Site icon Vistara News

ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ; ಮತ್ತೆ ಸಂಪತ್ತು ಹಂಚಿಕೆ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

Narendra Modi

Narendra Modi

ನವದೆಹಲಿ: ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಸಂಪತ್ತು ಮರುಹಂಚಿಕೆಯ ವಿಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಗುಡುಗಿದ್ದಾರೆ. ಉತ್ತರಪ್ರದೇಶದ ಆಲಿಗಡ್​(Aligarh)ದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್‌ನವರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ (Lok Sabha Election 2024).

“ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದಾರೆ.

ʼʼಒಂದು ವೇಳೆ ನೀವು ಹಳ್ಳಿಯಲ್ಲಿ ಪಿತ್ರಾರ್ಜಿತ ಮನೆಯನ್ನು ಹೊಂದಿದ್ದು, ನಗರದಲ್ಲಿ ಮಕ್ಕಳಿಗಾಗಿ ಚಿಕ್ಕ ಫ್ಲ್ಯಾಟ್‌ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಅವರು ಎರಡರ ಪೈಕಿ ಒಂದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಇದು ಮಾವೋವಾದಿ ಮತ್ತು ಕಮ್ಯೂನಿಷ್ಟ್‌ ಮನೋಭಾವದ ಯೋಚನಾ ಲಹರಿ. ಹೀಗೆ ಮಾಡಿಯೇ ಅವರು ಹಲವು ದೇಶಗಳನ್ನು ನಾಶಪಡಿಸಿದ್ದಾರೆ. ಈಗ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ʼಒಂಡಿಯಾʼ ಒಕ್ಕೂಟ ಆ ನಿಯಮವನ್ನು ಭಾರತದಲ್ಲಿ ಜಾರಿಗೊಳಿಸಲು ಮುಂದಾಗಿದೆʼʼ ಎಂದು ಪ್ರಧಾನ ಮಂತ್ರಿ ದೂರಿದ್ದಾರೆ.

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ತಿಳಿಸಿತ್ತು. ʼʼಕಾಂಗ್ರೆಸ್ ಅಧಿಕಾರ ಬಂದರೆ, ಈ ದೇಶದಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಸಮೀಕ್ಷೆ ಕೈಗೊಳ್ಳಲಾಗುವುದು. ಬಳಿಕ ಈ ಆಸ್ತಿಯನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದುʼʼ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಅನುಸರಿಸಿದೆ. ಆದರೆ ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಏನನ್ನೂ ಮಾಡಿಲ್ಲ. ದಲಿತರ, ಮುಸ್ಲಿಮರ ಕಷ್ಟಗಳ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸಹಿಸುವುದಿಲ್ಲ. ಇನ್ನು ಗಲಭೆಗಳು, ಕೊಲೆಗಳು, ಗ್ಯಾಂಗ್ ವಾರ್‌ಗಳು ಸಮಾಜವಾದಿ ಪಕ್ಷ ಸರ್ಕಾರದ ಗುರುತಾಗಿದ್ದವು” ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ವಾಗ್ದಾಳಿ

ಕಾಂಗ್ರೆಸ್‌ ಸಂಪತ್ತು ಹಂಚಿಕೆ ವಿಷಯವನ್ನು ಮುಂದಿಟ್ಟುಕೊಂಡು ಭಾನುವಾರವೂ ಮೋದಿ ರಾಜಸ್ಥಾನದಲ್ಲಿ ಕೆಂಡ ಕಾರಿದ್ದರು. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಹಂಚಿಕೆ ಮಾಡುವುದಾಗಿ ಹೇಳಿದೆ. ಜನರ ಬಳಿ ಇರುವ ಬಂಗಾರದ ಕುರಿತು ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ. ಅಲ್ಲಿಗೆ ನಿಮ್ಮ ಒಡವೆ, ಮಾಂಗಲ್ಯ ಸರಕ್ಕೆ ಕಾಂಗ್ರೆಸ್‌ ಬಂದರೆ ಗ್ಯಾರಂಟಿ ಇರುವುದಿಲ್ಲ. ನಿಮ್ಮ ಬಂಗಾರ, ಒಡವೆ, ತಾಳಿಯನ್ನು ಕಿತ್ತುಕೊಂಡು, ಕಾಂಗ್ರೆಸ್‌ ಬೇರೆಯವರಿಗೆ ಹಂಚುತ್ತದೆ” ಎಂದು ಹೇಳಿದ್ದರು. 

ಇದನ್ನೂ ಓದಿ: Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Exit mobile version