ಬೆಂಗಳೂರು: ಚೆನ್ನೈನಲ್ಲಿ ಹೃದಯ ಶಸ್ತ್ರಚಿಕಿತ್ಸೆ (Heart Surgery) ಮಾಡಿಸಿಕೊಂಡ ಬಳಿಕ ಬೆಂಗಳೂರಿಗೆ ಬಂದಿಳಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಮ್ಮ ಆರೋಗ್ಯ ಹಾಗೂ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ. ನನ್ನನ್ನು ಭಗವಂತ ಕಾಪಾಡಿದ್ದಾನೆ. ಎರಡು ಬಾರಿ ನಡೆದಿದ್ದ ಆಪರೇಷನ್‌ನಲ್ಲಿ ಲೋಪದೋಷ ಆಗಿತ್ತು. ಈಗ ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆಗಿದೆ ಎಂದು ಹೇಳಿದರು. ಅಲ್ಲದೆ, ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha constituency) ಅಭ್ಯರ್ಥಿಯನ್ನು ಇನ್ನು ಮೂರ್ನಾಲ್ಕು ದಿನದಲ್ಲಿ ಅಂತಿಮ ಮಾಡುತ್ತೇನೆ ಎಂದು ತಿಳಿಸಿದರು. ಸಿಎಂ ಸಿದ್ದರಾಮಯ್ಯ (CM Siddaramaiah) ಅವರದ್ದು ಡ್ರಾಮಾ ಎಂದು ಇದೇ ವೇಳೆ ಕಿಡಿಕಾರಿದರು.
ಚೆನ್ನೈನಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಇಂದು ಜಗತ್ತು ಹಲವು ರೀತಿಯಲ್ಲಿ ತಾಂತ್ರಿಕವಾಗಿ ಮುಂದುವರಿದಿದೆ. ನನ್ನ ಆರೋಗ್ಯದ ಬಗ್ಗೆ ನಾಡಿನಾದ್ಯಂತ ಅಭಿಮಾನಿ ಹಿತೈಷಿಗಳು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ. ಅವರ ಪ್ರಾರ್ಥನೆ ಫಲ ಕೊಟ್ಟಿದೆ. ವೈದ್ಯರು ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ವೈದ್ಯರು ಸಾಯಿಬಾಬಾ ಭಕ್ತರು. ಸಾಯಿಬಾಬನಿಗೆ ಪೂಜೆ ಸಲ್ಲಿಸಿ ಬಂದು ಆಪರೇಷನ್ ಮಾಡಿದ್ದಾರೆ. ಈ ಮೂಲಕ ಹಂಗೇರಿಯಾದ ಮತ್ತೊಬ್ಬ ವೈದ್ಯರು ನನಗೆ ಮರುಜನ್ಮ ನೀಡಿದ್ದಾರೆ ಎಂದು ತಿಳಿಸಿದರು.
4 ದಿನ ರೆಸ್ಟ್, ಆಮೇಲೆ ಪ್ರಚಾರ
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷ ಗೆಲುವು ಸಾಧಿಸಬೇಕು. ಇದಕ್ಕಾಗಿ ನನ್ನ ಕೈಲಾದ ರೀತಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಮೂರ್ನಾಲ್ಕು ದಿನಗಳ ಕಾಲ ರೆಸ್ಟ್ ಮಾಡುತ್ತೇನೆ. ಮಂಡ್ಯ ಅಭ್ಯರ್ಥಿ ಮೂರ್ನಾಲ್ಕು ದಿನದಲ್ಲಿ ಫೈನಲ್ ಆಗತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈಗ ಸಿಎಂ ಸಿದ್ದರಾಮಯ್ಯ ಅವರು “ನಮ್ಮ ದುಡ್ಡು ನಮ್ಮ ತೆರಿಗೆ” ಎಂದು ಹೇಳುತ್ತಿರುವುದು ಡ್ರಾಮಾ. ಇದನ್ನೆಲ್ಲ ಬಿಟ್ಟು ಕೆಲಸ ಮಾಡಬೇಕು. ರಾಜಕೀಯ ಮಾಡುವುದಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
ಜೆಪಿ ನಗರ ನಿವಾಸದತ್ತ ಎಚ್‌ಡಿಕೆ
ಎಚ್ಎಎಲ್‌ನಿಂದ ನೇರವಾಗಿ ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ತಮ್ಮ ಜೆಪಿ ನಗರದ ನಿವಾಸಕ್ಕೆ ತೆರಳಿದರು. ಅಲ್ಲೀಗ ಅವರು ಮೂರ್ನಾಲ್ಕು ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳಲಿದ್ದಾರೆ. ಬಳಿಕ ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯನವರೇ ಇದೋ ನೋಡಿ ನಿಮ್ಮ ವೈಫಲ್ಯಗಳ ಪಟ್ಟಿ ಎಂದ ಬಿ.ವೈ. ವಿಜಯೇಂದ್ರ
ಮಂಡ್ಯಕ್ಕೆ ಎಚ್‌ಡಿಕೆ ಅಭ್ಯರ್ಥಿ?
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ವರೆಗೆ ಅಲ್ಲಿ ಜೆಡಿಎಸ್ ಮುಖಂಡ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಅವರು ಪ್ರಚಾರದಲ್ಲಿಯೂ ನಿರತರಾಗಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಎಚ್‌ಡಿಕೆ ಮಂಡ್ಯದ ಅಭ್ಯರ್ಥಿ ಎಂದು ಪುಟ್ಟರಾಜು ಅವರೇ ಮೂರ್ನಾಲ್ಕು ದಿನದ ಹಿಂದೆ ಮಂಡ್ಯದಲ್ಲಿ ಹೇಳಿದ್ದರು. ಹೀಗಾಗಿ ಕುಮಾರಸ್ವಾಮಿ ಅವರೇ ಈ ಬಾರಿ ಮಂಡ್ಯದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.