ದಾವಣಗೆರೆ: ಈ ಬಾರಿ ಕರ್ನಾಟಕದ ಜನತೆ ಕಾಂಗ್ರೆಸ್‌ನ ಪಾಪದ ಕೆಲಸಗಳಿಗೆ ತಕ್ಕ ಶಿಕ್ಷೆಯನ್ನು ನೀಡಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ (Congress Karnataka) ಪಕ್ಷವೂ ಖಾತೆ ತೆರೆಯುವುದೇ ಅನುಮಾನವಾಗಿದೆ. ಇನ್ನು ಮುಂದೆ ಕಾಂಗ್ರೆಸ್‌ನ ಲೂಟಿ ಪ್ರಕರಣಗಳು ಒಂದೊಂದಾಗಿಯೇ ಹೊರ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು.
ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಾರ್ಟಿಯು ಬೇರೆ ಬೇರೆ ಲೂಟಿಯಲ್ಲಿ ತೊಡಗಿಕೊಂಡಿದೆ. ಈಗ ಒಳಗೊಳಗೆ ಯುದ್ಧ ನಡೆಯುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಲೂಟಿ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತದೆ ಎಂದು ಹೇಳಿದರು.
ಸೋಲುವ ಭೀತಿಯಿಂದ ಇವಿಎಂ ಪ್ರಸ್ತಾಪ
ಈ ಕಾಂಗ್ರೆಸ್‌ನವರಿಗೆ ಯಾವುದರ ಮೇಲೂ ವಿಶ್ವಾಸ ಇಲ್ಲ. ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುತ್ತಲೇ ಬಂದಿದ್ದಾರೆ. ಮೋದಿ ಗೆದ್ದರೂ ಇವಿಎಂ ಎಂದು ಹೇಳುತ್ತಾರೆ. ಈಗಲೂ ಸೋಲುವ ಭೀತಿಯಿಂದ ಅವರು ಇವಿಎಂ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್‌ನವರಿಗೆ ಮುಖಭಂಗವಾಗಿದೆ. ಈಗ ಕಾಂಗ್ರೆಸ್‌ನವರು ಕಂಗಾಲಾಗಿ ಕುಳಿತಿದ್ದಾರೆ ಎಂದು ನರೇಂದ್ರ ಮೋದಿ ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ವರ್ಷಕ್ಕೆ 5 ಪಿಎಂ!
ಬಿಜೆಪಿ ಸರ್ಕಾರ ದೇಶದಲ್ಲಿ ಅಭಿವೃದ್ಧಿ ಮಾಡುತ್ತಲೇ ಹೋಗುತ್ತಿದೆ. ಆದರೆ, ಬಿಜೆಪಿ ಸರ್ಕಾರದ ಕೆಲಸವನ್ನು ಕಾಂಗ್ರೆಸ್ ಹಾಳು ಮಾಡಲು ಪ್ರಯತ್ನ ಪಡುತ್ತಲೇ ಇದೆ. ಈಗ ಇಂಡಿ ಅಲೆಯನ್ಸ್‌ನವರು ಹೊಸ ಫಾರ್ಮೂಲಾವನ್ನು ಮಾಡಿಕೊಂಡು ರಾಜಕೀಯವನ್ನು ಮಾಡುತ್ತಿದ್ದಾರೆ. ಇಂಡಿ ಒಕ್ಕೂಟಕ್ಕೆ ಅಧಿಕಾರ ಸಿಕ್ಕರೆ ಒಂದೊಂದು ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿ ಆಗುತ್ತಾರೆ. ಮೊದಲ ವರ್ಷಕ್ಕೆ ಒಬ್ಬರು ಪ್ರಧಾನಿ, ಎರಡನೇ ವರ್ಷಕ್ಕೆ ಒಬ್ಬರು, ಮೂರನೇ ವರ್ಷಕ್ಕೆ, ನಾಲ್ಕನೇ ಹಾಗೂ ಐದನೇ ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿಯಾಗುತ್ತಾರೆ. ಹೀಗೆ 5 ವರ್ಷ ಕಾಲ ದೇಶವನ್ನು ಒಬ್ಬರ ಕೈಗೆ ಕೊಡುವಾಗ ನೀವು ಯೋಚನೆ ಮಾಡುತ್ತೀರಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ಶಿಕ್ಷಣ ನೀತಿಯಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ರಾಜಕೀಯ
ಕಾಂಗ್ರೆಸ್ ಪಕ್ಷದವರಿಂದ ಜನಸಾಮಾನ್ಯರ ಜೀವನದಲ್ಲೂ ಆಟವಾಡಲಾಗುತ್ತಿದೆ. ಶಿಕ್ಷಣ ನೀತಿಯಲ್ಲಿ ಸಹ ಕರ್ನಾಟಕದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಯುವಕರು, ವಿದ್ಯಾರ್ಥಿಗಳ ಭವಿಷ್ಯದಲ್ಲಿಯೂ ಆಟವಾಡುತ್ತಿದೆ. ಆರೋಗ್ಯ, ನೀರಾವರಿ ಸೇರಿ ಎಲ್ಲ ಕ್ಷೇತ್ರದಲ್ಲಿಯೂ ಚೆಲ್ಲಾಟವಾಟುತ್ತಿದೆ. ದೇಶದ ಭವಿಷ್ಯವನ್ನು ಬರ್ಬಾದ್ ಮಾಡುವ ಕಾಂಗ್ರೆಸ್ ಪಕ್ಷವನ್ನು ನಂಬಲು ಆಗುತ್ತದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.
ನಮ್ಮ ಸರ್ಕಾರ ಬಂದಾಗ ಭ್ರಷ್ಟಾಚಾರಕ್ಕೆ ಕಡಿವಾಣ
ಈ ಹಿಂದೆ ಕಾಂಗ್ರೆಸ್‌ನಿಂದ ಪ್ರಧಾನಿಯಾದವರೊಬ್ಬರು ಹೇಳಿಕೆ ಪ್ರಕಾರ, ದೇಶದಲ್ಲಿ ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದು ಫಲಾನುಭವಿಗೆ ತಲುಪುವ ಹೊತ್ತಿನಲ್ಲಿ 15 ಪೈಸೆ ಆಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಏನಾಗಿದೆ? ಸರ್ಕಾರ ಬಿಡುಗಡೆ ಮಾಡುವ 1 ರೂಪಾಯಿ ಪೂರ್ತಿಯಾಗಿ ಫಲಾನುಭವಿಯ ಖಾತೆಗೆ ಬೀಳುತ್ತಿದೆ. ಇದು ನಮ್ಮ ಭ್ರಷ್ಟಾಚಾರ ರಹಿತ ಆಡಳಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯಾವುದೇ ಒಬ್ಬ ತಂದೆ – ತಾಯಿ ಏನು ಯೋಚನೆ ಮಾಡುತ್ತಾರೆ? ನಾವು ದುಡಿದಿದ್ದರಲ್ಲಿ ಸ್ವಲ್ಪ ಉಳಿಕೆ ಮಾಡಿ, ನಮ್ಮ ಕಾಲಾನಂತರ ಮಕ್ಕಳಿಗೆ ಸ್ವಲ್ಪ ಆದಾಯವನ್ನು, ಆಸ್ತಿಯನ್ನು ಮಾಡಿಡಬೇಕು ಎಂದು ಚಿಂತೆ ಮಾಡುತ್ತಾರಲ್ಲವೇ? ಆದರೆ, ಕಾಂಗ್ರೆಸ್ ಈಗ ಆ ಆಸ್ತಿ ಮೇಲೆ ಕಣ್ಣಿಟ್ಟಿದೆ. ನೀವು ಮಾಡುವ ಆಸ್ತಿಯಲ್ಲಿ ನಿಮ್ಮ ಮಕ್ಕಳಿಗೆ 55 ಪರ್ಸೆಂಟ್ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುವಂತೆ ನೀತಿ ನಿರೂಪಣೆ ಮಾಡಲು ಹೋಗಿದ್ದಾರೆ. ಇಂಥವರಿಗೆ ಪಾಠ ಕಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಯಾವುದಾದರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ ಅಲ್ಲಿ ಹೂಡಿಕೆ ಮಾಡಲು ಯಾರಾದರೂ ಮುಂದೆ ಬರುತ್ತಾರಾ? ಯಾವುದಾದರೂ ಕೈಗಾರಿಕೆಗಳು ಬರುತ್ತದೆಯೋ? ಬಂಗ್ಲೆ, ದುಡ್ಡು ಎಷ್ಟೇ ಇದ್ದರೂ ಸುರಕ್ಷತೆ ಇಲ್ಲದಿದ್ದರೆ ಹೇಗೆ? ಅದೇ ರೀತಿಯಾಗಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದಾಗ ಮೊದಲು ಏನೆಂದರು? ಸಿಲಿಂಡರ್ ಸ್ಫೋಟ ಎಂದು ಹೇಳಿದರು. ಕೊನೆಗೆ ಬಾಂಬ್ ಬ್ಲಾಸ್ಟ್ ಆಯಿತು ಎಂದು ಗೊತ್ತಾಗುತ್ತಿದ್ದಂತೆ, ಬ್ಯುಸಿನೆಸ್ ವಿರೋಧಿಗಳ ಕೃತ್ಯ ಎಂದು ಹೇಳಿದರು. ಇದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ನೇಹಾ ಹತ್ಯೆ ಸಾಮಾನ್ಯವಲ್ಲ
ಪ್ರತಿ ತಂದೆ ತಾಯಿಯೂ ತಮ್ಮ ಮಕ್ಕಳ ಸುರಕ್ಷತೆಯನ್ನು ನೋಡುತ್ತಾರೆ. ಆದರೆ, ಶಾಲಾ -ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಆತಂಕ ಪಡುತ್ತಿದ್ದಾರೆ. ಹುಬ್ಬಳ್ಳಿಯ ನೇಹಾ ಹತ್ಯೆ ಸಾಮಾನ್ಯವಲ್ಲ. ವೋಟ್ ಬ್ಯಾಂಕ್ ಮಾಡುತ್ತಿರುವ ಕಾಂಗ್ರೆಸ್‌ನ ಆಡಳಿತಕ್ಕೆ ಇದು ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ವೋಟ್ ಬ್ಯಾಂಕ್ ಚಿಂತೆಯಲ್ಲಿ ಕಾಂಗ್ರೆಸ್ ಇದೆ. ಇದು ಅತ್ಯಂತ ಅಪಾಯಕಾರಿ ಮನಃಸ್ಥಿತಿಯಾಗಿದೆ. ವಿದ್ವಂಸಕ ಸಂಘಟನೆಗಳು ದೇಶದ ಸ್ವಾಸ್ಥ್ಯವನ್ನು ಹಾಳು ಮಾಡಲು ಹೊರಟಿದೆ. ಹಾಗಾಗಿ ಸಂಘಟನೆಯೊಂದನ್ನು ನಾವು ನಿಷೇಧ ಮಾಡಿದ್ದೇವೆ. ಆದರೆ, ಅಂಥ ಸಂಘಟನೆಯನ್ನು ಓಲೈಕೆ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ಸುರಕ್ಷತೆಯ ಗ್ಯಾರಂಟಿ, ವಿಕಾಸದ ಗ್ಯಾರಂಟಿ ಎಂದರೆ ಮೋದಿ ಎಂದು ಹೇಳಿದರು.
ನೀವು ಇಲ್ಲಿ ಕೊಡುವ ಪ್ರತಿಯೊಂದು ಮತವೂ ನರೇಂದ್ರ ಮೋದಿಗೆ ಸಲ್ಲುತ್ತದೆ. ನಿಮ್ಮ ಪ್ರತಿ ಮತವೂ ದೇಶದ ಅಭಿವೃದ್ಧಿಯನ್ನು ಮಾಡಲಿದೆ. ಈವರೆಗಿನ ರೆಕಾರ್ಡ್ ಬ್ರೇಕ್ ಮಾಡುವ ನಿಟ್ಟಿನಲ್ಲಿ ಈ ಬಾರಿ ನಿಮ್ಮ ಹಕ್ಕು ಚಲಾಯಿಸಿ ಎಂದು ನರೇಂದ್ರ ಮೋದಿ ಕರೆ ನೀಡಿದರು.
ಜೂನ್ 4ರಂದು ಕರ್ನಾಟಕದಲ್ಲಿ ಎಲ್ಲ ಕಡೆಯೂ ವಿಜಯೋತ್ಸವ
2014, 2019ರ ಚುನಾವಣೆಗಿಂತಲೂ ಹೆಚ್ಚಿನ ಜನ ಬೆಂಬಲ ಈ ಬಾರಿ ಇದೆ. ಈ ಬಾರಿಯ ಅಲೆಯೇ ಬೇರೆಯಾಗಿದೆ. ಕರ್ನಾಟಕದ ಎಲ್ಲಿ ಹೋದರೂ ಬಿಜೆಪಿ ಪರ ಅಲೆ ಎದ್ದು ಕಾಣುತ್ತಿದೆ. 10 ವರ್ಷ ಮೋದಿ ಮಾಡಿದ ಕೆಲಸಕ್ಕೆ ಜನರು ಮನ ಸೋತಿದ್ದಾರೆ. ಜೂನ್ 4ರಂದು ಕರ್ನಾಟಕದಲ್ಲಿ ಎಲ್ಲ ಕಡೆಯೂ ವಿಜಯೋತ್ಸವ, ಸಂಭ್ರಮ ಮನೆ ಮಾಡಿರುತ್ತದೆ. ಯಾರಿಗೆಲ್ಲ ನಾನು ಆಭಾರಿಯಾಗಲಿ ಎಂದು ಹೇಳಿಕೊಳ್ಳಲು ಆಗದು. ನಾನು ಯಾವತ್ತೂ ನಿಲ್ಲುವುದಿಲ್ಲ, ನನ್ನ ಕೆಲಸವೂ ನಿಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.