ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಫ್ಯಾಷನ್‌ಗೆ ಸಾಥ್ ನೀಡುವ ಲಾಂಗ್ ಶ್ರಗ್‌ಗಳು ಇದೀಗ ಯುವತಿಯರ ಮನ ಗೆದ್ದಿದ್ದು, ಟ್ರೆಂಡಿಯಾಗಿವೆ. ಅದರಲ್ಲೂ ವೆಸ್ಟರ್ನ್ ಔಟ್‌ಫಿಟ್‌ಗಳ ಮೇಲೆ ಧರಿಸಿದಾಗ ಆಕರ್ಷಕವಾಗಿ ಕಾಣುವ ಇವು ಈ ಸೀಸನ್ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿವೆ.
ಟ್ರೆಂಡಿಯಾಗಿರುವ ವೆರೈಟಿ ಶ್ರಗ್ಸ್
ಅಂದ ಹಾಗೆ, ಶಗ್ಸ್‌ನಲ್ಲೂ ನಾನಾ ವೆರೈಟಿ ಹಾಗೂ ಡಿಸೈನ್ಸ್ ಲಭ್ಯ. ಕೆಲವು ಫುಲ್ ಲೆಂಥ್ ಇದ್ದರೆ ಇನ್ನು ಕೆಲವು ಸೊಂಟದವರೆಗೆ, ಸೊಂಟದ ಮೇಲೆ-ಕೆಳಗೆ ನಿಲ್ಲುತ್ತವೆ. ಇನ್ನು ಕೆಲವು ಬ್ಲೌಸ್‌ನಂತೆ ಮೇಲಕ್ಕೆ ಇರುತ್ತವೆ. ಕಟ್, ಕಲರ್ ಮೇಲೆ ಇವುಗಳ ವಿನ್ಯಾಸ ಡಿಪೆಂಡ್ ಆಗಿರುತ್ತದೆ. ಶಾರ್ಟ್ ಶ್ರಗ್ಸ್, ಲಾಂಗ್ ಲೈನ್ ಶ್ರಗ್ಸ್, ನಿಟ್ ಶ್ರಗ್ಸ್, ಉಲ್ಲನ್ ಶ್ರಗ್ಸ್, ಫರ್ ಶ್ರಗ್ಸ್, ವೆಲ್ವೆಟ್ ಶ್ರಗ್ಸ್, ಥ್ರೆಡ್ ಶ್ರಗ್ಸ್, ಕಾಲರ್ ಶ್ರಗ್ಸ್, ಕುರ್ತಾ ಶ್ರಗ್ ಸೇರಿದಂತೆ ನಾನಾ ಬಗೆಯ ಶ್ರಗ್ಸ್ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಹೆಸರು ಒಂದೇಯಾದರೂ ಭಿನ್ನ-ವಿಭಿನ್ನ ವಿನ್ಯಾಸದಲ್ಲಿ ದೊರೆಯುತ್ತವೆ. ಡಿಸೈನರ್ ದಿವ್ಯಾ ಹೇಳುವಂತೆ, ಒಂದೇ ಸಮಯದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಯುವತಿಯರು ಶ್ರಗ್ಸ್ ಧರಿಸುವುದು ಸಾಮಾನ್ಯವಾಗಿದೆ. ಫಂಕಿ ಕ್ಯಾಶುವಲ್ಸ್ ಲಿಸ್ಟ್‌ಗೆ ಸೇರಿದೆ. ಅಚ್ಚರಿಯ ವಿಚಾರವೆಂದರೆ, ಇದೀಗ ಫಾರ್ಮಲ್ ಧರಿಸುವ ಮಹಿಳೆಯರಿಗೂ ಪ್ರಿಯವಾಗತೊಡಗಿವೆ.
ಶ್ರಗ್ ಮ್ಯಾಚ್ ಹೀಗಿರಲಿ
ಸಂಪೂರ್ಣ ವೆಸ್ಟರ್ನ್ ಲುಕ್ ನೀಡುವ ಶ್ರಗ್ಸ್ ವಿಂಟರ್ ಸೀಸನ್‌ನ ಟ್ರೆಂಡಿ ಲೇಯರ್ ಲುಕ್ ನೀಡುವ ಔಟ್‌ಫಿಟ್ ಎಂದರೂ ಅತಿಶಯೋಕ್ತಿಯಾಗದು. ಇದೀಗ ಇಂಡೋ-ವೆಸ್ಟರ್ನ್ ಡಿಸೈನ್‌ಗಳವು ಲಭ್ಯ. ಇನ್ನು ಫಾರ್ಮಲ್ ಡ್ರೆಸ್‌ಕೋಡ್‌ಗಳೊಂದಿಗೆ ಇಂಡಿಯನ್ ಲುಕ್ ನೀಡುವ ಶ್ರಗ್ಸ್ ಕೂಡ ದೊರೆಯುತ್ತಿದೆ. ಇವುಗಳನ್ನು ಕುರ್ತಾ ಶ್ರಗ್ಸ್ ಎನ್ನಲಾಗುತ್ತದೆ. ಜೋಧ್‌ಪುರ್ ಪ್ಯಾಂಟ್-ಲಿನೆನ್ ಕುರ್ತಾಗಳ ಜತೆ ಇಂಡೋ-ವೆಸ್ಟರ್ನ್ ಶೈಲಿಯ ಲಾಂಗ್ ಶ್ರಗ್ಸ್ ಇಂದು ಸೆಮಿ ಎಥ್ನಿಕ್ ಶೈಲಿಯ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದೆ.
ಪರ್ಸನಾಲಿಟಿಗೆ ತಕ್ಕಂತಿರಲಿ ಶ್ರಗ್ಸ್
ಉದ್ದಗಿರುವವರಿಗೆ ಯಾವುದೇ ಬಗೆಯ ಶ್ರಗ್ಸ್ ಸೂಟ್ ಆಗುತ್ತದೆ. ಆದರೆ, ಕೊಂಚ ಪ್ಲಂಪಿ ಇಲ್ಲವೇ ಕುಳ್ಳಗಿದ್ದಲ್ಲಿ ಅವರು ಮಾತ್ರ ಆದಷ್ಟು ತಿಳಿ ವರ್ಣದ ಕೊಂಚ ಡಿಸೈನರ್ ಶ್ರಗ್ಸ್ ಧರಿಸುವುದು ಉತ್ತಮ. ಇಲ್ಲವಾದಲ್ಲಿ ಮತ್ತಷ್ಟು ಗುಂಡುಗುಂಡಾಗಿ ಕಾಣಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್ ರಾಘವ್.
ಶ್ರಗ್ಸ್ ಪ್ರಿಯರಿಗಾಗಿ ಒಂದಿಷ್ಟು ಸಲಹೆ
- ಎಥ್ನಿಕ್ ಶ್ರಗ್ಸ್ ರಾಯಲ್ ಲುಕ್ ನೀಡುತ್ತವೆ.
- ಶ್ರಗ್ಸ್ ಧರಿಸಿದಾಗ ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ.
- ಶಾರ್ಟ್ ಶ್ರಗ್ಸ್ ಎಲ್ಲಾ ಉಡುಪಿನೊಂದಿಗೂ ಧರಿಸಬಹುದು.
- ಫಿಟ್ಟಿಂಗ್ ಇದ್ದರೇ ಮಾತ್ರ ಓಕೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)