ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಸಿಎಂ (Next CM) ಆಗುವ ಬಗ್ಗೆ ಸುಳಿವನ್ನು ನೀಡಿದ್ದಾರೆ. ಮೈಸೂರಿನಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಭೆಯಲ್ಲಿ ಇಂಥದ್ದೊಂದು ಹೇಳಿಕೆಯನ್ನು ಅವರು ನೀಡಿದ್ದು, ಏನು ಆಗಬೇಕೆಂದಿದೆಯೋ ಅದು ದೆಹಲಿಯಲ್ಲಿ ತೀರ್ಮಾನ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸ್ವಲ್ಪ ದಿನ ಕಾಯಿರಿ ಎಂದು ಇದೇ ವೇಳೆ ಡಿಕೆಶಿ ಹೇಳಿರುವುದನ್ನು ಗಮನಿಸಿದರೆ, ಈ ಲೋಕಸಭಾ ಚುನಾವಣೆ (Lok Sabha Election 2024) ಬಳಿಕ ಮಹತ್ತರ ಬದಲಾವಣೆ ಆಗಲಿದೆಯೇ? ಈ ಬಗ್ಗೆ ಪರೋಕ್ಷ ಮಾಹಿತಿಯನ್ನು ನೀಡಿದರೇ ಎಂಬ ಅನುಮಾನ ಮೂಡಿದೆ.
ಮೈಸೂರಿನಲ್ಲಿ ಕೆಲವು ತೊಂದರೆಗಳಿವೆ. ಇಲ್ಲ ಅಂಥ ನಾನು ಹೇಳಲ್ಲ. ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಇದೆ. ಇಲ್ಲಿ ರಕ್ಷಣೆ ಇಲ್ಲ, ನಾಯಕತ್ವದ ಸಮಸ್ಯೆ ಇದೆ. ಈಗ ಸಚಿವ ವೆಂಕಟೇಶ್ ಹಾಗೂ ಹರೀಶ್ ಗೌಡ ಮುಂದಾಳತ್ವ ವಹಿಸಿಕೊಂಡಿದ್ದಾರೆ. ನಾನು ನಿಮ್ಮೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ನೀವು ತಲೆ ಕಡೆಸಿಕೊಳ್ಳಲು ಹೋಗಬೇಡಿ. ಸ್ವಲ್ಪ ದಿನ ಅಷ್ಟೇ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಈ ಮೂಲಕ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.
ಸಚಿವ ಎನ್. ಚೆಲುವರಾಯಸ್ವಾಮಿ, ಕೃಷ್ಣೇಗೌಡ ಬಂದು ನನ್ನ ಹತ್ತಿರ ನ್ಯಾಯದ ಮಾತನಾಡಿದರು. ಭಾಗ ಸಿಗಬೇಕಾದ ನ್ಯಾಯದ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ, ನಾನು ಅದಕ್ಕೆ ನೀವು ನ್ಯಾಯದ ಬಗ್ಗೆ ಕೇಳೋದು ಬೇಡ. ನಿಮ್ಮ ನ್ಯಾಯ ನಡೆಯುವುದಿಲ್ಲ. ದೆಹಲಿಯಲ್ಲಿ ನಡೆಯಬೇಕು ಅಂಥ ಹೇಳಿದ್ದೇನೆ. ಏನು ಆಗಬೇಕೋ ಅದು ದೆಹಲಿಯಲ್ಲಿ ತೀರ್ಮಾನ ಆಗಿದೆ. ಅದರ ಬಗ್ಗೆ ಚರ್ಚೆ ಬೇಡ, ಚರ್ಚೆ ಆಗೋದೂ ಬೇಡ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದು 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ. ನೀವು ಬೆಂಬಲವಾಗಿ ನಿಲ್ಲಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.
ನನ್ನ ಮೇಲೆ ಎಷ್ಟು ಕಿರುಕುಳ ಆಗಿಲ್ಲ?
ನಾನು ಇಂದು ಈ ಮಟ್ಟದವರೆಗೆ ಬೆಳೆದು ಬಂದಿರುವುದು ಸುಮ್ಮನೆಯ ಮಾತಲ್ಲ. ನನ್ನ ಮೇಲೆ ಎಷ್ಟೆಲ್ಲ ಕಿರುಕುಳಗಳು ನಡೆದವು? ಸಿಬಿಐ, ಐಟಿ, ಇಡಿ ದಾಳಿಗಳೂ ನಡೆದು ಹೋದವು. ಎಲ್ಲವನ್ನೂ ಎದುರಿಸಿ ಇಂದು ಈ ಮಟ್ಟದಲ್ಲಿ ನಿಮ್ಮ ಮುಂದೆ ಇದ್ದೇನೆ. ಈಗ ನೀವು ನನಗೆ ಬಲ ತುಂಬಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಮುಖಂಡರಲ್ಲಿ ಮನವಿ ಮಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಂಟು ಒಕ್ಕಲಿಗ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಅಭ್ಯರ್ಥಿಗಳನ್ನು ನೀವೆಲ್ಲರೂ ಬೆಂಬಲಿಸಬೇಕು. ಅವರನ್ನು ಗೆಲ್ಲಿಸಿಕೊಡುವ ಮೂಲಕ ನನ್ನ ನಾಯಕತ್ವಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು. ಜೆಡಿಎಸ್‌ನ ಕಥೆ ಮುಗಿದಿದೆ. ಇನ್ನು ಬಿಜೆಪಿಯಲ್ಲಿ ಒಕ್ಕಲಿಗ ನಾಯಕತ್ವ ಬೆಳೆಯಲು ಅವಕಾಶವಿಲ್ಲ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಈ ಅವಕಾಶ ಇದೆ. ಮೈಸೂರು-ಕೊಡಗು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಹಲವು ಕಡೆ ಅವಕಾಶ ಇದೆ. ಎಷ್ಟು ದಿನವೆಂದು ಒಂದೇ ಕುಟುಂಬವನ್ನು ಬೆಂಬಲಿಸುತ್ತೀರಿ? ಈ ಬಾರಿ ಎಂ. ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಇದನ್ನೂ ಓದಿ: HD Kumaraswamy: ಎಚ್‌ಡಿಕೆ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯೋಗಕ್ಕೆ ಇಂದು ದೂರು
ಬಿಜೆಪಿಯಲ್ಲಿ ಒಗ್ಗಲಿಗರನ್ನು ತುಳಿಯಲಾಗಿದೆ
ಬಿಜೆಪಿಯಲ್ಲಿ ಒಕ್ಕಲಿಗರ ನಾಯಕತ್ವವನ್ನು ತುಳಿಯಲಾಗಿದೆ. ಹಾಲಿ ಸಂಸದರಾದ ನಮ್ಮದೇ ಸಮುದಾಯದ ಪ್ರತಾಪ ಸಿಂಹ ಮತ್ತು ಡಿ.ವಿ. ಸದಾನಂದಗೌಡರಿಗೆ ಯಾಕೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ? ಚಿಕ್ಕಬಳ್ಳಾಪುರ ಸಂಸದರಾಗಿದ್ದ ಬಚ್ಚೇಗೌಡ ಅವರು ನಿಮ್ಮ ಪಕ್ಷದ ಟಿಕೆಟ್ ಬೇಡ ಎಂದು ಹಿಂದೆ ಸರಿದಿದ್ದಾರೆ. ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಸಿ.ಟಿ.ರವಿ ಹಾಗೂ ಇತರರ ಸ್ಥಾನ ಏನು? ಎಂದು ಡಿಕೆಶಿ ಪ್ರಶ್ನೆ ಮಾಡಿದರು.
ಹಾಸನ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಾರರು. ಮಹಿಳೆಯರ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡಿದ್ದಾರೆ. ಈ ಮಾತು ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಅನ್ವಯಿಸುವುದಿಲ್ಲವೇ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.