Site icon Vistara News

HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು

HD Kumaraswamy challenges Congress to give Cauvery guarantee to Mandya

ಮಂಡ್ಯ/ಮಳವಳ್ಳಿ: ಗ್ಯಾರಂಟಿಗಳ (Congress Guarantee) ಮೂಲಕ ಜನರ ಕಣ್ಣಿಗೆ ಕಾಂಗ್ರೆಸ್ ಸರ್ಕಾರ ಮಂಕುಬೂದಿ ಎರಚುತ್ತಿದೆ. ಮಂಡ್ಯ ಜನರಿಗೆ ಕಾವೇರಿ ನೀರಿನ ಗ್ಯಾರಂಟಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು.

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಮತಯಾಚನೆ ಮಾಡುತ್ತಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಸರ್ಕಾರವೇ ಸೃಷ್ಟಿಸಿರುವ ಕೃತಕ ಬರಗಾಲದಿಂದ ಕಬ್ಬು, ಭತ್ತದ ಬೆಳೆ ಒಣಗಿ ಹೋಗಿದೆ. ಕಾವೇರಿ ನೀರಿನ ವಿಚಾರದಲ್ಲಿ ಈ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಕಾಂಗ್ರೆಸ್‌ನಿಂದ ಕನ್ನಡಿಗರಿಗೆ ಅನ್ಯಾಯ

ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಕರ್ನಾಟಕಕ್ಕೆ ಅವಕಾಶ ಕೊಡುವುದಿಲ್ಲ. ಕೇಂದ್ರ ಅನುಮತಿ ಕೊಡುವುದಕ್ಕೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬರೆದುಕೊಂಡಿದೆ. ರಾಜ್ಯದ ಹಿತಾಸಕ್ತಿಗೆ ಮಾರಕವಾದ ಅನ್ಯ ರಾಜ್ಯದ ಪಕ್ಷದ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಮೇಕೆದಾಟು ಯೋಜನೆಗೆ ಹಣ ಕೊಡಿಸುವೆ

ಕನ್ನಡಿಗರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಕಾಳಜಿ ಇದ್ದರೆ ತಮಿಳುನಾಡಿನವರು ಕೇಂದ್ರದಲ್ಲಿ ಹಾಕಿರುವ ತಕರಾರು ಅರ್ಜಿಗಳನ್ನು ಹಿಂಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡಲಿ. ಅವರ ಮಿತ್ರಪಕ್ಷದ ಮನವೊಲಿಸಲಿ. ಡಿಎಂಕೆ ನಾಯಕ ಸ್ಟಾಲಿನ್ ಅವರ ಮನವೊಲಿಸಲಿ. ಕಾಂಗ್ರೆಸ್ ಆ ಕೆಲಸ ಮಾಡಿದರೆ ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಅದಕ್ಕೆ ಹಣ ಬಿಡುಗಡೆ ಮಾಡಿಸುವುದು ನನ್ನ ಜವಾಬ್ದಾರಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

ಸಮಯಕ್ಕೆ ತಕ್ಕ ರಾಜಕಾರಣ

ಕಾಂಗ್ರೆಸ್ ರಾಜ್ಯಕ್ಕೆ ಬೇಕಾದ ಶಾಶ್ವತ ಕೆಲಸಗಳನ್ನು ಮಾಡುವುದು ಬಿಟ್ಟು ಅಗ್ಗದ ಕಾರ್ಯಕ್ರಮಗಳಿಗೆ ಜೋತು ಬಿದ್ದು ಜನರನ್ನು ಯಮಾರಿಸುತ್ತಿದೆ. ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ. ಕಾವೇರಿ ನೀರಿನ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್, ಡಿಎಂಕೆ ಪ್ರಣಾಳಿಕೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಮಯಕ್ಕೆ ತಕ್ಕ ರಾಜಕಾರಣ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ಅನೇಕ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ನೆರೆದಿದ್ದರು.

Exit mobile version