ಶಿರಸಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಒಂದು ಸುತ್ತಿನ ಮತ ಬೇಟೆ ಮುಗಿಸಿ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡನೇ ಹಂತದ ಚುನಾವಣೆಗೆ ಮೋದಿ ರಿಎಂಟ್ರಿ (Modi in Karnataka) ಕೊಟ್ಟಿದ್ದಾರೆ. ಈಗಾಗಲೇ ಬೆಳಗಾವಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಈ ಸಮಾವೇಶಕ್ಕೆ ಸಂಬಂಧಪಟ್ಟಂತೆ ಪೊಲೀಸರ ಮೇಲೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆಗಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗದಂತೆ ತಡೆಯಲು ರಾಜ್ಯ ಸರ್ಕಾರ ನಿಮಗೆ ನಿರ್ದೇಶನ ಕೊಟ್ಟಿದೆಯೇ ಎಂದು ಕಿಡಿಕಾರಿದ್ದರು.
ಶಿರಸಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ವಿಐಪಿ ಗೇಟ್ ಮುಖಾಂತರ ವೇದಿಕೆಯತ್ತ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮುಖಂಡರು ಆಗಮಿಸುತ್ತಿದ್ದರು. ಈ ವೇಳೆ ಭದ್ರತೆ ತಪಾಸಣೆ ಹಿನ್ನೆಲೆಯಲ್ಲಿ ಕೆಲವರು ಪೊಲೀಸರು ತಡೆದಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಕಾಗೇರಿ, ತಪಾಸಣೆ ಹೆಸರಲ್ಲಿ ಜನರನ್ನು ಏಕೆ ತಡಿಯುತ್ತಿದ್ದೀರಿ? ಕಾರ್ಯಕ್ರಮ ಯಶಸ್ವಿಯಾಗಬಾರದು ಎಂದು ರಾಜ್ಯ ಸರ್ಕಾರ ಹೇಳಿದೆಯಾ ಎಂದು ತರಾಟೆಗೆ ತಗೆದುಕೊಂಡರು.
ಬಳಿಕ ಪೊಲೀಸರಿಗೆ ಬ್ಯಾರಿಕೇಡ್ ಸರಿಸಲು ಹೇಳಿ ಜನರನ್ನು ಒಳಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಕಳುಹಿಸಿದರು. ಜನರನ್ನು ವೇದಿಕೆ ಮುಂದೆ ಕಳುಹಿಸಿದ ಬಳಿಕ ತಾವು ವೇದಿಕೆಗೆ ಬಂದರು.
ಏಪ್ರಿಲ್ 28ರಂದು ಎಲ್ಲೆಲ್ಲಿ ರ‍್ಯಾಲಿ?
ಏಪ್ರಿಲ್ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್ ಶೆಟ್ಟರ್ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.
ಇದನ್ನೂ ಓದಿ: Narendra Modi : ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ
ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಾವಿ ಸಮಾವೇಶದ ಲೈವ್ ವಿಡಿಯೊ ಇಲ್ಲಿದೆ
ಏಪ್ರಿಲ್ 29ರಂದು ಒಂದೇ ಸಮಾವೇಶ
ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.