ್ಟಾ ಸಸ್ಯಾಹಾರಿಗಳು ಎಂಬುದಾಗಿ. ಆದರೆ ವೇಗನ್‌ ಎಂದು ಗುರುತಿಸಿಕೊಳ್ಳುವವರು ಪ್ರಾಣಿಜನ್ಯ ಆಹಾರಗಳನ್ನು ಮಾತ್ರವೇ ಅಲ್ಲ, ಪ್ರಾಣಿಜನ್ಯ ಎಲ್ಲಾ ವಸ್ತುಗಳನ್ನು ನಿರಾಕರಿಸುವವರು. ಉದಾ, ಪ್ರಾಣಿ ಮೂಲದ ಔಷಧಿಗಳಿಂದ ಹಿಡಿದು, ಚರ್ಮದ ಬ್ಯಾಗಿನಂಥ ಉತ್ಪನ್ನಗಳವರೆಗೆ ಯಾವುದನ್ನೂ ಬಳಸದವರು. ಮನರಂಜನೆಗಾಗಿ ಬಳಸುವುದರಿಂದ ಹಿಡಿದು, ಪ್ರಯೋಗಕ್ಕೆ ಉಪಯೋಗಿಸುವವರೆಗೆ- ಮಾನವರ ಸ್ವಾರ್ಥಕ್ಕಾಗಿ ಪ್ರಾಣಿಗಳನ್ನು ಯಾವುದೇ ರೀತಿಯಲ್ಲಿ ಬಳಸುವುದೂ ಇವರಿಗೆ ಸಮ್ಮತವಲ್ಲ. ಜಿಲಾಟಿನ್‌, ಆಲ್ಬುಮಿನ್‌, ಪೆಪ್ಸಿನ್‌ನಂಥ ಪ್ರಾಣಿಜನ್ಯ ವಸ್ತುಗಳ ಬಳಕೆಯಿಂದ ತಯಾರಿಸುವ ಮಾರ್ಶ್ಮೆಲ್ಲೋಸ್‌, ಗಮ್ಮಿ ಕ್ಯಾಂಡಿಗಳನ್ನೂ ಬಳಸದವರು.

ವೇಗನ್‌ ಜೀವನಶೈಲಿಗೆ ಅದರದ್ದೇ ಆದ ಸಾಧಕ-ಬಾಧಕಗಳಿವೆ. ಮುಖ್ಯವಾಗಿ ಆಹಾರದ ವಿಷಯದಲ್ಲಿ ಹೇಳುವುದಾದರೆ, ಕಡಿಮೆ ಕ್ಯಾಲರಿಯ ನಾರುಭರಿತ ಸಸ್ಯಾಹಾರ ದೇಹದ ತೂಕವನ್ನು ಕಡಿಮೆ ಮಾಡಿ, ಕೊಲೆಸ್ಟ್ರಾಲ್‌ ಮತ್ತು ಇತರ ಬೇಡದ ಕೊಬ್ಬಿನಂಶವನ್ನು ದೇಹದಿಂದ ನಿರ್ಮೂಲಗೊಳಿಸುತ್ತದೆ. ಹಾಗೆಂದು ಇದರ ಕೆಲವು ಮಿತಿಗಳೂ ಇಲ್ಲದಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಒಳ್ಳೆಯ ಅಂಶಗಳು
ಮೊದಲೇ ಹೇಳಿದಂತೆ ಈ ರೀತಿಯ ಆಹಾರಶೈಲಿಯಲ್ಲಿ ನಾರಿನಂಶ ಹೇರಳವಾಗಿ ದೊರೆಯುತ್ತದೆ. ಪ್ರೊಟೀನ್‌ ಮತ್ತು ಶರ್ಕರಪಿಷ್ಟಾದಿಗಳಿಗಾಗಿ ಪ್ರಾಣಿಜನ್ಯ ಯಾವುದೇ ಆಹಾರವನ್ನು (ಹಾಲಿನ ಉತ್ಪನ್ನಗಳು ಸೇರಿದಂತೆ) ಸೇವಿಸದೆ ಇರುವುದರಿಂದ ಕಿನೂವಾ, ಸಿರಿಧಾನ್ಯಗಳು, ಮೊಳಕೆ ಕಾಳುಗಳು ಮುಂತಾದ ಆಹಾರಗಳಿಂದಲೇ ಈ ಅಂಶಗಳು ಪೂರೈಕೆ ಆಗಬೇಕು. ಉಳಿದಂತೆ ತರಕಾರಿ ಮತ್ತು ಹಣ್ಣುಗಳು ಅಗತ್ಯವಾದ್ದರಿಂದ ಈ ರೀತಿಯ ಆಹಾರಗಳಲ್ಲೂ ನಾರಿನ ಅಂಶ ಭರಪೂರ ದೊರೆಯುತ್ತದೆ.

ಆಹಾರದಲ್ಲಿ ಕಾರ್ಬ್‌ ಮತ್ತು ಕೊಬ್ಬಿನಂಶ ಕಡಿಮೆ ಆದಷ್ಟೂ ಮಧುಮೇಹ ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ. ಪೂರ್ಣ ವೇಗನ್‌ ವ್ಯಕ್ತಿಗಳ ಬಿಎಂಐ (body mass index) ಕಡಿಮೆಯೇ ಇರುತ್ತದೆ. ಜೊತೆಗೆ ರಕ್ತದೊತ್ತಡವೂ ಹತೋಟಿಯಲ್ಲಿರುತ್ತದೆ. ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಇದು ಉತ್ತಮ ಉಪಾಯ. ಮಾತ್ರವಲ್ಲ, ಹೃದಯ ಮತ್ತು ಜೀರ್ಣಾಂಗಗಳನ್ನೂ ಸುಸ್ಥಿತಿಯಲ್ಲಿ ಇಡಲು ನೆರವಾಗುತ್ತದೆ. ಹಾಗಾಗಿ ಹೃದಯಘಾತ, ಪಾರ್ಶ್ವವಾಯು ಮುಂತಾದ ಅಪಾಯಗಳನ್ನು ದೂರವಿಡಲು ಈ ಆಹಾರ ಸೂಕ್ತ.

ಸಮಸ್ಯೆಗಳು
ಇದು ಉತ್ತರ ಆಹಾರಶೈಲಿ ಹೌದಾದರೂ ಇದರಲ್ಲೂ ಸಮಸ್ಯೆಗಳಿವೆ. ಎಲ್ಲಕ್ಕಿಂತ ಮೊದಲಿಗೆ, ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ದೊರೆಯುವುದು ತೊಡಕಾಗಬಹುದು. ವೇಗನ್‌ ಆಹಾರದಲ್ಲಿ ಮೊದಲಿಗೆ ಕೊರತೆ ಆಗುವುದು ಅಯೋಡಿನ್‌ ಮತ್ತು ಕೋಲಿನ್.‌ ಥೈರಾಯ್ಡ್‌ ಗ್ರಂಥಿಯ ಆರೋಗ್ಯ ಸರಿಯಾಗಿರಲು ಅಯೋಡಿನ್‌ ಬೇಕೆಬೇಕು. ನಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಚನ್ನಾಗಿರುವುದಕ್ಕೆ ಇದೂ ಒಂದು ಕಾರಣ. ಕೋಲಿನ್‌ ಅಂಶ ನೇರವಾಗಿ ನಮ್ಮ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗೆಣಸು, ಬ್ರೊಕೊಲಿಯಂಥ ತರಕಾರಿಗಳಲ್ಲಿ ಈ ಅಂಶಗಳು ದೊರೆಯುತ್ತದೆ. ಇವಿಷ್ಟು ಸಾಕಾಗದಿದ್ದರೆ, ಅಯೋಡಿನ್‌ ಭರಿತ ಉಪ್ಪು ಅಥವಾ ಪೂರಕ ಮಾತ್ರೆಗಳನ್ನು ಬಳಸಬೇಕಾಗುತ್ತದೆ.

ನಾರಿನಂಶ ಹೆಚ್ಚಿರುವುದೂ ಕೆಲವು ಬಾರಿ ಸಮಸ್ಯೆಗಳನ್ನು ತರುತ್ತದೆ. ಎಲ್ಲಾ ನಾರುಗಳೂ ದೇಹದಲ್ಲಿ ಜೀರ್ಣವಾಗುವುದಿಲ್ಲ. ಜಠರದಲ್ಲಿ ಹಠಮಾರಿಯಾಗಿ ಕುಳಿತ ಜೀರ್ಣವಾಗದ ನಾರನ್ನು ಪಚನ ಮಾಡಲು ಕರುಳಿನ ಬ್ಯಾಕ್ಟೀರಿಯಾಗಳು ಯತ್ನಿಸುತ್ತವೆ. ಈ ಹಂತದಲ್ಲಿ ಅಜೀರ್ಣ, ಹೊಟ್ಟೆಯುಬ್ಬರದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂಥ ಸಮಸ್ಯೆಗಳಿಂದ ದೂರವಿರಲು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಜೊತೆಗೆ ನಾರಿನ ಆಹಾರಗಳನ್ನು ಕ್ರಮೇಣ ಹೆಚ್ಚಿಸುವುದು ಸೂಕ್ತ.

ವಿಟಮಿನ್‌ ಮತ್ತು ಖನಿಜಗಳ ಕೊರತೆಯಿಂದಾಗಿ ರಕ್ತಹೀನತೆ, ಖಿನ್ನತೆ ಮತ್ತು ಹಾರ್ಮೋನ್‌ ವ್ಯತ್ಯಯಗಳು ಉಂಟಾಗುವ ಸಾಧ್ಯತೆಯೂ ಇದೆ. ಅಯೋಡಿನ್‌, ಜಿಂಕ್‌, ಕ್ಯಾಲ್ಸಿಯಂ, ಬಿ೧೨ ಜೀವಸತ್ವ, ಒಮೇಗಾ ೩ ಫ್ಯಾಟಿ ಆಮ್ಲಗಳ ಕೊರತೆ ಉಂಟಾಗದಂತೆ ಆಹಾರವನ್ನು ಸಮತೋಲಿತವಾಗಿ ಸೇವಿಸುವುದು ಅಗತ್ಯ. ಸಸ್ಯಜನ್ಯ ಹಾಲಿನಲ್ಲಿ (ಉದಾ, ತೆಂಗಿನ ಹಾಲು, ಬಾದಾಮಿಯ ಹಾಲು) ದೊರೆಯದೆ ಉಳಿಯುವ ಪೋಷಕಾಂಶಗಳನ್ನು ತೂಗಿಸಿಕೊಳ್ಳುವ ಬಗ್ಗೆ ತಜ್ಞರಲ್ಲಿ ಸಲಹೆ ಪಡೆಯುವುದು ಸೂಕ್ತ. ಕಬ್ಬಿಣ ಮತ್ತು ಕ್ಯಾಲ್ಸಿಯಂ ಸತ್ವಗಳು ಹಸಿರು ಸೊಪ್ಪು-ತರಕಾರಿಗಳಲ್ಲಿ ದೊರೆಯುತ್ತವೆ. ಪ್ರೊಟೀನ್‌, ಕ್ಯಾಲ್ಸಿಯಂ ಮತ್ತು ಜಿಂಕ್‌ ಅಗತ್ಯಗಳಿಗೆ ತೋಫು ನೆರವಾಗುತ್ತದೆ. ವಾಲ್ನಟ್‌, ಅವಕಾಡೊ, ಅಗಸೆ ಬೀಜ ಮತ್ತು ಕ್ಯಾನೊಲಾ ಅಥವಾ ಆಲಿವ್ ಎಣ್ಣೆಗಳಿಂದ ಒಮೇಗಾ ೩ ಫ್ಯಾಟಿ ಆಮ್ಲ ದೊರೆಯುತ್ತದೆ. ಹೀಗೆ ನಾನಾ ಮೂಲಗಳಿಂದ ಪೋಷಕಾಂಶಗಳನ್ನು ತೂಗಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ | ಯುವಪೀಳಿಗೆಯಲ್ಲಿ ಟ್ರೆಂಡ್‌ ಆದ Vegan Diet | ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ

Exit mobile version