ಪರಸರ ಪೂರಕ ಜೀವನಶೈಲಿ.
ಇಂದು ವಿಶ್ವ ಬೈಸಿಕಲ್ ದಿನ. ಸುಸ್ಥಿರ ಹಾಗೂ ಆರೋಗ್ಯಕರ ಜೀವನಶೈಲಿ ಪಾಲನೆಗೆ ನಮಗೆ ಮಹಾತ್ಮ ಗಾಂಧಿ ಅವರಲ್ಲದೆ ಇನ್ಯಾರು ಆದರ್ಶ ಆಗಲು ಸಾಧ್ಯ?
ಮೇಲಿನ ಒಕ್ಕಣೆಯ ಟ್ವೀಟ್ ಮಾಡಿದ್ದಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಜೊತೆಗೆ ಮಹಾತ್ಮ ಗಾಂಧಿ ಅವರು ಸೈಕಲ್ ತುಳಿಯುತ್ತಿರುವ ಒಂದು ಫೋಟೋ ಲಗತ್ತಿಸಿದ್ದಾರೆ. ಜೂನ್ 3, ವಿಶ್ವ ಸೈಕಲ್ ದಿನದಂದು ಅವರು ವಿಶಿಷ್ಟ ಪ್ರೇರಣೆ ನೀಡಿದ್ದು ಹಾಗೆ. ಹಿಂದೆ ಸ್ವಚ್ಛತಾ ಅಭಿಯಾನ ಆರಂಭಿಸಿದಾಗಲೂ ಅವರು ಮಹಾತ್ಮ ಗಾಂಧಿ ಅವರ ಆದರ್ಶವನ್ನು ನೆನೆದುಕೊಂಡಿದ್ದರು ಎಂಬುದನ್ನು ನೆನಪಿಡಬೇಕು.
ಪೆಟ್ರೋಲಿಯಂ ಚಾಲಿತ ವಾಹನಗಳ ಬದಲಿಗೆ ಹೆಚ್ಚು ಹೆಚ್ಚಾಗಿ ಸೈಕಲ್ ತುಳಿಯುವುದು ಆರೋಗ್ಯಕರ- ಎಂಬ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಜೂನ್ 3ರಂದು ʼವಿಶ್ವ ಬೈಸಿಕಲ್ ದಿನʼ ಆಚರಿಸಲಾಗುತ್ತಿದೆ. 2018ರಲ್ಲಿ ವಿಶ್ವಸಂಸ್ಥೆಯ ಮಹಾಸಭೆ ನಡೆದ ಸಂದರ್ಭದಲ್ಲಿ ಅಂಗೀಕರಿಸಲಾದ ಗೊತ್ತುವಳಿಯಂತೆ ಈ ದಿನವನ್ನು ಅಂಗೀಕರಿಸಲಾಯಿತು. ʼʼಬೈಸಿಕಲ್ನ ಅನನ್ಯತೆ, ಸುದೀರ್ಘ ಕಾಲಮಾನ, ಬೇರೆ ಬೇರೆ ಉದ್ದೇಶಗಳಿಗೆ ಅನ್ವಯವಾಗಬಲ್ಲ ಅದರ ಸ್ವರೂಪʼʼ ಇವೆಲ್ಲ ವಿಶ್ವಸಂಸ್ಥೆ ಪ್ರಕಾರ ಇಂದು ಹೈಲೈಟ್ ಆಗಬೇಕಾದ ವಿಷಯಗಳು.
ಬೈಸಿಕಲ್ ತುಳಿಯುವುದರಿಂದ ಆಗುವ ಆರೋಗ್ಯದ ಪ್ರಯೋಜನಗಳು ಇಂತಿವೆ:
- ಕಚೇರಿಗೆ ತೆರಳುವುದು, ದಿನಸಿ ಅಂಗಡಿಗೆ ಹೋಗುವುದು ಮುಂತಾದ ದಿನವಹಿ ಕೆಲಸಗಳಲ್ಲಿ ಸೈಕಲ್ ಅನ್ನು ಅಳವಡಿಸಿಕೊಂಡರೆ, ಕೆಲಸವೂ ಆಗುವುದು, ವರ್ಕೌಟ್ ಕೂಡ ಆಗುತ್ತದೆ. ಸೈಕ್ಲಿಂಗ್ ಎಂಬುದು ಕಾರ್ಡಿಯಾಕ್ ವ್ಯಾಯಾಮ. ಇದು ದೇಹದಲ್ಲಿರುವ ಸಾಕಷ್ಟು ಕ್ಯಾಲೊರಿಗಳನ್ನು ಸುಟ್ಟುಹಾಕುತ್ತದೆ. ಇಪ್ಪತ್ತು ನಿಮಿಷ ಸೈಕ್ಲಿಂಗ್ ಮಾಡಿದ ಬಳಿಕ ನಿಮ್ಮ ಕೊಬ್ಬು ಕರಗಲು ಶುರುವಾಗುತ್ತದೆ. ಹೀಗಾಗಿ ಕನಿಷ್ಠ ಮೂವತ್ತು ನಿಮಿಷ ಸೈಕಲ್ ತುಳಿಯುವುದು ಅಗತ್ಯ.
- ಇಂದಿನ ದಿನಮಾನದಲ್ಲಿ ಎಲ್ಲ ಬಗೆಯ ಸೋಂಕುಗಳನ್ನು ಎದುರಿಸಲು ನಮಗೆ ರೋಗ ಪ್ರತಿರೋಧ ಶಕ್ತಿ ಅಗತ್ಯ. ನಿತ್ಯ ಸೈಕ್ಲಿಂಗ್ ಮಾಡುವುದು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸದಾ ಕ್ರಿಯಾಶೀಲರಾಗಿರುವುದು ಇಮ್ಯುನಿಟಿಯನ್ನು ವರ್ಧಿಸುತ್ತದೆ.
- ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಒತ್ತಡ, ಆತಂಕಗಳಿಂದ ಬಳಲುತ್ತಿರುವವರು ಸೈಕ್ಲಿಂಗ್ ಮಾಡಿದರೆ ಒತ್ತಡ ಕಳೆದುಕೊಂಡು ಸಂತೋಷವಾಗಿರುತ್ತಾರೆ. ಯಾಕೆಂದರೆ ಸೈಕಲ್ ತುಳಿಯುವ ಒಂದೇ ಕಾರ್ಯದ ಮೇಲೆ ಮನಸ್ಸು ಕೇಂದ್ರೀಕೃತವಾಗಿರುತ್ತದೆ.
- ಒತ್ತಡವನ್ನು ಕಳೆದುಕೊಳ್ಳಲು ದಿನಕ್ಕೆ ಅರ್ಧ ಗಂಟೆ ಸೈಕ್ಲಿಂಗ್ ಮಾಡುವುದು ಉತ್ತಮ ದಾರಿ. ಸೈಕಲ್ ತುಳಿಯುವುದು ಚೇತೋಹಾರಿ, ಆನಂದದಾಯಕ ಅನುಭವ. ದೇಹ ಹಗುರ ಆಗುವುದರ ಜೊತೆಗೆ ಮನಸ್ಸೂ ಹಗುರವಾಗುತ್ತದೆ.
- ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ಸೈಕ್ಲಿಂಗ್ ಮಾಡುವುದರಿಂದ ಹೃದಯ ಸಮಸ್ಯೆಯ ಸಾಧ್ಯತೆ ಶೇಕಡ 50ರಷ್ಟು ಕಡಿಮೆಯಾಗುತ್ತದೆ ಎಂದು ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದ ಒಂದು ಅಧ್ಯಯನ ತಿಳಿಸಿದೆ. ವಿಶ್ವಸಂಸ್ಥೆಯ ಪ್ರಕಾರ 18ರಿಂದ 64 ವಯಸ್ಸಿನವರು ವಾರಕ್ಕೆ ಕನಿಷ್ಠ 150 ನಿಮಿಷಗಳಷ್ಟು ಸಾಧಾರಣದಿಂದ ತೀವ್ರಗತಿಯ ವ್ಯಾಯಾಮ ಮಾಡಬೇಕು. ದಿನದಲ್ಲಿ ಕನಿಷ್ಠ 20 ನಿಮಿಷ ಸೈಕಲ್ ತುಳಿದರೆ ಈ ಗುರಿಯನ್ನು ಸುಲಭವಾಗಿ ಸಾಧಿಸಬಹುದು.
- ನಿಮ್ಮ ಕಾರ್ಬನ್ ಫೂಟ್ಪ್ರಿಂಟ್ ಅಥವಾ ಇಂಗಾಲದ ಹೆಜ್ಜೆಗುರುತು ಕಡಿಮೆಯಾಗುತ್ತದೆ. ಇಂಗಾಲದ ಹೆಜ್ಜೆಗುರುತ ಎಂದರೆ ಒಬ್ಬ ವ್ಯಕ್ತಿ ಪರಿಸರಕ್ಕೆ ತುಂಬುವ ಇಂಗಾಲಾಮ್ಲದ ಪ್ರಮಾಣ. ಬೈಕ್, ಕಾರು ಬಿಟ್ಟು ಸೈಕಲ್ ತುಳಿದರೆ ಅಷ್ಟರ ಮಟ್ಟಿಗೆ ನೀವು ಪೆಟ್ರೋಲ್ ಉರಿಸುವಿಕೆ ಕಡಿಮೆ ಮಾಡುತ್ತೀರಿ, ಪರಿಸರಕ್ಕೆ ನಿಮ್ಮ ಧನಾತ್ಮಕ ಕೊಡುಗೆ ಇರುತ್ತದೆ.