ಚಳಿಗಾಲದ ರಾತ್ರಿಗಳು ಇನ್ನಷ್ಟು ಮತ್ತಷ್ಟು ಚಳಿಯಾಗಿಯೂ, ಬೆಳಗುಗಳು ಮಂಜಿನಿಂದ ಕೂಡಿಯೂ ಇರುವುದು ಸಾಮಾನ್ಯ. ಕೆಲವರಿಗೆ ಚಳಿಗಾಲ ಇಷ್ಟವಾದರೆ, ಹಲವರಿಗೆ ಇದು ನಿತ್ಯದ ಮೂಡ್ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಕೆಲವು ಮಂದಿಗೆ ಚಳಿಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಇಷ್ಟವಿಲ್ಲವೆಂಬಂತಾಗುತ್ತದೆ. ಮುಖದಲ್ಲೊಂದು ನಗು ಇಲ್ಲ. ಚಟುವಟಿಕೆಯಿಲ್ಲ. ಉಲ್ಲಾಸವಿಲ್ಲ. ನಿತ್ಯದ ಮೂಡು ಬಹಳ ಯಾತನಾಮಯವಾಗಿ, ಬೇಸರವೆಂಬಂತೆ ಇರುತ್ತದೆ. ಇದು ಋತುಮಾನಕ್ಕೆ ಅನುಗುಣವಾಗಿ ಬರುವ ಮಾನಸಿಕ ಸಮಸ್ಯೆ. ಬಹಳಷ್ಟು ಮಂದಿಗೆ ಈ ಸಮಸ್ಯೆ ಇದ್ದರೂ ಇದರ ಬಗೆಗಿನ ಮಾಹಿತಿಗಳ, ಅರಿವಿನ ಕೊರತೆಯಿಂದ ಇದೊಂದು ಸಮಸ್ಯೆಯೆಂದು ತಿಳಿಯುವುದೇ ಇಲ್ಲ. ಇದನ್ನು ಸಾಮಾನ್ಯ ಭಾಷೆಯಲ್ಲಿ ವಿಂಟರ್ ಬ್ಲೂ ಎಂದೂ, ಮಾನಸಿಕ ವೈದ್ಯರ ಭಾಷೆಯಲ್ಲಿ ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಕೆಲವರಿಗೆ ಈ ಸಮಸ್ಯೆ ದಿನಗಟ್ಟಲೆ, ವಾರಗಟ್ಟಲೆ ಇದ್ದರೆ, ಇನ್ನೂ ಕೆಲವರಿಗೆ ಇದು ತಿಂಗಳುಗಟ್ಟಲೆ ಇರುತ್ತದೆ.
ಇಂತಹ ಸಮಸ್ಯೆಯನ್ನು ಅವರವರೇ ಗುರುತಿಸಬೇಕಾಗುತ್ತದೆ. ಸ್ವಯಂ ಆಸಕ್ತಿಯಿಂದ ಈ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸಬೇಕಾಗುತ್ತದೆ. ಇಂತಹ ಸಮಸ್ಯೆಯಲ್ಲಿರುವವರು ಈ ಬೇಸರದ, ನಿರಾಸಕ್ತಿಯ ಮೂಡನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
೧. ಚಳಿಗಾಲದಲ್ಲಿ ಇಂತಹ ಸಮಸ್ಯೆ ಕಾಡುವ ಮಂದಿ ಪ್ರತಿನಿತ್ಯ ಬಿಸಿಯಾಗಿ ಜೀರಿಗೆ, ಸೋಂಪು ಹಾಗೂ ಕೊತ್ತಂಬರಿ ಹಾಕಿದ ಚಹಾವನ್ನು ಅಥವಾ ಕಷಾಯವನ್ನು ಕುಡಿಯುವುದರಿಂದ ಉತ್ತಮ ಪರಿಣಾಮ ಕಾಣಬಹುದು. ಇದು ಮಾನಸಿಕ ಚೈತನ್ಯವನ್ನು ನೀಡಿ ಆ ದಿನಕ್ಕೆ ಕೊಂಚ ಉತ್ಸಾಹವನ್ನು ನೀಡುತ್ತದೆ.
ಇದನ್ನೂ ಓದಿ | Winter care | ಚಳಿಗಾಲದಲ್ಲಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಿಡುವ ಆಹಾರಗಳಿವು!
೨. ಮುಖ್ಯವಾಗಿ ಹೊಟ್ಟೆಯನ್ನು ಇಂಥವರು ಸರಿಯಾಗಿ ಇಟ್ಟುಕೊಳ್ಳಬೇಕು. ಹೊಟ್ಟೆಯ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಮೂಡು ಸರಿಯಾಗಿಲ್ಲ ಎಂದು, ಸಿಕ್ಕಿದ್ದನ್ನೆಲ್ಲ ತಿಂದರೆ ಆಗುವ ಪರಿಣಾಮಗಳನ್ನು ಅವರವರೇ ಗಮನಿಸಿ ಅರಿತುಕೊಳ್ಳಬೇಕು. ಚಳಿಗಾಲದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಆರೋಗ್ಯಕರ ಆಹಾರವನ್ನು ತಾಜಾ ಆಗಿ, ಬಿಸಿಬಿಸಿಯಾಗಿ ತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ಸೆರೆಟೋನಿನ್ ಎಂಬ ʻಫೀಲ್ ಗುಡ್ʼ ಹಾರ್ಮೋನು ಹೆಚ್ಚು ಉತ್ಪಾದನೆಯಾಗಿ ಮಾನಸಿಕವಾಗಿ ಖುಷಿ ಹೆಚ್ಚುವ ಕಾರಣ ಕಳೆಗುಂದಿದ ಮೂಡು ಸುಧಾರಣೆಯಾಗುತ್ತದೆ.
೩. ಉತ್ತಮ ಮಾನಸಿಕ ಆರೋಗ್ಯಕ್ಕೆ, ಸ್ಥಿತಿಗೆ ವಿಟಮಿನ್ ಡಿ ಬಹಳ ಮುಖ್ಯ. ಚಳಿಗಾಲದಲ್ಲಿ ಸೂರ್ಯನ ಬಿಸಿಸಲಿಗೆ ಮೈಯೊಡ್ಡು, ಮುಖವೊಡ್ಡುವ ಅವಕಾಶ ಕಡಿಮೆ ಇರುವುದರಿಂದ ಇಂತಹ ತೊಂದರೆಯನ್ನು ಹಲವರು ಅನುಭವಿಸುತ್ತಾರೆ. ಅದಕ್ಕಾಗಿ, ಆದಷ್ಟು ಬಿಸಿಲಿಗೆ ಹೋಗುವ, ವಾಕಿಂಗ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಬಿಸಿಲು ಬಂದಾಕ್ಷಣ ಬಿಸಿಲಿಗೆ ಮನಸೋ ಇಚ್ಛೆ ಮೈಯೊಡ್ಡಿ ಮುಖವೊಡ್ಡಿ ಕೂರುವುದರಿಂದ ಮಾನಸಿಕ ಸ್ಥಿತಿಯಲ್ಲೂ ಸುಧಾರಣೆಯಾಗುತ್ತದೆ. ಉಲ್ಲಾಸ ಬರುತ್ತದೆ. ದೇಹ ವಿಟಮಿನ್ ಡಿಯನ್ನು ಬಿಸಿಲಿನಲ್ಲಿರುವ ಸಂಧರ್ಭ ಉತಾದಿಸುವ ಮೂಲಕ ಮನಸ್ಥಿತಿಯಲ್ಲಿ ಉತ್ತಮ ಬದಲಾವಣೆಯಾಗುತ್ತದೆ. ವಿಟಮಿನ್ ಡಿ ಸಿಗುವ ಆಹಾರಗಳಾದ ಮೊಟ್ಟೆ, ಅಣಬೆಗಳು ಮತ್ತಿತರ ಆಹಾರಗಳನ್ನು ಸೇವಿಸುವುದೂ ಕೂಡಾ ಮುಖ್ಯ.
೪. ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸುವ ಮೂಲಕ ವಿಂಟರ್ ಬ್ಲೂವನ್ನು ಹೊಡೆದೋಡಿಸಬಹುದು. ಚಳಿಗಾಲದಲ್ಲಿ ಹಸಿರು ಸೊಪ್ಪುಗಳು ಹೇರಳವಾಗಿ ಸಿಗುವುದರಿಂದ, ಆಯಾ ಋತುಮಾನಕ್ಕೆ ಸರಿಯಾಗಿ ಸಿಗುವ ಆಹಾರಗಳನ್ನು ಅವಲಂಬಿಸುವುದು ಹೆಚ್ಚು ಉತ್ತಮ. ಇವುಗಳು ಕೇವಲ ದೈಹಿಕ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಪೂರಕ. ಹಸಿರು ಸೊಪ್ಪುಗಳು ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು, ನಾರಿನಂಶ, ಖನಿಜಾಂಶಗಳನ್ನು ಒಳಗೊಂಡಿದ್ದು ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಸಿಸುತ್ತವೆ. ಜೊತೆಗೆ ಮಾನಸಿಕವಾಗಿ ಕುಗ್ಗಿದ ದೇಹಕ್ಕೆ ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತದೆ.
ಇದನ್ನೂ ಓದಿ | Winter food | ಚಳಿಗಾಲದಲ್ಲಿ ಈ ಹಲ್ವಾಗಳ ಟೇಸ್ಟ್ ನೋಡದಿದ್ದರೆ ಬದುಕು ವೇಸ್ಟ್ !