Site icon Vistara News

Election Results 2024: ವಾರಣಾಸಿಯಲ್ಲಿ ಮೋದಿ ಮತ ಗಳಿಕೆ ಪ್ರಮಾಣ ಕುಸಿಯುವಂತೆ ಮಾಡಿದ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ

Election Results 2024

Election Results 2024

ಲಕ್ನೋ: ಸುಮಾರು ಎರಡು ತಿಂಗಳ ಕಾಲ ನಡೆದ ಚುನಾವಣೆ ಹಬ್ಬ ಮಂಗಳವಾರ (ಜೂನ್‌ 4) ಮತ ಎಣಿಕೆಯೊಂದಿಗೆ ಮುಕ್ತಾಯವಾಗಿದೆ (Election Results 2024). ಸುದೀರ್ಘ ದಿನಗಳ ಕುತೂಹಲ ಕೊನೆಗೂ ತಣಿದಿದೆ. ಎಕ್ಸಿಟ್‌ ಪೋಲ್‌ಗಿಂತ ಭಿನ್ನವಾಗಿ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ (BJP) ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ಎಡವಿದೆ. ಅದಾಗ್ಯೂ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಅಧಿಕಾರಕ್ಕೇರುವುದು ನಿಶ್ಚಿತ. ಈ ಮಧ್ಯೆ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್‌ನ ಅಜಯ್‌ ರಾಯ್‌ (Ajay Rai) ವಿರುದ್ಧ ಗೆಲುವು ಕಂಡಿದ್ದಾರೆ. ಸತತ ಮೂರನೇ ಬಾರಿಗೆ ಇಲ್ಲಿಂದ ಮೋದಿ ಆಯ್ಕೆಯಾಗಿದ್ದಾರೆ. ಆದರೆ ಮತ ಗಳಿಕೆ ಪ್ರಮಾಣ ಕುಸಿದಿದೆ. ಅದು ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೋದಿ ಅವರು 6,12,970 ಮತ ಪಡೆದುಕೊಂಡಿದ್ದಾರೆ. ಅಂದರೆ ಶೇ. 54.23. ಇನ್ನು ಅಜಯ್‌ ರಾಯ್‌ ಅವರಿಗೆ 4,60,457 ವೋಟು ಲಭಿಸಿದೆ (ಶೇ. 40.74). ಮೋದಿ ಕಾಂಗ್ರೆಸ್‌ ವಿರುದ್ಧ 1,52,513 ಅಂತರಿಂದ ಗೆಲುವು ಸಾಧಿಸಿದ್ದರೂ ಕಳೆದ ಸಲಕ್ಕೆ ಹೋಲಿಸಿದರೆ ಮತ ಗಳಿಕೆ ಪ್ರಮಾಣದಲ್ಲಿ ಸುಮಾರು ಶೇ. 9ರಷ್ಟು ಕುಸಿತವಾಗಿದೆ.

ಹಿಂದಿನ ಲೆಕ್ಕಾಚಾರ

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ 6,74,664 ಮತ (63.62%) ಲಭಿಸಿತ್ತು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಅಂದರೆ 2014ರಲ್ಲಿ ಮೋದಿಗೆ ಲಭಿಸಿದ್ದು 5,81,022 ವೋಟು (56.37%). ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಮತ ಗಳಿಕೆ ಗಣನೀಯವಾಗಿ ಕುಸಿದಿದೆ.

ಇತ್ತ ಮೋದಿ ವಿರುದ್ಧ ಮೂರನೇ ಬಾರಿ ಕಣಕ್ಕಿಳಿರುವ ಅಜಯ್‌ ರಾಯ್‌ 2019ಕ್ಕಿಂತ ಈ ಬಾರಿ ಅಧಿಕ ಮತ ಗಳಿಸಿದ್ದಾರೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿ (ಎಸ್‌ಪಿ) ನಡುವಿನ ಮೈತ್ರಿಯೇ ಮೋದಿ ಅವರ ಮತ ಗಳಿಕೆ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿ ಎರಡು ಪಕ್ಷಗಳ ನಡುವೆ ಒಪ್ಪಂದ ನಡೆದ ಕಾರಣ ಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಇದರಿಂದ ಮತ ಹಂಚಿ ಹೋಗದೆ ಕಾಂಗ್ರೆಸ್‌ನ ತಂತ್ರ ಕೈ ಹಿಡಿದಿದೆ. ಮತ ಎಣಿಕೆಯಾಗಿ ಕೆಲವು ಹೊತ್ತಿನಲ್ಲಿ ಮೋದಿ ಅವರಿಗೆ ಸುಮಾರು 6 ಸಾವಿರದಷ್ಟು ಮತಗಳಿಂದ ಹಿನ್ನಡೆಯಾಗಿ ಕೆಲ ಹೊತ್ತು ಬಿಜೆಪಿ ಕಾರ್ಯಕರ್ತರ ಮನದಲ್ಲಿ ಆತಂಕದ ಮೂಡಿತ್ತು.

ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು

ಅಜಯ್ ರಾಯ್​ ಹಿನ್ನೆಲೆ

ಅಜಯ್​ ರಾಯ್​ ಎಬಿವಿಪಿ ಹಾಗೂ ಆರ್​ಎಸ್​ಎಸ್​ ಮೂಲದವರು. ಹಿಂದೆ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಉತ್ತರ ಪ್ರದೇಶ ವಿಧಾನಸಭೆಗೆ ನಾಲ್ಕು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಆದರೆ 2008ರಲ್ಲಿ ಅವರಿಗೆ ಬಿಜೆಪಿ ಮತ್ತೆ ಟಿಕೆಟ್​ ನಿರಾಕರಿಸಿತ್ತು. ಈ ವೇಳೆ ಮೂಲ ಪಕ್ಷವನ್ನು ತೊರೆದು ಕೈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅಜಯ್​ ರಾಯ್​ 2014ರಲ್ಲಿ ಮತ್ತು 2019ರಲ್ಲಿ ವಾರಾಣಸಿಯಿಂದಲೇ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೀಗ ಮೂರನೇ ಬಾರಿಗೂ ಸೋತಿದ್ದಾರೆ. ಆದರೆ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 

Exit mobile version